ಹುಡುಕಿ

FILE PHOTO: Injured displaced Sudanese fleeing violence in al-Fashir and receiving treatment by Medecins Sans Frontieres (MSF) in Tawila FILE PHOTO: Injured displaced Sudanese fleeing violence in al-Fashir and receiving treatment by Medecins Sans Frontieres (MSF) in Tawila 

ಸುಡಾನ್‌ನ ಡಾರ್ಫೂರ್‌ನಲ್ಲಿ ಒಂದು ವಾರದ ದಾಳಿಗಳಲ್ಲಿ 100ಕ್ಕೂ ಹೆಚ್ಚು ಮಂದಿ

ಸುಡಾನ್‌ನ ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವಿನ ಘರ್ಷಣೆಯಿಂದ ಡಾರ್ಫೂರ್ ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಕನಿಷ್ಠ 114 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವೈದ್ಯಕೀಯ ಮೂಲಗಳು ತಿಳಿಸಿವೆ. — ಪಿಯರ್‌ಫ್ರಾನ್ಸೆಸ್ಕೊ ಲೊರೆಟೋ

ಸುಡಾನ್‌ನ ಪಶ್ಚಿಮ ಭಾಗದ ಡಾರ್ಫೂರ್ ಪ್ರದೇಶದಲ್ಲಿರುವ ಎರಡು ಪಟ್ಟಣಗಳ ಮೇಲೆ  ಗೆರಿಲ್ಲಾ ಯೋಧರು ಮತ್ತು ಸೇನೆ ನಡೆಸಿದದಾಳಿಗಳಲ್ಲಿ ಕಳೆದ ಒಂದು ವಾರದಲ್ಲಿ 114 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕ್ಷಿಪ್ರ ಬೆಂಬಲ ಪಡೆಗಳು  (RSF) ಪಡೆಗಳು ಕೇರ್ನೊಯಿ ಪಟ್ಟಣದಲ್ಲಿ ನಡೆಸಿದ ದಾಳಿಯಲ್ಲಿ 63 ಮಂದಿ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ, ಸೇನೆಯ ಡ್ರೋನ್ ದಾಳಿಗಳು RSF ನಿಯಂತ್ರಣದಲ್ಲಿರುವ ಅಲ್-ಜುರುಕ್ ಪಟ್ಟಣದಲ್ಲಿ ಶನಿವಾರ ಮಾರುಕಟ್ಟೆ ಹಾಗೂ ನಾಗರಿಕ ಪ್ರದೇಶಗಳ ಮೇಲೆ ನಡೆದಿದ್ದು, ಈ ದಾಳಿಯಲ್ಲಿ 51 ಮಂದಿ ಸಾವನ್ನಪ್ಪಿದ್ದಾರೆ.

2023ರ ಏಪ್ರಿಲ್‌ನಿಂದಲೂ ಸುಡಾನ್ ದೇಶವು ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಅರೆಸೈನಿಕ RSF ಪಡೆಗಳ ನಡುವಿನ ಯುದ್ಧದಲ್ಲಿ ಸಿಲುಕಿಕೊಂಡಿದೆ. ಅಕ್ಟೋಬರ್‌ನಲ್ಲಿ RSF ಪಡೆಗಳು ಡಾರ್ಫೂರ್‌ನಲ್ಲಿದ್ದ ಸೇನೆಯ ಕೊನೆಯ ಪ್ರಮುಖ ಕಚೇರಿಯನ್ನು ವಶಪಡಿಸಿಕೊಂಡಿವೆ.

ಸೇನೆಯೂ ಮತ್ತು RSF ಪಡೆಗಳೂ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿರುವ ಆರೋಪ ಎದುರಿಸುತ್ತಿವೆ. ಈ ಯುದ್ಧವನ್ನು ವಿಶ್ವ ಸಂಸ್ಥೆ “ಅತ್ಯಾಚಾರಗಳ ಯುದ್ಧ” ಎಂದು ಕರೆಯುತ್ತಿದೆ.

ಈ ಪ್ರದೇಶಕ್ಕೆ ಮಾಧ್ಯಮಗಳ ಪ್ರವೇಶ ಬಹುತೇಕ ಅಸಾಧ್ಯವಾಗಿದೆ. ಸ್ಥಳೀಯ ಸ್ವಯಂಸೇವಕರು ಮತ್ತು ಆರೋಗ್ಯ ಕಾರ್ಯಕರ್ತರು ಉಪಗ್ರಹ ಆಧಾರಿತ ಅಂತರ್ಜಾಲ ಬಳಸಿ ಜಗತ್ತಿಗೆ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಯುದ್ಧ ಆರಂಭವಾದಾಗಿನಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದು, ಕೋಟ್ಯಂತರ ಮಂದಿ ತಮ್ಮ ಮನೆಗಳನ್ನು ತೊರೆದು ಓಡಿಹೋಗಿದ್ದಾರೆ.

ಡಾರ್ಫೂರ್ ಪ್ರದೇಶವೇ ಈ ಹೋರಾಟಗಳಿಂದ ಅತಿಯಾಗಿ ತತ್ತರಿಸಿರುವ ಪ್ರದೇಶವಾಗಿದೆ.

ಮಾನವೀಯ ಅವ್ಯವಸ್ಥೆಯ ಬಗ್ಗೆ ವಿಶ್ವ ಸಂಸ್ಥೆಯ ಎಚ್ಚರಿಕೆ

ಉತ್ತರ ಡಾರ್ಫೂರ್‌ನಲ್ಲಿ ನಡೆಸಿದ ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಸಮೀಕ್ಷೆಯಲ್ಲಿ ಮಕ್ಕಳ ಅಪೌಷ್ಟಿಕತೆ ಅತ್ಯಧಿಕ ಮಟ್ಟಕ್ಕೆ ತಲುಪಿರುವುದು ಕಂಡುಬಂದಿದೆ.

ಮಾನವೀಯ ನೆರವಿಗೆ ಸುರಕ್ಷಿತ ಮಾರ್ಗಗಳಿಲ್ಲದಿದ್ದರೆ, ಮಕ್ಕಳಿಗೆ ತಡೆಯಬಹುದಾದ ಕಾರಣಗಳಿಂದ ಸಾವಿನ ಅಪಾಯವಿದೆ ಎಂದು ಸಂಸ್ಥೆ ಎಚ್ಚರಿಸಿದೆ.

ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದಂತೆ, ಹೆಚ್ಚು ಹೆಚ್ಚು ಸುಡಾನ್ ನಾಗರಿಕರು ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗುತ್ತಿದ್ದಾರೆ.

ಡಿಸೆಂಬರ್ ಮಧ್ಯದಿಂದಲೂ ಉತ್ತರ ಮತ್ತು ದಕ್ಷಿಣ ಕೋರ್ಡೋಫಾನ್ ರಾಜ್ಯಗಳಿಂದ ಸುಮಾರು 11,000 ಮಂದಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿದೆ.

ಇವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಮಹಿಳೆಯರು ವಿವಿಧ ರೀತಿಯ ಹಿಂಸೆಯನ್ನು ಅನುಭವಿಸಿರುವುದರಿಂದ ದೈಹಿಕವಾಗಿ ದುರ್ಬಲರಾಗಿದ್ದು, ಮಾನಸಿಕವಾಗಿ ಅತೀವವಾಗಿ ಅಲುಗಾಡಿದ್ದಾರೆ. ಕೆಲ ಮಕ್ಕಳು ಒಂಟಿಯಾಗಿದ್ದು, ಇನ್ನು ಕೆಲವರು ಅಂಗವೈಕಲ್ಯ ಹೊಂದಿದ್ದಾರೆ.

ಈ ಯುದ್ಧದಿಂದಾಗಿ 1.1 ಕೋಟಿಗೂ ಹೆಚ್ಚು ನಾಗರಿಕರು ದೇಶದ ಒಳಗಡೆ ಅಥವಾ ಪಕ್ಕದ ದೇಶಗಳಿಗೆ ಓಡಿ ಹೋಗಬೇಕಾಗಿದೆ. ಅವರಲ್ಲಿ ಹಲವರು ಆಹಾರ, ಔಷಧಿ ಮತ್ತು ಶುದ್ಧ ನೀರಿನ ತೀವ್ರ ಕೊರತೆಯಿರುವ ಬಡ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

05 ಜನವರಿ 2026, 20:18