ಹುಡುಕಿ

ಈಜಿಪ್ಟ್‌ನಲ್ಲಿ ಧಾನ್ಯ ಸಂಗ್ರಹಣಾ ಸೈಲೊಗಳಿಂದ ಗೋಧಿಯನ್ನು ಸಂಗ್ರಹಿಸುತ್ತಿರುವ ಕಾರ್ಮಿಕ. ಈಜಿಪ್ಟ್‌ನಲ್ಲಿ ಧಾನ್ಯ ಸಂಗ್ರಹಣಾ ಸೈಲೊಗಳಿಂದ ಗೋಧಿಯನ್ನು ಸಂಗ್ರಹಿಸುತ್ತಿರುವ ಕಾರ್ಮಿಕ. 

“ಜಗದ್ಗುರುಗಳ ಅಧಿಕಾರ ಸ್ಥಳ: ಯುದ್ಧಗಳು ಮತ್ತು ತೀವ್ರ ಹವಾಮಾನ ಘಟನೆಗಳು ಆಹಾರ ವ್ಯವಸ್ಥೆಗಳ ಮೇಲೆ ಮಾರಕ ಪರಿಣಾಮ ಬೀರುತ್ತವೆ”.

ಜಗದ್ಗುರುಗಳ ಅಧಿಕಾರ ಸ್ಥಳ ವಿಶ್ವದ ಕೃಷಿ-ಆಹಾರ ವ್ಯವಸ್ಥೆಗಳ ಮೇಲೆ ಯುದ್ಧಗಳು, ಆರ್ಥಿಕ ಮಂದಗತಿ, ಹವಾಮಾನ ಸಂಬಂಧಿತ ಘಟನೆಗಳು ಹಾಗೂ ರಾಜಕೀಯ ಅಸ್ಥಿರತೆ ಉಂಟುಮಾಡುತ್ತಿರುವ ಪರಿಣಾಮಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ, ಸ್ಥಳೀಯ ಆಹಾರ ವ್ಯವಸ್ಥೆಗಳು ಮಾನವ ಗೌರವವನ್ನು ತಮ್ಮ ಕೇಂದ್ರಬಿಂದುವಾಗಿರಿಸಬೇಕು ಎಂದು ಕರೆ ನೀಡಿದೆ.

ವ್ಯಾಟಿಕನ್ ವರದಿ

ಎಫ್ಎಒ, ಐಅಫ್ಎಡಿ ಮತ್ತು ಡಬ್ಲೂಎಫ್ಪಿ ಸಂಸ್ಥೆಗಳ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾದ ಮೊನ್ಸಿನ್ಯೋರ್ ಫೆರ್ನಾಂಡೋ ಚಿಕಾ ಅರೆಲ್ಲಾನೋರವರು, ಇತ್ತೀಚಿನ ವರ್ಷಗಳಲ್ಲಿ ಗಂಭೀರ ಅಸ್ತವ್ಯಸ್ತತೆಯನ್ನು ಅನುಭವಿಸಿರುವ ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಸ್ಥೈರ್ಯ ಮತ್ತು ಪುನರುತ್ಥಾನದ ಅಗತ್ಯವಿದೆ ಎಂಬ ಜಗದ್ಗುರುಗಳ ಅಧಿಕಾರ ಸ್ಥಳವು ಕರೆಯನ್ನು ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರ ತಜಿಕಿಸ್ತಾನದ ದುಶಾಂಬೆ ನಗರದಲ್ಲಿ ನಡೆದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಯ ಯೂರೋಪ್ ಪ್ರಾದೇಶಿಕ ಸಮ್ಮೇಳನದ 35ನೇ ಅಧಿವೇಶನದಲ್ಲಿ ಮಾತನಾಡಿದರು.

ಯಾರೂ ಸಹ ಶಾಂತಿಯುತ ಮತ್ತು ಸಮೃದ್ಧ ಜೀವನ ನಡೆಸಲು ಅಗತ್ಯವಾದ ಆಹಾರದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೃಷಿ-ಆಹಾರ ವ್ಯವಸ್ಥೆಗಳನ್ನು ಉತ್ತೇಜಿಸುವ ಸಮ್ಮೇಳನದ ಗುರಿಗೆ ಮೊನ್ಸಿನ್ಯೋರ್ ಚಿಕಾ ಅರೆಲ್ಲಾನೋ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಇತ್ತೀಚಿನ ಜಾಗತಿಕ ಸಂಕಟಗಳ ಬಳಿಕ ಆಹಾರ ಭದ್ರತೆಯನ್ನು ಉತ್ತೇಜಿಸಲು ಸ್ಪಷ್ಟ ಮತ್ತು ಕಾರ್ಯಪ್ರಾಯ ಕ್ರಮಗಳ ಅಗತ್ಯತೆಯನ್ನು ಅವರು ಒತ್ತಿಹೇಳಿದರು.

“ಕರುಣೆಯಿಲ್ಲದ ಯುದ್ಧಗಳು, ಆರ್ಥಿಕ ಮಂದಗತಿಗಳು, ತೀವ್ರ ಹವಾಮಾನ ಘಟನೆಗಳು, ರಾಜಕೀಯ ಅಸ್ಥಿರತೆ ಮತ್ತು ಮಾರುಕಟ್ಟೆಯ ಅಸ್ಥಿರತೆ ಇವುಗಳ ಸಂಯೋಜನೆ ವಿಶ್ವದ ಆಹಾರ ವ್ಯವಸ್ಥೆಗಳಿಗೆ ಮಾರಕ ಪರಿಸ್ಥಿತಿಯನ್ನು ಉಂಟುಮಾಡಿದೆ,” ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಹಲವು ಸಂಘರ್ಷಗಳು ಜಾಗತಿಕ ಆಹಾರ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿವೆ. ಧಾನ್ಯ ರಫ್ತು ಮತ್ತು ರಾಸಾಯನಿಕ ಗೊಬ್ಬರ ಸರಬರಾಜುಗಳಿಗೆ ತೊಂದರೆ ಉಂಟುಮಾಡಿದ ರಷ್ಯಾ-ಉಕ್ರೇನ್ ಯುದ್ಧ ಹಾಗೂ ಇಂಧನ ಮತ್ತು ಗೊಬ್ಬರದ ಬೆಲೆಗಳನ್ನು ಈಗಾಗಲೇ ಏರಿಕೆಗೊಳಿಸಿರುವ ಇರಾನ್-ಅಮೆರಿಕಾ ಯುದ್ಧವು ಇದಕ್ಕೆ ಉದಾಹರಣೆಗಳಾಗಿವೆ.

ಇನ್ನೂ ಕೆಲವು ಸಂಘರ್ಷಗಳು ಸ್ಥಳೀಯ ಆಹಾರ ವ್ಯವಸ್ಥೆಗಳಿಗೆ ಭೀಕರ ಹಾನಿಯನ್ನುಂಟುಮಾಡಿವೆ. ಉದಾಹರಣೆಗೆ, ಸುಡಾನ್‌ನ ಯುದ್ಧವು ಪ್ರಮುಖ ನಗರಗಳಲ್ಲಿ ತೀವ್ರ ಆಹಾರ ಕೊರತೆಯನ್ನು ಉಂಟುಮಾಡಿ, ಗಂಭೀರ ಹಸಿವಿನ ಪ್ರಮಾಣವನ್ನು ಹೆಚ್ಚಿಸಿದೆ.

ತಮ್ಮ ಭಾಷಣದಲ್ಲಿ ಮೊನ್ಸಿನ್ಯೋರ್ ಚಿಕಾ ಅರೆಲ್ಲಾನೋ, ರಾಷ್ಟ್ರಗಳು ಪರಸ್ಪರ ಸಹೋದರತ್ವದ ಸೌಹಾರ್ದತೆಯಲ್ಲಿ ಒಟ್ಟಾಗಿ ಸಾಗಲು, ಈ ಅತೀ ನಕಾರಾತ್ಮಕ ಪ್ರವೃತ್ತಿ ಯನ್ನು ತಡೆಯಲು ಸಮನ್ವಯಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.

ಎಲ್ಲಾ ಜನರೂ ಸಾಕಷ್ಟು, ಪೌಷ್ಟಿಕ ಮತ್ತು ಸುರಕ್ಷಿತ ಆಹಾರವನ್ನು ಸ್ಥಿರ ಹಾಗೂ ನಿರಂತರವಾಗಿ ಪಡೆಯುವಂತಾಗುವುದು ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು.

“ಸಾಮಾಜಿಕ ನ್ಯಾಯ, ಪರಿಸರದ ಸ್ಥಿರತೆ ಮತ್ತು ಮಾನವ ವ್ಯಕ್ತಿಯ ಗೌರವ” ಇವುಗಳನ್ನು ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಗಳ ಮಾರ್ಗದರ್ಶಕ ತತ್ವಗಳಾಗಿ ಒಳಗೊಂಡ ಆಹಾರ ಮಾದರಿಗಳತ್ತ ಸಾಗಲು ಯೂರೋಪಿನ ರಾಷ್ಟ್ರಗಳು ಕಾನೂನು ಚೌಕಟ್ಟುಗಳನ್ನು ಜಾರಿಗೆ ತರಬೇಕೆಂದು ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರು ಕರೆ ನೀಡಿದರು.

ಜಗತ್ತಿನ ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಸ್ಥೈರ್ಯವನ್ನು ನಿರ್ಮಿಸುವುದು ಇಂದಿನ ಕಾಲದ ಅತ್ಯಂತ ತುರ್ತು ಆದ್ಯತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಹಳೆಯ ಉತ್ಪಾದನಾ ವಿಧಾನಗಳನ್ನೇ ಮುಂದುವರಿಸುವ ಬದಲು, ಆಹಾರ ಉತ್ಪಾದನೆಯ ವಿಧಾನವನ್ನು ಪರಿವರ್ತಿಸಬೇಕೆಂದು ಮೊನ್ಸಿನ್ಯೋರ್ ಚಿಕಾ ಅರೆಲ್ಲಾನೋರವರು ಹೇಳಿದರು. ಲಾಭಾಸಕ್ತಿಯ ಶೋಷಣೆಯಿಂದ ದೂರ ಸರಿದು, ಅತೀ ದುರ್ಬಲ ಮತ್ತು ಮರೆತುಹೋಗಿರುವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡಬೇಕೆಂದು ಅವರು ಒತ್ತಾಯಿಸಿದರು.

“ಕೃಷಿ ಕ್ಷೇತ್ರಕ್ಕೆ ಜಾಣ್ಮೆಯ ಆರ್ಥಿಕ ಮತ್ತು ರಾಜಕೀಯ ನಿರ್ಧಾರಗಳ ಮೂಲಕ ಬೆಂಬಲ ನೀಡಬೇಕು. ಇದರಿಂದ ಯುವಜನರು ಉತ್ಸಾಹದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ, ನಿರಾಶೆಯಿಂದ ಗ್ರಾಮೀಣ ಪ್ರದೇಶಗಳನ್ನು ತೊರೆದು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಉಂಟಾಗಬಾರದು,” ಎಂದು ಅವರು ಹೇಳಿದರು.

ಕೊನೆಯಲ್ಲಿ, ಕೃಷಿ-ಆಹಾರ ಉತ್ಪಾದನೆ ಮಾನವ ವ್ಯಕ್ತಿಯ ಗೌರವವನ್ನು ಕೇಂದ್ರದಲ್ಲಿರಿಸಬೇಕು, ಭವಿಷ್ಯವನ್ನು ಹಾನಿಗೊಳಿಸದೆ ಆಹಾರದ ಅಗತ್ಯಗಳನ್ನು ಪೂರೈಸಬೇಕು ಹಾಗೂ ಸ್ಥಳೀಯ ಮಟ್ಟದಲ್ಲಿ ಗೌರವಯುತ ಉದ್ಯೋಗಾವಕಾಶಗಳನ್ನು ಉತ್ತೇಜಿಸಬೇಕು ಎಂದು ಮೊನ್ಸಿನ್ಯೋರ್ ಚಿಕಾ ಅರೆಲ್ಲಾನೋ ಹೇಳಿದರು.

12 ಮೇ 2026, 11:18