ಹುಡುಕಿ

Russia launches large-scale attack on Ukraine's energy infrastructure Russia launches large-scale attack on Ukraine's energy infrastructure  (ANSA)

ಉಕ್ರೇನ್ ಜೊತೆ ಹೊಸ ಶಾಂತಿ ಮಾತುಕತೆಗಳನ್ನು ರಷ್ಯಾ ಒಪ್ಪಿಗೆ: ಡ್ರೋನ್ ದಾಳಿಗಳ ನಡುವೆಯೂ ಚರ್ಚೆ ಮುಂದುವರಿಕೆ

ಯುದ್ಧದ ಜೀವನಷ್ಟಗಳ ಆತಂಕಗಳ ನಡುವೆಯೂ, ಈ ವಾರ ಅಬುಧಾಬಿಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಉಕ್ರೇನ್ ಜೊತೆಗೆ ಹೊಸ ಸುತ್ತಿನ ಶಾಂತಿ ಮಾತುಕತೆ ನಡೆಯಲಿದೆ ಎಂದು ರಷ್ಯಾ ದೃಢಪಡಿಸಿದೆ. ಎರಡೂ ಕಡೆಯ ಒಟ್ಟಾರೆ ಸೈನಿಕ ಸಾವುನೋವುಗಳು ಸುಮಾರು ಇಪ್ಪತ್ತು ಲಕ್ಷ ಸಮೀಪಿಸುತ್ತಿವೆ ಎಂದು ಅಂದಾಜಿಸಲಾಗಿದೆ.

ಲೇಖಕರು: ಸ್ಟೆಫಾನ್ ಜೆ ಬಾಸ್

ಮಾಸ್ಕೋದಿಂದ ಬಂದ ಹೇಳಿಕೆಯ ಪ್ರಕಾರ, ರಷ್ಯಾ ಮತ್ತು ಉಕ್ರೇನ್ ನಡುವೆ “ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಕಡಿಮೆಯಾಗಿವೆ,” ಎಂದು ಹೇಳಿದರೂ, ಇನ್ನೂ ಮಹತ್ವದ ಅಸಮ್ಮತಿಗಳು ಉಳಿದಿವೆ ಎಂದು ಒಪ್ಪಿಕೊಂಡಿದೆ. ಪರಿಹಾರವಾಗದ ಈ ವಿವಾದಗಳಲ್ಲಿ ಪ್ರಮುಖವಾದುದು, ಫೆಬ್ರವರಿ 2022ರಲ್ಲಿ ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದ ನಂತರ ರಷ್ಯಾ ವಶಪಡಿಸಿಕೊಂಡ ಪ್ರದೇಶಗಳನ್ನು ಉಕ್ರೇನ್ ತ್ಯಜಿಸಲು ನಿರಾಕರಿಸಿರುವುದು ಎಂದು ನಂಬಲಾಗಿದೆ.

ಇತ್ತೀಚಿನ ಮಾತುಕತೆಗಳು ಭಾನುವಾರ ನಡೆಯಬೇಕಾಗಿದ್ದರೂ, “ಕಾರ್ಯಕ್ರಮ ಸಂಬಂಧಿತ ಕಾರಣಗಳಿಂದ” ಅವು ಮುಂದೂಡಲ್ಪಟ್ಟವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರೆಮ್ಲಿನ್ ನಿಂದ ಬಂದ ಹೇಳಿಕೆ ಪ್ರಕಾರ ಹೇಳುವಂತೆ, ಮಾತುಕತೆಗಳು ಬುಧವಾರ ಮತ್ತು ಗುರುವಾರ ಯುನೈಟೆಡ್ ಅರಬ್ ಎಮಿರೇಟ್ಸ್(UAE) ರಾಜಧಾನಿ ಅಬುಧಾಬಿಯಲ್ಲಿ ಮುಂದುವರಿಯಲಿವೆ.

ರಾಜತಾಂತ್ರಿಕ ಮಾತುಕತೆಗಳು ಪುನರಾರಂಭವಾಗುತ್ತಿದ್ದರೂ ಹಿಂಸಾಚಾರ ಮುಂದುವರಿಕೆ

ವಿಳಂಬಗೊಂಡ ರಾಜತಾಂತ್ರಿಕ ಪ್ರಯತ್ನಗಳು  ನಿರಂತರ ಹಿಂಸಾಚಾರದ ಮಧ್ಯೆಯೇ ನಡೆಯುತ್ತಿವೆ. ಉಕ್ರೇನಿಯನ್ ಅಧಿಕಾರಿಗಳ ಪ್ರಕಾರ, ರಷ್ಯಾದ ಡ್ರೋನ್ ದಾಳಿ ದಕ್ಷಿಣ–ಪೂರ್ವ ದ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ಗಣಿಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸಿಗೆ ಅಪ್ಪಳಿಸಿದ್ದು, ಕನಿಷ್ಠ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಕಾರ್ಮಿಕರು ತಮ್ಮ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ದಾಳಿ ನಡೆದಿದೆ.

ಬಸ್ಸು ಉಕ್ರೇನ್‌ನ ಅತಿದೊಡ್ಡ ಖಾಸಗಿ ಇಂಧನ ಕಂಪನಿ DTEKಗೆ ಸೇರಿದ್ದು, ಕಂಪನಿ ಈ ದಾಳಿಯನ್ನು ತನ್ನ ಸಿಬ್ಬಂದಿ ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳ ಮೇಲೆ ನಡೆದ “ವಿಶಾಲ ಪ್ರಮಾಣದ ಭಯೋತ್ಪಾದಕ ದಾಳಿ” ಎಂದು ವಿವರಿಸಿದೆ. ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ, ಇತ್ತೀಚಿನ ರಷ್ಯಾದ ದಾಳಿಗಳ ನಂತರ ಉಕ್ರೇನ್‌ನ ಇಂಧನ ವ್ಯವಸ್ಥೆ ಇನ್ನೂ ಗಂಭೀರ ಒತ್ತಡದಲ್ಲಿದೆ ಎಂದು ಎಚ್ಚರಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಕೀವ್ ನಗರದಲ್ಲೇ ಇನ್ನೂ ಎರಡು ನೂರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಹೀಟಿಂಗ್ ಇಲ್ಲ. ತಾಪಮಾನ ಮೈನಸ್ 17 ಡಿಗ್ರಿ ಸೆಲ್ಸಿಯಸ್ (ಸುಮಾರು 1 ಡಿಗ್ರಿ ಫ್ಯಾರೆನ್‌ಹೀಟ್)ಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ದುರಸ್ತಿ ತಂಡಗಳನ್ನು ನಿಯೋಜಿಸಲಾಗಿದೆ.

ಇಂಧನ ಮತ್ತು ಮೂಲಸೌಕರ್ಯಗಳ ಮೇಲೆ ಮುಂದುವರಿದ ಹಾನಿ

ಅಧ್ಯಕ್ಷ ಝೆಲೆನ್ಸ್ಕಿ ಅವರ ಪ್ರಕಾರ, ಅರೆಕಾಲಿಕ ಕದನ ವಿರಾಮದ ನಡುವೆಯೂ ರಷ್ಯಾ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲಿನ ನೇರ ದಾಳಿಗಳನ್ನು ಕಡಿಮೆ ಮಾಡಿದರೂ, ಉಕ್ರೇನ್‌ನ  ಸರಬರಾಜು ವ್ಯವಸ್ಥೆಯ ಮೇಲೆ ವಿಶೇಷವಾಗಿ ರೈಲು ಜಾಲಗಳ ಮೇಲೆ ಭಯೋತ್ಪಾದಕ ಮಟ್ಟಿನ ದಾಳಿಗಳನ್ನು ಮುಂದುವರಿಸುತ್ತಿದೆ.

ಯುದ್ಧವು  ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವಾಗ, ಮಾನವೀಯ ನಷ್ಟದ ಪ್ರಮಾಣ ಬೆಚ್ಚಿಬೀಳಿಸುವಂತಿದೆ. ಉಕ್ರೇನ್ ಹೇಳುವಂತೆ, ರಷ್ಯಾ 12.4 ಲಕ್ಷಕ್ಕೂ ಹೆಚ್ಚು ಸೈನಿಕ ಹಾನಿಗಳನ್ನು, ಸಾವುನೋವುಗಳನ್ನು ಅನುಭವಿಸಿದೆ; ಆದಾಗ್ಯೂ ಈ ಅಂಕಿಅಂಶಗಳನ್ನು ಸ್ವತಂತ್ರವಾಗಿ ದೃಢೀಕರಿಸುವುದು ಕಷ್ಟಕರವಾಗಿದೆ. ಇದಲ್ಲದೆ, ವಾಷಿಂಗ್ಟನ್ ಮೂಲದ ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರ (Centre for Strategic and International Studies) ಉಲ್ಲೇಖಿಸಿರುವ ವಿಶ್ಲೇಷಣೆಯ ಪ್ರಕಾರ, ಎರಡೂ ದೇಶಗಳಲ್ಲಿ ಸುಮಾರು 20 ಲಕ್ಷ ಸೈನಿಕರ ಜೀವಹಾನಿಯಾಗಿದೆ. ಇದು ಇತ್ತೀಚಿನ ದಶಕಗಳಲ್ಲಿ ಯುರೋಪ್ ಕಂಡ ಅತ್ಯಂತ ಮಾರಕ ಸಂಘರ್ಷಗಳಲ್ಲಿ ಒಂದಾಗಿದೆ.

ಅಬುಧಾಬಿಯಲ್ಲಿ ಪುನರಾರಂಭಗೊಂಡ ಮಾತುಕತೆಗಳು ಪ್ರಗತಿಯ ನಾಜೂಕಾದ ಭರವಸೆಯನ್ನು ತೋರಿಸುತ್ತಿದ್ದರೂ, ನಿರಂತರ ದಾಳಿಗಳು ಮತ್ತು ಮೂಲಸೌಕರ್ಯ ಹಾನಿಗಳು ಯುದ್ಧಪೀಡಿತ ಉಕ್ರೇನ್‌ನ ದೈನಂದಿನ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಲೇ ಇವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಫೆಬ್ರವರಿ 2026, 14:40