ಹುಡುಕಿ

FILE PHOTO: Fight for Sudan's al-Fashir spreading hunger, disease FILE PHOTO: Fight for Sudan's al-Fashir spreading hunger, disease 

ಸುಡಾನ್‌ನಲ್ಲಿ ಸಾವಿರ ದಿನಗಳ ಸಂಘರ್ಷ: ಭೀಕರ ಮಾನವೀಯ ಸಂಕಟ

ಸುಡಾನ್‌ನಲ್ಲಿ ಮುಂದುವರಿಯುತ್ತಿರುವ ಸಂಘರ್ಷದ ನಡುವೆ ಉಂಟಾಗಿರುವ ಭೀಕರ ಮಾನವೀಯ ಸಂಕಟದತ್ತ ಕಾರಿಟಾಸ್ ಇಂಟರ್‌ನ್ಯಾಷನಾಲಿಸ್ ಗಮನ ಸೆಳೆಯುತ್ತಿದ್ದು, “ಸುಡಾನ್‌ನಲ್ಲಿ ಮತ್ತಷ್ಟು ವಿಪತ್ತು ತಪ್ಪಿಸಲು ಅಂತರರಾಷ್ಟ್ರೀಯ ಸಮುದಾಯ ಈಗಲೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದೆ. ಲೇಖನ: ಕಿಯೆಲ್ಸಿ ಗಸ್ಸಿ

ಇಂದು, ಜಗತ್ತಿನ ಅತ್ಯಂತ ತೀವ್ರ ಮಾನವೀಯ ಸಂಕಟಗಳಲ್ಲಿ ಒಂದನ್ನು ಎದುರಿಸುತ್ತಿರುವ ಸುಡಾನ್, ಸಂಘರ್ಷದ 1,000 ದಿನಗಳನ್ನು ತಲುಪಿದೆ — ಇದು ಒಂದು ದುಃಖಕರ ಮತ್ತು ಗಂಭೀರ ಘಟ್ಟವಾಗಿದೆ. ಕಾರಿಟಾಸ್ ಇಂಟರ್‌ನ್ಯಾಷನಾಲಿಸ್ ವರದಿ ಪ್ರಕಾರ, ದೇಶದಲ್ಲಿ 33.7 ಮಿಲಿಯನ್‌ಗಿಂತ ಹೆಚ್ಚು ಜನರು ತುರ್ತು ಮಾನವೀಯ ನೆರವಿನ ಅಗತ್ಯದಲ್ಲಿದ್ದಾರೆ. ಇದು ಅಂದರೆ “ಪ್ರತಿ ಮೂರು ಜನರಲ್ಲಿ ಇಬ್ಬರು ಜನರು,” ಮತ್ತು “ಕಳೆದ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಎರಡು ಬಾರಿ ಬರಗಾಲ ಘೋಷಿಸಲಾಗಿದೆ.”

ವರ್ಷಗಳ ಸಂಕಟ

ನಿರಂತರ ಹಿಂಸಾಚಾರದಿಂದ ಸೇವೆಗಳು ಮತ್ತು ಉದ್ಯೋಗ ವ್ಯವಸ್ಥೆಗಳು ಕುಸಿದಿದ್ದು, ಸುಮಾರು 70–80% ಆಸ್ಪತ್ರೆಗಳು ಮತ್ತು ಆರೋಗ್ಯ ಸೌಲಭ್ಯಗಳು ಕಾರ್ಯರಹಿತವಾಗಿವೆ. ಇದರ ಪರಿಣಾಮವಾಗಿ, ಸುಡಾನ್‌ನ ಸುಮಾರು 65% ಜನರಿಗೆ ಆರೋಗ್ಯ ಸೇವೆಗೆ ಯಾವುದೇ ಪ್ರವೇಶವಿಲ್ಲ.

ಆರೋಗ್ಯ ಸೇವೆಗಳ ಅಲಭ್ಯತೆಗೆ ಜೊತೆಯಾಗಿಯೇ, ಆಫ್ರಿಕಾದ ಈ ದೇಶದಲ್ಲಿ 21.2 ಮಿಲಿಯನ್‌ಗಿಂತ ಹೆಚ್ಚು ಜನರು ತೀವ್ರ ಆಹಾರ ಅಸುರಕ್ಷತೆಗೆ ಒಳಗಾಗಿದ್ದಾರೆ — ಇದು ಜಗತ್ತಿನ ಅತಿದೊಡ್ಡ ಆಹಾರ ಸಂಕಟಗಳಲ್ಲಿ ಒಂದಾಗಿದೆ. 2023ರಲ್ಲಿ ಸಂಘರ್ಷ ಪ್ರಾರಂಭವಾದ ನಂತರದಿಂದ 15 ಮಿಲಿಯನ್‌ಗಿಂತ ಹೆಚ್ಚು ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದು, ಅವರು ಈಗ ತುಂಬಿಕೊಂಡ ಮತ್ತು ಅಸುರಕ್ಷಿತ ಆಶ್ರಯ ಕೇಂದ್ರಗಳು ಹಾಗೂ ತಾತ್ಕಾಲಿಕ ವಸತಿಗಳಲ್ಲಿ ಬದುಕುತ್ತಿದ್ದಾರೆ, ಅಲ್ಲಿ ಹಸಿವು ಮತ್ತು ರೋಗಗಳು ವ್ಯಾಪಕವಾಗಿವೆ.

“ಸುಡಾನ್‌ನ ಸಂಘರ್ಷದಲ್ಲಿ ಕಂಡುಬರುವ ಕ್ರೂರತೆ ಮತ್ತು ಅಮಾನವೀಯತೆ ಬೆಚ್ಚಿಬೀಳಿಸುವಂತಿದೆ, ಮತ್ತು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಎರಡನೇ ಬಾರಿ ಬರಗಾಲ ಘೋಷಿಸಲಾಗಿದೆ”  ಎಂದು ಕಾರಿಟಾಸ್ ಇಂಟರ್‌ನ್ಯಾಷನಾಲಿಸ್ ಪ್ರಧಾನ ಕಾರ್ಯದರ್ಶಿ ಅಲಿಸ್ಟರ್ ಡಟ್ಟನ್ ಹೇಳಿದ್ದಾರೆ.

ಈ ಸಂಕಟದ ನಡುವೆ, ವಿದೇಶಿ ನೆರವು ಗಂಭೀರವಾಗಿ ಕಡಿತಗೊಂಡಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹಿನ್ನಡೆಯತ್ತ ಕೊಂಡೊಯ್ದಿದೆ. ಇದರ ಪರಿಣಾಮವಾಗಿ, ಸುಡಾನ್‌ನ ಅಗತ್ಯವಿರುವ ಜನರಿಗೆ ತಲುಪಬೇಕಾದ ಮಾನವೀಯ ನೆರವು ಪ್ರಮಾಣ ಮತ್ತು ಪ್ರವೇಶ ಎರಡೂ ಕಡಿಮೆಯಾಗಿದೆ. ನಿಧಿಗಳ ಕೊರತೆಯಿಂದ, ಕುಟುಂಬಗಳು ಆಹಾರ ಪಡೆಯಲು, ಶುದ್ಧ ನೀರು ಸಂಗ್ರಹಿಸಲು ಮತ್ತು ಮೂಲ ಆರೋಗ್ಯ ಸೇವೆಗಳನ್ನು ಪಡೆಯಲು ಸಹಾಯ ಮಾಡುವ ಅನಿವಾರ್ಯ ಕಾರ್ಯಕ್ರಮಗಳು ಸಂಪನ್ಮೂಲವಿಲ್ಲದೆ ನಲುಗುತ್ತಿವೆ.

ನಿರಂತರ ಸಂಘರ್ಷದ ನಡುವೆ, ಮಹಿಳೆಯರ ಮೇಲೆ ಹಿಂಸಾಚಾರ ಹೆಚ್ಚಾಗಿದೆ. ಡಿಸೆಂಬರ್ 2023ರಿಂದ, ಮಹಿಳೆಯರಿಗೆ ಸಂಬಂಧಿಸಿದ ಸೇವೆಗಳ ಬೇಡಿಕೆ 288% ಹೆಚ್ಚಾಗಿದೆ ಎಂದು ಕಾರಿಟಾಸ್ ಇಂಟರ್‌ನ್ಯಾಷನಾಲಿಸ್ ವರದಿ ಮಾಡಿದೆ. ಹಿಂಸೆಯಿಂದ ಬದುಕುಳಿದವರು ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಆಘಾತ ಪರಿಹಾರಕ್ಕೆ ತೀವ್ರವಾಗಿ ಅವಶ್ಯಕತೆಯಲ್ಲಿದ್ದಾರೆ. ಮಹಿಳೆಯರಿಗಾಗಿ ಮಹಿಳೆಯರು ನಡೆಸುವ ಕೆಲವು ಕಾರ್ಯಕ್ರಮಗಳಿದ್ದರೂ, ಇವುಗಳಿಗೆ “ಗಂಭೀರವಾಗಿ ನಿಧಿಯ ಕೊರತೆಯಲ್ಲಿರುವ ಸುಡಾನ್ ಮಾನವೀಯ ನಿಧಿ (SHF) ಯಲ್ಲಿ 2% ಕ್ಕಿಂತ ಕಡಿಮೆ ಮೊತ್ತ ಮಾತ್ರ ಲಭಿಸುತ್ತಿದೆ.”

ಜೀವ ರಕ್ಷಿಸುವ ನೆರವಿನ ತುರ್ತು ಅಗತ್ಯ

ಕಾರಿಟಾಸ್ ಮತ್ತು ಅದರ ಪಾಲುದಾರರು ಜಾಗತಿಕ ನಿಧಿ ಕಡಿತಗಳ ಪರಿಣಾಮವನ್ನು ನೇರವಾಗಿ ಅನುಭವಿಸಿದ್ದಾರೆ. ಹಿಂದಿನ ದಿನಗಳಲ್ಲಿ, ವಿಶ್ವ ಸಂಸ್ಥೆಯ ನಿರಾಶ್ರಿತರ ಪ್ರಾಧಿಕಾರ(UNHCR) ಅನುದಾನದ ಸಹಾಯದಿಂದ, ವೈಟ್ ನೈಲ್ ರಾಜ್ಯದಲ್ಲಿ ಸ್ಥಳಾಂತರಗೊಂಡ ಅರ್ಧ ಮಿಲಿಯನ್ ಜನರಿಗೆ ಸುರಕ್ಷಿತ ಕುಡಿಯುವ ನೀರು, ಸ್ವಚ್ಛತೆ ಮತ್ತು ರಕ್ಷಣಾ ನೆರವು ಒದಗಿಸಲಾಗುತ್ತಿತ್ತು.

ಸುಡಾನ್‌ನಲ್ಲಿನ ಸ್ಥಳೀಯ ಕಾರಿಟಾಸ್ ಪಾಲುದಾರರು “ನಮ್ಮಲ್ಲಿ ಬಹುತೇಕರಿಗೆ ಊಹಿಸಲಾಗದಷ್ಟು ಅಪಾಯ, ನೋವು ಮತ್ತು ಹೆಚ್ಚುತ್ತಿರುವ ಅಗತ್ಯಗಳನ್ನು ಪ್ರತಿದಿನ ಎದುರಿಸುತ್ತಿದ್ದಾರೆ. ಸುಡಾನ್ ಸಾವಿರ ದಿನಗಳ ಯುದ್ಧವನ್ನು ತಲುಪುತ್ತಿರುವ ಈ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಸಮುದಾಯವು ಹಿಂಸಾಚಾರವನ್ನು ಕೊನೆಗಾಣಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಡಟ್ಟನ್ ಅವರು ಒತ್ತಿಹೇಳಿದರು

ಈ ದುಃಖಕರ ಘಟ್ಟದಲ್ಲಿ, ಕಾರಿಟಾಸ್ ಇಂಟರ್‌ನ್ಯಾಷನಾಲಿಸ್ ದೇಶದ ಪರಿಸ್ಥಿತಿ ಮತ್ತು ಅಗತ್ಯವಿರುವ ಜನರಿಗೆ ನೆರವು ಹಾಗೂ ಮೂಲ ಅಗತ್ಯಗಳನ್ನು ಒದಗಿಸುವ ಪ್ರಯತ್ನಗಳತ್ತ ಜಗತ್ತಿನ ಗಮನ ಸೆಳೆಯಲು #KeepEyesOnSudan ಅಭಿಯಾನಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಕಾರಿಟಾಸ್ ಒಂದು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ, ಇತರ ಮಾನವೀಯ ಸಂಸ್ಥೆಗಳ ಸಹಮತದೊಂದಿಗೆ, ಸುಡಾನ್ ಜನರಿಗೆ ಸಹಾಯ ಮಾಡಲು ಸರ್ಕಾರಗಳಿಗೆ ಕೆಲವು ಶಿಫಾರಸುಗಳನ್ನು ನೀಡಿದೆ.

ಅವುಗಳಲ್ಲಿ:

  1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೂಲಕ  ರಾಜತಾಂತ್ರಿಕ ಪ್ರಯತ್ನಗಳನ್ನು ಹೆಚ್ಚಿಸುವುದು.
  2. ನಾಗರಿಕರು, ನೆರವು ಕಾರ್ಯಕರ್ತರು ಮತ್ತು ಸ್ಥಳೀಯ ತುರ್ತು ಪ್ರತಿಕ್ರಿಯಾಕಾರರ ರಕ್ಷಣೆಗೆ ಆದ್ಯತೆ ನೀಡುವುದು.
  3. ದೇಶದಾದ್ಯಂತ ವೇಗವಾಗಿ ಮತ್ತು ಸುರಕ್ಷಿತವಾಗಿ ಮಾನವೀಯ ನೆರವು ತಲುಪಿಸುವುದು.
  4. ವಿಶೇಷವಾಗಿ ಸ್ಥಳೀಯ ನೆರವು ಸಂಸ್ಥೆಗಳಿಗೆ ಹಣಕಾಸು ಸಹಾಯವನ್ನು ಹೆಚ್ಚಿಸುವುದು.
  5. ಮತ್ತು ಸಂಘರ್ಷಕ್ಕೆ ಪ್ರಾದೇಶಿಕ ಮಟ್ಟದ ಪ್ರತಿಕ್ರಿಯೆಯನ್ನು ಉತ್ತೇಜಿಸಿ ಬೆಂಬಲಿಸುವುದು ಸೇರಿವೆ.

ಕಾರಿಟಾಸ್ ಇಂಟರ್‌ನ್ಯಾಷನಾಲಿಸ್ ಮತ್ತು ಇತರ ನೆರವು ಸಂಸ್ಥೆಗಳು ಒತ್ತಿ ಹೇಳುವಂತೆ, “ಸುಡಾನ್‌ನಲ್ಲಿ ಮತ್ತಷ್ಟು ವಿಪತ್ತು ತಪ್ಪಿಸಲು ಅಂತರರಾಷ್ಟ್ರೀಯ ಸಮುದಾಯವು ಈಗಲೇ ಕ್ರಮ ಕೈಗೊಳ್ಳಬೇಕು.”

09 ಜನವರಿ 2026, 21:06