ಹುಡುಕಿ

VATICAN-RELIGION-POPE-AUDIENCE

ಪೀಟರ್ಸ್ ಪೆನ್ಸ್ 2025: ಜಗದ್ಗುರುಗಳ ದಾನಧರ್ಮದ ಸೇವಾ ಕಾರ್ಯಕ್ಕೆ ಬೆಂಬಲವಾಗಿ 54.5 ಮಿಲಿಯನ್ ಯೂರೋ.

2025ರ ‘ಪೀಟರ್ಸ್ ಪೆನ್ಸ್’ ವಾರ್ಷಿಕ ಬಹಿರಂಗ ವರದಿಯು, ವಿಶ್ವಾಸಿಗಳು ಜಗದ್ಗುರುಗಳು ಅರ್ಪಿಸಿದ ಕಾಣಿಕೆಗಳು ಅವರ ವಿಶ್ವವ್ಯಾಪಿ ಧರ್ಮ ಸಭೆಯ ಸೇವೆಯನ್ನು ಬೆಂಬಲಿಸುವುದರ ಜೊತೆಗೆ, 74 ದೇಶಗಳಲ್ಲಿ ನೇರ ನೆರವು ಒದಗಿಸುವ ವಿವಿಧ ಮಾನವೀಯ ಯೋಜನೆಗಳಿಗೆ ಸಹ ಆರ್ಥಿಕ ಸಹಾಯ ಒದಗಿಸಿವೆ ಎಂಬುದನ್ನು ತೋರಿಸುತ್ತದೆ.

ವ್ಯಾಟಿಕನ್ ವರದಿ

2025ರ ‘ಪೀಟರ್ಸ್ ಪೆನ್ಸ್’ ವಾರ್ಷಿಕ ಬಹಿರಂಗ ವರದಿಯ ಪ್ರಕಾರ, 2025ರಲ್ಲಿ ‘ಪೀಟರ್ಸ್ ಪೆನ್ಸ್’ ನಿಧಿಗೆ ಒಟ್ಟು 57.6 ಮಿಲಿಯನ್ ಯೂರೋ ಆದಾಯ ಲಭಿಸಿದ್ದು, ನಿಧಿಯಿಂದ ಭರಿಸಲಾದ ವೆಚ್ಚವು 59.8 ಮಿಲಿಯನ್ ಯೂರೋ ಆಗಿದೆ. ಆದಾಯಕ್ಕಿಂತ ವೆಚ್ಚವು 2.2 ಮಿಲಿಯನ್ ಯೂರೋ ಹೆಚ್ಚಾಗಿದ್ದರೂ, ಈ ಕೊರತೆಗೆ ವಿದೇಶಿ ವಿನಿಮಯ ದರಗಳ ಏರಿಳಿತವೇ ಮುಖ್ಯ ಕಾರಣವೆಂದು ವರದಿ ತಿಳಿಸಿದೆ.

ಪವಿತ್ರ ತಂದೆಯವರ ವಿಶ್ವವ್ಯಾಪಿ ಧರ್ಮ ಸಭೆಯ ಸೇವೆಯನ್ನು ಬೆಂಬಲಿಸುವುದಕ್ಕೂ, ಅತ್ಯಂತ ಅಗತ್ಯವಿರುವವರಿಗಾಗಿ ಕೈಗೊಳ್ಳುವ ವಿವಿಧ ಮಾನವೀಯ ಕಾರ್ಯಗಳಿಗೆ ನೆರವಾಗುವುದಕ್ಕೂ ವಿಶ್ವಾಸಿಗಳು ಅರ್ಪಿಸುವ ಕಾಣಿಕೆಗಳೇ ‘ಪೀಟರ್ಸ್ ಪೆನ್ಸ್’ ನಿಧಿಯ ಮೂಲವಾಗಿವೆ. 2025ರಲ್ಲಿ ಒಟ್ಟು 54.5 ಮಿಲಿಯನ್ ಯೂರೋ ದೇಣಿಗೆ ಸಂಗ್ರಹವಾಗಿದ್ದು, ಇದರಲ್ಲಿ ಸಂತ ಪೇತ್ರ ಮತ್ತು ಸಂತ ಪೌಲರ ಮಹಾಪರ್ವದಂದು ಧರ್ಮಪ್ರಾಂತ್ಯಗಳಲ್ಲಿ ನಡೆದ ವಿಶೇಷ ಸಂಗ್ರಹದಿಂದ 34.7 ಮಿಲಿಯನ್ ಯೂರೋ (63.6 ಶೇಕಡಾ) ಲಭಿಸಿದೆ. ಖಾಸಗಿ ದಾನಿಗಳು 5.4 ಮಿಲಿಯನ್ ಯೂರೋ, ಪ್ರತಿಷ್ಠಾನಗಳು 13 ಮಿಲಿಯನ್ ಯೂರೋ ಹಾಗೂ ಧಾರ್ಮಿಕ ಸಂಸ್ಥೆಗಳು 1.4 ಮಿಲಿಯನ್ ಯೂರೋ ದೇಣಿಗೆ ನೀಡಿವೆ. ಧರ್ಮಪ್ರಾಂತ್ಯಗಳು ಮತ್ತು ಖಾಸಗಿ ದಾನಿಗಳ ಕೊಡುಗೆಗಳಲ್ಲಿ ಅಮೆರಿಕ 14.2 ಮಿಲಿಯನ್ ಯೂರೋಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಇಟಲಿ 3.1 ಮಿಲಿಯನ್ ಯೂರೋ ಹಾಗೂ ಬ್ರೆಜಿಲ್ 2.1 ಮಿಲಿಯನ್ ಯೂರೋಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.

2025ರಲ್ಲಿ ‘ಪೀಟರ್ಸ್ ಪೆನ್ಸ್’ ನಿಧಿಯಿಂದ ಒಟ್ಟು 54.5 ಮಿಲಿಯನ್ ಯೂರೋ ವೆಚ್ಚ ಮಾಡಲಾಗಿದೆ. ಇದರಲ್ಲಿ 41.2 ಮಿಲಿಯನ್ ಯೂರೋವನ್ನು ಜಗದ್ಗುರುಗಳ ಪ್ರೇಷಿತರ ಧ್ಯೇಯವನ್ನು ನೆರವೇರಿಸುವ ಜಗದ್ಗುರುಗಳ ಅಧಿಕಾರ ಸ್ಥಳದ ವಿವಿಧ ಕಾರ್ಯಚಟುವಟಿಕೆಗಳಿಗೆ ಮೀಸಲಿಡಲಾಗಿದ್ದು, 13.3 ಮಿಲಿಯನ್ ಯೂರೋವನ್ನು ಅಗತ್ಯವಿರುವವರಿಗೆ ನೇರ ನೆರವು ನೀಡುವ ಯೋಜನೆಗಳಿಗೆ ಬಳಸಲಾಗಿದೆ. ಜಗದ್ಗುರುಗಳ ಧ್ಯೇಯ ಕಾರ್ಯಗಳಿಗೆ ಸಂಬಂಧಿಸಿದ ಒಟ್ಟು ವೆಚ್ಚವು 2025ರಲ್ಲಿ 404.5 ಮಿಲಿಯನ್ ಯೂರೋ ಆಗಿದ್ದು, ಅದರ ಸುಮಾರು ಶೇಕಡಾ 10ರಷ್ಟು ಭಾಗವನ್ನು ‘ಪೀಟರ್ಸ್ ಪೆನ್ಸ್’ ನಿಧಿಯೇ ಭರಿಸಿದೆ. ಈ ಕಾರ್ಯಗಳಲ್ಲಿ ಸಂಕಷ್ಟದಲ್ಲಿರುವ ಸ್ಥಳೀಯ ಧರ್ಮ ಸಭೆಗಳಿಗೆ ನೆರವು, ಸುವಾರ್ತಾ ಪ್ರಸಾರ, ಆರಾಧನೆ, ಜಗದ್ಗುರುಗಳು ಸಂದೇಶದ ಪ್ರಸಾರ, ಪ್ರೇಷಿತರ ರಾಯಭಾರ ಕಚೇರಿಗಳು, ದಾನಧರ್ಮದ ಸೇವೆ, ಐತಿಹಾಸಿಕ ಪರಂಪರೆಯ ಸಂರಕ್ಷಣೆ, ಶೈಕ್ಷಣಿಕ ಸಂಸ್ಥೆಗಳು, ಮಾನವ ಅಭಿವೃದ್ಧಿ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಹಾಗೂ ಜೀವ ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬೆಂಬಲ ಸೇರಿವೆ.

ಇದಲ್ಲದೆ, ‘ಪೀಟರ್ಸ್ ಪೆನ್ಸ್’ ನಿಧಿಯು 74 ದೇಶಗಳಲ್ಲಿ ಒಟ್ಟು 252 ನೇರ ನೆರವು ಯೋಜನೆಗಳಿಗೆ 13.3 ಮಿಲಿಯನ್ ಯೂರೋ ಅನುದಾನ ನೀಡಿದೆ. ಈ ಯೋಜನೆಗಳು ಸುವಾರ್ತಾ ಪ್ರಸಾರದ ವಿಸ್ತರಣೆ, ಸಾಮಾಜಿಕ ಅಭಿವೃದ್ಧಿ ಮತ್ತು ಧರ್ಮ ಸಭೆಯ ಸುವಾರ್ತಾ ಸೇವೆಗೆ ಬೆಂಬಲ ಎಂಬ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಜಾರಿಗೊಂಡಿವೆ. ದೇವಾಲಯಗಳು, ಕಾನ್ವೆಂಟ್‌ಗಳು, ಧರ್ಮಾಧ್ಯಕ್ಷೀಯ ಕೇಂದ್ರಗಳು, ಶಾಲೆಗಳು ಮತ್ತು ತರಗತಿ ಕೊಠಡಿಗಳ ನಿರ್ಮಾಣ, ಗಾಜಾ ಪ್ರದೇಶಕ್ಕೆ ಮಾನವೀಯ ನೆರವು, ಸ್ಥಳೀಯ ಸಮುದಾಯಗಳಿಗೆ ಬೆಂಬಲ ಹಾಗೂ ಮಿಷನ್ ಪ್ರದೇಶಗಳ ಧರ್ಮ ಸಭೆಗಳಿಗೆ ಸಹಾಯವನ್ನು ಈ ಯೋಜನೆಗಳು ಒಳಗೊಂಡಿವೆ.

ನೇರ ನೆರವಿನ ಅನುದಾನಗಳಲ್ಲಿ ಆಫ್ರಿಕಾ ಖಂಡವು ಅತಿ ಹೆಚ್ಚಿನ ಪಾಲು ಪಡೆದಿದ್ದು, 73 ಯೋಜನೆಗಳಿಗೆ 5.2 ಮಿಲಿಯನ್ ಯೂರೋ ಮೀಸಲಿಡಲಾಗಿದೆ. ಏಷ್ಯಾಕ್ಕೆ 3 ಮಿಲಿಯನ್ ಯೂರೋ, ಯುರೋಪಿಗೆ 2.6 ಮಿಲಿಯನ್ ಯೂರೋ, ಅಮೆರಿಕ ಖಂಡಕ್ಕೆ 2.4 ಮಿಲಿಯನ್ ಯೂರೋ ಹಾಗೂ ಓಷಿಯಾನಿಯಾಕ್ಕೆ 1 ಲಕ್ಷ ಯೂರೋ ಅನುದಾನ ನೀಡಲಾಗಿದೆ. ಯುರೋಪಿನಲ್ಲಿ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಪಾದ್ರಿಗಳು, ಗುರು ವಿದ್ಯಾರ್ಥಿ ಮಂದಿರಗಳು ಹಾಗೂ ಧಾರ್ಮಿಕರಿಗೆ ಪಾಂಟಿಫಿಕಲ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನಗಳನ್ನು ನೀಡಲಾಗಿದ್ದು, ಉಕ್ರೇನ್‌ನ ಜನತೆಗೆ ಮಾನವೀಯ ನೆರವೂ ಒದಗಿಸಲಾಗಿದೆ.

ವರದಿಯ ಕೊನೆಯಲ್ಲಿ ಜಗದ್ಗುರು XIVನೇ ಲಿಯೋರವರು ಹೀಗೆ ಮನವಿ ಮಾಡಿದ್ದಾರೆ: “ಸಂವಾದ ಮತ್ತು ಪರಸ್ಪರ ಭೇಟಿಯ ಮೂಲಕ ಸೇತುವೆಗಳನ್ನು ನಿರ್ಮಿಸಲು ನಮಗೆಲ್ಲರೂ ಸಹಕರಿಸಿ. ನಾವು ಎಲ್ಲರೂ ಒಂದೇ ಜನಾಂಗವಾಗಿ, ಸದಾ ಶಾಂತಿಯಿಂದ ಒಗ್ಗಟ್ಟಾಗಿ ಬದುಕೋಣ”ಎಂದು ಹೇಳಿದರು.

30 ಜೂನ್ 2026, 00:00