ಹುಡುಕಿ

ಇರಾನ್‌ನಲ್ಲಿ ಯುದ್ಧ (AFP ಅಥವಾ ಪರವಾನಗಿದಾರರು) ಇರಾನ್‌ನಲ್ಲಿ ಯುದ್ಧ (AFP ಅಥವಾ ಪರವಾನಗಿದಾರರು)  (AFP or licensors)

ಇರಾನ್: ದಾಳಿಗಳು ಹೆಚ್ಚುವ ಭೀತಿ—ಸಾವುಗಳ ಸಂಖ್ಯೆ ಏರಿಕೆ

ಇರಾನ್ ಮೇಲೆ ಮತ್ತಷ್ಟು ದಾಳಿಗಳು ನಡೆಯುವ ಸಾಧ್ಯತೆಯ ನಡುವೆ, ಸಾವುಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಅಮೆರಿಕಾ ಅಧ್ಯಕ್ಷರಾದ ಟ್ರಂಪ್, ಹೋರ್ಮುಜ್ ಸಮುದ್ರಸಂಧಿಯನ್ನು ಮರುತೆರೆಯುವ ಒಪ್ಪಂದಕ್ಕೆ ಇರಾನ್ ಒಪ್ಪದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಲೇಖಕರು: ನೇತನ್ ಮಾರ್ಲೆ

ಅಮೆರಿಕಾ ಅಧಿಕಾರಿಯೊಬ್ಬರು ಮಂಗಳವಾರ, ಅಮೆರಿಕಾ ಪಡೆಗಳು ಇರಾನ್‌ನ ಖಾರ್ಗ್ ದ್ವೀಪದಲ್ಲಿರುವ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದನ್ನು ದೃಢಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ, “ಒಂದು ಸಂಪೂರ್ಣ ನಾಗರಿಕತೆ ಇಂದೇ ರಾತ್ರಿ ನಾಶವಾಗಬಹುದು; ಮತ್ತೆ ಅದು ಎಂದಿಗೂ ಮರಳಿ ಬರುವುದಿಲ್ಲ,” ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮೊದಲು, ಇಸ್ರಾಯೇಲ್ ಸರ್ಕಾರವು ಇರಾನ್ ಜನರಿಗೆ ರೈಲು ಪ್ರಯಾಣವನ್ನು ತಪ್ಪಿಸಲು ಸೂಚಿಸಿದೆ. “ರೈಲು ಪ್ರಯಾಣ ನಿಮ್ಮ ಜೀವಕ್ಕೆ ಅಪಾಯವಾಗಬಹುದು,” ಎಂದು ಎಚ್ಚರಿಸಿದ್ದು, ಇರಾನ್‌ನ ಮೂರನೇ ಪೆಟ್ರೋಕೆಮಿಕಲ್ ಘಟಕದ ಮೇಲೆ ದಾಳಿ ನಡೆಸಿರುವುದನ್ನೂ ದೃಢಪಡಿಸಿದೆ.

ಈ ಎಚ್ಚರಿಕೆ, ಟ್ರಂಪ್ ಅವರು ಇರಾನ್ ಮೂಲಸೌಕರ್ಯವನ್ನು “ಸಂಪೂರ್ಣವಾಗಿ ಧ್ವಂಸ ಮಾಡುವ” ಸಾಧ್ಯತೆಯ ಬಗ್ಗೆ ಹೇಳಿಕೆ ನೀಡಿದ ನಂತರ ಬಂದಿದೆ. ಅವರು “ಒಂದು ರಾತ್ರಿ ಒಳಗೆ ಇರಾನ್ ಅನ್ನು ನಾಶ ಮಾಡಬಹುದು” ಎಂದು ಹೇಳಿದ್ದಾರೆ. ಅಮೆರಿಕಾ ಅಧ್ಯಕ್ಷರು ಹೋರ್ಮುಜ್ ಸಮುದ್ರಸಂಧಿಯನ್ನು ಮರುತೆರೆಯಲು ಮಧ್ಯರಾತ್ರಿ ಗಡುವನ್ನು ನಿಗದಿಪಡಿಸಿದ್ದಾರೆ. ಆದರೆ ಹಿಂದಿನ ಗಡುವುಗಳು ಹಲವು ಬಾರಿ ಬದಲಾಗಿದ್ದವು.

ಅಮೆರಿಕಾ ಆಧಾರಿತ ಮಾನವ ಹಕ್ಕುಗಳ ಸಂಸ್ಥೆಯ ಪ್ರಕಾರ, ಅಮೆರಿಕಾ-ಇಸ್ರಾಯೇಲ್ ದಾಳಿಗಳು ಆರಂಭವಾದ ಬಳಿಕ ಇರಾನ್‌ನಲ್ಲಿ ಕನಿಷ್ಠ 1,665 ಸಾಮಾನ್ಯ ನಾಗರಿಕರು ಸೇರಿ 3,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಸೋಮವಾರ ಅತ್ಯಧಿಕ ದಾಳಿಗಳು ನಡೆದ ದಿನವಾಗಿದ್ದು, 49 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಇದರ ನಡುವೆ, ಇರಾನ್ ಸರ್ಕಾರವು ಅಮೆರಿಕಾದ ಯುದ್ಧ ವಿರಾಮ ಪ್ರಸ್ತಾವವನ್ನು ಅಧಿಕೃತವಾಗಿ ತಿರಸ್ಕರಿಸಿದೆ.

ವ್ಯಾಪಾರ ಮತ್ತು ಇಂಧನದ ಮೇಲೆ ಒತ್ತಡ

ಇನ್ನೊಂದು ಬೆಳವಣಿಗೆಯಲ್ಲಿ, ವಿಶ್ವ ಸಂಸ್ಥೆಯ ಆಹಾರ ಕಾರ್ಯಕ್ರಮವು ಈ ಯುದ್ಧವು ಸಮುದ್ರ ಮಾರ್ಗಗಳ ಅಸ್ಥಿರತೆಯನ್ನು ಹೆಚ್ಚಿಸಿದೆ ಎಂದು ಎಚ್ಚರಿಸಿದೆ. ಮಧ್ಯಪ್ರಾಚ್ಯದ ಯುದ್ಧ ಮತ್ತು ಹೋರ್ಮುಜ್ ಸಮುದ್ರಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳು, ಪ್ರಮುಖ ಸಾಗರ ಮಾರ್ಗಗಳ ಭದ್ರತೆಯ ಕೊರತೆಯನ್ನು ಬಯಲಿಗೆಳೆದಿವೆ. ಇದರಿಂದ ಮಾನವೀಯ ಸಹಾಯದ ಮೇಲೆ ಅವಲಂಬಿತವಾಗಿರುವ ಜನರಿಗೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಇಂಧನ ಮಾರುಕಟ್ಟೆಗಳು ಈಗಾಗಲೇ ಒತ್ತಡದಲ್ಲಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಅದರ ಪರಿಣಾಮ ಹೆಚ್ಚು ತೀವ್ರವಾಗಬಹುದು.

ವಿಶ್ಲೇಷಕರ ಪ್ರಕಾರ, ಸಂಘರ್ಷ ಇನ್ನಷ್ಟು ತೀವ್ರವಾದರೆ, ಜಾಗತಿಕ ತೈಲ ಮಾರುಕಟ್ಟೆಯ ಇತಿಹಾಸದಲ್ಲೇ ಅತಿದೊಡ್ಡ ವ್ಯತ್ಯಯ ಉಂಟಾಗಬಹುದು. ಈ ಸಂಘರ್ಷವು ರಾಸಾಯನಿಕ ರಸಗೊಬ್ಬರಗಳ ಉತ್ಪಾದನಾ ವೆಚ್ಚವನ್ನೂ ಹೆಚ್ಚಿಸುತ್ತಿದೆ, ವಿಶೇಷವಾಗಿ ಪ್ರಕೃತಿ ಅನಿಲದ ಮೇಲೆ ಅವಲಂಬಿತವಾಗಿರುವ ನೈಟ್ರೋಜನ್ ಆಧಾರಿತ ರಸಗೊಬ್ಬರಗಳ ವೆಚ್ಚವನ್ನೂ ಹೆಚ್ಚಿಸುತ್ತಿದೆ. ವೆಚ್ಚದ ಏರಿಕೆ ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯ ಮೇಲೆ ಒತ್ತಡ ತರುತ್ತಿದ್ದು, ಜಾಗತಿಕ ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಡಗು ಸಂಚಾರದ ವ್ಯತ್ಯಯವು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ದಾಳಿಗಳನ್ನು ತಪ್ಪಿಸಲು ಹಡಗುಗಳು ಮಾರ್ಗ ಬದಲಾಯಿಸುತ್ತಿರುವುದರಿಂದ ಪ್ರಯಾಣ ಸಮಯ ಮತ್ತು ಸಾರಿಗೆ ವೆಚ್ಚ ಹೆಚ್ಚುತ್ತಿದೆ. ಮಾನವೀಯ ಸಂಸ್ಥೆಗಳ ಪ್ರಕಾರ, ಈ ವಿಳಂಬಗಳು ಆಹಾರ ಮತ್ತು ಅಗತ್ಯ ವಸ್ತುಗಳ ವಿತರಣೆಯನ್ನು ನಿಧಾನಗೊಳಿಸುತ್ತಿದ್ದು, ಸರಬರಾಜು ದುಬಾರಿ ಮತ್ತು ಅನಿಶ್ಚಿತವಾಗುತ್ತಿದೆ. 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

07 ಏಪ್ರಿಲ್ 2026, 01:39