ನೈಜೀರಿಯವನ್ನು ಅಲುಗಾಡಿಸುತ್ತಿರುವ ಮುಂದುವರಿದ ಹಿಂಸಾಚಾರ
ಲೇಖಕರು: ನೇತನ್ ಮಾರ್ಲೆ
ಶುಕ್ರವಾರ ಉತ್ತರ–ಮಧ್ಯ ನೈಜೀರಿಯಾದ ಬೆನುಯೆ ರಾಜ್ಯದ ಸಮುದಾಯ ಮಾರುಕಟ್ಟೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಾದ ಸರಣಿ ದಾಳಿಗಳ ನಡುವಿನ ಇತ್ತೀಚಿನ ಘಟನೆ ಇದಾಗಿದೆ.
ಆಯುಧಧಾರಿಗಳು ಕ್ವಾಂಡೆ ಸ್ಥಳೀಯ ಆಡಳಿತ ಪ್ರದೇಶದ ಎಂಬೈಕ್ಯೋರ್‌ನ ಅನ್ವಾಸೆ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಮಾರುಕಟ್ಟೆಯಲ್ಲಿ ಇದ್ದ ಮಹಿಳೆಯರನ್ನು ಅಪಹರಿಸಿ, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಸಾಕ್ಷಿಗಳು ಹೇಳಿರುವಂತೆ, ಮಾರುಕಟ್ಟೆ ಅತ್ಯಂತ ಜನಸಂದಣಿ ಇರುವ ವೇಳೆಯಲ್ಲಿ ದಾಳಿಕೋರರು ಸಮೀಪದ ಬೆಟ್ಟದಿಂದ ಇಳಿದು ಬಂದು, ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಕೆಲವು ಭಾಗಗಳಿಗೆ ಬೆಂಕಿ ಇಟ್ಟಿದ್ದಾರೆ.
ಈ ಘಟನೆ, ಎರಡು ದಿನಗಳ ಹಿಂದೆ ಅಬಾಂಡೆ ಸಮುದಾಯದಲ್ಲಿ ನಡೆದ ಮತ್ತೊಂದು ದಾಳಿಯ ಬಳಿಕ ನಡೆದಿದೆ. ಆ ದಾಳಿಯಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಇದರಿಂದ ಪ್ರದೇಶದ ಭದ್ರತಾ ಪರಿಸ್ಥಿತಿಯ ಬಗ್ಗೆ ಭಯ ಹೆಚ್ಚಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪುನರಾವರ್ತಿತ ಹಿಂಸಾಚಾರವನ್ನು ತಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಭದ್ರತಾ ಕ್ರಮಗಳನ್ನು ಬಲಪಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಫೆಬ್ರವರಿ 3ರಂದು ಕ್ವಾರಾ ರಾಜ್ಯದ ಎರಡು ಗ್ರಾಮಗಳ ಮೇಲೆ ಶಸ್ತ್ರಸಜ್ಜಿತ ಗುಂಪುಗಳು ದಾಳಿ ನಡೆಸಿದ್ದು, ಇನ್ನಷ್ಟು ಶವಗಳು ಪತ್ತೆಯಾಗುವ ಸಾಧ್ಯತೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.
ಅನೇಕ ಮುಗ್ದ ಜನರನ್ನು ಹತ್ತಿರದಿಂದ ಗುಂಡಿಟ್ಟು ಕೊಂದಿದ್ದು, ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಜನರು ಸಮೀಪದ ಕಾಡು ಪ್ರದೇಶಗಳಿಗೆ ಓಡಿಹೋಗಬೇಕಾಯಿತು ಎಂದು ವರದಿಯಾಗಿದೆ.
ಈ ದಾಳಿಗಳ ಏರಿಕೆಯಿಂದ ನೈಜೀರಿಯಾದ ವಾಯುವ್ಯ ಮತ್ತು ಉತ್ತರ–ಮಧ್ಯ ಪ್ರದೇಶಗಳಲ್ಲಿ ಮಾನವೀಯ ಬಿಕ್ಕಟ್ಟು ಮತ್ತಷ್ಟು ಆಳವಾಗಿದೆ. ಹೆಚ್ಚುತ್ತಿರುವ ಹಿಂಸಾಚಾರದಿಂದ ಭಾರೀ ಪ್ರಮಾಣದ ಜನರು ಸ್ಥಳಾಂತರಗೊಂಡಿದ್ದು, ಹಸಿವು ಮತ್ತು ಅಪೌಷ್ಟಿಕತೆ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).