ಹುಡುಕಿ

A new Israeli settlement near the town of Turmus Aya, in the Israeli occupied West Bank A new Israeli settlement near the town of Turmus Aya, in the Israeli occupied West Bank 

ಗಾಜಾ: ಮೂರು ಮಾನವೀಯ ನೆರವು ಕಾರ್ಯಾಚರಣೆಗಳಿಗೆ ಇಸ್ರಾಯೇಲ್ ನಿರ್ಬಂಧ — ವಿಶ್ವ ಸಂಸ್ಥೆ ವರದಿ

ಗಾಜಾದಲ್ಲಿ ಮುಂದುವರಿಯುತ್ತಿರುವ ಸಂಕಷ್ಟದ ನಡುವೆ, ಕಳೆದ ವಾರ ವಿಶ್ವ ಸಂಸ್ಥೆಗೆ ಸೇರಿದ ನೆರವು ತಂಡಗಳು ಒಟ್ಟು ಎಂಟು ಮಾನವೀಯ ನೆರವು ಕಾರ್ಯಾಚರಣೆಗಳನ್ನು ಸಂಯೋಜಿಸಲು ಪ್ರಯತ್ನಿಸಿದ್ದವು ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಅವುಗಳಲ್ಲಿ ಐದು ಕಾರ್ಯಾಚರಣೆಗಳಿಗೆ ಪೂರ್ಣ ಸಹಕಾರ ದೊರೆತಿದ್ದರೆ, ಮೂರು ಕಾರ್ಯಾಚರಣೆಗಳಿಗೆ ಇಸ್ರಾಯೇಲ್ ಅಧಿಕಾರಿಗಳು ಅನುಮತಿ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲೇಖಕರು: ನೇತನ್ ಮಾರ್ಲೆ

ಗಾಜಾದಲ್ಲಿನ ಮಾನವೀಯ ಸಂಕಷ್ಟ ಮುಂದುವರಿಯುತ್ತಿರುವ ನಡುವೆಯೇ, ವಿಶ್ವ ಸಂಸ್ಥೆಯ ತಂಡಗಳು ಎಂಟು ಮಾನವೀಯ ನೆರವು ಕಾರ್ಯಾಚರಣೆಗಳನ್ನು ಆಯೋಜಿಸಲು ಪ್ರಯತ್ನಿಸಿದವು. ಅವುಗಳಲ್ಲಿ ಐದು ಕಾರ್ಯಾಚರಣೆಗಳಿಗೆ ಸಂಪೂರ್ಣ ಅನುಮತಿ ಲಭಿಸಿದ್ದು, ಮೂರು ಕಾರ್ಯಾಚರಣೆಗಳಿಗೆ ಇಸ್ರಾಯೇಲಿ ಅಧಿಕಾರಿಗಳು ಅನುಮತಿ ನಿರಾಕರಿಸಿರುವುದಾಗಿ ವಿಶ್ವ ಸಂಸ್ಥೆ ಸ್ಪಷ್ಟಪಡಿಸಿದೆ.

ಅನುಮತಿ ನಿರಾಕರಿಸಲಾದ ಕಾರ್ಯಾಚರಣೆಗಳಲ್ಲಿ ಖಾನ್ ಯೂನಿಸ್‌ನ ನೀರು ಶುದ್ಧೀಕರಣ ಘಟಕವನ್ನು ತಲುಪುವ ಪ್ರಯತ್ನವೂ ಸೇರಿದೆ.

ಅನುಮತಿ ಪಡೆದ ಕಾರ್ಯಾಚರಣೆಗಳ ಮೂಲಕ ಕೆರೆಮ್ ಶಲೋಮ್/ಕರೇಮ್ ಅಬು ಸಲಂ ಗಡಿ ದಾಟುವ ಕೇಂದ್ರದಿಂದ ಆಹಾರ ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಕಿಸುಫಿಮ್ ಹಾಗೂ ಕೆರೆಮ್ ಶಲೋಮ್ ಲೋಡಿಂಗ್ ವೇದಿಕೆಗಳಲ್ಲಿ ಮಾನವೀಯ ಸರಕುಗಳ ಮೇಲ್ವಿಚಾರಣೆಯನ್ನೂ ವಿಶ್ವ ಸಂಸ್ಥೆ ತಂಡಗಳು ನಡೆಸಿವೆ.

ಯುದ್ಧ ವಿರಾಮ ಜಾರಿಯಾದ ಬಳಿಕ ನಾಲ್ಕು ತಿಂಗಳು ಕಳೆದಿದ್ದರೂ, ಗಾಜಾದ ಪರಿಸ್ಥಿತಿ ಗಂಭೀರವಾಗಿಯೇ ಮುಂದುವರಿದಿದೆ. ವಿಶ್ವ ಸಂಸ್ಥೆ ಅಧಿಕಾರಿಗಳ ಪ್ರಕಾರ,  ಮಾನವೀಯ ನೆರವು ವಿಸ್ತರಣೆ ಅನೇಕ ಜೀವಗಳನ್ನು ಉಳಿಸಿ ಬರಗಾಲದ ಭೀತಿಯನ್ನು ತಾತ್ಕಾಲಿಕವಾಗಿ ತಳ್ಳಿಹಾಕಿದರೂ, ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು ಪ್ರವೇಶ ನಿರ್ಬಂಧಗಳು ನೆರವು ಕಾರ್ಯಾಚರಣೆಗಳನ್ನು ಅಡ್ಡಿಪಡಿಸುತ್ತಿವೆ.

ವಿಶ್ವ ಸಂಸ್ಥೆ ವರದಿ ಪ್ರಕಾರ ಗಾಜಾದಲ್ಲಿ ಸುಮಾರು 15 ಲಕ್ಷ ಮಂದಿ — ಅಂದರೆ ಪ್ರತಿ ಮೂರು ಪ್ಯಾಲೆಸ್ತೀನಿಯರಲ್ಲಿ ಇಬ್ಬರು — ಸುಮಾರು 1,000 ಸ್ಥಳಾಂತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ; ಬಹುತೇಕರು ಗುಡಾರಗಳಲ್ಲಿ ವಾಸಿಸುತ್ತಿದ್ದಾರೆ. ನೂರಾರು ಕುಟುಂಬಗಳು ಇನ್ನೂ ಕುಸಿತದ ಭೀತಿಯಲ್ಲಿರುವ ಹಾನಿಗೊಳಗಾದ ಕಟ್ಟಡಗಳಲ್ಲಿ ವಾಸಿಸುತ್ತಿವೆ.

ಮಾನವೀಯ ಸಂಸ್ಥೆಗಳು ಟೆಂಟ್‌ಗಳು, ಟಾರ್ಪಾಲಿನ್‌ಗಳು, ಹಾಸಿಗೆಗಳು, ಬಟ್ಟೆಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಜನವರಿ ತಿಂಗಳಲ್ಲಿ ಮಾತ್ರ 85,000ಕ್ಕೂ ಹೆಚ್ಚು ಕುಟುಂಬಗಳನ್ನು ತಲುಪಿವೆ.

ಇದಾಗಲೇ, ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಇಸ್ರಾಯೇಲ್ ತನ್ನ ಆಡಳಿತಾತ್ಮಕ ನಿಯಂತ್ರಣವನ್ನು ವಿಸ್ತರಿಸಿರುವುದನ್ನು ಹಿರಿಯ ಪ್ಯಾಲೆಸ್ತೀನಿ ಅಧಿಕಾರಿಯೊಬ್ಬರು ತೀವ್ರವಾಗಿ ಖಂಡಿಸಿ, ಇದನ್ನು ಶಾಂತಿ ಪ್ರಯತ್ನಗಳಿಗೆ ಗಂಭೀರ ಹಿನ್ನಡೆಯೆಂದು ಹೇಳಿದ್ದಾರೆ.

ಇಸ್ರಾಯೇಲ್ ಭದ್ರತಾ ಸಚಿವ ಸಂಪುಟವು ಕಳೆದ ವಾರ ಒಸ್ಲೋ ಒಪ್ಪಂದದಡಿಯಲ್ಲಿ ಸ್ಥಾಪಿತವಾಗಿದ್ದ ಅಧಿಕಾರ ವಿಭಾಗ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಅನುಮೋದಿಸಿದೆ. ಈ ಕ್ರಮಗಳಿಂದ, ಪ್ಯಾಲೆಸ್ತೀನಿ ಸಂಸ್ಥೆಗಳು ನಿರ್ವಹಿಸುತ್ತಿದ್ದ ಕೆಲ ಪ್ರದೇಶಗಳಲ್ಲಿ — ವಿಶೇಷವಾಗಿ ನಗರ ಸೇವೆಗಳ ಕ್ಷೇತ್ರದಲ್ಲೂ — ಇಸ್ರಾಯೇಲ್ ಅಧಿಕಾರ ವಿಸ್ತರಿಸಿದೆ. ಜಲ, ಪರಿಸರ ಹಾಗೂ ಪುರಾತತ್ವ ಸಂಪತ್ತಿನ ರಕ್ಷಣೆಯ ಹೆಸರಿನಲ್ಲಿ “ಪಾರಂಪರಿಕ ತಾಣಗಳ” ಮೇಲೆ ಹೆಚ್ಚುವರಿ ಅಧಿಕಾರಗಳನ್ನು ಪಡೆದಿದೆ.

ಹೆಬ್ರೋನ್‌ನ ಕಾರ್ಯನಿರ್ವಹಣಾ ಮೇಯರ್ ಅಸ್ಮಾ ಅಲ್-ಶರಬಾತಿ ಬ್ರಿಟಿಷ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ಈ ಹೊಸ ವ್ಯವಸ್ಥೆಯಡಿಯಲ್ಲಿ ಪ್ಯಾಲೆಸ್ತೀನಿ ಅಧಿಕಾರಿಗಳನ್ನು ಯೋಜನೆ ಹಾಗೂ ಅಭಿವೃದ್ಧಿ ನಿರ್ಧಾರಗಳಿಂದ - ಪ್ಯಾಲೆಸ್ತೀನಿ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿಯೂ ಕೂಡ ಹೊರಗಿಡಲಾಗುತ್ತಿದೆ  ಎಂದು ತಿಳಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

16 ಫೆಬ್ರವರಿ 2026, 16:09