ಹುಡುಕಿ

ವ್ಯಾಟಿಕನ್ ವೀಕ್ಷಣಾಲಯ ವ್ಯಾಟಿಕನ್ ವೀಕ್ಷಣಾಲಯ  (ANSA)

ವ್ಯಾಟಿಕನ್ ವೀಕ್ಷಣಾಲಯವು ಜಗದ್ಗುರು XIIIನೇ ಲಿಯೋರವರ ಹೆಸರಿನಲ್ಲಿ ಒಂದು ಕ್ಷುದ್ರಗ್ರಹವನ್ನು ಹೊಂದಿದೆ.

ವ್ಯಾಟಿಕನ್ ವೀಕ್ಷಣಾಲಯವು ತನ್ನ ಇತಿಹಾಸದ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ನಾಲ್ಕು ಕ್ಷುದ್ರಗ್ರಹಗಳಿಗೆ ಹೆಸರು ನೀಡಲಾಗಿದೆ ಎಂದು ಘೋಷಿಸಿದೆ. ಇದರಲ್ಲಿ, ಜಗದ್ಗುರು XIIIನೇ ಲಿಯೋರವರ ಹೆಸರೂ ಸೇರಿದ್ದು, ಅವರು ಜಗದ್ಗುರುಗಳ ಪ್ರದೇಶಗಳನ್ನು ಕಳೆದುಕೊಂಡ ನಂತರ 1891ರಲ್ಲಿ ಈ ಸಂಸ್ಥೆಯನ್ನು ಮರುಸ್ಥಾಪಿಸಿದ್ದರು.

ವ್ಯಾಟಿಕನ್ ವರದಿ

ವ್ಯಾಟಿಕನ್ ವೀಕ್ಷಣಾಲಯವು ಏಪ್ರಿಲ್ 29 ಬುಧವಾರ ಪ್ರಕಟಿಸಿದ ಪ್ರಕಟಣೆಯಲ್ಲಿ, ತನ್ನ ಇತಿಹಾಸದ ಪ್ರಮುಖ ವ್ಯಕ್ತಿಗಳ ಹೆಸರಿನಲ್ಲಿ ನಾಲ್ಕು ಕ್ಷುದ್ರಗ್ರಹಗಳಿಗೆ ಹೆಸರು ನೀಡಲಾಗಿದೆ ಎಂದು ಘೋಷಿಸಿದೆ—ಇವುಗಳಲ್ಲಿ 1891ರಲ್ಲಿ ಸಂಸ್ಥೆಯನ್ನು ಮರುಸ್ಥಾಪಿಸಿದ ಜಗದ್ಗುರು XIIIನೇ ಲಿಯೋರವರ ಹೆಸರೂ ಸೇರಿದೆ.

ಈ ನಾಲ್ಕು ಕ್ಷುದ್ರಗ್ರಹಗಳನ್ನು ಲಿಥುವೇನಿಯಾದ ಖಗೋಳಶಾಸ್ತ್ರಜ್ಞ ಕಾಜಿಮಿಯೆರಾಸ್ ಚೆರ್ನಿಸ್ ಮತ್ತು ವ್ಯಾಟಿಕನ್ ವೀಕ್ಷಣಾಲಯದ ಖಗೋಳಶಾಸ್ತ್ರಜ್ಞ ವೀಕ್.ಸ್ವಾಮಿ ರಿಚರ್ಡ್ ಪಿ. ಬೊಯ್ಲ್ ರವರು ಅಮೇರಿಕಾದ ಅರಿಜೋನಾ ರಾಜ್ಯದ ಮೌಂಟ್ ಗ್ರಾಹಮ್‌ನಲ್ಲಿ ಇರುವ ವ್ಯಾಟಿಕನ್ ಅಡ್ವಾನ್ಸ್ಡ್ ಟೆಕ್ನಾಲಜಿ ಟೆಲಿಸ್ಕೋಪ್ (ವಿಎಟಿಟಿ) ಬಳಸಿ ಕಂಡುಹಿಡಿದಿದ್ದಾರೆ.

ಈ ಕ್ಷುದ್ರಗ್ರಹಗಳ ಹೆಸರುಗಳು “(858334) ಜಿಯೋಅಚ್ಚಿನೊಪೆಸಿ”, “(836955) ಲೈಸ್”, “(836275) ಪೈಟ್ರೋಮಾಫಿ”, ಮತ್ತು “(688696) ಬರ್ತಿಯು” ಆಗಿದ್ದು, ಇವುಗಳ ಹೆಸರುಗಳನ್ನು ಇತ್ತೀಚೆಗೆ ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಸಂಘಟನೆಯ (ಐಏಯು) ಡಬ್ಲ್ಯಜಿಎಸ್ಬಿಎನ್ ಬುಲೆಟಿನ್‌ನ ವಾಲ್ಯೂಮ್ 6, ಇಶ್ಶು 4ರಲ್ಲಿ ಪ್ರಕಟಿಸಲಾಗಿದೆ.

ವೀಕ್ಷಣಾಲಯದ ಅಭಿವೃದ್ಧಿ ಮತ್ತು ಜಗದ್ಗುರು XIIIನೇ ಲಿಯೋರವರ“(858334) ಜಿಯೋಅಚ್ಚಿನೊಪೆಸಿ” ಎಂಬ ಕ್ಷುದ್ರಗ್ರಹವನ್ನು ಜಗದ್ಗುರು XIIIನೇ ಲಿಯೋರವರನ್ನು  ಗೌರವಿಸುತ್ತದೆ. ಅವರ ದೀಕ್ಷಾಸ್ನಾನದ ಹೆಸರು ಜಿಯೋಕ್ಕಿನೋ ವಿನ್ಸೆನ್ಜೋ ರಫಾಯೆಲೆ ಲೂಯಿಜಿ ಪೆಚ್ಚಿ ಆಗಿದ್ದು, ಅವರು 1878ರಿಂದ 1903ರವರೆಗೆ ಜಗದ್ಗುರುಗಳಾಗಿದ್ದರು.

ಜಗದ್ಗುರು XIIIನೇ ಲಿಯೋರವರು ಜಗದ್ಗುರುಗಳ ಪ್ರದೇಶಗಳನ್ನು ಕಳೆದುಕೊಂಡ ನಂತರ ವ್ಯಾಟಿಕನ್ ವೀಕ್ಷಣಾಲಯವನ್ನು ಮರುಸ್ಥಾಪಿಸಿ ಅದರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು ಎಂದು ಪ್ರಕಟಣೆ ತಿಳಿಸುತ್ತದೆ. ಅವರ ಕಾಲದಲ್ಲಿ ರೋಮಿನ ಸಂತ ಇಗ್ನೇಷಿಯಸ್ ಧರ್ಮ ಸಭೆಯ ಮೇಲ್ಭಾಗದಲ್ಲಿದ್ದ ವೀಕ್.ಸ್ವಾಮಿ ಆಂಜೆಲೊ ಸೆಕ್ಕಿಯವರ ವೀಕ್ಷಣಾಲಯವು ಕೂಡ ಪ್ರಮುಖವಾಗಿತ್ತು.

1930ರ ದಶಕದಲ್ಲಿ ರೋಮ್ ನಗರದಲ್ಲಿ ವಿದ್ಯುತ್ ಬೆಳಕು ಹೆಚ್ಚಾಗಿ ರಾತ್ರಿ ಆಕಾಶವು ಪ್ರಕಾಶಮಾನವಾಗಿದ್ದ ಕಾರಣ, ದೂರದರ್ಶಕಗಳನ್ನು ರೋಮಿನ ದಕ್ಷಿಣಕ್ಕೆ ಇರುವ ಕಾಸ್ಟೆಲ್ ಗಾಂಡೋಲ್ಫೊದಲ್ಲಿನ ಪ್ರೇಷಿತರ ಅರಮನೆಗೆ ಸ್ಥಳಾಂತರಿಸಲಾಯಿತು. ನಂತರ 1990ರ ದಶಕದಲ್ಲಿ, ಮೌಂಟ್ ಗ್ರಾಹಮ್‌ನಲ್ಲಿ ಹೊಸ ವ್ಯಾಟಿಕನ್ ಅಡ್ವಾನ್ಸ್ಡ್ ಟೆಕ್ನಾಲಜಿ ಟೆಲಿಸ್ಕೋಪ್ ನಿರ್ಮಿಸಲಾಯಿತು.

ವೀಕ್ಷಣಾಲಯದ ಮಿಷನ್

1891ರಲ್ಲಿ “ಉತ್ ಮಿಸ್ಟಿಕಮ್” ಎಂಬ ಮೋಟು ಪ್ರೊಪ್ರಿಯೋದಲ್ಲಿ ಜಗದ್ಗುರು XIIIನೇ ಲಿಯೋರವರು, ಧರ್ಮ ಸಭೆ “ನಿಜವಾದ ಮತ್ತು ದೃಢವಾದ ವಿಜ್ಞಾನವನ್ನು ಅಪ್ಪಿಕೊಳ್ಳುತ್ತದೆ, ಉತ್ತೇಜಿಸುತ್ತದೆ ಮತ್ತು ಸಂಪೂರ್ಣ ಸಮರ್ಪಣೆಯಿಂದ ಪ್ರೋತ್ಸಾಹಿಸುತ್ತದೆ” ಎಂದು ವಿಶ್ವಕ್ಕೆ ತೋರಿಸುವುದು ಈ ವೀಕ್ಷಣಾಲಯದ ಉದ್ದೇಶ ಎಂದು ಹೇಳಿದ್ದಾರೆ.

ಅವರು ಇದನ್ನು “ಮಾನವನ ಆತ್ಮವನ್ನು ಆಕಾಶದ ಘಟನೆಗಳ ಚಿಂತನೆಗೆ ಎತ್ತುವ ಅತ್ಯುನ್ನತ ವಿಜ್ಞಾನವನ್ನು ಉತ್ತೇಜಿಸುವ ಕಾರ್ಯ” ಎಂದು ವಿವರಿಸಿದರು.

ಇತರ ಜಗದ್ಗುರುಗಳ ಹೆಸರಿನ ಕ್ಷುದ್ರ ಗ್ರಹಗಳು

ಇದು ಮೊದಲ ಬಾರಿಗೆ ಜಗದ್ಗುರುಗಳ ಹೆಸರಿನಲ್ಲಿ ಕ್ಷುದ್ರಗ್ರಹದ ಹೆಸರು ನೀಡಿರುವುದಲ್ಲ. “(560974) ಉಗೊಬೊನ್‌ಕಂಪಗ್ನಿ” ಎಂಬ ಕ್ಷುದ್ರಗ್ರಹವು ಕ್ಯಾಲೆಂಡರ್ ಸುಧಾರಣೆಗಾಗಿ ಪ್ರಸಿದ್ಧರಾದ ಜಗದ್ಗುರು  XIIIನೇ ಗ್ರೆಗೊರಿಯವರನ್ನು ಗೌರವಿಸುತ್ತದೆ.

2000ರಲ್ಲಿ ಜರ್ಮನ್ ಖಗೋಳಶಾಸ್ತ್ರಜ್ಞ ಲುಟ್ಜ್ ಶ್ಮಾಡೆಲ್ ರವರು “(8661) ರಾಟ್ಜಿಂಜರ್” ಎಂಬ ಕ್ಷುದ್ರಗ್ರಹಕ್ಕೆ ನಂತರದ ಜಗದ್ಗುರು XVIನೇ ಬೆನೆಡಿಕ್ಟ್  ರವರ ಹೆಸರನ್ನು ಇಟ್ಟಿದ್ದರು.

ಇತರ ಧರ್ಮ ಸಭೆಯ ವ್ಯಕ್ತಿಗಳ ಗೌರವ

“(836955) ಲೈಸ್” ವೀಕ್.ಸ್ವಾಮಿ ಜ್ಯೂಸೆಪ್ಪೆ ಲೈಸ್ ರವರನ್ನು, “(836275) ಪೈಟ್ರೋಮಾಫಿ” ಕಾರ್ಡಿನಲ್ ಪಿಯೆಟ್ರೋ ಮಾಫ್ಫಿ ರವರನ್ನು ಮತ್ತು “(688696) ಬರ್ತಿಯು” ವಂ.ಸ್ವಾಮಿ ಫ್ಲೋರಂಟ್ ಬರ್ಟಿಯು ಅವರನ್ನು ಗೌರವಿಸುತ್ತದೆ. ಇವರಲ್ಲಿ ಪ್ರತಿಯೊಬ್ಬರೂ ವ್ಯಾಟಿಕನ್ ವೀಕ್ಷಣಾಲಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಈ ನಾಲ್ಕು ಗ್ರಹಗಳ ಹೆಸರು ಜಗದ್ಗುರು XIIIನೇ ಲಿಯೋರವರ ಉದ್ದೇಶವನ್ನು ಮುಂದುವರಿಸುತ್ತಿದ್ದು, ಧರ್ಮ ಮತ್ತು ವಿಜ್ಞಾನ ಪರಸ್ಪರ ಸಹಕಾರದಲ್ಲಿ ಸಾಗುತ್ತವೆ ಎಂಬುದನ್ನು ವಿಶ್ವಕ್ಕೆ ತೋರಿಸುತ್ತದೆ.

ಕ್ಷುದ್ರ ಗ್ರಹಗಳಿಗೆ ಹೆಸರು ಹೇಗೆ ನೀಡಲಾಗುತ್ತದೆ?

ಕ್ಷುದ್ರಗ್ರಹಗಳನ್ನು ಕಂಡುಹಿಡಿದಾಗ ಅವುಗಳಿಗೆ ತಾತ್ಕಾಲಿಕ ಹೆಸರು ನೀಡಲಾಗುತ್ತದೆ. ಅವುಗಳ ಕಕ್ಷೆ (orbit) ನಿಖರವಾಗಿ ನಿರ್ಧರಿಸಿ ಭವಿಷ್ಯದ ಚಲನವಲನವನ್ನು ಊಹಿಸಲು ಸಾಧ್ಯವಾದಾಗ, ಅವುಗಳಿಗೆ ಶಾಶ್ವತ ಸಂಖ್ಯೆ ನೀಡಲಾಗುತ್ತದೆ.

ಪ್ರಸ್ತುತ ಸುಮಾರು 13 ಲಕ್ಷ ತಿಳಿದಿರುವ ಗ್ರಹಗಳಲ್ಲಿ ಸುಮಾರು 8.5 ಲಕ್ಷಕ್ಕೆ ಶಾಶ್ವತ ಸಂಖ್ಯೆ ನೀಡಲಾಗಿದೆ. ಈ ಸಂಖ್ಯೆಯನ್ನು ಪಡೆದ ನಂತರವೇ ವಿಜ್ಞಾನಿಗಳು ಅವುಗಳಿಗೆ ಅಂತಿಮ ಹೆಸರನ್ನು ಸೂಚಿಸಬಹುದು.

ಈ ಹೆಸರನ್ನು ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಸಂಘಟನೆಯ ಸ್ಮಾಲ್ ಬಾಡಿ ನೋಮೆಂಕ್ಲೇಚರ್ ವರ್ಕಿಂಗ್ ಗ್ರೂಪ್ (ಡಬ್ಲ್ಯೂಜಿಎಸ್ಬಿಎನ್) ಪರಿಶೀಲಿಸಿ ಅನುಮೋದಿಸುತ್ತದೆ. ಒಮ್ಮೆ ಅನುಮೋದನೆಯಾದ ನಂತರ, ಗ್ರಹಶಕಲವು “(ಸಂಖ್ಯೆ) ಹೆಸರು” ಎಂಬ ಅಧಿಕೃತ ಹೆಸರಿನಿಂದ ಗುರುತಿಸಲ್ಪಡುತ್ತದೆ.

01 ಮೇ 2026, 17:54