ಹುಡುಕಿ

ಆರ್ಚ್‌ಬಿಷಪ್ ರೊನಾಲ್ಡ್ ಹಿಕ್ಸ್ ಆರ್ಚ್‌ಬಿಷಪ್ ರೊನಾಲ್ಡ್ ಹಿಕ್ಸ್ 

ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ಹಿಕ್ಸ್: "ಭರವಸೆ ಕಳೆದುಕೊಳ್ಳಬೇಡಿ; ಯೇಸು ನಮ್ಮೊಂದಿಗೇ ದೋಣಿಯಲ್ಲಿದ್ದಾರೆ."

ಮೊರೆಹೊಂದಿದ ಸಂದರ್ಶನವೊಂದರಲ್ಲಿ, ಜಗದ್ಗುರು ಲಿಯೋರವರಿಂದ ಪಾಲಿಯಂ ಸ್ವೀಕರಿಸಿದ ಬಳಿಕ ರೋಮಿನಲ್ಲಿ ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದ ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ರೊನಾಲ್ಡ್ ಹಿಕ್ಸ್, ನ್ಯೂಯಾರ್ಕ್‌ನಲ್ಲಿ ತಮ್ಮ ಸೇವಾ ಅನುಭವವನ್ನು ಅವಲೋಕಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವ ವಯಸ್ಕರು ಮತ್ತೆ ನಂಬಿಕೆಯ ಜೀವನದತ್ತ ಮರಳುತ್ತಿರುವುದನ್ನು ಗಮನಿಸಿರುವ ಅವರು, "ನಂಬಿಕೆ, ನೈತಿಕ ಸಂಪ್ರದಾಯ ಹಾಗೂ ಜೀವನಕ್ಕೆ ಭದ್ರ ಅಡಿಪಾಯ ಮತ್ತು ಮಾರ್ಗದರ್ಶನ ನೀಡುವ ಮೌಲ್ಯಗಳಿಂದ ದೂರವಾದಾಗ ಜಗತ್ತು ಎಷ್ಟು ಛಿದ್ರಗೊಂಡ ಮತ್ತು ಮುರಿದುಹೋಗಿರುವಂತಾಗುತ್ತದೆ ಎಂಬುದನ್ನು ಅವರು ಅನುಭವಿಸುತ್ತಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರಿಂದ ಪಾಲಿಯಂ ಸ್ವೀಕರಿಸಿದ ಬಳಿಕ ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ರೊನಾಲ್ಡ್ ಹಿಕ್ಸ್, ತಮ್ಮ ಹೊಸ ಸೇವೆಯ ಜವಾಬ್ದಾರಿ, ಧರ್ಮ ಸಭೆಯ ಧ್ಯೇಯ ಮತ್ತು ವೈಯಕ್ತಿಕ ಆಧ್ಯಾತ್ಮಿಕ ಜೀವನದ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು. ಪಾಲಿಯಂ ಸ್ವೀಕರಿಸಿದ ಕ್ಷಣವು ಜಗದ್ಗುರುಗಳು ಮತ್ತು ವಿಶ್ವವ್ಯಾಪಿ ಧರ್ಮ ಸಭೆಯೊಂದಿಗಿನ ಐಕ್ಯದ ಸಂಕೇತವಾಗಿದ್ದು, ಪವಿತ್ರ ಪೇತ್ರ ಮತ್ತು ಪೌಲರಂತೆ ಕ್ರಿಸ್ತನ ಸುವಾರ್ತೆಯನ್ನು ಏಕತೆಯಿಂದ ಸಾರುವ ಕರೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದರು.

ನ್ಯೂಯಾರ್ಕ್‌ಗೆ ಬಂದ ನಂತರ ಅಲ್ಲಿನ ಜನರ ಆತ್ಮೀಯ ಸ್ವಾಗತವು ತಮ್ಮನ್ನು ಅತ್ಯಂತ ಆಶ್ಚರ್ಯಗೊಳಿಸಿದೆ ಎಂದು ಅವರು ತಿಳಿಸಿದರು. ಕಠಿಣ ಸ್ವಭಾವದವರಾಗಿರಬಹುದು ಎಂಬ ಪೂರ್ವಗ್ರಹ ಹೊಂದಿದ್ದರೂ, ಎಲ್ಲ ವರ್ಗದ ಜನರು ತೋರಿದ ಪ್ರೀತಿ ಮತ್ತು ಗೌರವವು ಅವರನ್ನು ಸ್ಪರ್ಶಿಸಿತು. ನ್ಯೂಯಾರ್ಕ್ ವಿಶ್ವದ ವಿವಿಧ ಸಂಸ್ಕೃತಿಗಳ ಸಂಗಮವಾಗಿದ್ದು, ಜನರು ಧರ್ಮ ಸಭೆಯನ್ನು ಮತ್ತು ಯೇಸು ಕ್ರಿಸ್ತರನ್ನು ಅಪಾರವಾಗಿ ಪ್ರೀತಿಸುವುದನ್ನು ಕಂಡು ಸಂತೋಷವಾಗಿದೆ ಎಂದು ಅವರು ಹೇಳಿದರು.

ತಮ್ಮ ಧರ್ಮಪ್ರಾಂತ್ಯದ ಸವಾಲುಗಳ ಜೊತೆಗೆ ಅಪಾರ ಅವಕಾಶಗಳನ್ನೂ ಅವರು ಗುರುತಿಸಿದರು. ವಿಶೇಷವಾಗಿ ಇಪ್ಪತ್ತರ ಮತ್ತು ಮೂವತ್ತರ ವಯಸ್ಸಿನ ಯುವಜನರು ಮತ್ತೆ ಧರ್ಮ ಸಭೆಯತ್ತ ಮರಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹೇಳಿದರು. ಇಂದಿನ ಜಗತ್ತಿನ ಗೊಂದಲ, ಮೌಲ್ಯಗಳ ಕುಸಿತ ಮತ್ತು ಆಧ್ಯಾತ್ಮಿಕ ಶೂನ್ಯತೆಯ ನಡುವೆ ಜೀವನದ ನಿಜವಾದ ಅರ್ಥವನ್ನು ಹುಡುಕುತ್ತಿರುವ ಯುವಕರು ಧರ್ಮ ಸಭೆಯಲ್ಲಿ ಸಮುದಾಯ, ಸೇವೆ ಮತ್ತು ನಂಬಿಕೆಯ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಯುವಕರು ಮಾತ್ರವಲ್ಲದೆ ಎಲ್ಲ ವಯೋಮಾನದವರೂ ದೇವರನ್ನು ತಿಳಿದುಕೊಳ್ಳಲು, ಪ್ರೀತಿಸಲು ಮತ್ತು ಸೇವಿಸಲು ಧರ್ಮ ಸಭೆಯು ಹೆಚ್ಚು ಶ್ರಮಿಸಬೇಕು ಎಂದರು.

ತಮ್ಮ ಯಾಜಕ ವೃತ್ತಿಯ ಕರೆಯ ಕುರಿತು ಮಾತನಾಡಿದ ಅವರು, ಆರನೇ ತರಗತಿಯಲ್ಲಿ ಒಬ್ಬ ನೂತನ ಯಾಜಕರು "ನೀನು ಒಳ್ಳೆಯ ಯಾಜಕರಾಗಬಹುದು" ಎಂದು ಪ್ರೋತ್ಸಾಹಿಸಿದ ಮಾತು ತಮ್ಮ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಸ್ಮರಿಸಿದರು. ಆ ಪ್ರೇರಣೆಯೇ ಅವರನ್ನು ಗುರು ವಿದ್ಯಾರ್ಥಿ ಮಂದಿರಕ್ಕೆ ಕರೆದೊಯ್ದು, ಬಳಿಕ ಯಾಜಕತ್ವ ಮತ್ತು ಈಗ ಆರ್ಚ್‌ಬಿಷಪ್ ಸೇವೆಯವರೆಗೆ ನಡೆಸಿತು. ಈ ಪಯಣದಲ್ಲಿ ಪ್ರಾರ್ಥನೆ, ಮಾರ್ಗದರ್ಶನ ಮತ್ತು ಅನೇಕ ಜನರ ಬೆಂಬಲವೇ ತಮ್ಮ ಜೀವನದ ದೊಡ್ಡ ಆಶೀರ್ವಾದವಾಗಿದೆ ಎಂದು ಅವರು ಕೃತಜ್ಞತೆಯಿಂದ ಹೇಳಿದರು.

ತಮ್ಮ ಆಧ್ಯಾತ್ಮಿಕ ಜೀವನದಲ್ಲಿ ಪವಿತ್ರ ಯೂಕರಿಸ್ಟಿ, ದಿವ್ಯ ಬಲಿಪೂಜೆ, ದಿವ್ಯ ಕಚೇರಿ ಪ್ರಾರ್ಥನೆ ಹಾಗೂ ಪವಿತ್ರ ಪ್ರಸಾದದ ಆರಾಧನೆಗೆ ವಿಶೇಷ ಸ್ಥಾನವಿದೆ ಎಂದು ಅವರು ತಿಳಿಸಿದರು. ಪ್ರತಿದಿನ ದೇವರ ಸನ್ನಿಧಿಯಲ್ಲಿ ಮೌನ ಪ್ರಾರ್ಥನೆಗೆ ಸಮಯ ಮೀಸಲಿಡುವುದು ತಮ್ಮ ಸೇವೆಗೆ ಶಕ್ತಿಯನ್ನು ನೀಡುತ್ತದೆ ಎಂದರು. ಅಂತಿಮವಾಗಿ, ಇಂದಿನ ಸಮಾಜದಲ್ಲಿ ಕ್ರೈಸ್ತರು ತಮ್ಮ ನಂಬಿಕೆಯನ್ನು ಖಾಸಗಿ ಬದುಕಿಗೆ ಮಾತ್ರ ಸೀಮಿತಗೊಳಿಸದೆ, ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸಾಕ್ಷಿಯಾಗಬೇಕು ಎಂದು ಕರೆ ನೀಡಿದರು. "ಯಾವತ್ತೂ ಭರವಸೆ ಕಳೆದುಕೊಳ್ಳಬೇಡಿ. ಜೀವನದ ಬಿರುಗಾಳಿಗಳ ನಡುವೆಯೂ ಯೇಸು ನಮ್ಮೊಂದಿಗೇ ದೋಣಿಯಲ್ಲಿದ್ದಾರೆ. ಅವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ; ಅವರ ಮೇಲಿನ ನಂಬಿಕೆಯಿಂದ ಮುಂದುವರಿಯಿರಿ" ಎಂಬ ಆಶಾಭರಿತ ಸಂದೇಶವನ್ನು ಅವರು ವಿಶ್ವಾಸಿಗಳಿಗೆ ನೀಡಿದರು.

01 ಜುಲೈ 2026, 17:56