ಜೆರುಸಲೇಮಿನಲ್ಲಿ ಕ್ರೈಸ್ತ ಶಾಲೆಗಳು ಅಪಾಯದ ಅಂಚಿನಲ್ಲಿ; ಶಿಕ್ಷಕರಿಗೆ ಅನುಮತಿ ನಿರಾಕರಣೆ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
ಜೆರುಸಲೇಮಿನ ಕ್ರೈಸ್ತ ಶಾಲೆಗಳ ಭವಿಷ್ಯದ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಗಂಭೀರ ಆತಂಕ ಹೆಚ್ಚುತ್ತಿದೆ ಎಂದು ವ್ಯಾಟಿಕನ್ ಫಿಡೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಆತಂಕದ ಪ್ರಮುಖ ಕಾರಣವೆಂದರೆ, ಮಾರ್ಚ್ 10ರಂದು ಇಸ್ರಾಯೇಲ್ ಶಿಕ್ಷಣ ಸಚಿವಾಲಯವು ಜೆರುಸಲೇಮಿನ ಕ್ರೈಸ್ತ ಶಾಲೆಗಳ ನಿರ್ದೇಶಕರಿಗೆ ಕಳುಹಿಸಿದ ಪತ್ರ. ಈ ಪತ್ರದಲ್ಲಿ 2026–2027ರ ಶೈಕ್ಷಣಿಕ ವರ್ಷದಿಗಾಗಿ, ನಗರದಲ್ಲೇ ವಾಸಿಸುವ ಮತ್ತು ಇಸ್ರಾಯೇಲಿ ಬೋಧನಾ ಪ್ರಮಾಣಪತ್ರಗಳನ್ನು ಹೊಂದಿರುವ ಶಿಕ್ಷಕರನ್ನಷ್ಟೇ ನೇಮಕಾತಿಗೆ ಅನುಮತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಇದರಿಂದ, ವೆಸ್ಟ್ ಬ್ಯಾಂಕ್‌ನಲ್ಲಿ ವಾಸಿಸುವ ಪ್ಯಾಲೇಸ್ತೀನಿ ಶಿಕ್ಷಕರು ಈ ಶಾಲೆಗಳಲ್ಲಿ ಬೋಧನೆ ಮಾಡುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಈ ಪ್ರಕಟಣೆಯ ಮೊದಲು, ವೆಸ್ಟ್ ಬ್ಯಾಂಕ್‌ನಲ್ಲಿ ವಾಸಿಸುವ ಪ್ಯಾಲೇಸ್ತೀನಿ ಶಿಕ್ಷಕರು ಇಸ್ರಾಯೇಲ್ ಅಧಿಕಾರಿಗಳು ನೀಡುತ್ತಿದ್ದ “ಹಸಿರು ಕಾರ್ಡ್” ಮೂಲಕ ಜೆರುಸಲೇಮಿನಲ್ಲಿ ಬೋಧನೆ ಮಾಡಲು ಸಾಧ್ಯವಾಗುತ್ತಿತ್ತು.
ಜಗತ್ತಿನ ವಿವಿಧ ಭಾಗಗಳಲ್ಲಿ ಸಂಕಷ್ಟದಲ್ಲಿರುವ ಪವಿತ್ರ ಧರ್ಮಸಭೆಗಳಿಗೆ ಆಧ್ಯಾತ್ಮಿಕ ಹಾಗೂ ಮಾನವೀಯ ನೆರವು ನೀಡುವ ಜಗದ್ಗುರುಗಳ ಪ್ರತಿಷ್ಠಾನ-ACN ಪ್ರಕಾರ, 200ಕ್ಕೂ ಹೆಚ್ಚು ಕ್ರೈಸ್ತ ಶಿಕ್ಷಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಮತ್ತು ಜೆರುಸಲೇಮಿನ ಕ್ರೈಸ್ತ ಶಾಲೆಗಳಲ್ಲಿ ಬೋಧಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಿಸಬಹುದು.
ಇಂತಹ ಪರಿಸ್ಥಿತಿಯು ಇತಿಹಾಸ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ನಿರಂತರತೆಯನ್ನು ಹಾಗೂ ಜೆರುಸಲೇಮಿನ ಕ್ರೈಸ್ತ ಶಿಕ್ಷಣದ ಭವಿಷ್ಯವನ್ನು ಗಂಭೀರವಾಗಿ ಅಪಾಯಕ್ಕೆ ಒಳಪಡಿಸಬಹುದು ಎಂದು ACN ಎಚ್ಚರಿಸಿದೆ.
2025ರ ಜುಲೈ ತಿಂಗಳಲ್ಲಿ, ಇಸ್ರಾಯೇಲ್ ಸಂಸತ್ತಿನ ಶಿಕ್ಷಣ ಸಮಿತಿಯು ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಮಿನಲ್ಲಿ ಪ್ಯಾಲೇಸ್ತೀನಿ ಶಿಕ್ಷಕರು ಪಡೆದಿರುವ ಬೋಧನಾ ಅರ್ಹತೆಗಳನ್ನು ಅಮಾನ್ಯವೆಂದು ಪರಿಗಣಿಸಿತು.
ಅದರಂತೆ, ಆ ಸಮಯದಲ್ಲಿ ಆ ಅರ್ಹತೆಗಳನ್ನು ಹೊಂದಿರುವ ಶಿಕ್ಷಕರ ನೇಮಕಾತಿಯನ್ನು ಸಮಿತಿಯು ನಿಷೇಧಿಸಿತು. ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಲ್ಲಿ, ವೆಸ್ಟ್ ಬ್ಯಾಂಕ್‌ನ 170ಕ್ಕೂ ಹೆಚ್ಚು ಶಿಕ್ಷಕರು ಅಗತ್ಯವಾದ ಬೋಧನಾ ಅನುಮತಿಗಳನ್ನು ಪಡೆಯಲು ವಿಫಲರಾದರು. ಇದರಿಂದ, ಜೆರುಸಲೇಮಿನ ಎಲ್ಲಾ ಕ್ರೈಸ್ತ ಶಾಲೆಗಳಲ್ಲಿ, ಅಗತ್ಯ ಅನುಮತಿಗಳನ್ನು ನೀಡುವವರೆಗೆ, ಕ್ರೈಸ್ತ ಶಾಲೆಗಳ ಪ್ರಧಾನ ಕಾರ್ಯದರ್ಶಾಲಯವು ಮುಷ್ಕರವನ್ನು ಆಯೋಜಿಸಿತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).