ನಿರ್ಲಕ್ಷ್ಯ ಮತ್ತು ನಿರೀಕ್ಷೆಯ ಅಂಚಿನಲ್ಲಿ ದಾರ್ಫೂರ್‌ನ ಮಕ್ಕಳು
ಲೇಖಕರು: ಪಿಯೆರ್ ಫ್ರಾನ್ಸೆಸ್ಕಾ ಲೊರೆಟೊ
ಸುಡಾನಿನ ದಾರ್ಫೂರ್ ಪ್ರದೇಶದಲ್ಲಿ ಹಿಂಸಾತ್ಮಕ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕೇವಲ ಒಬ್ಬ ಮಗುವಿನವರೆಗೂ ಸಹಾಯ ತಲುಪುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ(UNICEF) ಎಚ್ಚರಿಸಿದೆ.
ಅಸ್ಥಿರ ಪರಿಸ್ಥಿತಿಯಲ್ಲಿ ಮರಳುಮಯ ರಸ್ತೆಗಳ ಮೂಲಕ ಪ್ರಯಾಣಿಸಿ, ಅನೇಕ ಅನುಮತಿಗಳು ಹಾಗೂ ದಿನಗಳ ಕಾಲ ನಡೆದ ಮಾತುಕತೆಗಳ ನಂತರ ಮಾತ್ರ ಒಬ್ಬ ಮಗುವಿನ ಬಳಿಗೆ ತಲುಪಲು ಸಾಧ್ಯವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ(UNICEF) ತಿಳಿಸಿದೆ.
ಪ್ರದೇಶಕ್ಕೆ 10 ದಿನಗಳ ಕಾಲ ಭೇಟಿ ನೀಡಿ ಹಿಂತಿರುಗಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ(UNICEF) ಸಂವಹನ ವಿಭಾಗದ ಮುಖ್ಯಸ್ಥೆ ಇವಾ ಹಿಂಡ್ಸ್, ಮಾನವೀಯ ಸಹಾಯ ಕಾರ್ಯ ಅತ್ಯಂತ ಸೂಕ್ಷ್ಮ ಮತ್ತು ಜಟಿಲವಾಗಿದೆ ಎಂದು ವಿವರಿಸಿದರು. “ನಾನು ಕಂಡದ್ದು ಇದುವರೆಗೆ ಯಾವುದಕ್ಕೂ ಹೋಲಿಕೆ ಆಗದು. ಸ್ಥಳಾಂತರದ ಪ್ರಮಾಣ, ಸಂಘರ್ಷದ ವಿಭಜನೆ ಹಾಗೂ ಅಗತ್ಯ ಸೇವೆಗಳ ಸಂಪೂರ್ಣ ಕುಸಿತ—ಇವೆಲ್ಲವೂ ಪ್ರತಿಯೊಬ್ಬ ಮಗುವನ್ನು ಅಂಚಿನ ಬದುಕಿನಲ್ಲೇ ನಿಲ್ಲಿಸಿರುವ ಪರಿಸ್ಥಿತಿಯನ್ನು ನಿರ್ಮಿಸಿವೆ,” ಎಂದು ಅವರು ಹೇಳಿದರು.
ಸುಮಾರು ಮೂರು ವರ್ಷಗಳಿಂದ ಪರಸ್ಪರ ಸಂಘರ್ಷದಲ್ಲಿರುವ ಪಕ್ಷಗಳು ದೇಶದ ನಿಯಂತ್ರಣಕ್ಕಾಗಿ ಹೋರಾಡುತ್ತಿವೆ. 2023ರ ಏಪ್ರಿಲ್‌ನಿಂದ ಆರಂಭವಾದ ಈ ಅಂತರ್ಯುದ್ಧವು ಸುಡಾನನ್ನು ಭೀಕರ ಸಂಕಷ್ಟಕ್ಕೆ ತಳ್ಳಿದ್ದು, ಪಕ್ಕದ ದೇಶಗಳ ಮೇಲೂ ಪರಿಣಾಮ ಬೀರಿದೆ.
ಸುಡಾನ್ ಸಶಸ್ತ್ರ ಪಡೆಗಳು (SAF) ಮತ್ತು ಕ್ಷಿಪ್ರ ಬೆಂಬಲ ಪಡೆ (RSF) ನಡುವಿನ ಸಂಘರ್ಷದಲ್ಲಿ ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಒಂದು ಕೋಟಿ ಜನರು ಸ್ಥಳಾಂತರಗೊಂಡಿದ್ದಾರೆ. ಇದರ ಪರಿಣಾಮವಾಗಿ ಭಾರೀ ಆಹಾರ ಕೊರತೆ ಉಂಟಾಗಿದೆ.
ತುರ್ತು ಪರಿಸ್ಥಿತಿಗಳಲ್ಲಿ ದೀರ್ಘ ಅನುಭವ ಹೊಂದಿದ್ದರೂ, ತವಿಲಾ ಪ್ರದೇಶದಲ್ಲಿನ ಸ್ಥಿತಿಗತಿಗಳನ್ನು ಕಂಡು ತಾನು ಬೆಚ್ಚಿಬಿದ್ದೆ ಎಂದು ಇವಾ ಹಿಂಡ್ಸ್ ಹೇಳಿದರು. ಅಲ್ಲಿನ ಜನರು ಕಡ್ಡಿ, ಹುಲ್ಲು ಮತ್ತು ಪ್ಲಾಸ್ಟಿಕ್ ಶೀಟುಗಳಿಂದಲೇ ಸಂಪೂರ್ಣ ನಗರವನ್ನೇ ನಿರ್ಮಿಸಿಕೊಂಡಿದ್ದಾರೆ. “ಅಗತ್ಯ, ಭಯ ಮತ್ತು ನಿರಾಶೆಯಿಂದ ಸಂಪೂರ್ಣ ನಗರವೊಂದು ಬೇರುಸಮೇತ ಸ್ಥಳಾಂತರಗೊಂಡು ಮರುನಿರ್ಮಾಣಗೊಂಡಂತೆ ಅನಿಸಿತು,” ಎಂದು ಅವರು ಹೇಳಿದರು. ಅಲ್ಲಿ ಸುಮಾರು ಐದು ಲಕ್ಷದಿಂದ ಆರು ಲಕ್ಷ ಜನರು ಆಶ್ರಯ ಪಡೆದಿದ್ದು, “ಆ ವಿಶಾಲ ತಾತ್ಕಾಲಿಕ ವಸತಿ ಪ್ರದೇಶದ ಮಧ್ಯೆ ನಿಂತಾಗ ಕರುಳು ಹಿಸುಕಿದಂತಾಗುತ್ತದೆ,” ಎಂದು ಹೇಳಿದರು.
“ಜಗತ್ತಿನ ಅತಿದೊಡ್ಡ ಮಾನವೀಯ ತುರ್ತು ಪರಿಸ್ಥಿತಿ”
ಈ ಗಂಭೀರ ಪರಿಸ್ಥಿತಿಗಳ ನಡುವೆಯೇ, ಕೇವಲ ಎರಡು ವಾರಗಳ ಅವಧಿಯಲ್ಲಿ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ(UNICEF) ಮತ್ತು ಅದರ ಪಾಲುದಾರರು 1.4 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಿದ್ದು, ಸಾವಿರಾರು ಮಕ್ಕಳಿಗೆ ರೋಗ ಹಾಗೂ ಅಪೌಷ್ಟಿಕತೆಗಾಗಿ ಚಿಕಿತ್ಸೆ ಒದಗಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.
ಅದೇ ವೇಳೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಪುನಃಸ್ಥಾಪಿಸಿ, ತಾತ್ಕಾಲಿಕ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಿ, ಆಹಾರ ಹಾಗೂ ಮಾನಸಿಕ ಬೆಂಬಲವನ್ನೂ ಒದಗಿಸಲಾಗಿದೆ.
“ಇದು ಅತ್ಯಂತ ಶ್ರಮದಾಯಕ ಮತ್ತು ಅಸ್ಥಿರ ಕೆಲಸ—ಒಂದು ನೆರವು ಬೆಂಗಾವಲು ಪಡೆ, ಒಂದು ಆರೋಗ್ಯ ಕೇಂದ್ರ, ಒಂದು ತರಗತಿ ಎಂಬಂತೆ ನೆರವು ತಲುಪಿಸಲಾಗುತ್ತಿದೆ. ಆದರೆ ದಾರ್ಫೂರ್‌ನ ಮಕ್ಕಳಿಗೆ ಇದು ನಿರ್ಲಕ್ಷ್ಯ ಮತ್ತು ರಕ್ಷಣೆಯ ನಡುವಿನ ಸೂಕ್ಷ್ಮ ಗಡಿ,” ಎಂದು ಅವರು ಹೇಳಿದರು.
ಮಹಿಳೆಯರು ಮತ್ತು ಬಾಲಕಿಯರಿಗಾಗಿ ಸ್ಥಾಪಿಸಲಾದ ಕೇಂದ್ರವೊಂದರಲ್ಲಿ ತಾಯಂದಿರು ತಮ್ಮ ಸಂಕಷ್ಟಗಳನ್ನು ಹಂಚಿಕೊಂಡರು. ಆಹಾರ, ಹಾಸಿಗೆ, ಮಕ್ಕಳಿಗೆ ಬಿಸಿಬಟ್ಟೆಗಳ ಕೊರತೆ ಅವರ ಪ್ರಮುಖ ಚಿಂತೆ. “ಮಕ್ಕಳು ಚಳಿಯಿಂದ ನಡುಗುತ್ತಿದ್ದಾರೆ. ಅವರನ್ನು ಮುಚ್ಚಲು ನಮ್ಮ ಬಳಿ ಏನೂ ಇಲ್ಲ,” ಎಂದು ತಮ್ಮ ಕಷ್ಟವನ್ನು ತೋಡಿಕೊಂಡರು.
ತಾವು ಕಂಡದ್ದನ್ನು ನೆನಪಿಸಿಕೊಂಡು ಮಾತನಾಡಿದ ಇವಾ ಹಿಂಡ್ಸ್, “ಸುಡಾನ್ ಜಗತ್ತಿನ ಅತಿದೊಡ್ಡ ಮಾನವೀಯ ತುರ್ತು ಪರಿಸ್ಥಿತಿ. ಆದರೆ ಬಹಳಷ್ಟು ಬೆಳಕಿಗೆ ಬಾರದೆ ಅಲ್ಲಿನ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಸೀಮಿತ ಪ್ರವೇಶ, ಸಂಕೀರ್ಣ ಸಂಘರ್ಷ ಮತ್ತು ಜಾಗತಿಕ ಸಂಕಟಗಳ ನಡುವಿನ ಸ್ಪರ್ಧೆಯಿಂದ ಲಕ್ಷಾಂತರ ಮಕ್ಕಳ ನೋವು ಗಮನಕ್ಕೆ ಬರುತ್ತಿಲ್ಲ,” ಎಂದು ಹೇಳಿದರು.
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ(UNICEF) ಸಂವಹನ ಮುಖ್ಯಸ್ಥೆ, “ಈ ಅಮಾನವೀಯ ಪರಿಸ್ಥಿತಿ ಎಲ್ಲೆ ಮೀರಿ ಬೆಳೆಯುತ್ತಿದೆ ಎಂದು ಎಚ್ಚರಿಸಿ. ಸುಡಾನ್‌ನ ಮಕ್ಕಳಿಗೆ ತಕ್ಷಣವೇ ಅಂತರರಾಷ್ಟ್ರೀಯ ಗಮನ ಮತ್ತು ದೃಢ ಕ್ರಮ ಅಗತ್ಯ. ಇಲ್ಲವಾದರೆ ಅತೀ ದುರ್ಬಲ ಮಕ್ಕಳ ಮೇಲಿನ ಭೀಕರ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ,” ಎಂದು ಅವರು ಎಚ್ಚರಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).