ಹುಡುಕಿ

ವಿಶ್ವಸಂಸ್ಥೆಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ಮಿಷನ್: ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ಮಾಡದಿರುವಿಕೆಯ ಕುರಿತು ಹೇಳಿಕೆ ವಿಶ್ವಸಂಸ್ಥೆಗೆ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ಮಿಷನ್: ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ಮಾಡದಿರುವಿಕೆಯ ಕುರಿತು ಹೇಳಿಕೆ 

ಜಗದ್ಗುರುಗಳ ಅಧಿಕಾರ ಸ್ಥಳದ ಎಚ್ಚರಿಕೆ: ಅಣು ತಡೆ ತಂತ್ರವು ಜಾಗತಿಕ ಅಪಾಯವನ್ನು ಹೆಚ್ಚಿಸುತ್ತದೆ.

ನಿರಸ್ತ್ರೀಕರಣ ಹಾಗೂ ಬಹುಪಕ್ಷೀಯ ಸಹಭಾಗಿತ್ವಕ್ಕೆ ಕರೆ ನೀಡುತ್ತಾ, ಜಗದ್ಗುರುಗಳ ಅಧಿಕಾರ ಸ್ಥಳವು ಎಚ್ಚರಿಸುತ್ತದೆ. ಅಣು ತಡೆತಂತ್ರ, ಶಸ್ತ್ರಾಗಾರಗಳ ಆಧುನೀಕರಣ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸೈನಿಕ ವ್ಯವಸ್ಥೆಗಳು ವಿನಾಶಕಾರಿ ತಪ್ಪು ಅಂದಾಜಿನ ಅಪಾಯವನ್ನು ಹೆಚ್ಚಿಸುತ್ತಿವೆ.

ವ್ಯಾಟಿಕನ್ ವರದಿ

ಜಗದ್ಗುರುಗಳ ಅಧಿಕಾರ ಸ್ಥಳವು ಪುನಃ ಅಣು ತಡೆತಂತ್ರದ ಮೇಲಿನ ಅವಲಂಬನೆ, ಶಸ್ತ್ರಾಗಾರಗಳ ಆಧುನೀಕರಣ ಮತ್ತು ಕೃತಕ ಬುದ್ಧಿಮತ್ತೆಯನ್ನು ಸೈನಿಕ ವ್ಯವಸ್ಥೆಗಳಲ್ಲಿ ಹೆಚ್ಚಾಗಿ ಸೇರಿಸುವ ಪ್ರವೃತ್ತಿ ಜಗತ್ತನ್ನು ಹೆಚ್ಚು ಅಪಾಯಕಾರಿ ದಾರಿಗೆ ತಳ್ಳುತ್ತಿದೆ ಎಂದು ಎಚ್ಚರಿಸಿದೆ.

ಬುಧವಾರ ವಿಶ್ವಸಂಸ್ಥೆಯ ನ್ಯೂಯಾರ್ಕ್‌ನಲ್ಲಿನ ಅಣು ಶಸ್ತ್ರಗಳ ಪ್ರಸರಣ ತಡೆಯ ಒಪ್ಪಂದದ (ಎನ್ ಟಿ ಪಿ) 11ನೇ ಪರಿಶೀಲನಾ ಸಮ್ಮೇಳನದ ಸಾಮಾನ್ಯ ಚರ್ಚೆಯಲ್ಲಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕ ಮಿಷನ್, ಈ ಕ್ಷಣವನ್ನು “ಅತ್ಯಂತ ಗಂಭೀರ” ಎಂದು ವಿವರಿಸಿತು.

ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಹೆಚ್ಚುತ್ತಿರುವ ಮತ್ತು ಶಸ್ತ್ರ ನಿಯಂತ್ರಣ ವ್ಯವಸ್ಥೆಗಳು ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ, ಅಣು ಶಸ್ತ್ರಗಳ ಬಳಕೆ ಮತ್ತು ಪರೀಕ್ಷೆಗಳ ಬೆದರಿಕೆಗಳನ್ನು ಒಳಗೊಂಡ ಅಣು ಭಾಷೆಯ ಮರುಪ್ರವೇಶದ ಬಗ್ಗೆ ಪ್ರತಿನಿಧಿ ಮಂಡಳಿ ಚಿಂತೆಯನ್ನು ವ್ಯಕ್ತಪಡಿಸಿತು.

ಬಹುಪಕ್ಷೀಯ ರಾಜತಾಂತ್ರಿಕತೆಯಿಂದ ದೂರವಾಗುವ ಪ್ರವೃತ್ತಿ

ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿ, ಸಂವಾದ ಮತ್ತು ಸಮಮತದ ಮೇಲೆ ಆಧಾರಿತ ಬಹುಪಕ್ಷೀಯ ರಾಜತಾಂತ್ರಿಕತೆ “ಬಲದ ಮೇಲೆ ಆಧಾರಿತ” ವಿಧಾನಕ್ಕೆ ಬದಲಾಗುತ್ತಿರುವುದನ್ನು ಜಗದ್ಗುರುಗಳ ಅಧಿಕಾರ ಸ್ಥಳವು ವಿಷಾದಿಸಿತು.

ಇತ್ತೀಚಿನ ಅಣು ಸೌಲಭ್ಯಗಳ ಮೇಲಿನ ದಾಳಿಗಳು ಜಾಗತಿಕ ಭದ್ರತೆಯನ್ನು ರಕ್ಷಿಸುವ ದೀರ್ಘಕಾಲದ ಮಾನದಂಡಗಳು ಕುಸಿಯುತ್ತಿರುವುದನ್ನು ಸೂಚಿಸುತ್ತವೆ ಎಂದು ಅದು ತಿಳಿಸಿತು.

ಅಣು ನಿರ್ಧಾರ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆಯ ಹೆಚ್ಚುತ್ತಿರುವ ಪಾತ್ರದ ಬಗ್ಗೆ ವಿಶೇಷ ಕಳವಳ ವ್ಯಕ್ತಪಡಿಸಲಾಯಿತು. ಇಂತಹ ವ್ಯವಸ್ಥೆಗಳು ಸಂಕಷ್ಟದ ಸಂದರ್ಭಗಳಲ್ಲಿ ಮಾನವ ಚಿಂತನೆಗೆ ಇರುವ ಸಮಯವನ್ನು ಕಡಿಮೆ ಮಾಡುತ್ತವೆ, ಇದರಿಂದ “ತಪ್ಪು ಅಂದಾಜಿನ ಅಪಾಯ” ಹೆಚ್ಚುತ್ತದೆ ಮತ್ತು ಜೀವ-ಮರಣ ಸಂಬಂಧಿತ ನಿರ್ಧಾರಗಳ ನೈತಿಕ ಮಹತ್ವ ಮಸುಕಾಗುತ್ತದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳವು ಎಚ್ಚರಿಸಿತು.

ನಿರಸ್ತ್ರೀಕರಣ, ಪ್ರಸರಣ ತಡೆ ಮತ್ತು ಶಾಂತಿಯುತ ಬಳಕೆ

ಅಣು ಶಸ್ತ್ರಗಳ ಪ್ರಸರಣ ತಡೆಯ ಒಪ್ಪಂದದ ಮಹತ್ವವನ್ನು ಪುನಃ ಒತ್ತಿಹೇಳುತ್ತಾ, ಅದರ ಮೂರು ಪ್ರಮುಖ ಸ್ತಂಭಗಳು ನಿರಸ್ತ್ರೀಕರಣ, ಪ್ರಸರಣ ತಡೆ ಮತ್ತು ಅಣುಶಕ್ತಿಯ ಶಾಂತಿಯುತ ಬಳಕೆ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅವಶ್ಯಕವೆಂದು ತಿಳಿಸಿತು.

ನಿರಸ್ತ್ರೀಕರಣದ ಬಗ್ಗೆ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳವು, ಅಣು ಶಸ್ತ್ರಗಳ ಸಂಪೂರ್ಣ ನಿರ್ಮೂಲನೆಗಾಗಿ ಮಾತುಕತೆ ನಡೆಸುವ ಬದ್ಧತೆಯನ್ನು ಒಪ್ಪಂದದ ಆಟಿ೯ಕಲ್ ವಿಐ ವಿಧಿಸುತ್ತದೆ ಎಂದು ಹೇಳಿತು. ಅಣು ಶಕ್ತಿಗಳು ತಮ್ಮ ಶಸ್ತ್ರಾಗಾರಗಳನ್ನು ಆಧುನೀಕರಿಸುತ್ತಿರುವ ಈ ಸಂದರ್ಭದಲ್ಲಿ ಈ ಕರ್ತವ್ಯ ಇನ್ನಷ್ಟು ತುರ್ತು ಆಗಿದೆ ಎಂದು ಅದು ತಿಳಿಸಿತು.

ಅಣು ತಡೆತಂತ್ರದ ಮೇಲಿನ ಅವಲಂಬನೆ “ತಂತ್ರಾತ್ಮಕ ಹಾಗೂ ನೈತಿಕವಾಗಿ ಪ್ರಶ್ನಾರ್ಹವಾದ ವಿಧಾನ”ವನ್ನು ಬಲಪಡಿಸುವ ಅಪಾಯವಿದೆ ಎಂದು ಎಚ್ಚರಿಸಿ, ಇದು ನಂಬಿಕೆ ಮತ್ತು ಕಾನೂನಿನ ಬದಲು ಭೀತಿಯ ಮೇಲೆ ಆಧಾರಿತ ಭದ್ರತಾ ದೃಷ್ಟಿಕೋನವನ್ನು ತೋರಿಸುತ್ತದೆ ಎಂದು ಹೇಳಿತು.

ಮಾನವೀಯ ಪರಿಣಾಮಗಳು ಮತ್ತು ಜಾಗತಿಕ ಸಹಕಾರ

ಅಣು ಶಸ್ತ್ರಗಳ ವಿನಾಶಕಾರಿ ಮಾನವೀಯ ಪರಿಣಾಮಗಳನ್ನು ನೆನಪಿಸಿಕೊಂಡು, ಜಗದ್ಗುರುಗಳ ಅಧಿಕಾರ ಸ್ಥಳವು ಅಣು ಶಸ್ತ್ರ ನಿಷೇಧ ಒಪ್ಪಂದಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿತು, ಇದು ನಿರಸ್ತ್ರೀಕರಣಕ್ಕೆ ನೈತಿಕ ಮತ್ತು ಕಾನೂನು ಚೌಕಟ್ಟನ್ನು ಬಲಪಡಿಸುತ್ತದೆ ಎಂದು ತಿಳಿಸಿತು.

ಪ್ರಸರಣ ತಡೆ ಕುರಿತಾಗಿ, ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (ಐಎಇಎ) ಮೇಲ್ವಿಚಾರಣೆಯನ್ನು ಬಲಪಡಿಸುವಂತೆ ಮತ್ತು ಮಧ್ಯಪ್ರಾಚ್ಯದಲ್ಲಿ ಅಣುಶಸ್ತ್ರರಹಿತ ಪ್ರದೇಶವನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಪುನಃ ಬೆಂಬಲ ನೀಡುವಂತೆ ಕರೆ ನೀಡಿತು. ಕೇವಲ ಪರಿಶೀಲನೆ ಸಾಕಾಗುವುದಿಲ್ಲ. ಭದ್ರತೆಯ ಮೂಲ ಕಾರಣಗಳನ್ನು ಸಂವಾದ ಮತ್ತು ಜವಾಬ್ದಾರಿಯುತ ಸಹಭಾಗಿತ್ವದ ಮೂಲಕ ಪರಿಹರಿಸಬೇಕು ಎಂದು ಅದು ತಿಳಿಸಿತು.

“ಶಾಂತಿ ಭಯದ ಮೇಲೆ ನಿರ್ಮಾಣವಾಗಲಾರದು”

ಅಣುಶಕ್ತಿಯ ಶಾಂತಿಯುತ ಬಳಕೆಯ ಬಗ್ಗೆ, ವೈದ್ಯಕೀಯ, ಕೃಷಿ, ಆಹಾರ ಭದ್ರತೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಅದರ ಉಪಯೋಗಗಳನ್ನು ಉಲ್ಲೇಖಿಸಿ, ರಾಷ್ಟ್ರಗಳು ತಮ್ಮ ಬದ್ಧತೆಗಳಿಗೆ ಅನುಗುಣವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಹಕ್ಕನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಒಪ್ಪಿಕೊಂಡಿತು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು “ನಿರಸ್ತ್ರೀಕೃತ ಮತ್ತು ನಿರಸ್ತ್ರೀಕರಿಸುವ ಶಾಂತಿ” ಕುರಿತ ಮನವಿಯನ್ನು ಸ್ಮರಿಸಿ, ನಿಜವಾದ ಶಾಂತಿ ಭಯದ ಮೇಲೆ ಅಲ್ಲ, ಆದರೆ “ನಂಬಿಕೆ, ಸಂವಾದ ಮತ್ತು ನಮ್ಮ ಸಾಮಾನ್ಯ ಮಾನವೀಯತೆಯ ಅರಿವು” ಮೇಲೆ ನಿರ್ಮಾಣವಾಗಬೇಕು ಎಂದು ತಿಳಿಸಿತು.

01 ಮೇ 2026, 17:42