ಹುಡುಕಿ

ಈಕ್ವೆಟೋರಿಯಲ್ ಗಿನಿಯಲ್ಲಿ  ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಈಕ್ವೆಟೋರಿಯಲ್ ಗಿನಿಯಲ್ಲಿ ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ  (@Vatican Media)

ಅಳಿಯದ ಭರವಸೆ: ಪೂಜ್ಯ ಜಗದ್ಗುರುವಿನ ನಿರೀಕ್ಷೆಯಲ್ಲಿ ಈಕ್ವೆಟೋರಿಯಲ್ ಗಿನಿ

ಈಕ್ವೆಟೋರಿಯಲ್ ಗಿನಿ ದೇಶವು ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರನ್ನು ಸ್ವಾಗತಿಸಲು ಸಿದ್ಧವಾಗುತ್ತಿರುವ ಸಂದರ್ಭದಲ್ಲಿ, ಅವರ ಮುಂಬರುವ ಭೇಟಿಯ ಕುರಿತು ಜನರ ನಿರೀಕ್ಷೆಗಳ ಬಗ್ಗೆ ತಿಳಿಯಲು ವ್ಯಾಟಿಕನ್ ಸುದ್ದಿ ಸಂಸ್ಥೆ ಮಲಾಬೊ ನಗರದ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದೆ.

ಲೇಖಕರು: ಜೋಸೆಫ್ ತಲ್ಲೊಚ್-ಮಲಾಬೊ

ಭೂಮಧ್ಯ ರೇಖೆಯ ಉತ್ತರ ಭಾಗದಲ್ಲಿ, ಸುಡುಬಿಸಿಲು ಮತ್ತು ಜ್ವಾಲಾಮುಖಿಗಳಿಂದ ಆವರಿಸಲ್ಪಟ್ಟ ಗಿನಿಯಾ ಉಪಸಾಗರದ ನೀರಿನಲ್ಲಿ ಬಿಯೋಕೊ ದ್ವೀಪ ಇದೆ. ಅದರ ಬಹುಭಾಗ ಪರ್ವತಗಳು ಮತ್ತು ಉಷ್ಣವಲಯ ಅರಣ್ಯಗಳಿಂದ ಆವೃತವಾಗಿದ್ದರೂ, ಈ ದ್ವೀಪವೇ ಈಕ್ವೆಟೋರಿಯಲ್ ಗಿನಿಯ ಅತ್ಯಂತ ಹಳೆಯ ನಗರವಾದ ಮಲಾಬೊಗೆ ವಾಸಸ್ಥಳವಾಗಿದೆ; ಈ ವರ್ಷದ ಜನವರಿವರೆಗೆ ಅದು ದೇಶದ ರಾಜಧಾನಿಯಾಗಿತ್ತು.

ಏಪ್ರಿಲ್ 21ರ ಮಂಗಳವಾರ, ಪೂಜ್ಯ ಜಗದ್ಗುರು ಹದಿನಾಲ್ಕನೇ ಲಿಯೋ ಅವರು ಆಫ್ರಿಕಾದಲ್ಲಿನ ತಮ್ಮ ಅಪೋಸ್ತೋಲಿಕ ಯಾತ್ರೆಯ ನಾಲ್ಕನೇ ಮತ್ತು ಅಂತಿಮ ಹಂತವಾಗಿ ಈ ನಗರಕ್ಕೆ ಆಗಮಿಸಲಿದ್ದಾರೆ. 1982ರಲ್ಲಿ ಕೊನೆಯ ಬಾರಿ ಪೂಜ್ಯ ಜಗದ್ಗುರುವಿನ ಭೇಟಿ ಸ್ವೀಕರಿಸಿದ ನಂತರದಿಂದ, ವಿಶೇಷವಾಗಿ 1990ರ ದಶಕದ ಮಧ್ಯದಲ್ಲಿ ದೊಡ್ಡ ಪ್ರಮಾಣದ ತೈಲ ಸಂಪತ್ತಿನ ಕಂಡುಹಿಡಿಯುವಿಕೆಯ ಪರಿಣಾಮವಾಗಿ, ಈ ದೇಶವು ಅನೇಕ ರೀತಿಗಳಲ್ಲಿ ಸಂಪೂರ್ಣ ಬದಲಾವಣೆಯನ್ನು ಅನುಭವಿಸಿದೆ.

ಆ ಸಮಯದಿಂದ, ಈ ದೇಶವು ತಲಾ ಆದಾಯದ ಆಧಾರದ ಮೇಲೆ ಆಫ್ರಿಕಾದಲ್ಲಿಯೇ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿ ಪರಿಣಮಿಸಿದೆ. ಈ ಹೊಸ ಸಂಪತ್ತು ಮಲಾಬೊ ನಗರದ ಅತ್ಯಾಧುನಿಕ ವಿಮಾನ ನಿಲ್ದಾಣದಿಂದಲೇ ಸ್ಪಷ್ಟವಾಗಿ ಕಾಣುತ್ತದೆ; ಹಾಗೆಯೇ ನಗರದಲ್ಲಿನ ಇತರ ಭಾಗಗಳಲ್ಲಿಯೂ—ಉದಾಹರಣೆಗೆ, ರಾಜ್ಯ ವಿಶ್ವವಿದ್ಯಾಲಯದ ಹೊಸ “ಹದಿನಾಲ್ಕನೇ ಲಿಯೋ” ಕ್ಯಾಂಪಸ್‌ನಲ್ಲಿ—ಇದು ಗೋಚರಿಸುತ್ತದೆ, ಇದನ್ನು ಭೇಟಿ ನೀಡುತ್ತಿರುವ ಪೂಜ್ಯ ಜಗದ್ಗುರುವಿನ ಗೌರವಾರ್ಥವಾಗಿ ಇತ್ತೀಚೆಗೆ ಮರುನಾಮಕರಣ ಮಾಡಲಾಗಿದೆ.

ಆದರೆ, ಇತರ ಅನೇಕ ರೀತಿಗಳಲ್ಲಿ, ನಾಲ್ಕು ದಶಕಗಳ ಹಿಂದೆ ಎರಡನೇ ಜಾನ್ ಪಾಲರು ಭೇಟಿ ನೀಡಿದ ಕಾಲದಿಂದ ದೇಶದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಈಕ್ವೆಟೋರಿಯಲ್ ಗಿನಿಯ ತೈಲ ಸಂಪತ್ತು ಬಹಳ ಅಸಮಾನವಾಗಿ ಹಂಚಿಕೆಯಾಗಿದೆ, ಮತ್ತು ಬಡತನ ಇನ್ನೂ ವ್ಯಾಪಕವಾಗಿದೆ — ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಈ ದೇಶವು 193 ರಾಷ್ಟ್ರಗಳಲ್ಲಿ 133ನೇ ಸ್ಥಾನದಲ್ಲಿದೆ.

“ಇಲ್ಲಿ ನಮಗೆ ಅನೇಕ ಸಮಸ್ಯೆಗಳಿವೆ,ಆದರೆ ಪೂಜ್ಯ ಜಗದ್ಗುರುವಿನ ಭೇಟಿ ನಮಗೆ ಧೈರ್ಯ ಮತ್ತು ಶಕ್ತಿಯನ್ನು ನೀಡಿ, ನಾವು ಇರುವ ಕ್ರೈಸ್ತರಾಗಿ ಮುಂದುವರಿಯಲು ಸಹಾಯ ಮಾಡುತ್ತದೆ.” ಎಂದು ಮಲಾಬೊ ಮಹಾಧರ್ಮಪ್ರಾಂತ್ಯದ ಸೇವಾ ಕಾರ್ಯಗಳ ಧರ್ಮಾಧ್ಯಕ್ಷೀಯ ಪ್ರತಿನಿಧಿ ವಂ. ಗುರು ಜೋಸೆ ನ್ಡೋಂಗ್ ಹೇಳಿದರು.

ಮಲಾಬೊ ನಗರದ ಹಲವರ ಮನಸ್ಸಿನಲ್ಲಿ ಇರುವ ಇನ್ನೊಂದು ವಿಷಯವೆಂದರೆ, ಕೇವಲ ಕಳೆದ ಶುಕ್ರವಾರವೇ ಮಹಾಧರ್ಮಪ್ರಾಂತ್ಯದ ಪ್ರಧಾನ ಪ್ರತಿನಿಧಿ ಆಗಿದ್ದ 39 ವರ್ಷದ ವಂ. ಗುರು ಫೋರ್ಟುನಾಟೋ ಎನ್ಸುವೆ ಎಸೊನೋ ಅವರ ಆಕಸ್ಮಿಕ ನಿಧನ.

ಬಡತನ, ರಾಜಕೀಯ ಸಮಸ್ಯೆಗಳು ಹಾಗೂ “ಜನಾಂಗೀಯ” ಮನೋಭಾವ—ಈಕ್ವೆಟೋರಿಯಲ್ ಗಿನಿಯಲ್ಲಿ ಹಲವಾರು ಜನಾಂಗಗಳು ಇದ್ದು, ಕೆಲವೊಮ್ಮೆ ಅವುಗಳ ನಡುವೆ ಘರ್ಷಣೆಗಳು ಸಂಭವಿಸಿವೆ—ಇವುಗಳ ಜೊತೆಗೆ, ಮೂಲಭೂತವಾದಿ “ಪಂಥಗಳ” ಆಗಮನದಿಂದ ಉಂಟಾಗಿರುವ ಹಾನಿಯನ್ನೂ ವಂ. ಗುರು ಜೋಸೆ ನ್ಡೋಂಗ್ ಅವರು ಸೂಚಿಸುತ್ತಾರೆ. ಅವರ ಮಾತಿನಲ್ಲಿ, ಇವು ವಿಶ್ವಾಸಿಗಳನ್ನು ಕಥೋಲಿಕ ಧರ್ಮಸಭೆಯಿಂದ ದೂರಕ್ಕೆಳೆಯುತ್ತಿವೆ ಮತ್ತು ಭಕ್ತರನ್ನು “ಗೊಂದಲಕ್ಕೆ” ತಳ್ಳುತ್ತಿವೆ.

ಆದಾಗ್ಯೂ, ಈಕ್ವೆಟೋರಿಯಲ್ ಗಿನಿಯ ಬಹುಪಾಲು ಜನರು ಇನ್ನೂ ಕಥೋಲಿಕರಾಗಿಯೇಉಳಿದಿದ್ದಾರೆ. ಮಲಾಬೊ ನಗರದ ಕೇಂದ್ರದಲ್ಲಿರುವ ಸಂತ ಎಲಿಜಬೆತ್ ಧರ್ಮಸಭೆಯಲ್ಲಿ ನಡೆಯುವ ಪವಿತ್ರ ಬಲಿಪೂಜೆಯಲ್ಲಿ ಅವರ ನಂಬಿಕೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ—ಗಾನಗಳು, ಹಾಡುಗಳು ಮತ್ತು ಸಂಜೆ ವೇಳೆಯಲ್ಲಿ ಪವಿತ್ರ ಪರಮ ಪ್ರಸಾದದ ಆರಾಧನೆಗಾಗಿ ತುಂಬಿ ತುಳುಕುವ ಆಸನಗಳು ಇದರ ಸಾಕ್ಷಿಯಾಗಿವೆ.

“ಈಕ್ವೆಟೋರಿಯಲ್ ಗಿನಿಯಲ್ಲಿನ ನಂಬಿಕೆಯ ಜೀವನ ಬಹಳ ಚೈತನ್ಯಮಯವಾಗಿದೆ,” ಎಂದು ಕ್ಲಾರೆಟ್ ಹೈ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ವಂ. ಗುರು ಡಿಯೋಸದಾಡೋ ಲೊರೆನ್ಸೋ ಹೇಳಿದರು. “ಪೂಜೆಗಳ ಸಮಯದಲ್ಲಿ ಜನರು ತಮ್ಮ ಸಂತೋಷ, ದುಃಖ, ನೋವು ಮತ್ತು ಭರವಸೆಯನ್ನು ದೇವರೊಂದಿಗೆ ಹಂಚಿಕೊಳ್ಳಲು ಸದಾ ಸಿದ್ಧರಾಗಿರುತ್ತಾರೆ.” ಇದರಲ್ಲಿ ಕೊನೆಯ ಪದವಾದ — ಭರವಸೆ — ಮಲಾಬೊ ನಿವಾಸಿಗಳೊಂದಿಗೆ ನಡೆದ ಸಂಭಾಷಣೆಯಲ್ಲಿ ಪೂಜ್ಯ ಜಗದ್ಗುರುವಿನ ಭೇಟಿಯನ್ನು ಉಲ್ಲೇಖಿಸಿದಾಗ ಹೆಚ್ಚು ಕೇಳಿಬರುತ್ತದೆ.

“ಇಲ್ಲಿ ಸಮಸ್ಯೆಗಳಿವೆ,” ಎಂದು ವಂ. ಗುರು ನ್ಡೋಂಗ್ ಹೇಳಿದರು, “ಆದರೆ ಯೇಸುವಿನ ಅನುಯಾಯಿಗಳಾಗಿ ನಾವು ನಮ್ಮ ನಂಬಿಕೆಯನ್ನು ಮತ್ತು ನಮ್ಮ ಭರವಸೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಪೂಜ್ಯ ಜಗದ್ಗುರು ನಮ್ಮಲ್ಲಿ ಆ ಭರವಸೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತಾರೆ ಎಂದು ನಾವು ಭಾವಿಸುತ್ತೇವೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

21 ಏಪ್ರಿಲ್ 2026, 19:54