ಹುಡುಕಿ

2026.01.19 premio zayed 2026 2026.01.19 premio zayed 2026 

ಅರ್ಮೇನಿಯಾ–ಅಜರ್ಬೈಜಾನ್ ಶಾಂತಿ ಒಪ್ಪಂದಕ್ಕೆ 2026ರ ‘ಝಾಯೆದ್’ ಪ್ರಶಸ್ತಿ

2026ರ ಅಂತರರಾಷ್ಟ್ರೀಯ ಝಾಯೆದ್ ಮಾನವ ಸಹೋದರತ್ವ ಪ್ರಶಸ್ತಿಯನ್ನು ಅರ್ಮೇನಿಯಾ–ಅಜರ್ಬೈಜಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಹಾಗೂ ಅಫ್ಘಾನ್ ಶಿಕ್ಷಣ ಹೋರಾಟಗಾರ್ತಿ ಝರ್ಖಾ ಯಾಫ್ತಾಲಿ ಅವರಿಗೆ ಪ್ರದಾನಿಸಲಾಗಿದೆ. ವ್ಯಾಟಿಕನ್ ವರದಿ

ಮಾನವ ಸಹೋದರತ್ವಕ್ಕಾಗಿ ನೀಡಲಾಗುವ 2026ರ ಝಾಯೆದ್ ಪ್ರಶಸ್ತಿ ವಿಜೇತರನ್ನು ಜನವರಿ 19ರಂದು ಅಧಿಕೃತವಾಗಿ ಘೋಷಿಸಲಾಯಿತು. ಪ್ರಕಟಣೆಯ ಪ್ರಕಾರ, ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 4ರಂದು—ಅಂದರೆ ಅಂತರರಾಷ್ಟ್ರೀಯ ಮಾನವ ಸಹೋದರತ್ವ ದಿನದಂದು—ಅಬುಧಾಬಿಯ ‘ಫೌಂಡರ್’ಸ್ ಮೆಮೋರಿಯಲ್’ನಲ್ಲಿ ನಡೆಯಲಿದೆ.

ಈ ಬಾರಿ ಪ್ರಶಸ್ತಿಯನ್ನು ಪಡೆದವರ ಪಟ್ಟಿಯಲ್ಲಿ, ಅರ್ಮೇನಿಯಾ ಗಣರಾಜ್ಯ ಮತ್ತು ಅಜರ್ಬೈಜಾನ್ ಗಣರಾಜ್ಯಗಳ ನಿಯೋಗಗಳು ಪ್ರಮುಖವಾಗಿವೆ. ಇವುಗಳು 2025ರ ಆಗಸ್ಟ್ 8ರಂದು, ಅಮೆರಿಕಾದಲ್ಲಿ, ಎರಡೂ ದೇಶಗಳ ನಡುವೆ ನಡೆದ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರ ಜೊತೆಗೆ, ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ದೀರ್ಘಕಾಲದಿಂದ ಹೋರಾಡುತ್ತಿರುವ ಝರ್ಖಾ ಯಾಫ್ತಾಲಿ ಅವರಿಗೂ ಈ ಗೌರವ ಲಭಿಸಿದೆ.

ಇದು ಕಾಕಸಸ್ ಪ್ರದೇಶ ಹಾಗೂ ಅಫ್ಘಾನಿಸ್ತಾನದಿಂದ ಬಂದ ವಿಜೇತರನ್ನು ಅಂತರರಾಷ್ಟ್ರೀಯ ಸಮಿತಿ ಗೌರವಿಸುವ ಮೊದಲ ಸಂದರ್ಭ ಎಂಬುದು ಗಮನಾರ್ಹ.

ಶಾಂತಿ: ಒಂದೇ ಕ್ಷಣದ ಘೋಷಣೆ ಅಲ್ಲ, ನಿರಂತರ ಪ್ರಯಾಣ

ಕಾಕಸಸ್‌ನ ಈ ಎರಡು ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಗೌರವಿಸುವ ನಿರ್ಧಾರವು, ಪ್ರಕಟಣೆಯ ಪ್ರಕಾರ, ಎರಡೂ ರಾಷ್ಟ್ರಗಳು ಕೈಗೊಂಡಿರುವ “ಶಾಂತಿ, ಸಂವಾದ, ಸಾಮಾನ್ಯೀಕರಣ ಮತ್ತು ಸಂಘರ್ಷ ಪರಿಹಾರದ ಪ್ರಕ್ರಿಯೆ*ಗೆ ಮಾನ್ಯತೆ ನೀಡುತ್ತದೆ. ಜೊತೆಗೆ, ಸಮ್ಮಿಲನ (reconciliation) ಎಂಬುದು ಒಂದೇ ಒಂದು ಕ್ರಮವಲ್ಲ, ಬದಲಾಗಿ ಅದು ನಿರಂತರವಾಗಿ ಸಾಗುವ ಪ್ರಯಾಣ ಎಂಬುದನ್ನು ಅದು ಸ್ಪಷ್ಟವಾಗಿ ಒತ್ತಿ ಹೇಳುತ್ತದೆ.

ಈ ಒಪ್ಪಂದವನ್ನು, ಕಾಕಸಸ್ ಪ್ರದೇಶದಲ್ಲಿ ದಶಕಗಳಿಂದ ಮುಂದುವರೆದಿದ್ದ ಸಂಘರ್ಷ ಮತ್ತು ಮಾನವೀಯ ಸಂಕಟಗಳಿಗೆ ತೆರೆ ಎಳೆಯುವ ಉದ್ದೇಶದೊಂದಿಗೆ, ದೂರದೃಷ್ಟಿಯ ನಾಯಕತ್ವದಿಂದ ಮಾರ್ಗದರ್ಶಿತವಾದ ಐತಿಹಾಸಿಕ ನಿರ್ಧಾರದ ಫಲಿತಾಂಶ ಎಂದು ವಿವರಿಸಲಾಗಿದೆ.

ಅರ್ಮೇನಿಯಾದ ಪ್ರಧಾನಮಂತ್ರಿ ನಿಕೋಲ್ ಪಾಶಿನ್ಯಾನ್ ಅವರು ಈ ಪ್ರಶಸ್ತಿಯನ್ನು “ಮಹಾ ಗೌರವ” ಎಂದು ಬಣ್ಣಿಸಿ, ಈ ಐತಿಹಾಸಿಕ ಒಪ್ಪಂದಕ್ಕೆ ಬೆಂಬಲವಾಗಿ ನಡೆದ ಪ್ರಯತ್ನಗಳಿಗೆ ದೊರೆತ ಮಾನ್ಯತೆ ಎಂದು ಹೇಳಿದರು.

ಅದೇ ರೀತಿ, ಅಜರ್ಬೈಜಾನದ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಕೂಡ ಪ್ರಶಸ್ತಿಯ ಮಹತ್ವವನ್ನು ಒತ್ತಿ ಹೇಳುತ್ತಾ, ಇದು (UAE)ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸ್ಥಾಪಕರಾದ ಶೇಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಹೆಸರನ್ನು ಹೊತ್ತಿರುವುದಾಗಿ ಸೂಚಿಸಿದರು. ಜೊತೆಗೆ, ಈ ಪ್ರಶಸ್ತಿಗೆ ಪೂಜ್ಯ ಜಗದ್ಗುರುಗಳಾದ 14ನೆಯ ಲಿಯೋ ಮತ್ತು ಅಲ್-ಅಝರ್‌ನ ಮಹಾ ಇಮಾಮ್ ಅಹ್ಮದ್ ಅಲ್-ತಯೆಬ್ ಅವರ ಬೆಂಬಲವಿದೆ ಎಂಬುದನ್ನೂ ಅವರು ಗಮನಕ್ಕೆ ತಂದರು.

ಅಫ್ಘಾನ್ ಬಾಲಕಿಯರ ಪರವಾಗಿ ಧ್ವನಿಯಾದ ಝರ್ಖಾ ಯಾಫ್ತಾಲಿ

ಅಧಿಕೃತ ಪ್ರಕಟಣೆಯಲ್ಲಿ ಝರ್ಖಾ ಯಾಫ್ತಾಲಿ ಅವರನ್ನು, “ಮಹಿಳೆಯರು ಮತ್ತು ಮಕ್ಕಳ ಶಿಕ್ಷಣ ಹಕ್ಕನ್ನು ಕಾಪಾಡಲು ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿರುವ ಧೈರ್ಯಶಾಲಿ ಮಹಿಳೆ” ಎಂದು ವರ್ಣಿಸಲಾಗಿದೆ.

ಅವರ ಕಾರ್ಯದ ಮೂಲಕ, ಅಫ್ಘಾನಿಸ್ತಾನಾದ್ಯಂತ 1,00,000ಕ್ಕೂ ಹೆಚ್ಚು ಜನರಿಗೆ ಸಂಪನ್ಮೂಲಗಳು, ಮಾನಸಿಕ-ಸಾಮಾಜಿಕ ಬೆಂಬಲ (psychosocial support) ಹಾಗೂ ಅಗತ್ಯ ಸೇವೆಗಳು ಒದಗಿಸಲ್ಪಟ್ಟಿದ್ದು, ಅತೀ ಕಠಿಣ ಪರಿಸ್ಥಿತಿಗಳಲ್ಲಿ ಬದುಕುತ್ತಿರುವ ಯುವತಿಯರಿಗೆ ಅವರು ಭರವಸೆಯ ಬೆಳಕನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಘೋಷಣೆಗೆ ಪ್ರತಿಕ್ರಿಯಿಸಿದ ಯಾಫ್ತಾಲಿ ಅವರು, ಪ್ರಶಸ್ತಿಯನ್ನು “ಹೃದಯ ಸ್ಪರ್ಶಿ ಗೌರವ” ಎಂದಿದ್ದಾರೆ. “ಈ ಗೌರವದಿಂದ ನಾನು ಭಾವುಕಳಾಗಿದ್ದೇನೆ” ಎಂದು ಹೇಳಿದ ಅವರು, ಇದು ಅಫ್ಘಾನ್ ಮಹಿಳೆಯರಿಗೆ “ಬಲವಾದ ಮತ್ತು ಅರ್ಥಪೂರ್ಣ ಸಂದೇಶ” ಎಂದು ಅಭಿಪ್ರಾಯಪಟ್ಟರು.

ವಿಶೇಷವಾಗಿ, ಆನ್‌ಲೈನ್ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯರು ಹಾಗೂ ಶಾಂತಿ, ಭದ್ರತೆ ಮತ್ತು ನಾಯಕತ್ವ ವಿಷಯದ ತರಬೇತಿಗಳಲ್ಲಿ ಭಾಗವಹಿಸುತ್ತಿರುವ ಯುವತಿಯರಿಗೆ ಈ ಗೌರವ ಹೊಸ ಧೈರ್ಯ ಮತ್ತು ನಿರೀಕ್ಷೆ ನೀಡುತ್ತದೆ ಎಂದು ಅವರು ತಿಳಿಸಿದರು.

ಸಂವಾದ ಮತ್ತು ಸಹವಾಸದ ಸಂಸ್ಕೃತಿಗೆ ಬಲ

ಈ ವಿಜೇತರನ್ನು ಆಯ್ಕೆ ಮಾಡಿದ್ದು ಸ್ವತಂತ್ರ ಅಂತರರಾಷ್ಟ್ರೀಯ ನ್ಯಾಯಮಂಡಳಿ. ಈ ನ್ಯಾಯಮಂಡಳಿಯಲ್ಲಿ ಸಂಸ್ಕೃತಿ ಮತ್ತು ಶಿಕ್ಷಣ ವಿಭಾಗದ ಧರ್ಮಾಧಿಕಾರಿ ಮಂಡಳಿಯ ಆಡಳಿತ ಮುಖ್ಯಾಧಿಕಾರಿ ಆಗಿರುವ ಕಾರ್ಡಿನಲ್ ಪೂಜ್ಯ ಜೋಸ್ ತೊಲೆಂತಿನೊ ಡಿ ಮೆಂಡೋಂಸಾ ಅವರೂ ಸೇರಿದ್ದಾರೆ.

ಝಾಯೆದ್ ಪ್ರಶಸ್ತಿಯ ಕಾರ್ಯದರ್ಶಿ ಜನರಲ್ ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ಅವರು, ಅರ್ಮೇನಿಯಾ ಮತ್ತು ಅಜರ್ಬೈಜಾನ್‌ರನ್ನು ಗೌರವಿಸುವುದು ಪ್ರಶಸ್ತಿಯ ಮೂಲ ಉದ್ದೇಶವನ್ನೇ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.   “ಸಂವಾದ ಮತ್ತು ಸಹವಾಸದ ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಬೆಳೆಸುವುದು” ಪ್ರಶಸ್ತಿಯ ಮೂಲ ಉದ್ದೇಶ

ಅವರ ಮಾತಿನಲ್ಲಿ, “ಈ ಒಪ್ಪಂದವು ಕಾಕಸಸ್ ಪ್ರದೇಶದಲ್ಲಿ ಸುಮಾರು ನಾಲ್ಕು ದಶಕಗಳ ಉದ್ವಿಗ್ನತೆ ಮತ್ತು ಸಂಘರ್ಷಕ್ಕೆ ತೆರೆ ಎಳೆಯುತ್ತಿದ್ದು, ಎರಡೂ ಜನಾಂಗಗಳಿಗೆ ಒಟ್ಟುಗೂಡಿದ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯ ನಿರ್ಮಿಸಲು “ಬಲವಾದ ಅಡಿಪಾಯವಾಗಿದೆ.”

ವಿಶ್ವಸಂಸ್ಥೆಯ ಮಕ್ಕಳ ನಿಧಿಯ(UNICEF) ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸ್ಸೆಲ್ ಅವರು, ಗಂಭೀರ ಸವಾಲುಗಳಿಂದ ಗುರುತಿಸಲ್ಪಟ್ಟ ಪರಿಸ್ಥಿತಿಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ ತೋರಿದ ಬದ್ಧತೆಯ ಕಾರಣದಿಂದ, ವಿಶೇಷವಾಗಿ ಝರ್ಖಾ ಯಾಫ್ತಾಲಿ ಅವರನ್ನು ಗೌರವಿಸಲು ಸಮಿತಿ ಬಯಸಿದೆ ಎಂದು ಹೇಳಿದರು.

ಉಜ್ಬೇಕಿಸ್ತಾನದ ರಾಷ್ಟ್ರಪತಿಯ ಆಡಳಿತ ಮುಖ್ಯಸ್ಥೆ ಸೈದಾ ಮಿರ್ಜಿಯೋಯೆವಾ ಅವರು ಕೂಡ, 2026ರ ಪುರಸ್ಕೃತರ ಆಯ್ಕೆ ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಮಾನವ ಗೌರವದತ್ತ ಇರುವ ನೈತಿಕ ಬದ್ಧತೆಯ ಪ್ರತಿಫಲ ಎಂದು ಹೇಳಿ, ಇದು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೊಸ ನಿರೀಕ್ಷೆಯ ಸಂದೇಶ ಕಳುಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮಾನವ ಸಹೋದರತ್ವದ ದಾಖಲೆ—ಮೂಲ ಪ್ರೇರಣೆ

2019ರಲ್ಲಿ ಅಬುಧಾಬಿಯಲ್ಲಿ ಪೂಜ್ಯ ಜಗದ್ಗುರುಗಳಾದ ಫ್ರಾನ್ಸಿಸ್ ಮತ್ತು ಅಹ್ಮದ್ ಅಲ್-ತಯೆಬ್ ಅವರು ಸಹಿ ಹಾಕಿದ ಮಾನವ ಸಹೋದರತ್ವದ ದಾಖಲೆಯಿಂದ ಪ್ರೇರಿತವಾಗಿ, ಹಾಗೂ ಶೇಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಪರಂಪರೆಯಲ್ಲಿ ಬೇರುಬಿಟ್ಟಿರುವ ಈ ಝಾಯೆದ್ ಪ್ರಶಸ್ತಿ, ಮಾನವ ಸಹೋದರತ್ವದ ಮೌಲ್ಯಗಳ ಆಧಾರದ ಮೇಲೆ ಶಾಂತಿ, ಸೌಹಾರ್ದ ಮತ್ತು ಕರುಣೆಯಿಂದ ಕೂಡಿದ ಲೋಕ ನಿರ್ಮಾಣಕ್ಕೆ ಕೈಜೋಡಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುತ್ತದೆ.

ಈ ಪ್ರಶಸ್ತಿ ಸ್ಥಾಪನೆಯಾದ ಬಳಿಕ ಇದುವರೆಗೆ 19 ದೇಶಗಳ 19 ಪುರಸ್ಕೃತರಿಗೆ ಈ ಗೌರವ ಪ್ರದಾನಿಸಲಾಗಿದೆ.

19 ಜನವರಿ 2026, 12:09