ಜಗದ್ಗುರುಗಳ ದಾನಧರ್ಮ ಕಚೇರಿಯಿಂದ ಉಕ್ರೇನ್‌ನ ಸೌಹಾರ್ದ ಅಡುಗೆಮನೆಗೆ ನೆರವು.
ವ್ಯಾಟಿಕನ್ ವರದಿ
ವಾಯವ್ಯ ಉಕ್ರೇನ್‌ನ ರಿವ್ನೆ ಪ್ರದೇಶದ ಬೆರೆಸ್ತಿಯಾ ಗ್ರಾಮದಲ್ಲಿ, ಸ್ವಯಂಸೇವಕಿ ಟೆಟಿಯಾನಾ ಪಿಂಚುಕ್ ರವರ ನೇತೃತ್ವದಲ್ಲಿ ಸೌಹಾರ್ದ ಅಡುಗೆಮನೆ ನಡೆಯುತ್ತಿದೆ. ಇಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅನೇಕ ಮಹಿಳೆಯರು ಒಟ್ಟಾಗಿ ಸೇರಿ ಉಕ್ರೇನ್ ಸೈನಿಕರಿಗಾಗಿ ದೀರ್ಘಕಾಲ ಸಂಗ್ರಹಿಸಿಡಬಹುದಾದ ವಿಶೇಷ ಪ್ಯಾಕೆಟ್‌ಗಳಲ್ಲಿ ಆಹಾರವನ್ನು ತಯಾರಿಸುತ್ತಾರೆ. ಟೆಟಿಯಾನಾ ಸಹಾಯಕ್ಕಾಗಿ ಜಗದ್ಗುರುಗಳ ಅಧಿಕಾರ ಸ್ಥಳದ ರಾಜತಾಂತ್ರಿಕ ನಿಯೋಗವನ್ನು ಸಂಪರ್ಕಿಸಿದ ಬಳಿಕ, ಉಕ್ರೇನ್‌ನ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ವಿಸ್ವಾಲ್ದಾಸ್ ಕುಲ್ಬೋಕಾಸ್ ರವರು ಈ ವಿಷಯವನ್ನು ನೋಡಿಕೊಳ್ಳುವಂತೆ ವಂ. ಸ್ವಾಮಿ ವಿಕ್ಟರ್ ಬಿಲೌಸ್ ರವರಿಗೆ ಸೂಚಿಸಿದರು.
ವಂ. ಸ್ವಾಮಿ ವಿಕ್ಟರ್ ರವರು ಅಡುಗೆಮನೆಯ ಕಾರ್ಯವಿಧಾನವನ್ನು ಪರಿಶೀಲಿಸಿ, ಯೋಜನೆಯೊಂದನ್ನು ಸಿದ್ಧಪಡಿಸಿ ವ್ಯಾಟಿಕನ್‌ನ ಜಗದ್ಗುರುಗಳ ದಾನಧರ್ಮ ಕಚೇರಿಗೆ ಕಳುಹಿಸಿದರು. ಅಲ್ಪಾವಧಿಯಲ್ಲೇ ಈ ನಿರ್ದಿಷ್ಟ ಉಪಕ್ರಮಕ್ಕೆ ಕಚೇರಿಯಿಂದ ಆರ್ಥಿಕ ನೆರವು ದೊರೆಯಿತು. ಬಳಿಕ ವಂ. ಸ್ವಾಮಿ ವಿಕ್ಟರ್ ರವರು ರಿವ್ನೆ ಪ್ರದೇಶದ ಬೆರೆಸ್ತಿಯಾ ಗ್ರಾಮಕ್ಕೆ ತೆರಳಿ, ನೆರವನ್ನು ಸ್ವತಃ ಸ್ವಯಂಸೇವಕರಿಗೆ ಹಸ್ತಾಂತರಿಸಿದರು. ಅಲ್ಲಿಗೆ ತೆರಳಿದಾಗ ಸರ್ಣಿಯ ಲ್ಯಾಟಿನ್ ಕಥೊಲಿಕ ಧರ್ಮ ಸಭೆಯ ಧರ್ಮಗುರುಗಳೊಂದಿಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು; ವಿಶೇಷವಾಗಿ ತಯಾರಿಸಿದ ಸಾಂಪ್ರದಾಯಿಕ ಉಕ್ರೇನಿಯನ್ ರೊಟ್ಟಿ ‘ಕೊರೊವಾಯ್’ ಅನ್ನು ನೀಡಿ, ಆಹಾರ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಅವರಿಗೆ ವಿವರಿಸಲಾಯಿತು.
ಟೆಟಿಯಾನಾ ಮತ್ತು ಅವರೊಂದಿಗೆ ಕೆಲಸ ಮಾಡುವ ಮಹಿಳೆಯರು ತಮ್ಮ ಮನೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಂಡು ಆಹಾರ ತಯಾರಿಸುತ್ತಾರೆ. ದೊಡ್ಡ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿ, ಅದನ್ನು ವಿಶೇಷ ರೆಟಾರ್ಟ್ ಪೌಚ್‌ಗಳಲ್ಲಿ ತುಂಬಲಾಗುತ್ತದೆ. ನಂತರ ಅವುಗಳನ್ನು ಆಟೋಕ್ಲೇವ್‌ಗಳಲ್ಲಿ ಅಥವಾ ಒತ್ತಡದ ಕುಕ್ಕರ್‌ಗಳಲ್ಲಿ ಕ್ರಿಮಿನಾಶಕಗೊಳಿಸಿ ಶಾಖ ಸಂಸ್ಕರಣೆ ಮಾಡಲಾಗುತ್ತದೆ. ಬಳಿಕ ಆಹಾರದ ವಿವರಗಳಿರುವ ಲೇಬಲ್‌ಗಳನ್ನು ಅಂಟಿಸಿ, ಪೆಟ್ಟಿಗೆಗಳಲ್ಲಿ ತುಂಬಿ, ಮುಂಚೂಣಿಯ ವಿವಿಧ ಪ್ರದೇಶಗಳಲ್ಲಿರುವ ಸೈನಿಕರಿಗೆ ಕಳುಹಿಸಲಾಗುತ್ತದೆ. ಒಂದು ಬ್ಯಾಚ್ ಆಹಾರವನ್ನು ತಯಾರಿಸಲು ಇಡೀ ದಿನವೇ ಬೇಕಾಗಬಹುದು,ಸಾಮಾನ್ಯವಾಗಿ ಸುಮಾರು ಹತ್ತು ಮಹಿಳೆಯರು ಈ ಶ್ರಮದಾಯಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ.
ವ್ಯಾಟಿಕನ್‌ನಿಂದ ದೊರೆತ ನೆರವು ಈ ಸ್ವಯಂಸೇವಕರಿಗೆ ಕೇವಲ ಆರ್ಥಿಕ ಸಹಾಯವಲ್ಲ, ಆಧ್ಯಾತ್ಮಿಕ ಮತ್ತು ಮಾನವೀಯ ಪ್ರೋತ್ಸಾಹವೂ ಆಗಿದೆ ಎಂದು ವಂ.ಸ್ವಾಮಿ ವಿಕ್ಟರ್ ಹೇಳಿದರು. ಈ ಮಹಿಳೆಯರಲ್ಲಿ ಯಾರೂ ಕಥೊಲಿಕರಲ್ಲ, ಕೆಲವರು ಆರ್ಥಡಾಕ್ಸ್ ಮತ್ತು ಕೆಲವರು ಪ್ರೊಟೆಸ್ಟಂಟ್ ಕ್ರೈಸ್ತರು. ಆದರೂ ಜಗದ್ಗುರುಗಳ ದಾನಧರ್ಮ ಕಚೇರಿಯಿಂದ ನೆರವು ಬಂದಿರುವುದಕ್ಕೆ ಅವರು ವಿಶೇಷ ಮಹತ್ವ ನೀಡಿದರು. “ಜಗದ್ಗುರುಗಳ ಪ್ರತಿನಿಧಿಗಳು ನಮ್ಮ ಬಳಿಗೆ ಬಂದಿದ್ದಾರೆ” ಎಂದು ಅವರು ಸಂತೋಷದಿಂದ ಹೇಳಿಕೊಂಡರು. ಒಟ್ಟಾಗಿ ಪ್ರಾರ್ಥಿಸಿ, ವಂ.ಸ್ವಾಮಿ ವಿಕ್ಟರ್ ಆಹಾರವನ್ನು ಆಶೀರ್ವದಿಸಿದರು ಮತ್ತು ಸೈನಿಕರಿಗಾಗಿ ಪ್ರಾರ್ಥಿಸಿದರು. ಈ ನೆರವು ಇತರರನ್ನೂ ಇಂತಹ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಲಿ ಎಂಬ ಆಶಯವೂ ಅವರಲ್ಲಿದೆ.
ಇತ್ತೀಚೆಗೆ ಸ್ವಯಂಸೇವಕರು ಮುಖ್ಯವಾಗಿ ಹುರುಳಿ, ಜೋಳ, ಅಕ್ಕಿ ಮುಂತಾದ ಧಾನ್ಯಾಧಾರಿತ ಆಹಾರಗಳನ್ನು ತಯಾರಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಈ ಆಹಾರವನ್ನು ಡ್ರೋನ್‌ಗಳ ಮೂಲಕವೂ ಸೈನಿಕರಿಗೆ ತಲುಪಿಸಲಾಗುತ್ತದೆ. ಗುಂಡಿನ ದಾಳಿಯ ಸಂದರ್ಭದಲ್ಲಿ ಆಹಾರದ ಪ್ಯಾಕೆಟ್ ಹಾನಿಗೊಳಗಾದರೂ, ಧಾನ್ಯಾಧಾರಿತ ಆಹಾರವಾಗಿರುವುದರಿಂದ ಅದನ್ನು ಸಂಗ್ರಹಿಸಿ ತಿನ್ನಲು ಸಾಧ್ಯವಾಗುತ್ತದೆ ಎಂದು ಸೈನಿಕರು ತಿಳಿಸಿದ್ದಾರೆ. ಸರ್ಕಾರಿ ವ್ಯವಸ್ಥೆಯ ಮೂಲಕ ಸೈನಿಕರಿಗೆ ಆಹಾರ ದೊರೆಯುತ್ತಿದ್ದರೂ, ಸ್ವಯಂಸೇವಕರು ನೀಡುವ ಆಹಾರ ಹೆಚ್ಚು ಕಾಲ ಉಳಿಯುವುದರ ಜೊತೆಗೆ ಉತ್ತಮ ಗುಣಮಟ್ಟದ್ದಾಗಿದ್ದು, ಮುಂಚೂಣಿಯಲ್ಲಿ ಸೇವೆ ಸಲ್ಲಿಸುವ ಸೈನಿಕರಿಗೆ ಅಗತ್ಯವಾದ ಪೌಷ್ಟಿಕಾಂಶ ಮತ್ತು ಶಕ್ತಿಯನ್ನು ಒದಗಿಸುತ್ತದೆ.
ವಂ.ಸ್ವಾಮಿ ವಿಕ್ಟರ್ ರವರ ಪ್ರಕಾರ, ಇಂತಹ ಸಣ್ಣದಾಗಿ ಕಾಣುವ ಉಪಕ್ರಮಗಳಿಗೆ ಬೆಂಬಲ ನೀಡುವುದು ಅತ್ಯಂತ ಮಹತ್ವದ್ದಾಗಿದೆ, ಏಕೆಂದರೆ ಇದರ ಮೂಲಕ ಅನೇಕ ಜನರು ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸೈನಿಕರಿಗೆ ಉತ್ತಮ ಮತ್ತು ಪೌಷ್ಟಿಕ ಆಹಾರ ದೊರೆಯುತ್ತಿದೆ. ಕೈವ್‌ನ ಪ್ರೇಷಿತರ ರಾಯಭಾರಿ ಸಿಬ್ಬಂದಿಯಾಗಿ, ಸಾರ್ವತ್ರಿಕ ಧರ್ಮ ಸಭೆ ಎಷ್ಟು ಸುಂದರವಾಗಿ ಮತ್ತು ಪರಿಣಾಮಕಾರಿಯಾಗಿ ಒಳಿತನ್ನು ಮಾಡಬಲ್ಲದು ಎಂಬುದನ್ನು ತಾವು ಕಣ್ಣಾರೆ ನೋಡುತ್ತಿದ್ದೇನೆ ಎಂದು ಅವರು ಹೇಳಿದರು. “ಉತ್ತಮ ಸಮಯಕ್ಕಾಗಿ ಕಾಯದೆ ಕಥೊಲಿಕ ಧರ್ಮ ಸಭೆ ಇಷ್ಟೊಂದು ಒಳಿತನ್ನು ಮಾಡಬಲ್ಲದು ಎಂಬುದಕ್ಕೆ ನನಗೆ ಹೆಮ್ಮೆಯಿದೆ. ಅದು ಮಾಡುವ ಒಳಿತು ನಿಜವಾಗಿಯೂ ಅಗತ್ಯವಿರುವ ಜನರನ್ನು ತಲುಪುತ್ತದೆ,” ಎಂದು ವಂ.ಸ್ವಾಮಿ ವಿಕ್ಟರ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.