“ಕಾರ್ಡಿನಲ್ ಪಾರೋಲಿನ್: ಶಾಂತಿ ಮತ್ತು ನಿಶಸ್ತ್ರೀಕರಣದ ಕುರಿತು ಜಗದ್ಗುರುಗಳ ಅಧಿಕಾರ ಸ್ಥಳದ ನಿಲುವು ದೃಢವಾಗಿದೆ”.
ವ್ಯಾಟಿಕನ್ ವರದಿ
ರೋಮಿನ ಅಗಸ್ಟಿನಿಯಾನಮ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ, ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ರವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. “ನೀವು ರೂಬಿಯೋರವರನ್ನು ಹೆಚ್ಚು ನಂಬುತ್ತೀರಾ ಅಥವಾ ಟ್ರಂಪ್ ಅವರನ್ನು?” ಎಂಬ ಪ್ರಶ್ನೆಗೆ ಅವರು ನಗುತ್ತಾ, “ನಾನು ಯಾರನ್ನೂ ಅವಲಂಬಿಸುವುದಿಲ್ಲ, ನಾನು ಕೇವಲ ನಮ್ಮ ಪ್ರಭುವಾದ ಯೇಸು ಕ್ರಿಸ್ತನನ್ನೇ ಅವಲಂಬಿಸುತ್ತೇನೆ” ಎಂದು ಉತ್ತರಿಸಿದರು. ಈ ಪ್ರಶ್ನೆ ಜಗದ್ಗುರು XIVನೇ ಲಿಯೋರವರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಟೀಕೆಗಳ ಹಿನ್ನೆಲೆಯಲ್ಲಿ ಕೇಳಲ್ಪಟ್ಟಿತ್ತು.
ಕಾರ್ಡಿನಲ್ ಪಾರೋಲಿನ್ ರವರು, ಜಗದ್ಗುರುಗಳ ಅಣ್ವಸ್ತ್ರಗಳ ಬಗ್ಗೆ ತೆಗೆದುಕೊಂಡಿರುವ ನಿಲುವನ್ನು ಟ್ರಂಪ್ ತಪ್ಪಾಗಿ ಪ್ರತಿನಿಧಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಜಗದ್ಗುರುಗಳ ಅಧಿಕಾರ ಸ್ಥಳವು ಸದಾ ಅಣ್ವಸ್ತ್ರ ನಿಶಸ್ತ್ರೀಕರಣಕ್ಕಾಗಿ ಕೆಲಸ ಮಾಡುತ್ತಲೇ ಬಂದಿದೆ ಮತ್ತು ಅಣ್ವಸ್ತ್ರಗಳ ಸ್ವಾಮ್ಯಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಉತ್ತೇಜಿಸಿದೆ ಎಂದು ಅವರು ಹೇಳಿದರು. ಈ ವಿಷಯದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ನಿಲುವು ತುಂಬಾ ಸ್ಪಷ್ಟವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಟ್ರಂಪ್ ರವರ ನಿರಂತರ ಟೀಕೆಗಳ ಬಗ್ಗೆ ಮಾತನಾಡುವಾಗ, ಪಾರೋಲಿನ್ ರವರು ವೈಯಕ್ತಿಕ ತೀರ್ಪು ನೀಡಲು ಇಚ್ಛಿಸುವುದಿಲ್ಲ ಎಂದರು. “ಜಗದ್ಗುರುಗಳು ಮಾಡಬೇಕಾದುದನ್ನು ಮಾಡುತ್ತಿದ್ದಾರೆ,ಪೋಪ್ ಎಂದರೆ ಪೋಪ್,” ಎಂದು ಅವರು ಹೇಳಿದರು. ಜಗದ್ಗುರು ಲಿಯೋರವರು ಈಗಾಗಲೇ ಕಾಸ್ಟೆಲ್ ಗಾಂಡೋಲ್ಫೊದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡಿರುವುದನ್ನೂ ಅವರು ನೆನಪಿಸಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ವ್ಯಾಟಿಕನ್ ಭೇಟಿಯ ಕುರಿತು ಮಾತನಾಡಿದ ಕಾರ್ಡಿನಲ್ ರವರು, ಮೊದಲು ಅವರ ಮಾತುಗಳನ್ನು ಕೇಳಲಾಗುವುದು ಎಂದು ಹೇಳಿದರು. ನಂತರ ಇತ್ತೀಚಿನ ಬೆಳವಣಿಗೆಗಳು, ಅಂತರರಾಷ್ಟ್ರೀಯ ರಾಜಕೀಯ ಮತ್ತು ವಿಶೇಷವಾಗಿ ಯುದ್ಧ ಸಂಘರ್ಷಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಲ್ಯಾಟಿನ್ ಅಮೆರಿಕಾ ಮತ್ತು ಕ್ಯೂಬಾ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಗೆ ಬರಬಹುದೆಂದು ಅವರು ತಿಳಿಸಿದರು.
ಇರಾನ್‌ನ ಸಮಸ್ಯೆ ಸೇರಿದಂತೆ ಜಾಗತಿಕ ಸಂಘರ್ಷಗಳ ಕುರಿತು ಜಗದ್ಗುರುಗಳ ಅಧಿಕಾರ ಸ್ಥಳದ ನಿಲುವು ಸಂವಾದವೇ ಆಗಿದೆ ಎಂದು ಕಾರ್ಡಿನಲ್ ಪಾರೋಲಿನ್ ರವರು ಹೇಳಿದರು. “ಈ ಸಂಘರ್ಷಗಳನ್ನು ಬಲಪ್ರಯೋಗದಿಂದ ಪರಿಹರಿಸಲಾಗುವುದಿಲ್ಲ, ಅವುಗಳನ್ನು ಪ್ರಾಮಾಣಿಕ ಸಂವಾದ ಮತ್ತು ಮಾತುಕತೆಯ ಮೂಲಕ ಪರಿಹರಿಸಬೇಕು,” ಎಂದು ಅವರು ಹೇಳಿದರು. ಜೊತೆಗೆ, ಅಮೆರಿಕ ಜಾಗತಿಕ ಮಟ್ಟದಲ್ಲಿ ಪ್ರಮುಖ ಸಂವಾದ ಪಾಲುದಾರವಾಗಿಯೇ ಉಳಿದಿದೆ ಎಂದು ಅವರು ಒಪ್ಪಿಕೊಂಡರು.
ಜರ್ಮನ್ ಬಿಷಪ್‌ಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಡಿನಲ್, ಸಮಲಿಂಗಿ ಜೋಡಿಗಳ ಆಶೀರ್ವಾದದ ವಿಷಯದಲ್ಲಿ ಈಗ ಸಂವಾದ ನಡೆಯುತ್ತಿದೆ ಎಂದು ಹೇಳಿದರು. ಅಂತಿಮ ನಿರ್ಧಾರ ಜಗದ್ಗುರುಗಳದ್ದಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಧರ್ಮ ಸಭೆಯಲ್ಲಿ ಸಮಸ್ಯೆಗಳು ಶಿಕ್ಷೆಗಳ ಮೂಲಕವಲ್ಲ, ಶಾಂತಿಯುತ ಸಂವಾದದ ಮೂಲಕ ಪರಿಹಾರವಾಗಲಿ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.