ಹುಡುಕಿ

ವಿಶ್ವಸಂಸ್ಥೆಯ ಕೃತಕ ಬುದ್ಧಿಮತ್ತೆ ಆಡಳಿತ ಕುರಿತ ಜಾಗತಿಕ ಸಂವಾದ. ವಿಶ್ವಸಂಸ್ಥೆಯ ಕೃತಕ ಬುದ್ಧಿಮತ್ತೆ ಆಡಳಿತ ಕುರಿತ ಜಾಗತಿಕ ಸಂವಾದ.  (ANSA)

ಜಗದ್ಗುರುಗಳ ಅಧಿಕಾರ ಸ್ಥಳ ಮಾನವಕುಲದ ಹಿತಕ್ಕಾಗಿ ಕೃತಕ ಬುದ್ಧಿಮತ್ತೆ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಲು ದೃಢವಾದ ಆಡಳಿತ ವ್ಯವಸ್ಥೆ ಅಗತ್ಯ

ಜಿನೀವಾದಲ್ಲಿರುವ ವಿಶ್ವಸಂಸ್ಥೆಗೆ ಜಗದ್ಗುರುಗಳ ಖಾಯಂ ವೀಕ್ಷಕರಾದ ಆರ್ಚ್‌ಬಿಷಪ್ ಎಟ್ಟೋರೆ ಬಾಲೆಸ್ತ್ರೇರೋರವರು, ಮಾನವ ಘನತೆಯನ್ನು ಉತ್ತೇಜಿಸಲು, ಮಾನವಕುಲದ ಸೇವೆಯನ್ನು ಮಾಡಲು ಹಾಗೂ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಲು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ದೃಢವಾದ ಆಡಳಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿಹೇಳಿದರು.

ವ್ಯಾಟಿಕನ್ ವರದಿ

2026ರ ಜುಲೈ 7ರಂದು ಜಿನೀವಾದಲ್ಲಿರುವ ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಜಗದ್ಗುರುಗಳ ಅಧಿಕಾರ ಸ್ಥಳವು ಪ್ರೇಷಿತರ ಪ್ರತಿನಿಧಿ ಮತ್ತು ಖಾಯಂ ವೀಕ್ಷಕರಾದ ಆರ್ಚ್‌ಬಿಷಪ್ ಎಟ್ಟೋರೆ ಬಾಲೆಸ್ತ್ರೇರೋರವರು, ಕೃತಕ ಬುದ್ಧಿಮತ್ತೆಯು ಮಾನವಕುಲದ ಸೇವೆ ಮಾಡಲು ಮತ್ತು ಮಾನವ ಘನತೆಯನ್ನು ಗೌರವಿಸಲು ದೃಢವಾದ ಆಡಳಿತ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಈ ಹೇಳಿಕೆಯನ್ನು ಜುಲೈ 6 ಮತ್ತು 7ರಂದು ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮೊದಲ ಜಾಗತಿಕ ಕೃತಕ ಬುದ್ಧಿಮತ್ತೆ ಆಡಳಿತ ಸಂವಾದದ ಸಂದರ್ಭದಲ್ಲಿ ಪ್ರಕಟಿಸಲಾಯಿತು.

“ದೃಢವಾದ ಆಡಳಿತ ವ್ಯವಸ್ಥೆಯ ಅಗತ್ಯವಿದೆ ಎಂದರೆ, ಕೃತಕ ಬುದ್ಧಿಮತ್ತೆಯ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರುವುದು ಎಂಬ ಅರ್ಥವಲ್ಲ,” ಎಂದು ಆರ್ಚ್‌ಬಿಷಪ್ ಬಾಲೆಸ್ತ್ರೇರೋ ಹೇಳಿದರು.

“ಬದಲಾಗಿ, ತಂತ್ರಜ್ಞಾನದ ಪ್ರಗತಿಯು ಎಲ್ಲ ಮಾನವಕುಲದ ಸೇವೆಗೆ ಅರ್ಥಪೂರ್ಣವಾಗಿ ದಿಕ್ಕುನೀಡಲ್ಪಟ್ಟು, ಪ್ರತಿಯೊಬ್ಬ ವ್ಯಕ್ತಿಗೂ ದೇವರು ನೀಡಿರುವ ಅಲಂಘನೀಯ ಘನತೆ ಹಾಗೂ ಸರ್ವಸಾಮಾನ್ಯ ಹಿತವನ್ನು ಗೌರವಿಸುವಂತೆ ಖಚಿತಪಡಿಸಿಕೊಳ್ಳಲು ಇದು ಮೂಲಭೂತ ಪೂರ್ವಾಪೇಕ್ಷೆಯಾಗಿದೆ.”

ಗಾಢವಾದ ಬದಲಾವಣೆಗೆ ಅದರ ಪ್ರಮಾಣಕ್ಕೆ ತಕ್ಕ ರಾಜಕೀಯ ಪ್ರತಿಕ್ರಿಯೆ ಅಗತ್ಯ

ಮೊದಲ ಜಾಗತಿಕ ಕೃತಕ ಬುದ್ಧಿಮತ್ತೆ ಸಂವಾದವನ್ನು ಆಯೋಜಿಸಿರುವುದನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಖಾಯಂ ವೀಕ್ಷಕರ ನಿಯೋಗವು ಸ್ವಾಗತಿಸಿತು. ಏಕೆಂದರೆ, “ಪ್ರತಿ ದಿನವೂ ನಾವು ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಸ್ಪರ್ಶಿಸುವ ಒಂದು ಯುಗಾಂತರಕಾರಿ ಪರಿವರ್ತನೆಯ ಮಧ್ಯೆ ಬದುಕುತ್ತಿದ್ದೇವೆ ಎಂಬುದು ಇನ್ನಷ್ಟು ಸ್ಪಷ್ಟವಾಗುತ್ತಿದೆ” ಹಾಗೂ “ಇಂತಹ ಆಳವಾದ ಬದಲಾವಣೆಗೆ ಅದರ ಮಹತ್ವಕ್ಕೆ ತಕ್ಕ ರಾಜಕೀಯ ಪ್ರತಿಕ್ರಿಯೆ ಅಗತ್ಯವಾಗಿದೆ” ಎಂದು ಅದು ತಿಳಿಸಿತು.

ಆರ್ಚ್‌ಬಿಷಪ್ ಬಾಲೆಸ್ತ್ರೇರೋ ರವರು, ಉತ್ತಮ ಆಡಳಿತ ವ್ಯವಸ್ಥೆ ಎಂದರೆ “ಜವಾಬ್ದಾರಿಯನ್ನು ಅಲ್ಗೋರಿದಮ್‌ಗೆ ವಹಿಸಿಕೊಡುವ ಅಥವಾ ಅದಕ್ಕೆ ಶರಣಾಗುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಬಾರದು” ಎಂಬುದಾಗಿದೆ ಎಂದು ಒತ್ತಿಹೇಳಿದರು.

ಸ್ವಯಂಚಾಲಿತ ವ್ಯವಸ್ಥೆಯು ಕೈಗೊಳ್ಳುವ ಪ್ರತಿಯೊಂದು ಮಹತ್ವದ ನಿರ್ಧಾರದ ಮೇಲೂ ಮಾನವ ಮೇಲ್ವಿಚಾರಣೆ ಇರಬೇಕು. ವೇಗ ಮತ್ತು ಕಾರ್ಯಕ್ಷಮತೆ ಎಂಬ ಹೆಸರಿನಲ್ಲಿ ಮಾನವ ಜೀವನದ ಮೇಲೆ ಉಂಟಾಗುವ ಪರಿಣಾಮವನ್ನು ಕಡೆಗಣಿಸಬಾರದು ಎಂದು ಅವರು ಹೇಳಿದರು.

“ಸಂಪೂರ್ಣ ನೈತಿಕ ಹೊಣೆಗಾರಿಕೆ ಕೇವಲ ಮಾನವ ವ್ಯಕ್ತಿಗಳಿಗೆ ಸೇರಿದ್ದು, ಕೃತಕ ವ್ಯವಸ್ಥೆಗಳಿಗೆ ಅಲ್ಲ. ಆದ್ದರಿಂದ, ಕೃತಕ ಬುದ್ಧಿಮತ್ತೆಯನ್ನು ಮಾನವ ಘನತೆಯನ್ನು ಎತ್ತಿಹಿಡಿಯಲು ಮತ್ತು ನಿಜವಾದ ಅರ್ಥದಲ್ಲಿ ಸರ್ವಸಾಮಾನ್ಯ ಹಿತವನ್ನು ಸಾಧಿಸಲು ಬಳಸಬೇಕಾದರೆ, ಅದರ ಬಳಕೆಯ ಅಂತಿಮ ಹೊಣೆಗಾರಿಕೆ ಮಾನವ ನಿರ್ಧಾರ ಪ್ರಭುವಿನಲ್ಲಿಯೇ ಉಳಿಯಬೇಕು ಮತ್ತು ಅದರ ಪ್ರತಿಯೊಂದು ಹಂತದಲ್ಲೂ ಉತ್ತರದಾಯಿತ್ವವನ್ನು ಖಚಿತಪಡಿಸಬೇಕು” ಎಂದು ಅವರು ಒತ್ತಾಯಿಸಿದರು.

ಉತ್ತರದಾಯಿತ್ವ ಮತ್ತು ಹಂಚಿಕೊಂಡ ಜವಾಬ್ದಾರಿಯ ಮಹತ್ವ

ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ವ್ಯಕ್ತಿಯ ಘನತೆಯನ್ನು ಕಾಪಾಡುವ ಕುರಿತು ಜಗದ್ಗುರು XIVನೇ ಲಿಯೋರವರ ಮ್ಯಾಗ್ನಿಫಿಕಾ ಹುಮಾನಿತಾಸ್ ಪರಿಪತ್ರವನ್ನು ಉಲ್ಲೇಖಿಸಿದ ಆರ್ಚ್‌ಬಿಷಪ್ ಬಾಲೆಸ್ತ್ರೇರೋ, ಸ್ವಯಂಚಾಲಿತ ನಿರ್ಧಾರ ಪ್ರಕ್ರಿಯೆಗಳಲ್ಲಿ ಕೃತಕ ಬುದ್ಧಿಮತ್ತೆ ಪಾರದರ್ಶಕವಾಗಿರಬೇಕು ಎಂದು ಹೇಳಿದರು. ಇದರಿಂದ “ಕೃತಕ ಬುದ್ಧಿಮತ್ತೆಯ ಸಂಪೂರ್ಣ ಜೀವನಚಕ್ರದ ಪ್ರತಿಯೊಂದು ಹಂತದಲ್ಲೂ ಅಭಿವೃದ್ಧಿಪಡಿಸುವವರಿಂದ ಬಳಸುವವರವರೆಗೆ ಹೊಣೆಗಾರಿಕೆಯ ಸರಪಳಿಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ” ಎಂದು ಅವರು ತಿಳಿಸಿದರು.

ಜಾಗತಿಕ ಸಮುದಾಯದ ವಿವಿಧ ಹಂತಗಳನ್ನು ಗೌರವಿಸುವ ಮತ್ತು ಸಾಮಾನ್ಯ ನೀತಿ-ಚೌಕಟ್ಟುಗಳನ್ನು ರೂಪಿಸಲು ನೆರವಾಗುವ ಸಹಕಾರದ ವಿಧಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು. ಇದರಿಂದ “ಸರ್ವಸಾಮಾನ್ಯ ಹಿತಕ್ಕಾಗಿ ಎಲ್ಲರ ಜಂಟಿ ಹೊಣೆಗಾರಿಕೆಯನ್ನು ಖಚಿತಪಡಿಸಬಹುದು” ಎಂದರು.

“ಈ ಹಿನ್ನೆಲೆಯಲ್ಲಿ, ಕೆಲವೇ ಪ್ರಬಲ ಕಂಪನಿಗಳ ಕೈಯಲ್ಲಿ ತಂತ್ರಜ್ಞಾನ ಕೇಂದ್ರೀಕೃತವಾಗಿರುವುದು ಅದರ ಋಣಾತ್ಮಕ ಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸಬಹುದು. ವಿಶೇಷವಾಗಿ, ನೈತಿಕ ಮಾರ್ಗಸೂಚಿಗಳ ಕೊರತೆ ಹಾಗೂ ಇಂತಹ ಸವಾಲುಗಳನ್ನು ಎದುರಿಸಲು ಸಮರ್ಥ ಸಂಸ್ಥೆಗಳ ಅಭಾವವಿರುವ ಸಂದರ್ಭದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು” ಎಂದು ಅವರು ಎಚ್ಚರಿಸಿದರು.

ಕೊನೆಯಲ್ಲಿ, ಕೃತಕ ಬುದ್ಧಿಮತ್ತೆಯ ಕುರಿತ ಸಂವಾದದಲ್ಲಿ “ಸಕ್ರಿಯವಾಗಿ ಭಾಗವಹಿಸುವುದಕ್ಕೆ ಜಗದ್ಗುರುಗಳ ಅಧಿಕಾರ ಸ್ಥಳವು ಬದ್ಧವಾಗಿದೆ” ಎಂದು ಆರ್ಚ್‌ಬಿಷಪ್ ಬಾಲೆಸ್ತ್ರೇರೋ ಪುನರುಚ್ಚರಿಸಿದರು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ಘನತೆಯನ್ನು ಕಾಪಾಡುವ ಉದ್ದೇಶದಿಂದ ರಚನಾತ್ಮಕ ಸಂವಾದದಲ್ಲಿ ಭಾಗವಹಿಸಲು ಜಗದ್ಗುರುಗಳ ಅಧಿಕಾರ ಸ್ಥಳವು ಸದಾ ಸನ್ನದ್ಧವಾಗಿದೆ ಎಂದು ಅವರು ಹೇಳಿದರು.

08 ಜುಲೈ 2026, 16:49