ಹುಡುಕಿ

Mural protesting the demolition of a playground in the West Bank Mural protesting the demolition of a playground in the West Bank  (ANSA)

ಪಶ್ಚಿಮ ತೀರದಲ್ಲಿ ಇಸ್ರಾಯೇಲ್ ಗಡಿ ವಿಸ್ತರಣೆ: ಶಾಂತಿ ಪ್ರಯತ್ನಗಳಿಗೆ ಹೊಡೆತ ಎಂಬ ಆತಂಕ

ಆಕ್ರಮಿತ ಪಶ್ಚಿಮ ತೀರ ಪ್ರದೇಶದಲ್ಲಿ ಇಸ್ರಾಯೇಲ್ ಇತ್ತೀಚೆಗೆ ತನ್ನ ನಿಯಂತ್ರಣವನ್ನು ವಿಸ್ತರಿಸಿರುವ ಕ್ರಮಕ್ಕೆ ಸಂಬಂಧಿಸಿ, ಪ್ಯಾಲೇಸ್ತೀನಿ ಅಧಿಕಾರಿಯೊಬ್ಬರು ಇದನ್ನು ಶಾಂತಿ ಪ್ರಯತ್ನಗಳಿಗೆ “ಕ್ರೂರ ಹೊಡೆತ”ವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೇಖಕರು:ನೇತನ್ ಮಾರ್ಲೆ

ಇಸ್ರಾಯೇಲ್ ಭದ್ರತಾ ಸಚಿವ ಸಂಪುಟವು ಕಳೆದ ವಾರ ಪಶ್ಚಿಮ ತೀರ ಪ್ರದೇಶದ ದೀರ್ಘಕಾಲದ ಆಡಳಿತ ಹಂಚಿಕೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಅನುಮೋದಿಸಿದೆ. ಮೂರು ದಶಕಗಳ ಹಿಂದೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರಾಯೇಲಿ ಮತ್ತು ಪ್ಯಾಲೇಸ್ತೀನಿ ನಾಯಕರಿಂದ ಸಹಿ ಮಾಡಲಾದ ಒಸ್ಲೋ ಒಪ್ಪಂದಗಳಡಿ ರೂಪುಗೊಂಡಿದ್ದ ವ್ಯವಸ್ಥೆಗೆ ಇದು ಸ್ಪಷ್ಟ ತಿದ್ದುಪಡಿ ಎಂದು ಹೇಳಲಾಗುತ್ತಿದೆ.

ಹೊಸ ಕ್ರಮಗಳಡಿ, ಇಸ್ರಾಯೇಲ್ ತನ್ನ ಸೈನಿಕ ಆಕ್ರಮಣದ ಮೀರಿದ ನಿಯಂತ್ರಣವನ್ನು ವಿಸ್ತರಿಸಿ, ಇದುವರೆಗೆ ಪ್ಯಾಲೇಸ್ತೀನಿ ಆಡಳಿತದ ಅಧೀನದಲ್ಲಿದ್ದ ಕೆಲವು ಪ್ರದೇಶಗಳಲ್ಲಿಯೂ ಅಧಿಕಾರ ವಹಿಸಿಕೊಳ್ಳಲಿದೆ. ಪ್ಯಾಲೇಸ್ತೀನಿ ಆಡಳಿತ ನಡೆಸುತ್ತಿದ್ದ ಪುರಸಭಾ ಸೇವೆಗಳ ಮೇಲೆಯೂ ಇಸ್ರಾಯೇಲ್ ಹಸ್ತಕ್ಷೇಪ ಹೆಚ್ಚಲಿದೆ.

ಇದೇ ವೇಳೆ, “ಪಾರಂಪರಿಕ ತಾಣಗಳು” ಎಂದು ಕರೆಯಲ್ಪಡುವ ಪ್ರದೇಶಗಳ ಮೇಲಿನ ನಿಯಂತ್ರಣವನ್ನು ವಿಸ್ತರಿಸಲು ಇಸ್ರಾಯೇಲ್ ವ್ಯಾಪಕ ಅಧಿಕಾರಗಳನ್ನು ಪಡೆದಿದೆ. ಜಲಸಂಪತ್ತು, ಪರಿಸರ ಹಾಗೂ ಪುರಾತತ್ವ ಸಂಪತ್ತಿನ ರಕ್ಷಣೆಯ ಅಗತ್ಯವಿದೆ ಎಂಬ ಕಾರಣವನ್ನು ಉಲ್ಲೇಖಿಸಲಾಗಿದೆ. ಇದರ ಉದಾಹರಣೆಯಾಗಿ, ಇತ್ತಿಚೆಗೆ ಬೆತ್ಲೆಹೆಮ್ ಮಹಾನಗರ ಪಾಲಿಕೆಯ ಮೇಲ್ವಿಚಾರಣೆಯಲ್ಲಿದ್ದ ರೇಚೆಲ್ ಸಮಾಧಿಯನ್ನು ಹೊಸದಾಗಿ ರಚಿಸಲಾದ ಇಸ್ರಾಯೇಲಿ ಪ್ರಾಧಿಕಾರಕ್ಕೆ ವರ್ಗಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಆಕ್ರಮಿತ ಪಶ್ಚಿಮ ತೀರದಲ್ಲಿನ ಹಿರಿಯ ಪ್ಯಾಲೇಸ್ತೀನಿ ಅಧಿಕಾರಿಯೊಬ್ಬರು, ಈ ಬದಲಾವಣೆಗಳು ಎರಡು ಪಕ್ಷಗಳ ನಡುವಿನ ಅರ್ಥಪೂರ್ಣ ಮಾತುಕತೆಗಳಿಗೆ ತೆರೆ ಎಳೆದಂತಾಗಿದೆ ಎಂದು ಹೇಳಿದ್ದಾರೆ. ಬ್ರಿಟಿಷ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಹೆಬ್ರೋನ್ ಕಾರ್ಯನಿರ್ವಹಣಾ ಮೇಯರ್ ಅಸ್ಮಾ ಅಲ್-ಶರಾಬಾತಿ ಅವರು, ಪ್ಯಾಲೇಸ್ತೀನಿ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿಯೂ ಸಹ ಹೊಸ ಕಾನೂನು ಚೌಕಟ್ಟು ಯೋಜನೆ ಮತ್ತು ಅಭಿವೃದ್ಧಿ ಕುರಿತ ನಿರ್ಧಾರಗಳಲ್ಲಿ ಪ್ಯಾಲೇಸ್ತೀನಿ ಅಧಿಕಾರಿಗಳನ್ನು ಹೊರಗುಳಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ತೀರದ ಅತ್ಯಂತ ಉದ್ವಿಗ್ನ ನಗರಗಳಲ್ಲೊಂದು ಹೆಬ್ರೋನ್, ಅಲ್ಲಿ ನೂರಾರು ಇಸ್ರಾಯೇಲಿ ವಸಾಹತಿಗಾರರು ಕೋಟೆಬದ್ಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಅವರ ರಕ್ಷಣೆಗೆ ಇಸ್ರಾಯೇಲಿ ಸೈನಿಕರನ್ನು ನಿಯೋಜಿಸಲಾಗಿದೆ. ಇದೇ ಪ್ರದೇಶದಲ್ಲಿ ಪ್ಯಾಲೇಸ್ತೀನಿ ನಿವಾಸಿಗಳೂ ವಾಸಿಸುತ್ತಿದ್ದಾರೆ.

1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಜೋರ್ಡನ್‌ನಿಂದ ವಶಪಡಿಸಿಕೊಂಡ ಪಶ್ಚಿಮ ತೀರ ಹಾಗೂ ಪೂರ್ವ ಜೆರೂಸಲೇಮ್ ಪ್ರದೇಶಗಳಲ್ಲಿ ಇಂದಿಗೆ 7 ಲಕ್ಷಕ್ಕಿಂತ ಹೆಚ್ಚು ಇಸ್ರಾಯೇಲಿ ವಸಾಹತುಗಾರರು ವಾಸಿಸುತ್ತಿದ್ದಾರೆ. ಪ್ಯಾಲೇಸ್ತೀನಿಯರು ಈ ಪ್ರದೇಶಗಳನ್ನು ಗಾಜಾ ಪಟ್ಟಿಯೊಡನೆ ಸೇರಿಸಿ ಭವಿಷ್ಯದ ಸ್ವತಂತ್ರ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಸಮುದಾಯದ ಬಹುಪಾಲು ಈ ವಸಾಹತುಗಳನ್ನು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವೆಂದು ಪರಿಗಣಿಸುತ್ತದೆ.

ಈ ವರ್ಷ ನಡೆಯಲಿರುವ ಚುನಾವಣೆಯನ್ನು ಎದುರಿಸುತ್ತಿರುವ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, ಪ್ಯಾಲೇಸ್ತೀನಿ ರಾಜ್ಯದ ಸ್ಥಾಪನೆ ಇಸ್ರಾಯೇಲ್ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ ಎಂಬ ವಾದವನ್ನು ದೀರ್ಘಕಾಲದಿಂದ ಮುಂದಿಟ್ಟಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

14 ಫೆಬ್ರವರಿ 2026, 18:36