ಹುಡುಕಿ

ಬೆಂಕಿಗಳ ಭೂಮಿಗೆ ಪೂಜ್ಯ ಜಗದ್ಗುರುಗಳನ್ನು ಸ್ವಾಗತಿಸಿದ ಅಸೆರಾದ ಪರಿಸರ ಕಾರ್ಯಕರ್ತರು ಬೆಂಕಿಗಳ ಭೂಮಿಗೆ ಪೂಜ್ಯ ಜಗದ್ಗುರುಗಳನ್ನು ಸ್ವಾಗತಿಸಿದ ಅಸೆರಾದ ಪರಿಸರ ಕಾರ್ಯಕರ್ತರು  (ANSA)

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿಯ ಸಂದರ್ಭದಲ್ಲಿ ಇಟಲಿಯ ‘ಬೆಂಕಿಗಳ ಭೂಮಿ’ಯ ಒಳನೋಟ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಧರ್ಮಪಾಲನಾ ಭೇಟಿಗಾಗಿ ಆಗಮಿಸಿರುವ ಸಂದರ್ಭದಲ್ಲಿ, ವ್ಯಾಟಿಕನ್ ಸುದ್ದಿ ಸಂಸ್ಥೆ ದಕ್ಷಿಣ ಇಟಲಿಯ “ಬೆಂಕಿಗಳ ಭೂಮಿ” ಎಂದು ಕರೆಯಲ್ಪಡುವ ಅಚೆರ್ರಾ ಪಟ್ಟಣದಿಂದ ವರದಿ ಮಾಡುತ್ತಿದೆ. “ವೊಲೊಂಟಾರಿ ಆಂಟಿರೊಘಿ ಅಚೆರ್ರಾ” (ಅಚೆರ್ರಾ ಬೆಂಕಿ ವಿರೋಧಿ ಸ್ವಯಂಸೇವಕರು) ಸಂಸ್ಥೆಯ ಸದಸ್ಯರಾದ ಮಿಕೆಲೆ ಪನ್ನೆಲ್ಲಾ ಮತ್ತು ಅಲೆಸ್ಸಾಂದ್ರೊ ಕನ್ನವಚ್ಚಿಯೋಲೊ ಅವರು, ಈ ಪ್ರದೇಶದಲ್ಲಿ ದಶಕಗಳಿಂದ ನಡೆಯುತ್ತಿರುವ ಪರಿಸರ ಹಾನಿಯ ಕುರಿತು ವಿವರಿಸಿದ್ದಾರೆ.

ಲೇಖಕರು: ಅಂಟೊನೆಲ್ಲಾ ಪಾಲೆರ್ಮೋ – ಅಚೆರ್ರಾ

ಅಸ್ಬೆಸ್ಟಾಸ್, ಗೃಹೋಪಯೋಗಿ ಸಾಧನಗಳು, ಬಣ್ಣದ ಡಬ್ಬಿಗಳು ಮತ್ತು ಎಟಿಎಂ ಯಂತ್ರಗಳವರೆಗೂ — ಎಲ್ಲ ವಿಧದ ತ್ಯಾಜ್ಯಗಳು ಅಚೆರ್ರಾ ಪಟ್ಟಣದ ಕೇಂದ್ರದ ಹೊರವಲಯದ ರಸ್ತೆಬದಿಗಳಲ್ಲಿ ಅಕ್ರಮ ಮುಕ್ತ ಕಸದ ತಾಣಗಳಲ್ಲಿ ಬಿದ್ದಿವೆ. ಆದರೆ ಅತ್ಯಂತ ಆತಂಕಕಾರಿ ಸಮಸ್ಯೆಯೆಂದರೆ ನೆಲದಡಿಯ ಮಾಲಿನ್ಯ. ಅದು ಮಣ್ಣಿನ ಆಳದ ಪದರಗಳವರೆಗೂ ನುಗ್ಗಿ, ಅವುಗಳನ್ನು ಶಾಶ್ವತವಾಗಿ ಕಲುಷಿತಗೊಳಿಸಿದೆ. ರೈತರ ಹೊಲಗಳ ಪಕ್ಕದಲ್ಲೇ, ಇಟಲಿಯ ಕ್ಯಾಂಪಾನಿಯಾ ಪ್ರದೇಶಕ್ಕೆ ಕೃಷಿ ದೃಷ್ಟಿಯಿಂದ ಹೆಮ್ಮೆಯ ಮೂಲವಾಗಬೇಕಿದ್ದ ಭೂಮಿಯಲ್ಲಿ, ದಶಕಗಳ ಕಾಲ ಸುರಿಯಲ್ಪಟ್ಟ ವಿಷಕಾರಿ ಪದಾರ್ಥಗಳು ಬಿದ್ದಿವೆ. ಆದರೆ ಅದು ಈಗ ಸಾವಿನ ತಾಣವಾಗಿ ಪರಿಣಮಿಸಿದೆ.

“ವೊಲೊಂಟಾರಿ ಆಂಟಿರೊಘಿ ಅಚೆರ್ರಾ” ಸಂಸ್ಥೆಯ ಸದಸ್ಯರಾದ ಮಿಕೆಲೆ ಪನ್ನೆಲ್ಲಾ ಮತ್ತು ಅಲೆಸ್ಸಾಂದ್ರೊ ಕನ್ನವಚ್ಚಿಯೋಲೊ ಅವರು, 1990ರ ದಶಕದ ಅಂತ್ಯ ಮತ್ತು 2000ರ ಆರಂಭದಿಂದಲೂ ನಡೆಯುತ್ತಿರುವ ಈ ದುರಂತವನ್ನು ಬೆಳಕಿಗೆ ತರಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸ್ಥಳೀಯ ತ್ಯಾಜ್ಯ ಸಂಸ್ಕರಣೆ ಮತ್ತು ಕಾಂಕ್ರೀಟ್ ಉತ್ಪಾದನಾ ಕಂಪನಿಗಳು, ಮಣ್ಣಿಗೆ “ಉತ್ತಮ ಗುಣಮಟ್ಟದ ಕಾಂಪೋಸ್ಟ್” (ಅಂದರೆ ಗೊಬ್ಬರ) ತಯಾರಿಸುತ್ತಿದ್ದೇವೆ ಎಂಬ ನೆಪದಲ್ಲಿ, ವಿಷಕಾರಿ ದ್ರವ ಮತ್ತು ಘನ ಪದಾರ್ಥಗಳ ಮಿಶ್ರಣವನ್ನು ರಹಸ್ಯವಾಗಿ ಸೇರಿಸುತ್ತಿದ್ದವು. ನಂತರ, ಬಹುತೇಕ ರೈತರಿಗೆ ತಿಳಿಯದಂತೆ, ಈ ಮಿಶ್ರಣವನ್ನು ಹೊಲಗಳಲ್ಲಿ ಹರಡಲಾಗುತ್ತಿತ್ತು. ಇದರ ಆರೋಗ್ಯದ ಪರಿಣಾಮಗಳು ಅಪಾರವಾಗಿದ್ದು, ಸ್ಥಳೀಯ ಜನಸಂಖ್ಯೆಯ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೂ ಪರಿಣಾಮ ಬೀರಿವೆ.

“ನಮ್ಮನ್ನು ಬಿಟ್ಟುಹೋಗಬೇಡಿ, ಮತ್ತೆ ಬನ್ನಿ,” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಯ ತಂಡಕ್ಕೆ ಈ ದೃಶ್ಯಗಳನ್ನು ತೋರಿಸುತ್ತಾ ಮನವಿ ಮಾಡಿದರು. ಅವರ ಧ್ವನಿಗಳು, ದಿವಂಗತ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ಲೌದಾತೊ ಸಿ (Laudato si)’ ಎಂಬ ವಿಶ್ವಪತ್ರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಶಿಸುವ ಎಲ್ಲರ ಧ್ವನಿಗಳೊಂದಿಗೆ ಒಂದಾಗಿವೆ. ಮೇ 23ರಂದು ನಡೆಯುತ್ತಿರುವ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಧರ್ಮಪಾಲನಾ ಭೇಟಿಯ ಸುತ್ತ ಅವರು ಸಂಘಟಿತರಾಗುತ್ತಿದ್ದಾರೆ. ಮತ್ತೊಮ್ಮೆ ಉಸಿರಾಡುವ ಅವಕಾಶ ದೊರಕಲಿ ಎಂದು ಅವರು ವಿನಂತಿಸುತ್ತಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

23 ಮೇ 2026, 12:27