“ಸಂಘರ್ಷಗಳಲ್ಲಿ ನಾಗರಿಕರನ್ನು ರಕ್ಷಿಸಲು ನೈತಿಕ ಬದ್ಧತೆ ಅಗತ್ಯವೆಂದು ಜಗದ್ಗುರುಗಳ ಅಧಿಕಾರ ಸ್ಥಳವು ಕರೆ ನೀಡಿದೆ.”
ವ್ಯಾಟಿಕನ್ ವರದಿ
ಈ ವಾರ ನ್ಯೂಯಾರ್ಕ್‌ನಲ್ಲಿ ನಡೆದ “ಸಶಸ್ತ್ರ ಸಂಘರ್ಷಗಳಲ್ಲಿ ನಾಗರಿಕರ ರಕ್ಷಣೆ” ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯನ್ನುದ್ದೇಶಿಸಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳದ ಪ್ರತಿನಿಧಿ ಮಂಡಳಿ, ಇಂದಿನ ಯುದ್ಧಗಳಲ್ಲಿ ನಾಗರಿಕರು ಅತ್ಯಂತ ಭಾರೀ ಸಂಕಷ್ಟವನ್ನು ಅನುಭವಿಸುತ್ತಿರುವ ದುಃಖಕರ ವಾಸ್ತವಿಕತೆಯನ್ನು ವಿವರಿಸಿತು. ಸ್ಥಳಚ್ಯುತಿ, ಹಿಂಸಾಚಾರ, ಹಸಿವು ಮತ್ತು ಅಗತ್ಯ ಸೇವೆಗಳ ಕುಸಿತದಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ ಎಂದು ಅದು ತಿಳಿಸಿತು.
ನಾಗರಿಕರ ರಕ್ಷಣೆ ಕೇವಲ ರಾಜಕೀಯ ಅಥವಾ ಕಾರ್ಯನಿರ್ವಹಣೆಯ ಸವಾಲಲ್ಲ, ಅದು ಆಳವಾದ ನೈತಿಕ ಕರ್ತವ್ಯವಾಗಿದೆ ಎಂದು ಪ್ರತಿನಿಧಿ ಮಂಡಳಿ ಒತ್ತಿಹೇಳಿತು. “ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ ಅಂಕಿತವಾಗಿರುವ ಮಾನವೀಯತೆಯ ತತ್ವ ಮತ್ತು ಅಂತರರಾಷ್ಟ್ರೀಯ ಕಾನೂನಿನಲ್ಲಿ ಮಾನ್ಯತೆ ಪಡೆದ ಮೌಲ್ಯವು, ನಾಗರಿಕರನ್ನು ಯುದ್ಧದ ಭೀಕರ ಪರಿಣಾಮಗಳಿಂದ ರಕ್ಷಿಸುವ ನೈತಿಕ ಬಾಧ್ಯತೆಯನ್ನು ಒಳಗೊಂಡಿದೆ” ಎಂಬ ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಪ್ರತಿನಿಧಿಗಳು ಉಲ್ಲೇಖಿಸಿದರು.
ಧಾರ್ಮಿಕ ಸ್ಥಳಗಳು ಮತ್ತು ಧಾರ್ಮಿಕ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಜಗದ್ಗುರುಗಳ ಅಧಿಕಾರ ಸ್ಥಳವು ತೀವ್ರ ಆತಂಕ ವ್ಯಕ್ತಪಡಿಸಿತು. ಇಂತಹ ದಾಳಿಗಳು ಸಮಾಜದ ಆತ್ಮೀಯ ಮತ್ತು ಸಾಮಾಜಿಕ ಬುನಾದಿಗೆ ಗಾಯಮಾಡುತ್ತವೆ ಎಂದು ಅದು ತಿಳಿಸಿತು. ಸಂಘರ್ಷದ ಸಮಯದಲ್ಲಿ ಈ ಧಾರ್ಮಿಕ ಸ್ಥಳಗಳು ಆಶ್ರಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿ, ನೆರವು ಮತ್ತು ಸಹೋದರತ್ವವನ್ನು ಬೆಳೆಸುತ್ತವೆ. ಆದ್ದರಿಂದ ಯುದ್ಧದ ಸಂದರ್ಭದಲ್ಲಿಯೂ ಧಾರ್ಮಿಕ ಸ್ವಾತಂತ್ರ್ಯವನ್ನು ಕಾಪಾಡುವುದು ಮಾನವ ಗೌರವ ಮತ್ತು ಸೌಹಾರ್ದತೆಯ ಬೀಜ ಬಿತ್ತಲು ಅಗತ್ಯವೆಂದು ತಿಳಿಸಲಾಯಿತು.
ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಆಸ್ಪತ್ರೆಗಳ ರಕ್ಷಣೆಯ ವಿಷಯದಲ್ಲಿಯೂ ಪ್ರತಿನಿಧಿ ಮಂಡಳಿ ಕಳವಳ ವ್ಯಕ್ತಪಡಿಸಿತು. ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸೌಲಭ್ಯಗಳ ಮೇಲೆ ದಾಳಿಗಳು ಇನ್ನೂ ನಿಲ್ಲದೆ ಮುಂದುವರಿಯುತ್ತಿವೆ ಎಂದು ಅದು ವಿಷಾದ ವ್ಯಕ್ತಪಡಿಸಿತು. “ಗಾಯಗೊಂಡವರಿಗೂ ರೋಗಿಗಳಿಗೂ ಚಿಕಿತ್ಸೆ ನಿರಾಕರಿಸಬಾರದು ಮಾನವೀಯ ನೆರವು ನೀಡುವವರನ್ನು ಗುರಿಯಾಗಿಸಬಾರದು” ಎಂದು ಅದು ಪುನರುಚ್ಚರಿಸಿತು.
ಯುದ್ಧಗಳಲ್ಲಿ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳ ಬಳಕೆಯ ಕುರಿತು ನೈತಿಕ ಪ್ರಶ್ನೆಗಳನ್ನೂ ಜಗದ್ಗುರುಗಳ ಅಧಿಕಾರ ಸ್ಥಳವು ಎತ್ತಿಹಿಡಿತು. “ಮಾನವ ಜೀವಗಳು ಪಣವಾಗಿರುವ ಸಂದರ್ಭದಲ್ಲಿ ಯಾವುದೇ ಯಂತ್ರವು ಮಾನವೀಯ ನೈತಿಕ ವಿವೇಕವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಪ್ರತಿನಿಧಿಗಳು ಎಚ್ಚರಿಸಿದರು. ಮಾನವ ನಿಯಂತ್ರಣವಿಲ್ಲದ ತಂತ್ರಜ್ಞಾನವು ಯುದ್ಧದ ಮಾನವೀಯ ಬೆಲೆಯಿಂದ ನಿರ್ಧಾರವನ್ನು ದೂರ ಮಾಡುತ್ತದೆ ಮತ್ತು ನಾಗರಿಕರ ರಕ್ಷಣೆಯ ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.
ಕೊನೆಯಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳ ಅಂತರರಾಷ್ಟ್ರೀಯ ಮಾನವೀಯ ಕಾನೂನಿಗೆ ಗೌರವ ತೋರಲು ಹಾಗೂ ಸಂಘರ್ಷಗಳ ತಡೆ, ಸಂವಾದ ಮತ್ತು ಶಾಂತಿಯುತ ಪರಿಹಾರಗಳಿಗೆ ಹೊಸ ಒತ್ತು ನೀಡಲು ಕರೆ ನೀಡಿತು. “ನಿಜವಾದ ಶಾಂತಿ ಭಯ ಅಥವಾ ವಿನಾಶದಿಂದ ಅಲ್ಲ, ಭೇಟಿಯಿಂದ, ವಿಶ್ವಾಸದಿಂದ ಮತ್ತು ಜವಾಬ್ದಾರಿಯಿಂದ ನಿರ್ಮಾಣವಾಗುತ್ತದೆ” ಎಂದು ಪ್ರತಿನಿಧಿ ಮಂಡಳಿ ತಿಳಿಸಿತು. “ಶಾಂತಿ ನಮ್ಮಲ್ಲಿ ಪ್ರತಿಯೊಬ್ಬರಿಂದ ಆರಂಭವಾಗುತ್ತದೆ ನಾವು ಇತರರನ್ನು ಹೇಗೆ ನೋಡುತ್ತೇವೆ, ಹೇಗೆ ಆಲಿಸುತ್ತೇವೆ ಮತ್ತು ಹೇಗೆ ಮಾತನಾಡುತ್ತೇವೆ ಎಂಬುದರಿಂದ” ಎಂಬ ಜಗದ್ಗುರುಗಳ ಮಾತುಗಳನ್ನು ಉಲ್ಲೇಖಿಸಿ ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.