ಹುಡುಕಿ

VATICAN-POPE-ANGELUS-RELIGION

ಕೃತಕ ಬುದ್ಧಿಮತ್ತೆ (ಎಐ) ಕುರಿತ ವ್ಯಾಟಿಕನ್ ಆಯೋಗವು ಮೊದಲ ಬಾರಿಗೆ ಸಭೆ ನಡೆಸಿತು.

ಕೃತಕ ಬುದ್ಧಿಮತ್ತೆ (ಎಐ) ಕುರಿತ ವ್ಯಾಟಿಕನ್‌ನ ಅಂತರ-ಡಿಕಾಸ್ಟರಿ ಆಯೋಗವು ರೋಮಿನಲ್ಲಿ ತನ್ನ ಪ್ರಥಮ ಸಭೆಯನ್ನು ನಡೆಸಿತು.

ವ್ಯಾಟಿಕನ್ ವರದಿ

ಕೃತಕ ಬುದ್ಧಿಮತ್ತೆ (ಎಐ) ಕುರಿತ ಅಂತರ-ಡಿಕಾಸ್ಟರಿ ಆಯೋಗದ ಮೊದಲ ಸಭೆ

ಕೃತಕ ಬುದ್ಧಿಮತ್ತೆ (ಎಐ) ಕುರಿತ ಅಂತರ-ಡಿಕಾಸ್ಟರಿ ಆಯೋಗದ ಮೊದಲ ಸಭೆಯು ಇತ್ತೀಚೆಗೆ ನಡೆಯಿತು. ಜಗದ್ಗುರುಗಳ ಅಧಿಕಾರ ಸ್ಥಳವು ವಿವಿಧ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ಅಧ್ಯಯನ, ಚಿಂತನೆ ಮತ್ತು ಬಳಕೆಯಲ್ಲಿ ಪರಸ್ಪರ ಸಮನ್ವಯ ಹಾಗೂ ಸಹಕಾರವನ್ನು ಬೆಳೆಸುವ ಉದ್ದೇಶದಿಂದ ಹೊಸದಾಗಿ ಸ್ಥಾಪಿಸಲಾದ ಈ ಆಯೋಗದ ಕಾರ್ಯಾರಂಭವನ್ನು ಈ ಸಭೆ ಅಧಿಕೃತವಾಗಿ ಗುರುತಿಸಿತು.

ಪಲಾಜ್ಜೊ ಸಾನ್ ಕಾಲಿಸ್ಟೋದಲ್ಲಿ ನಡೆದ ಈ ಸಭೆಯಲ್ಲಿ, ವಿಶ್ವಾಸ ಸಿದ್ಧಾಂತದ ಡಿಕಾಸ್ಟರಿ, ಸಂಸ್ಕೃತಿ ಮತ್ತು ಶಿಕ್ಷಣದ ಡಿಕಾಸ್ಟರಿ, ಸಂವಹನದ ಡಿಕಾಸ್ಟರಿ, ಸಮಗ್ರ ಮಾನವ ಅಭಿವೃದ್ಧಿ ಪ್ರೋತ್ಸಾಹದ ಡಿಕಾಸ್ಟರಿ, ಹಾಗೆಯೇ ಜೀವನಕ್ಕಾಗಿ ಪೊಂಟಿಫಿಕಲ್ ಅಕಾಡೆಮಿ, ವಿಜ್ಞಾನಗಳ ಪೊಂಟಿಫಿಕಲ್ ಅಕಾಡೆಮಿ ಮತ್ತು ಸಾಮಾಜಿಕ ವಿಜ್ಞಾನಗಳ ಪೊಂಟಿಫಿಕಲ್ ಅಕಾಡೆಮಿಗಳ ಪ್ರತಿನಿಧಿಗಳು ಭಾಗವಹಿಸಿದರು.

ಈ ಸಭೆಯ ಉದ್ದೇಶವು ಪ್ರಸ್ತುತ ನಡೆಯುತ್ತಿರುವ ವಿವಿಧ ಉಪಕ್ರಮಗಳನ್ನು ಪರಸ್ಪರ ಹಂಚಿಕೊಳ್ಳುವುದು, ಸಾಮಾನ್ಯ ಆದ್ಯತೆಗಳನ್ನು ಗುರುತಿಸುವುದು ಮತ್ತು ಮಾನವ ಘನತೆ, ಸಾಮೂಹಿಕ ಹಿತ ಹಾಗೂ ಧರ್ಮ ಸಭೆಯ ಧ್ಯೇಯಸಾಧನೆಗೆ ಸೇವೆ ಸಲ್ಲಿಸುವ ಕೃತಕ ಬುದ್ಧಿಮತ್ತೆಯ ದೃಷ್ಟಿಕೋನವನ್ನು ಉತ್ತೇಜಿಸುವ ಪ್ರಕ್ರಿಯೆಯ ಮೊದಲ ಹೆಜ್ಜೆಗಳನ್ನು ನಿರ್ಧರಿಸುವುದಾಗಿತ್ತು.

ಆಯೋಗದ ಮೊದಲ ವರ್ಷದ ಕಾರ್ಯಚಟುವಟಿಕೆಗಳ ಸಮನ್ವಯದ ಹೊಣೆಗಾರಿಕೆಯನ್ನು ಸಮಗ್ರ ಮಾನವ ಅಭಿವೃದ್ಧಿ ಪ್ರೋತ್ಸಾಹದ ಡಿಕಾಸ್ಟರಿಗೆ ವಹಿಸಲಾಗಿದೆ.

ಸಭೆಯ ಉದ್ಘಾಟನಾ ಭಾಷಣದಲ್ಲಿ ಆ ಡಿಕಾಸ್ಟರಿಯ ಪ್ರೀಫೆಕ್ಟ್ ಕಾರ್ಡಿನಲ್ ಮೈಕೆಲ್ ಚೆರ್ನಿ, ಎಸ್.ಜೆ. ಅವರು ಕೃತಕ ಬುದ್ಧಿಮತ್ತೆಯ ಇಂದಿನ ಬೆಳವಣಿಗೆಯ ನಾಲ್ಕು ಪ್ರಮುಖ ಅಂಶಗಳನ್ನು ಒತ್ತಿಹೇಳಿದರು ಅದರ ಅಭೂತಪೂರ್ವ ವೇಗದ ಅಭಿವೃದ್ಧಿ, ಮಾನವ ಘನತೆಯ ಮೇಲಿನ ಅದರ ಪರಿಣಾಮ, ಧರ್ಮ ಸಭೆ ಮತ್ತು ತಂತ್ರಜ್ಞಾನ ಕ್ಷೇತ್ರದ ನಡುವಿನ ಹೆಚ್ಚುತ್ತಿರುವ ಸಂವಾದ, ಹಾಗೂ ಮ್ಯಾಗ್ನಿಫಿಕ ಹುಮಾನಿಟಾಸ್ ಎಂಬ ವಿಶ್ವಪತ್ರಿಕೆಯು ಉಂಟುಮಾಡಿರುವ ವ್ಯಾಪಕ ಪ್ರತಿಧ್ವನಿ.

ಕೃತಕ ಬುದ್ಧಿಮತ್ತೆಯು ಅಪಾರ ಅವಕಾಶಗಳನ್ನು ಒದಗಿಸುವುದರ ಜೊತೆಗೆ, ದಿನೇದಿನೇ ಗಂಭೀರವಾಗುತ್ತಿರುವ ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪರಿಸರ ಸಂಬಂಧಿತ ಅಪಾಯಗಳು ಮತ್ತು ಸವಾಲುಗಳನ್ನೂ ಒಡ್ಡುತ್ತಿರುವ ಹಿನ್ನೆಲೆಯಲ್ಲಿ, ವಿವೇಕಪೂರ್ಣ ವಿವೇಚನೆಯ ಅಗತ್ಯಕ್ಕೆ ವಿಶೇಷ ಮಹತ್ವ ನೀಡಲಾಯಿತು.

ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಸ್ಥೆಗಳು ಕೃತಕ ಬುದ್ಧಿಮತ್ತೆಯ ಕುರಿತು ತಾವು ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಮತ್ತು ಚಿಂತನೆಗಳನ್ನು ಪ್ರಸ್ತುತಪಡಿಸಿದವು. ಅವುಗಳಲ್ಲಿ ಈ ತಂತ್ರಜ್ಞಾನದ ವೈಜ್ಞಾನಿಕ, ಸಾಮಾಜಿಕ, ನೈತಿಕ ಹಾಗೂ ಶೈಕ್ಷಣಿಕ ಪರಿಣಾಮಗಳಿಗೆ ಸಂಬಂಧಿಸಿದ ಅಧ್ಯಯನಗಳು ಮತ್ತು ಉಪಕ್ರಮಗಳ ಉಲ್ಲೇಖವೂ ಸೇರಿತ್ತು.

ಕೃತಕ ಬುದ್ಧಿಮತ್ತೆಯ ನೈತಿಕತೆ ಕುರಿತ ಕಾಂಗ್ರೆಸ್, ರೋಮ್ ಎಐ ನೀತಿಶಾಸ್ತ್ರಕ್ಕೆ ಕರೆ, ಹಾಗೂ 2024ರ ವಿಶ್ವ ಶಾಂತಿ ದಿನದ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಶಾಂತಿಯ ನಡುವಿನ ಸಂಬಂಧದ ಕುರಿತು ಜಗದ್ಗುರುಗಳು ನೀಡಿದ ಸಂದೇಶವನ್ನು ಸಭೆಯಲ್ಲಿ ಸ್ಮರಿಸಲಾಯಿತು.

ಸಮನ್ವಯ, ರೂಪಣೆ ಮತ್ತು ಸಂವಾದ

ಹೊಸದಾಗಿ ರಚಿಸಲಾದ ಈ ಆಯೋಗದ ಪಾತ್ರದ ಕುರಿತು ನಡೆದ ಚರ್ಚೆಯಲ್ಲಿ, ಎರಡು ಪ್ರಮುಖ ಸೇವೆಗಳನ್ನು ಅದು ನಿರ್ವಹಿಸಬೇಕೆಂಬ ವಿಷಯದಲ್ಲಿ ವ್ಯಾಪಕ ಒಮ್ಮತ ವ್ಯಕ್ತವಾಯಿತು.

ಒಂದೆಡೆ, ಜಗದ್ಗುರುಗಳ ಅಧಿಕಾರ ಸ್ಥಳದ ವಿವಿಧ ಸಂಸ್ಥೆಗಳೊಳಗೆ ಕೃತಕ ಬುದ್ಧಿಮತ್ತೆಯ ಬಳಕೆಗೆ ಸಂಬಂಧಿಸಿದ ಸಮನ್ವಯ, ಮಾಹಿತಿ ವಿನಿಮಯ ಮತ್ತು ಚಿಂತನೆಯನ್ನು ಆಯೋಗವು ಉತ್ತೇಜಿಸಬೇಕು. ಮತ್ತೊಂದೆಡೆ, ಈ ಕ್ಷೇತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಅನೇಕ ಉಪಕ್ರಮಗಳಿಗೆ ವಿವೇಚನೆ ಮತ್ತು ಮಾರ್ಗದರ್ಶನ ನೀಡುವ ವಿಶ್ವಾಸಾರ್ಹ ಕೇಂದ್ರವಾಗಿಯೂ ಅದು ಕಾರ್ಯನಿರ್ವಹಿಸಬೇಕು.

ಶೈಕ್ಷಣಿಕ, ವೈಜ್ಞಾನಿಕ ಮತ್ತು ವ್ಯವಹಾರ ಸಮುದಾಯಗಳೊಂದಿಗೆ, ಹಾಗೆಯೇ ವಿವಿಧ ದೇಶಗಳ ಬಿಷಪ್‌ಗಳ ಸಮ್ಮೇಳನಗಳೊಂದಿಗೆ ಮುಕ್ತ ಸಂವಾದವನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಭಾಗವಹಿಸಿದವರು ಒತ್ತಿ ಹೇಳಿದರು.

ಸಮಾಜದಲ್ಲಿ ನಡೆಯುತ್ತಿರುವ ಪರಿವರ್ತನೆಗಳೊಂದಿಗೆ  ಧರ್ಮ ಸಭೆಯ ಚಿಂತನೆ ನಿರಂತರವಾಗಿ ಹೆಜ್ಜೆ ಹಾಕಬೇಕೆಂದು ಅವರು ಅಭಿಪ್ರಾಯಪಟ್ಟರು.

ಈ ಹಿನ್ನೆಲೆಯಲ್ಲಿ, ವಿವಿಧ ಉಪಕ್ರಮಗಳನ್ನು ಹಂಚಿಕೊಳ್ಳಲು ಮತ್ತು ಮಾಹಿತಿಯ ವಿನಿಮಯವನ್ನು ಸುಲಭಗೊಳಿಸಲು ವಿಶೇಷವಾದ ಒಂದು ಜಾಲತಾಣ ಉಪಯುಕ್ತವಾಗಲಿದೆ ಎಂದು ಆಯೋಗವು ಅಭಿಪ್ರಾಯ ವ್ಯಕ್ತಪಡಿಸಿತು.

ಮುಂದಿನ ಹೆಜ್ಜೆಗಳು

ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಆಯೋಗವು ಹಂತಹಂತವಾಗಿ ಮುಂದುವರಿಯಲು ನಿರ್ಧರಿಸಿತು.

ಮೊದಲ ಹಂತದಲ್ಲಿ ಈಗಾಗಲೇ ನಡೆಯುತ್ತಿರುವ ವಿವಿಧ ಉಪಕ್ರಮಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುವುದು, ವಿವಿಧ ಸಂಸ್ಥೆಗಳು ಗುರುತಿಸಿರುವ ಪ್ರಮುಖ ವಿಷಯಗಳನ್ನು ಸಂಗ್ರಹಿಸುವುದು ಮತ್ತು ಜಗದ್ಗುರುಗಳ ಅಧಿಕಾರ ಸ್ಥಳದೊಳಗೆ ಕೃತಕ ಬುದ್ಧಿಮತ್ತೆಯ ಬಳಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ರೂಪಿಸುವ ಕಾರ್ಯವನ್ನು ಕೈಗೊಳ್ಳಬಹುದು ಎಂದು ನಿರ್ಧರಿಸಲಾಯಿತು.

ಭಾಗವಹಿಸಿದವರು ಕೃತಕ ಬುದ್ಧಿಮತ್ತೆ ಕುರಿತ ಅಂತರ-ಡಿಕಾಸ್ಟರಿ ಆಯೋಗದ ಮೊದಲ ಸಭೆಗೆ ಕೃತಜ್ಞತೆ ವ್ಯಕ್ತಪಡಿಸಿದರು.

ಈ ಸಭೆಯು ವಿವಿಧ ಉಪಕ್ರಮಗಳ ಸಮಗ್ರ ಚಿತ್ರಣವನ್ನು ಒದಗಿಸಿದುದಲ್ಲದೆ, ವಿವಿಧ ಡಿಕಾಸ್ಟರಿಗಳ ನಡುವಿನ ಅನುಭವಗಳ ವಿನಿಮಯ ಹಾಗೂ ಪರಸ್ಪರ ಸಮನ್ವಯದ ಪ್ರಯೋಜನಗಳನ್ನು ಸ್ಪಷ್ಟಪಡಿಸಿದ ಮಹತ್ವದ ಅವಕಾಶವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಯೋಗವು ಜುಲೈ ತಿಂಗಳ ಮಧ್ಯಭಾಗದಲ್ಲಿ ಮತ್ತೊಮ್ಮೆ ಸಭೆ ಸೇರುವುದಾಗಿ ನಿರ್ಧರಿಸಿದೆ.

27 ಜೂನ್ 2026, 19:27