ಹುಡುಕಿ

Il Papa ha incontrato Lazzarini, commissario dell'Unrwa Il Papa ha incontrato Lazzarini, commissario dell'Unrwa  (ANSA)

ಗಾಜಾದ ಬಗೆಗಿನ ತಿರಸ್ಕಾರ ಮನೋಭಾವಕ್ಕೆ ತೆರಬೇಕಾದ ಬೆಲೆ : UNRWA ಮುಖ್ಯ ಆಯುಕ್ತರು

ವಿಶ್ವ ಸಂಸ್ಥೆಯ ಪೂರ್ವ ಪ್ಯಾಲೇಸ್ತೀನಿನ ನಿರಾಶ್ರಿತ ಕಾರ್ಯ ಸಂಸ್ಥೆಯ (UNRWA) ಮುಖ್ಯ ಆಯುಕ್ತರಾದ ಫಿಲಿಪ್ ಲಾಜ್ಜರಿನಿ ಅವರು, ಇತ್ತೀಚೆಗೆ ಪೂಜ್ಯ ಜಗದ್ಗುರು14ನೆಯ ಲಿಯೋ ಅವರೊಂದಿಗೆ ನಡೆಸಿದ ಭೇಟಿಯ ಸಂದರ್ಭದಲ್ಲಿ, ಗಾಜಾ ಮತ್ತು ಪ್ಯಾಲೇಸ್ತೀನ್ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ ಮಾನವೀಯ ಸಂಕಷ್ಟದ ಬಗ್ಗೆ ಗಂಭೀರ ಚಿಂತೆ ವ್ಯಕ್ತಪಡಿಸಿದ್ದಾರೆ. ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, “ವಿಶ್ವ ಸಂಸ್ಥೆಯ ಪೂರ್ವ ಪ್ಯಾಲೇಸ್ತೀನಿನ ನಿರಾಶ್ರಿತ ಕಾರ್ಯ ಸಂಸ್ಥೆ ಏನು ಮಾಡುತ್ತಿದೆ ಎಂಬುದಷ್ಟೇ ಅಲ್ಲ; ಅದು ಕೆಲಸ ಮಾಡದಂತೆ ತಡೆಯಲ್ಪಟ್ಟರೆ ಏನಾಗುತ್ತದೆ ಎಂಬುದನ್ನೂ ನಾವು ಚರ್ಚಿಸಿದ್ದೇವೆ” ಎಂದ

ಪೂಜ್ಯ ಜಗದ್ಗುರು 14ನೆಯ ಲಿಯೋ ಅವರೊಂದಿಗೆ ನಡೆದ  ಭೇಟಿಯಲ್ಲಿ, ಗಾಜಾ, ಪಶ್ಚಿಮ ತೀರ ಮತ್ತು ಪೂರ್ವ ಜೆರುಸಲೇಮ್‌ನಲ್ಲಿ ಸ್ಥಿತಿ ದಿನದಿಂದ ದಿನಕ್ಕೆ ಹೇಗೆ ಹದಗೆಡುತ್ತಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು. ಜೊತೆಗೆ, ಯಾವುದೇ ರಾಜಕೀಯ ಪರಿಹಾರದ ಲಕ್ಷಣವಿಲ್ಲದ ಈ ಸಂಘರ್ಷವು ಇಡೀ ಪ್ರದೇಶದ ಮೇಲೆ ಬೀರುವ ಪರಿಣಾಮಗಳನ್ನೂ ಅವರು ಗಮನಕ್ಕೆ ತಂದರು. ಈ ಮಾತುಕತೆಯ ಕೇಂದ್ರಬಿಂದು ವಿಶ್ವ ಸಂಸ್ಥೆಯ ಪೂರ್ವ ಪ್ಯಾಲೇಸ್ತೀನಿನ ನಿರಾಶ್ರಿತ ಕಾರ್ಯ ಸಂಸ್ಥೆಯ ಮೇಲಿನ ಪಾತ್ರವಾಗಿತ್ತು.

ಲಾಜ್ಜರಿನಿ ಅವರ ಮಾತಿನಲ್ಲಿ, ಗಾಜಾ ಅಥವಾ ಪಶ್ಚಿಮ ತೀರದಲ್ಲಿ ವಿಶ್ವ ಸಂಸ್ಥೆಯ ಪೂರ್ವ ಪ್ಯಾಲೇಸ್ತೀನಿನ ನಿರಾಶ್ರಿತ ಕಾರ್ಯ ಸಂಸ್ಥೆ  ಕಾರ್ಯನಿರ್ವಹಿಸುವುದನ್ನು ಏಕಾಏಕಿ ತಡೆದರೆ, ಅದರ ಪರಿಣಾಮ ಅತೀವ ಭೀಕರವಾಗಿರುತ್ತದೆ. ಪರಿಣಾಮಕಾರಿ ಮತ್ತು ಸ್ವತಂತ್ರ ಪ್ಯಾಲೇಸ್ತೀನಿನ ಸಂಸ್ಥೆಗಳು ಇಲ್ಲದ ಸ್ಥಿತಿಯಲ್ಲಿ, ಆ ಶೂನ್ಯವನ್ನು ಭರಿಸಲು ಯಾವುದೇ ಪರ್ಯಾಯ ವ್ಯವಸ್ಥೆ ಸಿದ್ಧವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪೂಜ್ಯ ಜಗದ್ಗುರು 14ನೆಯ ಲಿಯೋರವರೊಂದಿಗೆ ನಡೆದ ಸಂವಾದ

ಪೂಜ್ಯ ಜಗದ್ಗುರುಗಳೊಂದಿಗೆ ನಡೆದ ಈ ಸಂವಾದದಲ್ಲಿ, ಗಾಜಾ, ಪಶ್ಚಿಮ ಕರಾವಳಿ ಮತ್ತು ಪೂರ್ವ ಜೆರುಸಲೇಮ್‌ ಪ್ರದೇಶಗಳಲ್ಲಿ ವೇಗವಾಗಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ವಿವರವಾದ ಚರ್ಚೆ ನಡೆಯಿತು ಎಂದು ಲಾಜ್ಜರಿನಿ ತಿಳಿಸಿದರು. ಅಂತ್ಯ ಕಾಣದ ಸಂಘರ್ಷವು ಸಂಪೂರ್ಣ ಪ್ರದೇಶದ ಮೇಲೆ ಬೀರುತ್ತಿರುವ ಪರಿಣಾಮಗಳನ್ನೂ ಈ ಮಾತುಕತೆಯಲ್ಲಿ ಗಮನಕ್ಕೆ ತೆಗೆದುಕೊಳ್ಳಲಾಯಿತು.

ನೆಲಮಟ್ಟದಲ್ಲಿ ಪ್ಯಾಲೇಸ್ತೀನಿನ ನಿರಾಶ್ರಿತರಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ  ಪಾತ್ರವೇ ಈ ಸಂಭಾಷಣೆಯ ಕೇಂದ್ರಬಿಂದುವಾಗಿತ್ತು.

“ಯೋಗ್ಯ ಹಾಗೂ ಪರಿಣಾಮಕಾರಿಯಾದ ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದ ಸಂದರ್ಭದಲ್ಲಿ, ಗಾಜಾ ಅಥವಾ ಪಶ್ಚಿಮ ಕರಾವಳಿಯಲ್ಲಿ ನಮ್ಮ ಸಂಸ್ಥೆಯ ಕಾರ್ಯಾಚರಣೆ ತಡೆಯಲ್ಪಟ್ಟರೆ ಅದರ ಪರಿಣಾಮ ಏನು ಎಂಬುದರ ಬಗ್ಗೆ ನಾವು ಚರ್ಚೆ ಮಾಡಿದೆವು,” ಎಂದು ಅವರು ಹೇಳಿದರು. ಅಂತಹ ಪರ್ಯಾಯ ವ್ಯವಸ್ಥೆ ಎಂದರೆ ಸಂಪೂರ್ಣ ಸಾಮರ್ಥ್ಯ ಮತ್ತು ಅಧಿಕಾರ ಹೊಂದಿರುವ ಪ್ಯಾಲೇಸ್ತೀನಿನ ಸಂಸ್ಥೆಗಳಾಗಬೇಕೆಂದು ಅವರು ಸ್ಪಷ್ಟಪಡಿಸಿದರು.

‘ತಾತ್ಕಾಲಿಕ’ ವ್ಯವಸ್ಥೆಯಾಗಿ ಆರಂಭವಾದ ದೀರ್ಘ ಪ್ರಯಾಣ

ಈ ಸಂಸ್ಥೆಯನ್ನು ಏಳು ದಶಕಗಳ ಹಿಂದೆ ತಾತ್ಕಾಲಿಕ ಮಾನವೀಯ ವ್ಯವಸ್ಥೆಯಾಗಿ ಸ್ಥಾಪಿಸಲಾಗಿತ್ತು. ರಾಜಕೀಯ ಪರಿಹಾರ ದೊರೆಯುವವರೆಗೆ ಮಾತ್ರ ಇದು ಕಾರ್ಯನಿರ್ವಹಿಸಬೇಕೆಂಬ ಉದ್ದೇಶವಿತ್ತು. ಆದರೆ ಇಂದಿಗೂ ಇದರ ಅಗತ್ಯ ಮುಂದುವರಿದಿರುವುದು ಸಂಸ್ಥೆಯ ವೈಫಲ್ಯವಲ್ಲ, ರಾಜಕೀಯ ಪರಿಹಾರದ ಕೊರತೆಯ ಪ್ರತಿಬಿಂಬ ಎಂದು ಲಾಜ್ಜರಿನಿ ಹೇಳಿದರು.

“ಸದಸ್ಯ ರಾಷ್ಟ್ರಗಳು ಕೆಲವೇ ವರ್ಷಗಳಲ್ಲಿ ಈ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂಬ ನಂಬಿಕೆಯಲ್ಲಿ ಇದ್ದವು,” ಎಂದು ಅವರು ಹೇಳಿದರು. “ಏಳು ದಶಕಗಳ ನಂತರವೂ ಈ ಸಂಸ್ಥೆ ಅಸ್ತಿತ್ವದಲ್ಲೇ ಇರುವುದಕ್ಕೆ ಕಾರಣ, ಪ್ಯಾಲೇಸ್ತೀನಿನ ಜನರ ಸಂಕಷ್ಟಕ್ಕೆ ಶಾಶ್ವತ ರಾಜಕೀಯ ಪರಿಹಾರ ಕಂಡುಕೊಳ್ಳಲು ಅಂತರರಾಷ್ಟ್ರೀಯ ಸಮುದಾಯ ವಿಫಲವಾಗಿದೆ ಎಂಬುದಾಗಿದೆ.”

ಕಾಲಕ್ರಮೇಣ ಈ ಸಂಸ್ಥೆಯ ಕಾರ್ಯವ್ಯಾಪ್ತಿಯೂ ಬದಲಾಗಿದೆ. “ಕಳೆದ ಕೆಲವು ದಶಕಗಳಿಂದ ಇದು ಮಾನವ ಅಭಿವೃದ್ಧಿಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ,” ಎಂದು ಲಾಜ್ಜರಿನಿ ವಿವರಿಸಿದರು. “ಒಂದು ಸ್ವತಂತ್ರ ರಾಷ್ಟ್ರ ತನ್ನ ನಾಗರಿಕರಿಗೆ ನೀಡಬೇಕಾದ ಮೂಲಭೂತ ಸೇವೆಗಳಾದ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನಾವು ಒದಗಿಸುತ್ತಿದ್ದೇವೆ.”

ಕಾರ್ಯನಿರ್ವಹಿಸುವ ವ್ಯವಸ್ಥೆಯ ಮೇಲಿನ ಹೆಮ್ಮೆ

ಪ್ಯಾಲೇಸ್ತೀನಿನ ನಿರಾಶ್ರಿತರಿಗೆ ಸಾಧ್ಯವಾದಷ್ಟು ಸಾಮಾನ್ಯ ಜೀವನದ ಭಾವನೆಯನ್ನು ಒದಗಿಸಲು ಈ ಸಂಸ್ಥೆ ಪ್ರಯತ್ನಿಸಿದೆ ಎಂದು ಲಾಜ್ಜರಿನಿ ಹೇಳಿದರು. ಆದರೆ ಕೆಲ ಪ್ರದೇಶಗಳಲ್ಲಿ ಜೀವನೋಪಾಯಕ್ಕೆ ಅವಕಾಶವನ್ನೇ ನಿರಾಕರಿಸಲಾಗಿದೆ. ಲೆಬನಾನ್‌ನಲ್ಲಿನ ದೀರ್ಘಕಾಲದ ನಿರ್ಬಂಧಗಳು ಹಾಗೂ ಗಾಜಾದ ಮೇಲಿನ ತಡೆಗಳು ಇದಕ್ಕೆ ಉದಾಹರಣೆ.

ಇವುಗಳ ಪರಿಣಾಮವಾಗಿ ಅವಲಂಬನೆ ಹೆಚ್ಚಾಗಿದೆ. ಈ ಅವಲಂಬನೆ ಮಾನವ ಗೌರವದ ಭಾವನೆಗೆ ಧಕ್ಕೆ ತರುತ್ತದೆ. ಆದರೂ, ಈ ಸಂಸ್ಥೆ ಒದಗಿಸಿದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ಯಾಲೇಸ್ತೀನಿನ ನಿರಾಶ್ರಿತರಲ್ಲಿ ಗಾಢವಾದ ಹೆಮ್ಮೆಯಿದೆ.

“ಭೂಮಿಯನ್ನು ಕಸಿದುಕೊಳ್ಳಲಾಗಿದೆ. ಮನೆಗಳನ್ನು ಕಸಿದುಕೊಳ್ಳಲಾಗಿದೆ. ಆದರೆ ಶಿಕ್ಷಣವನ್ನು ಎಂದಿಗೂ ಕಸಿದುಕೊಳ್ಳಲಾಗಿಲ್ಲ,” ಎಂದು ಅವರು ಗಂಭೀರವಾಗಿ ಹೇಳಿದರು. “ಅದು ಸದಾ ಉತ್ತಮ ಭವಿಷ್ಯದ ನಿರೀಕ್ಷೆಯಾಗಿ ಉಳಿದಿದೆ.”

ಸಾಮಾನ್ಯತೆಯನ್ನು ಕಲಿಸುವ ಕಠಿಣ ಸವಾಲು

ನಿರಂತರ ಬಾಂಬ್ ದಾಳಿ, ಸ್ಥಳಾಂತರ ಮತ್ತು ನಷ್ಟದ ನಡುವೆ ಬೆಳೆದ ಮಕ್ಕಳಿಗೆ ಸಾಮಾನ್ಯ ಜೀವನದ ಭಾವನೆ ಕಲಿಸುವುದು ಅತ್ಯಂತ ಕಠಿಣ ಕಾರ್ಯವಾಗಿದೆ ಎಂದು ಲಾಜ್ಜರಿನಿ ಒಪ್ಪಿಕೊಂಡರು.

“ಗಾಜಾದ ಮಕ್ಕಳು ಸುಮಾರು ಎರಡು ವರ್ಷಗಳ ಕಾಲ ಪ್ರತಿದಿನವೂ ವಿನಾಶವನ್ನು ಅನುಭವಿಸಿದ್ದಾರೆ,” ಎಂದು ಅವರು ಹೇಳಿದರು. “ಎಲ್ಲರೂ ತಮ್ಮ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಸ್ನೇಹಿತರನ್ನೂ ಕಳೆದುಕೊಂಡಿದ್ದಾರೆ.”

ಈ ಮಕ್ಕಳು ಮಾನವ ಹಕ್ಕುಗಳ ವಿಶ್ವವ್ಯಾಪಕತೆಯ ಮಹತ್ವವನ್ನು ಕಲಿತವರು. ಆದರೆ ಅದೇ ಹಕ್ಕುಗಳು ತಮ್ಮ ವಿಷಯದಲ್ಲಿ ನಿರ್ಲಕ್ಷ್ಯಗೊಳ್ಳುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದಾರೆ.

“ಪರಿಸ್ಥಿತಿ ಎಷ್ಟು ಕಠಿಣವಾಗಿದ್ದರೂ, ನಾವು ಕೈಬಿಡಲು ಸಾಧ್ಯವಿಲ್ಲ,” ಎಂದು ಅವರು ಹೇಳಿದರು. “ಇಂದಿಗೂ ಲಕ್ಷಾಂತರ ಮಕ್ಕಳು ಅವಶೇಷಗಳ ನಡುವೆ, ಆಳವಾದ ಆಘಾತದೊಂದಿಗೆ ಬದುಕುತ್ತಿದ್ದಾರೆ. ಅವರಿಗೆ ಮತ್ತೆ ಕಲಿಕಾ ವಾತಾವರಣ ಅಗತ್ಯವಾಗಿದೆ.”

ಹಣಕಾಸು ನೆರವಿನ ಕುರಿತ ಗಂಭೀರ ಪ್ರಶ್ನೆಗಳು

ಕೆಲವು ರಾಷ್ಟ್ರಗಳು ನಾಗರಿಕರ ನೋವಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ, ಈ ಸಂಸ್ಥೆಗೆ ನೀಡುತ್ತಿದ್ದ ಹಣಕಾಸು ನೆರವನ್ನು ಸ್ಥಗಿತಗೊಳಿಸಿರುವುದು ಗಂಭೀರ ವಿರೋಧಾಭಾಸ ಎಂದು ಲಾಜ್ಜರಿನಿ ಪ್ರಶ್ನಿಸಿದರು.

“ಮಾನವೀಯ ಸಂಕಷ್ಟವನ್ನು ಕಡಿಮೆ ಮಾಡಬೇಕೆಂದು ಹೇಳುವವರು, ಗಾಜಾದಲ್ಲಿ ಅತಿದೊಡ್ಡ ಸೇವಾ ವ್ಯಾಪ್ತಿ ಹೊಂದಿರುವ ಸಂಸ್ಥೆಗೆ ನೆರವು ನೀಡಲು ನಿರಾಕರಿಸುತ್ತಾರೆ. ಇದನ್ನು ಹೇಗೆ ಸಮರ್ಥಿಸಬಹುದು?” ಎಂದು ಅವರು ಪ್ರಶ್ನಿಸಿದರು.

ಮಾನವೀಯ ನೆರವು ಎಂದರೆ ಕೇವಲ ಆಹಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆಶ್ರಯ, ಲಸಿಕೆ, ಶುದ್ಧ ನೀರು ಮತ್ತು ಪ್ರಾಥಮಿಕ ಶಿಕ್ಷಣ—ಇವುಗಳಲ್ಲಿ ಅನೇಕವನ್ನು ಒದಗಿಸುತ್ತಿರುವ ಏಕೈಕ ಸಂಸ್ಥೆ ಇದೇ.

ಯುದ್ಧವಿರಾಮದ ಹಿಂದಿರುವ ವಾಸ್ತವ

ಹಿಂಸಾಚಾರ ಸ್ವಲ್ಪ ಕಡಿಮೆಯಾದರೂ, ಅದನ್ನು ಸಂಘರ್ಷದ ಅಂತ್ಯವೆಂದು ಭಾವಿಸುವುದು ಅಪಾಯಕಾರಿ ಎಂದು ಲಾಜ್ಜರಿನಿ ಎಚ್ಚರಿಸಿದರು. “ಸಂಘರ್ಷ ಇನ್ನೂ ಪ್ರತಿದಿನವೂ ಮುಂದುವರಿದಿದೆ. ನಿರ್ಬಂಧಗಳು ಹಾಗೆಯೇ ಉಳಿದಿವೆ.”

ಈ ಸಂದರ್ಭದಲ್ಲಿ ಪತ್ರಕರ್ತರಿಗೆ ವಿಶೇಷ ಹೊಣೆಗಾರಿಕೆ ಇದೆ ಎಂದು ಅವರು ಹೇಳಿದರು. “ಗಾಜಾ ಮತ್ತು ಪ್ಯಾಲೇಸ್ತೀನ್ ವಿಷಯದಲ್ಲಿ ತಪ್ಪು ಮಾಹಿತಿಯ ಯುದ್ಧ ನಡೆಯುತ್ತಿದೆ. ಸತ್ಯವನ್ನು ನಿರಂತರವಾಗಿ ಗಮನಿಸುವುದು ಅತ್ಯಂತ ಅಗತ್ಯ.”

ಧರ್ಮಸಭೆಯ ಬೆಂಬಲದ ಮಹತ್ವ

ಪ್ಯಾಲೇಸ್ತೀನಿನ ಜನರು ತಾವು ಜಗತ್ತಿನಿಂದ ನಿರ್ಲಕ್ಷ್ಯಗೊಳ್ಳುತ್ತಿದ್ದೇವೆ ಎಂಬ ಭಾವನೆಯಲ್ಲಿರುವ ಸಂದರ್ಭದಲ್ಲಿ, ಧರ್ಮಸಭೆಯ ಬೆಂಬಲವು ವಿಶೇಷ ಅರ್ಥ ಪಡೆದುಕೊಳ್ಳುತ್ತದೆ.

“ಇದು ಐಕ್ಯತೆಯ ಸಂದೇಶ. ನಿರೀಕ್ಷೆಯ ಸಂಕೇತ,” ಎಂದು ಲಾಜ್ಜರಿನಿ ಹೇಳಿದರು.

ಅಂತಿಮವಾಗಿ, “ನಮ್ಮ ಕಾರ್ಯಚಟುವಟಿಕೆಗೆ ಅಗತ್ಯವಾದ ವಲಯವನ್ನು ರಕ್ಷಿಸಬೇಕು. ನಾವು ಪರಿಹಾರದ ಭಾಗವಾಗದಿದ್ದರೆ, ನಿರೀಕ್ಷೆಗೆ ಜಾಗ ಉಳಿಯದು” ಎಂದು ಎಚ್ಚರಿಸಿದರು.

12 ಜನವರಿ 2026, 12:47