ಹುಡುಕಿ

ಸಂತ ಪೇತ್ರರ ಚೌಕ. ಸಂತ ಪೇತ್ರರ ಚೌಕ.  (© - Ruddi Hansen 2015)

ಎಎಸ್‌ಐಎಫ್‌ನ ಹೊಸ ಶಾಸನ: ಅಂತರರಾಷ್ಟ್ರೀಯ ಮಾನದಂಡಗಳತ್ತ ಮತ್ತೊಂದು ಮಹತ್ವದ ಹೆಜ್ಜೆ.

ಜಗದ್ಗುರು ಲಿಯೋರವರು ವ್ಯಾಟಿಕನ್‌ನ ಮೇಲ್ವಿಚಾರಣೆ ಮತ್ತು ಹಣಕಾಸು ಮಾಹಿತಿ ಪ್ರಾಧಿಕಾರ (ಎಎಸ್‌ಐಎಫ್‌)ದ ಸಾಂಸ್ಥಿಕ ಪುನರ್‌ರಚನೆಗೆ ಅನುಮೋದನೆ ನೀಡಿದ್ದಾರೆ. ಇದರಂತೆ, ಪ್ರಸ್ತುತ ಇರುವ ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯ ಹುದ್ದೆಗಳನ್ನು ರದ್ದುಗೊಳಿಸಿ, ನಿರ್ದೇಶಕ ಮತ್ತು ಉಪನಿರ್ದೇಶಕರನ್ನು ಒಳಗೊಂಡ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ಆಡಳಿತ ವ್ಯವಸ್ಥೆಗೆ ಸಲಹೆಗಾರರ ಮಂಡಳಿ ಬೆಂಬಲ ನೀಡಲಿದೆ.

ವ್ಯಾಟಿಕನ್ ವರದಿ

ವ್ಯಾಟಿಕನ್‌ನ ಮೇಲ್ವಿಚಾರಣೆ ಮತ್ತು ಹಣಕಾಸು ಮಾಹಿತಿ ಪ್ರಾಧಿಕಾರ (ಎಎಸ್‌ಐಎಫ್‌) ತನ್ನ ಕಾರ್ಯಾರಂಭದ ಹದಿನೈದು ವರ್ಷಗಳ ನಂತರ, ಜಗದ್ಗುರು XIVನೇ ಲಿಯೋರವರು ಅದರ ಸಾಂಸ್ಥಿಕ ಪುನರ್‌ರಚನೆಗೆ ಅನುಮೋದನೆ ನೀಡಿ ಹೊಸ ಶಾಸನ ಹಾಗೂ ಮೊದಲ ಆಂತರಿಕ ನಿಯಮಾವಳಿಯನ್ನು ಜಾರಿಗೆ ತಂದಿದ್ದಾರೆ. ಈ ಕ್ರಮವು ವ್ಯಾಟಿಕನ್‌ನ ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ, ಪರಿಣಾಮಕಾರಿ ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿಸುವ ಮಹತ್ವದ ಹೆಜ್ಜೆಯಾಗಿದೆ.

ಈ ಸುಧಾರಣೆಯು ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್), ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣಕ್ಕೆ ಹಣಕಾಸು ಒದಗಿಸುವುದನ್ನು ತಡೆಯುವ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಜೊತೆಗೆ, ಅಂತರರಾಷ್ಟ್ರೀಯ ಹಣಕಾಸು ನಿಯಂತ್ರಣ ಸಂಸ್ಥೆಗಳೊಂದಿಗೆ ಜಗದ್ಗುರುಗಳ ಅಧಿಕಾರ ಸ್ಥಳದ ನಿರಂತರ ಸಹಕಾರ ಮತ್ತು ಬದ್ಧತೆಯನ್ನು ಮುಂದುವರಿಸುತ್ತಿದೆ ಎಂಬುದನ್ನೂ ಇದು ಪ್ರತಿಬಿಂಬಿಸುತ್ತದೆ.

ಹೊಸ ಶಾಸನದ ಪ್ರಮುಖ ಅಂಶವೆಂದರೆ ಎಎಸ್‌ಐಎಫ್‌ ನ ಸ್ವಾಯತ್ತತೆ ಮತ್ತು ಕಾರ್ಯನಿರ್ವಹಣೆಯ ಸ್ವತಂತ್ರತೆಯನ್ನು ಇನ್ನಷ್ಟು ಬಲಪಡಿಸಿರುವುದು. ಅದೇ ಸಮಯದಲ್ಲಿ, ಈ ಪ್ರಾಧಿಕಾರವು ಪ್ರೇಷಿತರ ಸಂವಿಧಾನ ಪ್ರೆಡಿಕೇಟ್ ಇವಾಂಜೆಲಿಯಮ್ ಪ್ರಕಾರ ಆರ್ಥಿಕ ಮಂಡಳಿಗೆ ನೇರವಾಗಿ ಉತ್ತರದಾಯಿತ್ವ ಹೊಂದಿರುತ್ತದೆ. ಇದರಿಂದ ಸ್ವತಂತ್ರ ಕಾರ್ಯನಿರ್ವಹಣೆ ಮತ್ತು ಸಾಂಸ್ಥಿಕ ಹೊಣೆಗಾರಿಕೆಯ ನಡುವೆ ಸಮತೋಲನವನ್ನು ಸಾಧಿಸಲಾಗಿದೆ.

ಆಡಳಿತ ವ್ಯವಸ್ಥೆಯಲ್ಲಿಯೂ ಮಹತ್ವದ ಬದಲಾವಣೆ ಮಾಡಲಾಗಿದೆ. ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಯ ಹುದ್ದೆಗಳನ್ನು ರದ್ದುಗೊಳಿಸಿ, ನಿರ್ದೇಶಕ ಮತ್ತು ಉಪನಿರ್ದೇಶಕರನ್ನು ಒಳಗೊಂಡ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಇವರಿಗೆ ಪರಿಣತ ಸಲಹೆಗಾರರು ಬೆಂಬಲ ನೀಡಲಿದ್ದು, ಇದರಿಂದ ಆಡಳಿತವು ಹೆಚ್ಚು ಚುರುಕು, ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಲಿದೆ.

ಇದಲ್ಲದೆ, ಧರ್ಮಕಾರ್ಯಗಳ ಸಂಸ್ಥೆ (ಐಒಆರ್)ನ ಗ್ರಾಹಕರ ಹಿತರಕ್ಷಣೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಈ ಹಿಂದೆ ಪಾವತಿ ವ್ಯವಸ್ಥೆಗೆ ಮಾತ್ರ ಸೀಮಿತವಾಗಿದ್ದ ಮಧ್ಯಸ್ಥಿಕೆ ಅಧಿಕಾರವನ್ನು ಈಗ ಐಒಆರ್ ಒದಗಿಸುವ ಎಲ್ಲಾ ಹಣಕಾಸು ಸೇವೆಗಳಿಗೂ ವಿಸ್ತರಿಸಲಾಗಿದೆ. ಒಟ್ಟಾರೆಯಾಗಿ, ಈ ಹೊಸ ಸುಧಾರಣೆಗಳು ವ್ಯಾಟಿಕನ್‌ನ ಹಣಕಾಸು ಸಂಸ್ಥೆಗಳನ್ನು ಇನ್ನಷ್ಟು ಬಲಿಷ್ಠ, ಪಾರದರ್ಶಕ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಯಮಗಳಿಗೆ ಸಂಪೂರ್ಣ ಹೊಂದಾಣಿಕೆಯನ್ನೊಳಗೊಂಡ ವ್ಯವಸ್ಥೆಯನ್ನಾಗಿ ರೂಪಿಸುವ ಜಗದ್ಗುರುಗಳ ಅಧಿಕಾರ ಸ್ಥಳದ ನಿರಂತರ ಪ್ರಯತ್ನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

30 ಜೂನ್ 2026, 00:00