ಗಾಜಾ ಮೇಲೆ ಇಸ್ರಾಯೇಲ್ ದಾಳಿಗಳು: ಅನೇಕ ಪ್ಯಾಲೇಸ್ತೀನಿಯರ ಸಾವು
ಲೇಖಕರು: ಲಿಂಡಾ ಬೋರ್ಡೋನಿ
ಗಾಜಾ ಪ್ರದೇಶದ ಮೇಲೆ ನಡೆದ ಅನೇಕ ಇಸ್ರಾಯೇಲ್ ನಡೆಸಿದ ದಾಳಿಗಳಲ್ಲಿ ಶನಿವಾರ ಬೆಳಗಿನವರೆಗೆ ಕನಿಷ್ಠ 29 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದು, ಅವರಲ್ಲಿ ಆರು ಮಕ್ಕಳು ಸೇರಿದ್ದಾರೆ. ಗಾಜಾ ನಗರ ಮತ್ತು ಖಾನ್ ಯೂನಿಸ್‌ನಲ್ಲಿ ನಡೆದ ದಾಳಿಗಳು ಮನೆಗಳು ಹಾಗೂ ತಾತ್ಕಾಲಿಕ ವಾಸಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಾಕ್ಷಿಗಳ ಪ್ರಕಾರ, ಗಾಜಾ ನಗರದಲ್ಲಿನ ನಿವಾಸಿ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸುವ ಮೊದಲು ಯಾವುದೇ ಮುನ್ನೆಚ್ಚರಿಕೆ ನೀಡಲಾಗಲಿಲ್ಲ. ದಾಳಿಯಲ್ಲಿ ಕುಟುಂಬಗಳೇ ನಾಶವಾಗಿದ್ದು, ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು ಮತ್ತು ಆರು ಮಕ್ಕಳು ಇದ್ದಾರೆ.
ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಯುದ್ಧ ವಿರಾಮದ ನಂತರ ಇದು ಅತಿ ಹೆಚ್ಚು ಸಾವಿಗೆ ಕಾರಣವಾದ ದಿನಗಳಲ್ಲಿ ಒಂದಾಗಿದೆ. ಹಮಾಸ್ ಯುದ್ಧ ವಿರಾಮ ಉಲ್ಲಂಘನೆ ಮಾಡಿದೆ ಎಂದು ಇಸ್ರಾಯೇಲ್ ಆರೋಪಿಸಿದ ಒಂದು ದಿನದ ಬಳಿಕ, ಗಾಜಾದಾದ್ಯಂತ ದಾಳಿಗಳು ನಡೆದಿವೆ. ಶಿಬಿರ, ಅಪಾರ್ಟ್‌ಮೆಂಟ್ ಕಟ್ಟಡ ಹಾಗೂ ಪೊಲೀಸ್ ಠಾಣೆಗಳು ದಾಳಿಗೆ ಒಳಗಾಗಿವೆ.
ಈ ದಾಳಿಗಳು ಈಜಿಪ್ಟ್ ಗಡಿಯಲ್ಲಿ ಇರುವ ರಫಾ ದಾಟಣಿಯನ್ನು ತೆರೆಯುವ ನಿರೀಕ್ಷೆಗೆ ಮುನ್ನವೇ ನಡೆದಿವೆ. ಗಾಜಾದ ಬಹುತೇಕ ಗಡಿಚೌಕಿಗಳು ಯುದ್ಧದ ಅವಧಿಯೆಲ್ಲಾ ಮುಚ್ಚಲ್ಪಟ್ಟಿದ್ದು, ವೈದ್ಯಕೀಯ ವ್ಯವಸ್ಥೆ ತೀವ್ರವಾಗಿ ಹಾನಿಗೊಂಡಿರುವ ಕಾರಣ ರಫಾ ದಾಟಣಿ ಗಾಜಾ ನಿವಾಸಿಗಳಿಗೆ ಅತ್ಯಂತ ಅಗತ್ಯವಾದ ಮಾನವೀಯ ಜೀವನಾಡಿಯಾಗಿ ಉಳಿದಿದೆ.
ಶಾಂತಿ ಯೋಜನೆಯ ಎರಡನೇ ಹಂತ
ಆರಂಭದಲ್ಲಿ ಸೀಮಿತವಾಗಿ ತೆರೆಯಲಾಗುವ ರಫಾ ದಾಟಣಿಯು, ಅಮೆರಿಕ ಮಧ್ಯಸ್ಥಿಕೆಯಲ್ಲಿ ಜಾರಿಗೆ ಬಂದ ಯುದ್ಧ ವಿರಾಮದ ಎರಡನೇ ಹಂತದ ಮೊದಲ ಪ್ರಮುಖ ಹೆಜ್ಜೆಯಾಗಿದೆ. ಪ್ರಸ್ತುತ ಆರಂಭಗೊಂಡಿರುವ ಈ ಹಂತದ ಕಾರ್ಯಸೂಚಿಯಲ್ಲಿ, ಹಮಾಸ್ ಸುಮಾರು ಎರಡು ದಶಕಗಳ ಕಾಲ ಆಡಳಿತ ನಡೆಸಿದ ಬಳಿಕ ಗಾಜಾ ಪ್ರದೇಶವನ್ನು ಸೈನ್ಯಮುಕ್ತಗೊಳಿಸುವುದು ಹಾಗೂ ಪುನರ್‌ನಿರ್ಮಾಣದ ಮೇಲ್ವಿಚಾರಣೆಗೆ ಹೊಸ ಆಡಳಿತವನ್ನು ಸ್ಥಾಪಿಸುವುದೂ ಸೇರಿದೆ.
ಆದರೆ ಪ್ಯಾಲೆಸ್ತೀನ್ ಅಧಿಕಾರಿಗಳು ಶನಿವಾರ ನಡೆದ ದಾಳಿಗಳನ್ನು “ಮತ್ತೊಮ್ಮೆ ನಡೆದ ತೀವ್ರ ಮತ್ತು ಬಹಿರಂಗ ಯುದ್ಧ ವಿರಾಮ ಉಲ್ಲಂಘನೆ” ಎಂದು ಖಂಡಿಸಿದ್ದು, ಇಸ್ರಾಯೇಲ್ ದಾಳಿಗಳನ್ನು ನಿಲ್ಲಿಸುವಂತೆ ಒತ್ತಾಯಿಸಲು ಅಮೆರಿಕ ಹಾಗೂ ಇತರೆ ಮಧ್ಯಸ್ಥ ರಾಷ್ಟ್ರಗಳನ್ನು ಮನವಿ ಮಾಡಿದ್ದಾರೆ.
ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 10ರಂದು ಯುದ್ಧ ವಿರಾಮ ಜಾರಿಯಾದ ನಂತರದಿಂದ ಇಸ್ರಾಯೇಲಿ ದಾಳಿಗಳಲ್ಲಿ 509 ಪ್ಯಾಲೇಸ್ತೀನಿಯರು ಸಾವನ್ನಪ್ಪಿದ್ದಾರೆ. ಇಸ್ರಾಯೇಲಿ ಸೇನೆ ಯುದ್ಧ ವಿರಾಮದ ಹಳದಿ ಗಡಿಯ ಎರಡೂ ಬದಿಗಳಲ್ಲೂ ಗುರಿಗಳನ್ನು ಹೊಡೆದಿದ್ದು, ಅಕ್ಟೋಬರ್‌ನಿಂದ ನಡೆದ ದಾಳಿಗಳು ಒಪ್ಪಂದ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ನಡೆದವು ಎಂದು ಹೇಳಿದೆ.
ಈ ನಡುವೆ, ಗಾಜಾದ ಪ್ಯಾಲೇಸ್ತೀನಿಯರಿಗೆ ದಿನನಿತ್ಯದ ಜೀವನವೇ ಹೋರಾಟವಾಗಿದ್ದು, ಇಸ್ರಾಯೇಲ್ ಮುಂದುವರಿಸುತ್ತಿರುವ ತಡೆ, ಮರುಮರು ಯುದ್ಧ ವಿರಾಮ ಉಲ್ಲಂಘನೆಗಳು ಮತ್ತು ಆರ್ಥಿಕ ವ್ಯವಸ್ಥೆಯ ಬಹುತೇಕ ಕುಸಿತದಿಂದ ಸಂಕಷ್ಟ ಇನ್ನಷ್ಟು ತೀವ್ರವಾಗಿದೆ.
(ಮೂಲ: ಎಪಿ ಮತ್ತು ಇತರೆ ಸುದ್ದಿ ಸಂಸ್ಥೆಗಳು)
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).