ಮೆಡಿಟರೇನಿಯನ್ ವಲಸಿಗರ ದುರಂತದಲ್ಲಿ ಶಿಶುಗಳ ದುರ್ಮರಣ
ಲೇಖಕರು: ಲಿಂಡಾ ಬಾರ್ಡೋನಿ
ಲಿಬಿಯಾದ ಹುಡುಕಾಟ ಮತ್ತು ರಕ್ಷಣಾ ಸಿಬ್ಬಂದಿ ಕೇವಲ ಇಬ್ಬರು ನೈಜೀರಿಯನ್ ಮಹಿಳೆಯರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಅವರಲ್ಲಿ ಒಬ್ಬರು ದುರಂತದಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ; ಮತ್ತೊಬ್ಬರು ತನ್ನ ಇಬ್ಬರು ಶಿಶುಗಳನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.
ಅವರು ನೀಡಿದ ಮಾಹಿತಿಯ ಪ್ರಕಾರ, ರಬ್ಬರ್ ದೋಣಿ ಪ್ರಯಾಣ ಆರಂಭಿಸಿದ ಕೇವಲ ಆರು ಗಂಟೆಗಳಲ್ಲೇ ಲಿಬಿಯಾದ ಕರಾವಳಿ ಪಟ್ಟಣ ಜುವಾರಾ ಸಮೀಪ ಮಗುಚಿ ಬಿದ್ದು, ತಕ್ಷಣವೇ ನೀರು ತುಂಬಿಕೊಂಡಿದೆ.
IOM (ಅಂತರರಾಷ್ಟ್ರೀಯ ವಲಸೆ ಸಂಸ್ಥೆ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜನವರಿಯಲ್ಲಿ ಮಾತ್ರವೇ ಮಧ್ಯ ಮೆಡಿಟರೇನಿಯನ್‌ನಲ್ಲಿ ತೀವ್ರ ಹವಾಮಾನ ಪರಿಸ್ಥಿತಿಗಳ ನಡುವೆ ನಡೆದ ಅನೇಕ ಅದೃಶ್ಯ ನೌಕಾಘಾತಗಳಲ್ಲಿ ಕನಿಷ್ಠ 375 ವಲಸಿಗರು ಸಾವನ್ನಪ್ಪಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇನ್ನೂ ನೂರಾರು ಸಾವುಗಳು ಅಧಿಕೃತವಾಗಿ ದಾಖಲಾಗಿಲ್ಲವೆಂದು ನಂಬಲಾಗಿದೆ.
ಈ ಪುನರಾವರ್ತಿತ ಘಟನೆಗಳು, ಅಪಾಯಕಾರಿ ಸಮುದ್ರ ದಾಟಲು ಪ್ರಯತ್ನಿಸುವ ವಲಸಿಗರು ಮತ್ತು ನಿರಾಶ್ರಿತರು ಎದುರಿಸುತ್ತಿರುವ ನಿರಂತರ ಹಾಗೂ ಮಾರಕ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ.
ವಿಶ್ವಸಂಸ್ಥೆ 2025ರ ಆರಂಭದಿಂದ ಮಧ್ಯ ಮೆಡಿಟರೇನಿಯನ್‌ನಲ್ಲಿ 1,300ಕ್ಕೂ ಹೆಚ್ಚು ವಲಸಿಗರು ಕಾಣೆಯಾಗಿದ್ದಾರೆ ಎಂದು ತಿಳಿಸಿದೆ. ಈ ಇತ್ತೀಚಿನ ಘಟನೆ ಸೇರಿ, ಈ ಮಾರ್ಗದಲ್ಲಿ ಸಾವನ್ನಪ್ಪಿದ ಅಥವಾ ಕಾಣೆಯಾಗಿರುವ ವಲಸಿಗರ ಸಂಖ್ಯೆ ಕನಿಷ್ಠ 484ಕ್ಕೆ ಏರಿದೆ.
ಸಂಘರ್ಷ ಮತ್ತು ಬಡತನದಿಂದ ಪಲಾಯನ ಮಾಡುವ ವಲಸಿಗರು ಯುರೋಪ್ ತಲುಪಲು ಬಳಸುವ ಪ್ರಮುಖ ಮಾರ್ಗಗಳಲ್ಲಿ ಲಿಬಿಯಾ ಮಾರ್ಗವೂ ಒಂದಾಗಿದೆ. ಈ ಪ್ರಯಾಣವು ಮರುಭೂಮಿ ಮತ್ತು ಮೆಡಿಟರೇನಿಯನ್ ಸಮುದ್ರ ಎರಡರಲ್ಲೂ ಅಪಾಯಗಳಿಂದ ಕೂಡಿದೆ.
ವಲಸಿಗರೂ ನಮ್ಮ ಸಹೋದರರು ಮತ್ತು ಸಹೋದರಿಯರೇ :ಪೂಜ್ಯ ಜಗದ್ಗುರುಗಳು
ಸೆಪ್ಟೆಂಬರ್‌ನಲ್ಲಿ ನೀಡಿದ ವೀಡಿಯೊ ಸಂದೇಶದಲ್ಲಿ ಪೂಜ್ಯ ಜಗದ್ಗುರುಗಳಾದ 14ನೆ ಲಿಯೋ ಲಾಂಪೆಡುಸಾ ದ್ವೀಪದ ಜನರು ಮತ್ತು ಸಂಸ್ಥೆಗಳು ವಲಸಿಗರಿಗೆ ತೋರಿಸಿದ ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ಇದನ್ನು ರಕ್ಷಿಸಬೇಕಾದ ಅಮೂಲ್ಯ ಸಾಂಸ್ಕೃತಿಕ ಪರಂಪರೆ ಎಂದು ಕರೆದಿದ್ದಾರೆ.
“ವಲಸಿಗರು ಶತ್ರುಗಳಲ್ಲ — ಅವರು ನಮ್ಮ ಸಹೋದರರು ಮತ್ತು ಸಹೋದರಿಯರು,” ಎಂದು ಜಗದ್ಗುರುಗಳು ಹೇಳಿದ್ದಾರೆ. “ಕರುಣೆಯಿಲ್ಲದೆ ನ್ಯಾಯವಿಲ್ಲ; ಇತರರ ನೋವನ್ನು ಕೇಳದೆ ನ್ಯಾಯಸಮ್ಮತತೆ ಇಲ್ಲ ಎಂದು ಕ್ರೈಸ್ತರು ಸದಾ ಒತ್ತಿ ಹೇಳಬೇಕು,” ಎಂದು ಅವರು ಕರೆ ನೀಡಿದ್ದಾರೆ.
(ಮೂಲ: IOM, ರಾಯಿಟರ್ಸ್ ಮತ್ತು ಇತರೆ ಸಂಸ್ಥೆಗಳು)
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).