ಹುಡುಕಿ

Displaced Palestinian man sits outside his tent in Gaza Displaced Palestinian man sits outside his tent in Gaza  (DAWOUD ABU ALKAS)

ಗಾಜಾ ಯುದ್ಧ ವಿರಾಮದಿಂದ ನಿರೀಕ್ಷೆ ಮೂಡಿದರೂ ಮಕ್ಕಳ ಸಾವು ಮುಂದುವರಿಕೆ: ವಿಶ್ವಸಂಸ್ಥೆ

ಯುದ್ಧ ವಿರಾಮ ಜಾರಿಯಾದ ನಂತರ ಗಾಜಾಕ್ಕೆ ಮಾನವೀಯ ನೆರವು ಸರಬರಾಜು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಆದರೂ, ಇತ್ತೀಚಿನ ದಿನಗಳಲ್ಲಿ 100 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 1 ಲಕ್ಷ ಮಕ್ಕಳು ತೀವ್ರ ಪೋಷಕಾಂಶ ಕೊರತೆಯಿಂದ ಬಳಲುತ್ತಿದ್ದು ನಿರಂತರ ಚಿಕಿತ್ಸೆಗೆ ಅವಶ್ಯಕತೆ ಇದೆ ಎಂದು ಎಚ್ಚರಿಸಿದೆ.

ಲೇಖಕರು:ಪಿಯೆರ್ಫ್ರಾನ್ಸೆಸ್ಕಾ ಲೊರೆಟೊ 

ಗಾಜಾದಲ್ಲಿ ಯುದ್ಧ ವಿರಾಮದ ಫಲವಾಗಿ ದಶಲಕ್ಷಕ್ಕೂ ಹೆಚ್ಚು ಮಕ್ಕಳು ಉತ್ತಮ ಆಹಾರ ಲಭ್ಯತೆಯಿಂದ ಲಾಭ ಪಡೆಯುತ್ತಿದ್ದಾರೆ. ಆದರೂ ತುರ್ತು ಮಾನವೀಯ ನೆರವು ಇನ್ನೂ ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ವಿಶ್ವಸಂಸ್ಥೆಯ ಮುಖ್ಯಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ ಉಪ ಕಾರ್ಯನಿರ್ವಾಹಕ ನಿರ್ದೇಶಕ ಟೆಡ್ ಚೈಬನ್, ಗಾಜಾ ಹಾಗೂ ಆಕ್ರಮಿತ ವೆಸ್ಟ್ ಬ್ಯಾಂಕ್‌ಗೆ ಏಳು ದಿನಗಳ ಭೇಟಿ ನೀಡಿದ ಬಳಿಕ, “ಈ ಭೇಟಿ ನಂತರ ನಾನು ನಿರೀಕ್ಷೆಯ ಜೊತೆಗೆ ಚಿಂತೆಯನ್ನೂ ವ್ಯಕ್ತಪಡಿಸುತ್ತಿದ್ದೇನೆ” ಎಂದು ಹೇಳಿದರು. ಈ ಭೇಟಿಯಲ್ಲಿ   ವಿಶ್ವ ಆಹಾರ ಕಾರ್ಯಕ್ರಮದ (WFP) ಉಪ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಲ್ ಸ್ಕೌ ಸಹ ಪಾಲ್ಗೊಂಡಿದ್ದರು.

“ಆಹಾರ ಭದ್ರತೆ ಪರಿಸ್ಥಿತಿ ಸುಧಾರಿಸಿದೆ ಮತ್ತು ಹಸಿವು ಸಂಕಷ್ಟವನ್ನು ಹಿಮ್ಮೆಟ್ಟಿಸಲಾಗಿದೆ,” ಎಂದು ಚೈಬನ್ ಹೇಳಿದರು. ಸ್ಕೌ ಅವರು, ಅವರು ಭೇಟಿಯಾದ ಹೆಚ್ಚಿನ ಕುಟುಂಬಗಳು “ದಿನಕ್ಕೆ ಕನಿಷ್ಠ ಒಂದೇನಾದರೂ ಊಟ ಮಾಡುತ್ತಿದ್ದು, ಕೆಲವೊಮ್ಮೆ ಎರಡು ಬಾರಿ ಊಟ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಪ್ರಮುಖ ಹೋರಾಟಗಳು ನಿಂತ ಬಳಿಕ ನೆರವು ಗಣನೀಯವಾಗಿ ಹೆಚ್ಚಾಗಿದೆ. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ ಮತ್ತು ಅದರ ಪಾಲುದಾರರ ನೆರವಿನಿಂದ 16 ಲಕ್ಷಕ್ಕೂ ಹೆಚ್ಚು ಜನರಿಗೆ ಈಗ ಶುದ್ಧ ಕುಡಿಯುವ ನೀರಿನ ಲಭ್ಯತೆ ಇದೆ. 7 ಲಕ್ಷ ಜನರಿಗೆ ಹಾಸಿಗೆ ಕಂಬಳಿಗಳು ಹಾಗೂ ಚಳಿಗಾಲದ ಬಟ್ಟೆಗಳನ್ನು ವಿತರಿಸಲಾಗಿದೆ.

ಇದೇ ವೇಳೆ, ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಮಕ್ಕಳ ತೀವ್ರ ಚಿಕಿತ್ಸಾ ಘಟಕವನ್ನು ಪುನಃ ಕಾರ್ಯನಿರ್ವಹಣೆಗೆ ತರಲಾಗಿದೆ. ವಿಶ್ವ ಆಹಾರ ಕಾರ್ಯಕ್ರಮವು ಪ್ರತಿಮಾಸವೂ ದಶಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುತ್ತಿದೆ.

ಪ್ರತಿದಿನ ಬಿಸಿ ಆಹಾರ ಒದಗಿಸಲಾಗುತ್ತಿದ್ದು, ತಾತ್ಕಾಲಿಕ ಶಿಕ್ಷಣ ಕೇಂದ್ರಗಳಲ್ಲಿರುವ ಲಕ್ಷಾಂತರ ಮಕ್ಕಳಿಗೆ ಶಾಲಾ ಆಹಾರ ನೀಡಲಾಗುತ್ತಿದೆ. ಇತರೆ ಮಾನವೀಯ ಸಂಸ್ಥೆಗಳು ಅಗತ್ಯ ಆಶ್ರಯ ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಿವೆ. ಇದರ ಜೊತೆಗೆ, ವಿಸ್ತರಿತ ನಗದು ಸಹಾಯ ಯೋಜನೆಗಳ ಮೂಲಕ ದಶಲಕ್ಷಾಂತರ ದುರ್ಬಲ ಕುಟುಂಬಗಳಿಗೆ ಈಗ ಬೆಂಬಲ ದೊರೆಯುತ್ತಿದೆ.

ಪರಿಸ್ಥಿತಿ ಇನ್ನೂ ಗಂಭೀರವಾಗಿದೆ

ಈ ಪ್ರಗತಿಗಳ ನಡುವೆಯೂ ಗಾಜಾದಲ್ಲಿ ಅನೇಕ ಕುಟುಂಬಗಳ ಬದುಕು ಇನ್ನೂ ಕಠಿಣವಾಗಿಯೇ ಮುಂದುವರಿದಿದೆ. ಚಳಿಗಾಲದ ಬಿರುಗಾಳಿಗಳು ಪ್ರದೇಶವನ್ನು ತತ್ತರಿಸುತ್ತಿರುವುದರಿಂದ ಅನೇಕರು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಜೀವನ ನಡೆಸುತ್ತಿದ್ದಾರೆ.

13 ಲಕ್ಷ ಜನರು ಇನ್ನೂ ನಿರಾಶ್ರಿತರಾಗಿದ್ದು, ಸಮರ್ಪಕ ವಸತಿ ಅವಶ್ಯಕವಾಗಿದೆ ಎಂದು ಯುಎನ್ ಅಧಿಕಾರಿಗಳು ಎಚ್ಚರಿಸಿದ್ದು, ಮಾನವೀಯ ಸಂಕಷ್ಟ ಮುಂದುವರಿದಿದೆ ಎಂದು ಹೇಳಿದ್ದಾರೆ.

ಯುದ್ಧ ವಿರಾಮದ ಬಳಿಕ ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 1 ಲಕ್ಷ ಮಕ್ಕಳು ಪೋಷಣಾಹೀನತೆಯಿಂದ ಬಳಲುತ್ತಿದ್ದು ನಿರಂತರ ಚಿಕಿತ್ಸೆಗೆ ಅವಶ್ಯಕತೆ ಇದೆ. ಚಳಿಗಾಲ ಆರಂಭವಾದ ಬಳಿಕ ಲಘೂಷ್ಣತೆಯಿಂದ(ಹೈಪೋಥರ್ಮಿಯಾದಿಂದ) ಕನಿಷ್ಠ 10 ಮಕ್ಕಳು ಮೃತಪಟ್ಟಿದ್ದಾರೆ.

ಈ ಭಾರೀ ನಾಶನಷ್ಟದ ನಡುವೆಯೂ, ಮಕ್ಕಳು ಮತ್ತೆ ವಿದ್ಯಾಭ್ಯಾಸ ಆರಂಭಿಸುವುದು ಹಾಗೂ ಕುಟುಂಬಗಳು ಸಹಜ ಜೀವನವನ್ನು ಪುನಃ ಸ್ಥಾಪಿಸಲು ಯತ್ನಿಸುವಂತಹ ಸ್ಥೈರ್ಯದ ಉದಾಹರಣೆಗಳಿವೆ ಎಂದು ವಿಶ್ವಸಂಸ್ಥೆಯ  ಅಧಿಕಾರಿಗಳು ಗಮನಸೆಳೆದರು.

ಮುಂದಿನ ಪ್ರಗತಿಗೆ ಯುದ್ಧ ಸ್ಥಗಿತವನ್ನು ಕಾಪಾಡುವುದು ಮತ್ತು ಮಾನವೀಯ ಕಾರ್ಯಕರ್ತರಿಗೆ ನಿರಂತರ ಪ್ರವೇಶವನ್ನು ಖಚಿತಪಡಿಸುವುದೇ ಪ್ರಮುಖ ಅಂಶಗಳೆಂದು ಅವರು ಹೇಳಿದರು. ಇದಕ್ಕಾಗಿ ಹಲವು ಗಡಿ ದ್ವಾರಗಳನ್ನು ತೆರೆಯುವುದು ಹಾಗೂ ಅವುಗಳ ನಿರಂತರ ಕಾರ್ಯಾಚರಣೆ ಅಗತ್ಯವಾಗಿದೆ.

“ಗಾಜಾ ಮತ್ತು ಪ್ಯಾಲೆಸ್ತೀನ್ ರಾಜ್ಯದ ಮಕ್ಕಳು—ಹಿಂಸಾಚಾರ ಎದುರಿಸುತ್ತಿರುವ ವೆಸ್ಟ್ ಬ್ಯಾಂಕ್‌ನ ಮಕ್ಕಳೂ ಸೇರಿದಂತೆ—ಸಹಾನುಭೂತಿ ಕೇಳುತ್ತಿಲ್ಲ. ಅವರಿಗೆ ಈಗಲೇ ತೀರ್ಮಾನಗಳು ಬೇಕು: ಉಷ್ಣತೆ, ಭದ್ರತೆ, ಆಹಾರ, ಶಿಕ್ಷಣ ಮತ್ತು ಭವಿಷ್ಯ ನೀಡುವ ತೀರ್ಮಾನಗಳು,” ಎಂದು ಟೆಡ್ ಚೈಬನ್ ಹೇಳಿದರು. ಗಾಜಾದ ಮಕ್ಕಳ ಭವಿಷ್ಯದ ದಿಕ್ಕನ್ನು “ಬದಲಿಸುವ ಅವಕಾಶವನ್ನು” ಅಂತಾರಾಷ್ಟ್ರೀಯ ಸಮುದಾಯ ಬಳಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

27 ಜನವರಿ 2026, 18:42