ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಏಕತೆಯ ಮೂಲಕ ಸುವಾರ್ತೆಗೆ ಸಾಕ್ಷಿಯಾಗುವುದು.

ನಮ್ಮ ಸಂಪಾದಕೀಯ ನಿರ್ದೇಶಕರು ಜಗದ್ಗುರು XIVನೇ ಲಿಯೋರವರ ಅಧಿಕಾರವಧಿಯ ಮೊದಲ ವರ್ಷದ ಸಂದೇಶ ಮತ್ತು ಅದರ ಪರಿಣಾಮಗಳ ಕುರಿತು ಚಿಂತನೆ ವ್ಯಕ್ತಪಡಿಸುತ್ತಾರೆ.

ವ್ಯಾಟಿಕನ್ ವರದಿ

ಶಾಂತಿ ಮತ್ತು ಧರ್ಮ ಸಭೆಯ ಏಕತೆ  ಇವು ಜಗದ್ಗುರು XIVನೇ ಲಿಯೋರವರ ಅಧಿಕಾರವಧಿಯ ಮೊದಲ ವರ್ಷದ ಎರಡು ಪ್ರಮುಖ ಹಾಗೂ ನಿರಂತರ ವಿಷಯಗಳಾಗಿವೆ. ಇಂದಿನ ಜಗತ್ತಿನಲ್ಲಿ ಅರ್ಥವಿಲ್ಲದ ಯುದ್ಧಗಳು ಹೆಚ್ಚುತ್ತಿರುವುದು ಮತ್ತು ಅಂತರರಾಷ್ಟ್ರೀಯ ಕಾನೂನು ದುರ್ಬಲಗೊಳ್ಳುತ್ತಿರುವ ಹಿನ್ನೆಲೆ ಶಾಂತಿಯ ಅಗತ್ಯವನ್ನು ತುರ್ತು ಆದ್ಯತೆಯನ್ನಾಗಿ ಮಾಡಿದೆ. ಅದೇ ಸಮಯದಲ್ಲಿ, ಚಿಕಾಗೋದಲ್ಲಿ ಜನಿಸಿ ಪೆರು ದೇಶದಲ್ಲಿ ಮಿಷನರಿಯಾಗಿ ಸೇವೆ ಸಲ್ಲಿಸಿದ ರೋಮಿನ ಬಿಷಪ್ ಆಗಿರುವ ಜಗದ್ಗುರು ಲಿಯೋರವರ ಬೋಧನೆಗಳೆಲ್ಲವೂ ಧರ್ಮ ಸಭೆಯ ಏಕತೆಯ ಸಂದೇಶವನ್ನು ನಿರಂತರವಾಗಿ ಹೊತ್ತಿವೆ.

ಕ್ರಿಸ್ತನಲ್ಲಿ ನಂಬಿಕೆಯುಳ್ಳವರ ಏಕತೆಗಾಗಿ ಜಗದ್ಗುರು ಲಿಯೋರವರು ಮಾಡಿದ ಮನವಿಗಳು ಕೇವಲ ಬಾಹ್ಯ ಶಾಂತಿ ಅಥವಾ ಭಿನ್ನತೆಗಳನ್ನು ಮರೆಮಾಚುವ ಸಾಮಾನ್ಯ ಸ್ಥಿತಿಗಾಗಿ ಅಲ್ಲ. 2026ರ ಜನವರಿ 7ರಂದು ನಡೆದ ವಿಶೇಷ ಕಾರ್ಡಿನಲ್ ಸಭೆಯಲ್ಲಿ ಅವರು, ಜಗದ್ಗುರು XVIನೇ ಬೆನೆಡಿಕ್ಟ್ ರವರ ಮಾತುಗಳನ್ನು ಉಲ್ಲೇಖಿಸಿ, “ಧಮ೯ಸಭೆ ಮತಾಂತರಕ್ಕೆ ಒತ್ತಾಯಿಸುವುದಿಲ್ಲ, ಅದು ಆಕರ್ಷಣೆಯಿಂದ ಬೆಳೆಯುತ್ತದೆ” ಎಂದು ಹೇಳಿದರು. ಕ್ರಿಸ್ತನ ಪ್ರೀತಿಯ ಶಕ್ತಿಯೇ ಜನರನ್ನು ತನ್ನತ್ತ ಸೆಳೆಯುತ್ತದೆ, ಅದೇ ಶಕ್ತಿಯು ಧರ್ಮ ಸಭೆಯ ಮಿಷನ್‌ನ ಮೂಲವಾಗಿದೆ ಎಂದು ಅವರು ವಿವರಿಸಿದರು.

ಜಗದ್ಗುರು XIVನೇ ಲಿಯೋರವರು, “ಕ್ರಿಸ್ತನ ಪ್ರೀತಿ ನಮ್ಮನ್ನು ಮುಂದಕ್ಕೆ ಒತ್ತಾಯಿಸುತ್ತದೆ” ಎಂದು ಹೇಳಿ, ಆ ಪ್ರೀತಿಯೇ ಮಾನವರನ್ನು ಆವರಿಸಿ, ಸೆಳೆದು, ಒಂದಾಗಿಸುತ್ತದೆ ಎಂದು ತಿಳಿಸಿದರು. ಏಕತೆ ಜನರನ್ನು ಒಗ್ಗೂಡಿಸುತ್ತದೆ, ಆದರೆ ವಿಭಜನೆ ಜನರನ್ನು ಚದರಿಸುತ್ತದೆ ಎಂದು ಅವರು ಹೇಳಿದರು. ನಿಜವಾದ ಮಿಷನರಿ ಧರ್ಮ ಸಭೆ ಆಗಬೇಕಾದರೆ, ಯೇಸು ಕೊಟ್ಟ ಏಕೈಕ ಆಜ್ಞೆಯಾದ “ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಒಬ್ಬರನ್ನೊಬ್ಬರು ಪ್ರೀತಿಸಿರಿ” ಎಂಬ ಮಾತನ್ನು ಜೀವನದಲ್ಲಿ ಅನುಸರಿಸಬೇಕು ಎಂದು ಅವರು ಒತ್ತಿಹೇಳಿದರು.

ಧರ್ಮ ಸಭೆಯ ಏಕತೆ ಎಂದರೆ ಎಲ್ಲರೂ ಒಂದೇ ರೀತಿಯಾಗಿ ಬದುಕುವುದು ಅಥವಾ ಮೌನ ಸಹವಾಸವಲ್ಲ, ಅದು ದೇವರ ಕೃಪೆಯಿಂದ ಹುಟ್ಟುವ ಹೊಸ ಸಂಬಂಧಗಳ ಫಲವಾಗಿದೆ. ಪರಸ್ಪರ ಪ್ರೀತಿ, ಕ್ಷಮೆ, ಕರುಣೆ ಮತ್ತು ಸಹೋದರತ್ವದ ಮೂಲಕ ಧರ್ಮ ಸಭೆಯ ಏಕತೆ ವ್ಯಕ್ತವಾಗುತ್ತದೆ. ಭಿನ್ನತೆಗಳ ಮಧ್ಯೆಯೂ ಸಮಾಗಮ ಮತ್ತು ಸಹಬಾಳ್ವೆಯನ್ನು ಬದುಕುವ ಸಾಮರ್ಥ್ಯವೇ ನಿಜವಾದ ಕ್ರೈಸ್ತ ಸಾಕ್ಷಿಯಾಗಿದೆ ಎಂದು ಜಗದ್ಗುರುಗಳು ವಿವರಿಸಿದರು.

ಜಗದ್ಗುರು ಲಿಯೋರವರ ಪ್ರಕಾರ, ಸೈನೋಡಾಲಿಟಿ ಎಂದರೆ ಧರ್ಮ ಸಭೆಯಲ್ಲಿ ಸಮಾಗಮ ಮತ್ತು ಸಹಯಾತ್ರೆಯ ಸ್ಪಷ್ಟ ರೂಪವಾಗಿದೆ. ಧರ್ಮ ಸಭೆ ತನ್ನದೇ ಬೆಳಕಿನಲ್ಲಿ ಹೊಳೆಯಲು ಪ್ರಯತ್ನಿಸದೆ, ಕ್ರಿಸ್ತನ ಬೆಳಕನ್ನು ಪ್ರತಿಬಿಂಬಿಸುವಾಗ ಮಾತ್ರ ಅದು ಜನರನ್ನು ತನ್ನತ್ತ ಆಕರ್ಷಿಸುತ್ತದೆ. ಜಾಹೀರಾತು ಮತ್ತು ಸಿದ್ಧಾಂತಗಳ ಪ್ರಭಾವದಿಂದ ದೂರವಿದ್ದು, ದಯೆ ಮತ್ತು ಪ್ರೀತಿಯ ಅಪ್ಪುಗೆಯನ್ನು ಜಗತ್ತಿಗೆ ನೀಡುವಾಗ ಧರ್ಮ ಸಭೆ ನಿಜವಾದ ಮಿಷನರಿ ಸಮುದಾಯವಾಗುತ್ತದೆ ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರು ತಮ್ಮ ಪೇತ್ರನ ಸೇವೆಯ ಆರಂಭದ ಪವಿತ್ರ ಬಲಿಪೂಜೆಯಲ್ಲಿ, “ಏಕತೆ ಮತ್ತು ಸಮಾಗಮದ ಚಿಹ್ನೆಯಾದ ಒಂದು ಏಕೀಕೃತ ಧರ್ಮ ಸಭೆ, ಸಮಾಧಾನಗೊಂಡ ಜಗತ್ತಿಗೆ ಹುಳಿಯಾಗಲಿ” ಎಂಬ ತಮ್ಮ ಮಹಾ ಆಶಯವನ್ನು ವ್ಯಕ್ತಪಡಿಸಿದರು. ಕ್ರೈಸ್ತರು ಮಾತ್ರವಲ್ಲದೆ, ಇತರ ಧರ್ಮದವರು, ದೇವರನ್ನು ಹುಡುಕುವವರು ಮತ್ತು ಸತ್ಸಂಕಲ್ಪದ ಎಲ್ಲ ಮಹಿಳೆಯರು ಮತ್ತು ಪುರುಷರು ಸೇರಿ ಶಾಂತಿಯು ಆಳುವ ಹೊಸ ಜಗತ್ತನ್ನು ನಿರ್ಮಿಸಲು ಕರೆ ನೀಡಿದರು. ಯುದ್ಧಗಳಿಂದ ಚೂರುಚೂರಾಗಿರುವ ಇಂದಿನ ಜಗತ್ತಿನಲ್ಲಿ, ಧರ್ಮ ಸಭೆಯ ಏಕತೆಯೇ ಎಲ್ಲರಿಗೂ ಶಾಂತಿಯ ಪ್ರವಾದನೆಯಾಗಿದೆ ಎಂದು ಅವರು ತಿಳಿಸಿದರು.

07 ಮೇ 2026, 17:56