ಸಮುದ್ರ ಭಾನುವಾರ: ಹಡಗುಗಳು ಎಂದಿಗೂ ಏಕಾಂಗಿ ಮತ್ತು ಪ್ರತ್ಯೇಕತೆಯ ಸ್ಥಳಗಳಾಗಬಾರದು ಎಂದು ಕಾರ್ಡಿನಲ್ ಚೆರ್‌ನಿ ಕರೆ.
ವ್ಯಾಟಿಕನ್ ವರದಿ
ಪ್ರತಿ ವರ್ಷ ಜುಲೈ ತಿಂಗಳ ಎರಡನೇ ಭಾನುವಾರವನ್ನು ವಿಶ್ವದಾದ್ಯಂತದ ಕ್ರೈಸ್ತ ಧರ್ಮ ಸಭೆಗಳು “ಸಮುದ್ರ ಭಾನುವಾರ” (Sea Sunday) ಎಂದು ಆಚರಿಸುತ್ತವೆ. ಈ ದಿನವನ್ನು ಸಮುದ್ರಯಾನಿಕರು, ಮೀನುಗಾರರು ಮತ್ತು ಇತರ ಸಾಗರೋದ್ಯಮ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗಾಗಿ ಪ್ರಾರ್ಥನೆ ಸಲ್ಲಿಸಲು ಮೀಸಲಿಡಲಾಗಿದೆ. 2026ರಲ್ಲಿ ಈ ಆಚರಣೆ ಜುಲೈ 12ರಂದು ನಡೆಯಲಿದ್ದು, ಅದರ ಧ್ಯೇಯವಾಕ್ಯ “ಭರವಸೆಯ ಬಂದರುಗಳು: ಸಮುದ್ರಯಾನಿಕರೊಂದಿಗೆ ಸಾಗುವ ಧರ್ಮಸಭೆ” ಎಂಬುದಾಗಿದೆ.
ಸಮಗ್ರ ಮಾನವ ಅಭಿವೃದ್ಧಿಯ ಪ್ರೋತ್ಸಾಹಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಮೈಕೆಲ್ ಝೆರ್ನಿ ರವರು ಈ ಸಂದರ್ಭಕ್ಕಾಗಿ “ಸರಕು ಮತ್ತು ವ್ಯಾಪಾರವನ್ನು ಮೀರಿ ಸಮುದ್ರದ ಮಾನವ ಮುಖ” ಎಂಬ ಶೀರ್ಷಿಕೆಯ ಸಂದೇಶವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು, ಜಗತ್ತು ಇಂದಿಗೂ ಸಮುದ್ರಗಳು, ನದಿಗಳು, ಸರೋವರಗಳು ಮತ್ತು ಜಲಮಾರ್ಗಗಳ ಮೇಲೆ ಅವಲಂಬಿತವಾಗಿದ್ದರೂ, ಅವುಗಳ ಹಿಂದೆ ದುಡಿಯುತ್ತಿರುವ 18 ಲಕ್ಷಕ್ಕೂ ಹೆಚ್ಚು ಸಮುದ್ರೋದ್ಯೋಗಿಗಳ ಮಾನವೀಯ ಮುಖವನ್ನು ಮರೆಯಬಾರದು ಎಂದು ಒತ್ತಿಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯ ಇತ್ತೀಚಿನ ಬಿಕ್ಕಟ್ಟು ಮಾನವಕುಲವು ಸಮುದ್ರದ ಮೇಲೂ, ಅದರಲ್ಲಿ ದುಡಿಯುವ ಜನರ ಮೇಲೂ ಎಷ್ಟು ಆಳವಾಗಿ ಅವಲಂಬಿತವಾಗಿದೆ ಎಂಬುದನ್ನು ಜಗತ್ತಿಗೆ ನೆನಪಿಸಿದೆ ಎಂದು ಕಾರ್ಡಿನಲ್ ತಿಳಿಸಿದ್ದಾರೆ. ಆದ್ದರಿಂದ ಸಮುದ್ರ ಭಾನುವಾರದಂದು ಕ್ಯಾಥೋಲಿಕ್ ಧರ್ಮ ಸಭೆ ಈ ಮಹಿಳೆಯರು ಮತ್ತು ಪುರುಷರನ್ನು ಕೇವಲ ಸರಕು ಸಾಗಿಸುವ ಕಾರ್ಮಿಕರಾಗಿ ಅಲ್ಲ, ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಮತ್ತು ಅಳಿಸಲಾಗದ ಘನತೆಯನ್ನು ಹೊಂದಿರುವ ವ್ಯಕ್ತಿಗಳಾಗಿ ಸ್ಮರಿಸುತ್ತದೆ. ಪ್ರತಿಯೊಬ್ಬ ಸಮುದ್ರಯಾನಿಕನಿಗೂ ತನ್ನದೇ ಆದ ಕಥೆಯಿದ್ದು, ಅವರು ಗೌರವಿಸಲ್ಪಡಲು, ಮೌಲ್ಯಯುತರಾಗಿ ಕಾಣಿಸಿಕೊಳ್ಳಲು ಮತ್ತು ಪ್ರೀತಿಸಲ್ಪಡಲು ಅರ್ಹರು ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ಇಂದಿನ ಸಮುದ್ರವು ಹೆಚ್ಚುತ್ತಿರುವ ಉದ್ವಿಗ್ನತೆ, ಅಸುರಕ್ಷತೆ, ಯುದ್ಧ ಮತ್ತು ಭಯದಿಂದ ಆವರಿಸಲ್ಪಟ್ಟಿದೆ ಎಂದು ಕಾರ್ಡಿನಲ್ ವಿಷಾದ ವ್ಯಕ್ತಪಡಿಸಿದ್ದಾರೆ. ಹಿಂದೆ ರಾಷ್ಟ್ರಗಳನ್ನು ಸಂಪರ್ಕಿಸುತ್ತಿದ್ದ ಸಮುದ್ರ ಈಗ ಅನಿಶ್ಚಿತತೆಯ ಸ್ಥಳವಾಗುತ್ತಿದೆ. ಸಮುದ್ರಯಾನಿಕರು ಕೇವಲ ಪ್ರಕೃತಿಯ ಅಪಾಯಗಳನ್ನಷ್ಟೇ ಅಲ್ಲ, ಯುದ್ಧಗಳು ಮತ್ತು ಸಂಘರ್ಷಗಳಿಂದ ಉಂಟಾಗುವ ಆಹಾರ ಕೊರತೆ, ನಿರ್ಬಂಧಿತ ಜೀವನ ಮತ್ತು ಜೀವಭಯವನ್ನೂ ಎದುರಿಸುತ್ತಿದ್ದಾರೆ. ಇದರಿಂದ ಅವರು ಸಮಾಜದಿಂದ ದೂರವಾದ ಭಾವನೆ, ಕುಟುಂಬಗಳಿಂದ ದೀರ್ಘಕಾಲದ ಬೇರ್ಪು ಮತ್ತು ಮಾನಸಿಕ ಆಯಾಸವನ್ನು ಅನುಭವಿಸುತ್ತಿದ್ದಾರೆ.
ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ, ಮಾನವೀಯ ಸಮೀಪತೆ ಕಡಿಮೆಯಾಗುತ್ತಿದೆ ಎಂದು ಕಾರ್ಡಿನಲ್ ಗಮನ ಸೆಳೆದಿದ್ದಾರೆ. ಹಡಗುಗಳ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಿರುವುದು, ಕರೆಯಲ್ಲಿ ಕಳೆಯುವ ಸಮಯ ಕಡಿಮೆಯಾಗಿರುವುದು, ನಿರಂತರ ಒತ್ತಡ ಮತ್ತು ಕಠಿಣ ವೇಳಾಪಟ್ಟಿಗಳು ಸಮುದ್ರೋದ್ಯೋಗಿಗಳ ಏಕಾಂಗಿತನವನ್ನು ಹೆಚ್ಚಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಜಗದ್ಗುರು XIVನೇ ಲಿಯೋರವರ ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಪರಿಪತ್ರಿಕೆಯನ್ನು ಉಲ್ಲೇಖಿಸಿ, ತಂತ್ರಜ್ಞಾನ ಮತ್ತು ಆರ್ಥಿಕ ವ್ಯವಸ್ಥೆಗಳು ಮನುಷ್ಯರನ್ನು ಕೇವಲ ಅಂಕಿಅಂಶ, ಯಂತ್ರದ ಒಂದು ಭಾಗ ಅಥವಾ ವ್ಯಾಪಾರದ ವಸ್ತುವಾಗಿ ಪರಿಗಣಿಸಬಾರದು ಎಂದು ಅವರು ನೆನಪಿಸಿದರು. “ಹಡಗು ಎಂದಿಗೂ ಮೌನದ ಏಕಾಂಗಿತನ ಅಥವಾ ನಿರ್ಲಕ್ಷ್ಯದ ಸ್ಥಳವಾಗಿರಬಾರದು” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಕಾರ್ಡಿನಲ್ ಚೆರ್‌ನಿರವರ ಪ್ರಕಾರ, ಸಮುದ್ರವು ವಿಭಜನೆಯ ಸಂಕೇತವಲ್ಲ, ಅದು ಜನರನ್ನು ಒಂದಾಗಿಸುವ ಸೇತುವೆಯಾಗಿದೆ. ವಿವಿಧ ದೇಶಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳ ಜನರು ಸಹೋದರತ್ವ, ಐಕ್ಯತೆ ಮತ್ತು ಪರಸ್ಪರ ಗೌರವದೊಂದಿಗೆ ಬದುಕಬಹುದೆಂಬುದಕ್ಕೆ ಸಮುದ್ರ ಜೀವನವೇ ಒಂದು ಮಾದರಿಯಾಗಿದೆ. “ಸಮುದ್ರಗಳು ಜನರನ್ನು ಬೇರ್ಪಡಿಸುವುದಿಲ್ಲ,ಅವು ಅವರನ್ನು ಸಂಪರ್ಕಿಸುತ್ತವೆ” ಎಂದು ಅವರು ಹೇಳಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಸಮುದ್ರಯಾನಿಕನೂ ತಾನು ಒಂಟಿಯಾಗಿಲ್ಲ, ಮರೆಯಲ್ಪಟ್ಟಿಲ್ಲ ಎಂಬುದನ್ನು ಧರ್ಮ ಸಭೆ ನೆನಪಿಸಲು ಬಯಸುತ್ತದೆ.
ಅಲ್ಲದೆ, ಸಮುದ್ರಗಳು ಕೇವಲ ವ್ಯಾಪಾರದ ಮಾರ್ಗಗಳಲ್ಲ; ಅವು ದೇವರ ಸೃಷ್ಟಿಯಾಗಿದ್ದು, ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಮಾನವಕುಲಕ್ಕೆ ಒಪ್ಪಿಸಲಾಗಿದೆ. ಆದರೆ ಇಂದು ಸಮುದ್ರಗಳು ಪ್ಲಾಸ್ಟಿಕ್ ಮಾಲಿನ್ಯ, ಪರಿಸರ ಹಾನಿ ಮತ್ತು ಅತಿಯಾದ ಶೋಷಣೆಯಿಂದ ಬಳಲುತ್ತಿವೆ. ಸಮುದ್ರದ ಸುಮಾರು 88 ಪ್ರತಿಶತ ಮೇಲ್ಮೈ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಲಿನ್ಯಗೊಂಡಿದ್ದು, ಜಗತ್ತಿನ ಬಹುತೇಕ ಮೀನು ಸಂಪತ್ತು ಅತಿಯಾದ ಶೋಷಣೆಗೆ ಒಳಗಾಗಿದೆ. “ಸಮುದ್ರಗಳು ನೋವು ಅನುಭವಿಸಿದಾಗ, ಮಾನವಕುಲವೂ ಅದರೊಂದಿಗೆ ನೋವು ಅನುಭವಿಸುತ್ತದೆ” ಎಂದು ಕಾರ್ಡಿನಲ್ ಎಚ್ಚರಿಸಿದ್ದಾರೆ.
ಕೊನೆಯಲ್ಲಿ, ಸಮುದ್ರೋದ್ಯೋಗಿಗಳೊಂದಿಗೆ ನಿಕಟವಾಗಿರುವುದು ಧರ್ಮ ಸಭೆಯ ಕರ್ತವ್ಯ ಎಂದು ಅವರು ಹೇಳಿದರು. ಸಮುದ್ರಯಾನಿಕರ ಸೇವೆಗೆ ಮೀಸಲಾದ ಗುರುಗಳು ಮತ್ತು ಧರ್ಮಸೇವೆಗಳ ಮೂಲಕ ಧರ್ಮ ಸಭೆ, ಸಮುದ್ರದ ಅಪೊಸ್ತಲಶಿಪ್ (ಓಪಸ್ ಅಪೊಸ್ತಲಟಸ್ ಮಾರಿಸ್) ಎಂಬ ತನ್ನ ದೀರ್ಘ ಪರಂಪರೆಯನ್ನು ಮುಂದುವರಿಸುತ್ತಿದೆ. ಇದರ ಉದ್ದೇಶ ಪ್ರತಿಯೊಬ್ಬ ಸಮುದ್ರಯಾನಿಕ, ಮೀನುಗಾರ ಮತ್ತು ಜಲಮಾರ್ಗ ಕಾರ್ಮಿಕರಿಗೆ ಅವರು ಸ್ಮರಿಸಲ್ಪಟ್ಟವರು, ಮೌಲ್ಯಯುತರು ಮತ್ತು ಎಂದಿಗೂ ಒಂಟಿಯಲ್ಲ ಎಂಬ ಭರವಸೆಯನ್ನು ನೀಡುವುದಾಗಿದೆ.