ಹುಡುಕಿ

PHILIPPINES-WEATHER-TYPHOON PHILIPPINES-WEATHER-TYPHOON  (AFP or licensors)

ಫಿಲಿಪ್ಪೀನ್ಸ್‌ಲ್ಲಿ ಬಿರುಗಾಳಿಯಿಂದಾಗಿ ಭಾರೀ ಮಳೆ: ಭೂಕುಸಿತ-ನೆರೆ ದುರಂತ, ಏಳು ಸಾವು

ಫಿಲಿಪ್ಪೈನ್ಸ್‌ನ ದಕ್ಷಿಣ-ಪೂರ್ವ ಭಾಗದಲ್ಲಿ ಬಿರುಗಾಳಿಯಿಂದಾಗಿ ಉಂಟಾದ ಭಾರೀ ಮಳೆಯಿಂದ ಎರಡು ಭೂಕುಸಿತಗಳು ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದು, ನೆರೆ ಪರಿಣಾಮವಾಗಿ 3,000 ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ.

ಲೇಖಕರು: ನೇತನ್ ಮಾರ್ಲೆ

ಫಿಲಿಪ್ಪೀನ್ಸ್‌ನ ದಕ್ಷಿಣ–ಪೂರ್ವ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಎರಡು ಭೂಕುಸಿತಗಳು ಸಂಭವಿಸಿ ಏಳು ಮಂದಿ ಮೃತಪಟ್ಟಿದ್ದಾರೆ. ಪ್ರವಾಹದಿಂದ 3,000ಕ್ಕೂ ಹೆಚ್ಚು ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ತಡರಾತ್ರಿ ಉಂಟಾದ ಬಿರುಗಾಳಿಯಿಂದ ಸುರಿಗಾವೊ ದೆಲ್ ಸರ್ ಪ್ರಾಂತ್ಯದಲ್ಲಿ ಕರಾವಳಿಗೆ ಅಪ್ಪಳಿಸಿ ನಂತರ ಮಧ್ಯ ದ್ವೀಪಗಳ ಮೇಲೆ ಪಶ್ಚಿಮಕ್ಕೆ ಸಾಗಿತು. ಶುಕ್ರವಾರ ಮಧ್ಯಾಹ್ನಕ್ಕೆ ಗಾಳಿಯ ವೇಗ ಗಂಟೆಗೆ 55 ಕಿ.ಮೀ., ಗಸ್ಟ್‌ಗಳು 70 ಕಿ.ಮೀ.ವರೆಗೆ ದಾಖಲಾಗಿವೆ.

ಈ ಭಾರಿ ಮಳೆಯಿಂದ ಸುಮಾರು 10,000 ಮಂದಿ ಪ್ರಭಾವಿತರಾಗಿದ್ದು, ಇವರಲ್ಲಿ 3,200ಕ್ಕೂ ಹೆಚ್ಚು ಮಂದಿ ತುರ್ತು ಆಶ್ರಯ ಕೇಂದ್ರಗಳಿಗೆ ಅಥವಾ ಬಂಧುಗಳ ಮನೆಗಳಿಗೆ ತೆರಳಿದ್ದಾರೆ. ಹವಾಮಾನ ಅಧಿಕಾರಿಗಳ ಪ್ರಕಾರ, ಜೂನ್‌ನಲ್ಲಿ ಆರಂಭವಾಗುವ ಉಷ್ಣವಲಯದ ಚಂಡಮಾರುತ ಹಂಗಾಮಿಗೂ ಮುಂಚೆ ಈ ಮಳೆ ತಣ್ಣನೆಯ ಗಾಳಿ ಮತ್ತು ಪೆಸಿಫಿಕ್ ಮಹಾಸಾಗರದಿಂದ ಬಂದ ಉಷ್ಣ ತೇವಾಂಶ ಗಾಳಿಗಳ ಸಂಯೋಗದಿಂದ ಉಂಟಾಗಿದೆ.

ಅಬ್ಬರದ ಸಮುದ್ರ ಅಲೆಗಳ ಕಾರಣ ಅಂತರದ್ವೀಪ ಫೆರ್ರಿ ಸೇವೆಗಳು ಸ್ಥಗಿತಗೊಂಡು 94 ಬಂದರುಗಳಲ್ಲಿ ಸುಮಾರು 5,000 ಪ್ರಯಾಣಿಕರು ಮತ್ತು ಸರಕು ಕಾರ್ಮಿಕರು ಸಿಲುಕಿದ್ದಾರೆ. ಹಲವಾರು ಒಳನಾಡು ವಿಮಾನಯಾನಗಳನ್ನೂ ರದ್ದುಪಡಿಸಲಾಗಿದೆ.

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಮಧ್ಯದ ದ್ವೀಪಗಳ ಮೂಲಕ ವಾಯುವ್ಯ ದಿಕ್ಕಿಗೆ ಸಾಗುತ್ತಿರುವ ಬಿರುಗಾಳಿ ಶುಕ್ರವಾರದ ನಂತರ ಉಷ್ಣವಲಯ ಕುಗ್ಗಿದ ಒತ್ತಡವಾಗಿ ದುರ್ಬಲಗೊಳ್ಳುವ ಸಾಧ್ಯತೆ ಇದ್ದರೂ, ಭಾರೀ ಮಳೆ ಮುಂದುವರಿದು ಪ್ರವಾಹ ಅಪ್ಪಳಿಸಬಹುದು ಎಂಬ ಭೀತಿಯೂ ಇದೆ.

ವರ್ಷಕ್ಕೆ ಸುಮಾರು 20 ಚಂಡಮಾರುತಗಳನ್ನು ಎದುರಿಸುವ ಫಿಲಿಪ್ಪೀನ್ಸ್, ‘ರಿಂಗ್ ಆಫ್ ಫೈರ್’’(ಪೆಸಿಫಿಕ್ ಮಹಾಸಾಗರದ ಅಂಚಿನಲ್ಲಿರುವ ನೀರೊಳಗಿನ ಜ್ವಾಲಾಮುಖಿಗಳು ಮತ್ತು ಭೂಕಂಪದ ಸ್ಥಳಗಳ ಸರಮಾಲೆ) ವಲಯದಲ್ಲಿರುವುದರಿಂದ ವಿಶ್ವದ ಅತ್ಯಂತ ವಿಪತ್ತುಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

20 ಫೆಬ್ರವರಿ 2026, 17:06