ಗಾಜಾದಲ್ಲಿ ಇಲಿಗಳ ಮೂಲಕ ಹರಡುವ ರೋಗಗಳ ಹೆಚ್ಚಳದ ಆತಂಕ
ಲೇಖಕರು: ಲಿಂಡಾ ಬೋರ್ಡೊನಿ
ಗಾಜಾ ಪಟ್ಟಿಯಲ್ಲಿ, 75,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ, ಜನಸಂಖ್ಯೆಯ 90 ಪ್ರತಿಶತಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಗೊಳಿಸಿದ ಮತ್ತು ಭಾರೀ ವಿನಾಶ ಉಂಟುಮಾಡಿದ ಯುದ್ಧದ ಪರಿಣಾಮಗಳನ್ನು ಕುಟುಂಬಗಳು ಇನ್ನೂ ಅನುಭವಿಸುತ್ತಿವೆ. 2025ರ ಅಕ್ಟೋಬರ್‌ನಲ್ಲಿ ಅಸ್ಥಿರವಾದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ಪರಿಸ್ಥಿತಿ ಸುಧಾರಿಸಿಲ್ಲ.
ಈಗ ವೈದ್ಯರು ಮತ್ತೊಂದು ಗಂಭೀರ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ — ವ್ಯಾಪಕವಾಗಿ ಹರಡುತ್ತಿರುವ ಇಲಿಗಳ ಕಾಟ. ಇದು ಸೋಂಕು ರೋಗಗಳನ್ನು ಹೆಚ್ಚಿಸುವುದರ ಜೊತೆಗೆ, ಈಗಾಗಲೇ ಭೀಕರವಾಗಿರುವ ಮಾನವೀಯ ಸಂಕಷ್ಟವನ್ನು ಇನ್ನಷ್ಟು ಗಾಢಗೊಳಿಸುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2026ರ ಆರಂಭದಿಂದ ಗಾಜಾದಲ್ಲಿ 70,000ಕ್ಕೂ ಹೆಚ್ಚು ಎಕ್ಟೋಪರಾಸೈಟ್ ಸೋಂಕುಗಳು ಮತ್ತು ಇಲಿಗಳ ಮೂಲಕ ಹರಡುವ ರೋಗಗಳ ಪ್ರಕರಣಗಳು ದಾಖಲಾಗಿವೆ.
ಸ್ವಚ್ಛತಾ ವ್ಯವಸ್ಥೆಗಳ ಕುಸಿತ, ಅವಶೇಷಗಳ ರಾಶಿಗಳು, ಹರಿದುಬರುತ್ತಿರುವ ಒಳಚರಂಡಿ ಮತ್ತು ತುಂಬಿ ತುಳುಕುತ್ತಿರುವ ಸ್ಥಳಾಂತರಿತರ ಶಿಬಿರಗಳು — ಇವೆಲ್ಲವೂ ರೋಗಗಳು ವೇಗವಾಗಿ ಹರಡಲು ಅನುಕೂಲಕರ ಪರಿಸ್ಥಿತಿಯನ್ನು ನಿರ್ಮಿಸಿವೆ ಎಂದು ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ. ಆದಾಗ್ಯೂ, ಮಾನವೀಯ ಸಂಸ್ಥೆಗಳು ಸತತ ಎಚ್ಚರಿಕೆ ನೀಡುತ್ತಿದ್ದರೂ, ಈ ಸಂಕಷ್ಟಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಪ ಗಮನವೇ ದೊರೆತಿದೆ. ಗಾಜಾದ ಜನರು ದಿನದಿಂದ ದಿನಕ್ಕೆ ಇನ್ನಷ್ಟು ಅಪಾಯಕಾರಿ ಪರಿಸ್ಥಿತಿಗಳ ನಡುವೆ ಬದುಕುಳಿಯಲು ಹೋರಾಡುತ್ತಿದ್ದಾರೆ.
ಭದ್ರತಾ ಕಾರಣಗಳಿಂದ ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಗಾಜಾದ ಒಬ್ಬ ವೈದ್ಯರು, ಕಾರಿತಾಸ್ ಜೆರುಸಲೇಮ್‌ಗೆ ಮಾತನಾಡುತ್ತಾ, ಹಾನಿಗೊಳಗಾದ ಕಟ್ಟಡಗಳು ಮತ್ತು ತಾತ್ಕಾಲಿಕ ಆಶ್ರಯಗಳಲ್ಲಿ ಮಲಗಬೇಕಾದ ಕುಟುಂಬಗಳ ನಡುವೆ ಹೆಚ್ಚುತ್ತಿರುವ ಭಯದ ದೃಶ್ಯಗಳನ್ನು ವಿವರಿಸಿದರು. ರಾತ್ರಿ ವೇಳೆ ಇಲಿಗಳು ಮುಕ್ತವಾಗಿ ಓಡಾಡುತ್ತಿರುವುದನ್ನು ಅವರು ಕಂಡಿದ್ದಾರೆ ಎಂದು ಹೇಳಿದರು.
ಇಲಿಗಳ ಕಚ್ಚುವ ಪ್ರಕರಣಗಳ ಏರಿಕೆ
ಸುಮಾರು ಆರು ವಾರಗಳ ಹಿಂದೆ ತಾವು ಎದುರಿಸಿದ ಮೊದಲ ಗಂಭೀರ ಇಲಿಯ ಕಚ್ಚುವ ಘಟನೆಯನ್ನು ಆ ವೈದ್ಯರು ನೆನಪಿಸಿಕೊಂಡರು. “ನನ್ನ ಸಹೋದ್ಯೋಗಿಯೊಬ್ಬರು ಮಧ್ಯರಾತ್ರಿ ನನಗೆ ಕರೆ ಮಾಡಿ, ನಿದ್ರಿಸುತ್ತಿದ್ದ ವೇಳೆ ಇಲಿಯೊಂದು ಕಚ್ಚಿದ ತನ್ನ ಸಹೋದರನಿಗೆ ಏನು ಚಿಕಿತ್ಸೆ ನೀಡಬೇಕು ಎಂದು ಕೇಳಿದರು,” ಎಂದು ಅವರು ಹೇಳಿದರು.35 ವರ್ಷದ ಆ ವ್ಯಕ್ತಿ, ಅವಶೇಷಗಳು ಮತ್ತು ಕಸದ ರಾಶಿಗಳಿಂದ ಸುತ್ತುವರಿದ, ಭಾಗಶಃ ಧ್ವಂಸಗೊಂಡ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಅವರ ಎಡಗೈ ತೋರು ಬೆರಳಿಗೆ ಇಲಿಯು ಕಚ್ಚಿದ್ದು, ಗಾಯವನ್ನು ಸ್ವಚ್ಛಗೊಳಿಸುವುದು, ಆಂಟಿಬಯಾಟಿಕ್ ಔಷಧಿ ಮತ್ತು ಟೆಟನಸ್ ಲಸಿಕೆ ಸೇರಿದಂತೆ ತುರ್ತು ಚಿಕಿತ್ಸೆ ಅಗತ್ಯವಾಯಿತು. ಇಂತಹ ಘಟನೆಗಳು ಈಗ ಪ್ರತ್ಯೇಕ ಪ್ರಕರಣಗಳಾಗಿ ಉಳಿದಿಲ್ಲ ಎಂದು ವೈದ್ಯರು ವಿವರಿಸಿದರು.
“ಪ್ರತಿ ರಾತ್ರಿ ಸುಮಾರು 10 ಮಂದಿ ಇಲಿಗಳ ಕಚ್ಚುವಿಕೆಗೆ ಒಳಗಾದ ರೋಗಿಗಳು ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುತ್ತಿದ್ದಾರೆ,” ಎಂದು ಇನ್ನೂ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿನ ತಮ್ಮ ಸಹೋದ್ಯೋಗಿಗಳ ಮಾಹಿತಿಯನ್ನು ಉಲ್ಲೇಖಿಸಿ ಹೇಳಿದರು. ಸಂಜೆ ಕತ್ತಲಾಗುತ್ತಿದ್ದಂತೆ ಇಲಿಗಳು ಹೊರಬಂದು ಬೀದಿಗಳು ಮತ್ತು ಸ್ಥಳಾಂತರಿತರ ಶಿಬಿರಗಳ ನಡುವೆ ಸಂಚರಿಸುತ್ತವೆ ಎಂದು ಅವರು ವಿವರಿಸಿದರು.
“ಪ್ರತಿ ರಾತ್ರಿ ನನ್ನ ಮನೆಯ ಸುತ್ತಮುತ್ತ, ಕಸದ ರಾಶಿ ಮತ್ತು ಒಳಚರಂಡಿಗಳ ನಡುವೆ ಇಲಿಗಳನ್ನು ನಾನು ನೋಡುತ್ತೇನೆ ಮತ್ತು ಅವುಗಳ ಶಬ್ದವನ್ನು ಕೇಳುತ್ತೇನೆ,” ಎಂದು ಅವರು ಹೇಳಿದರು.
ಮಾಲಿನ್ಯದ ಅಪಾಯ
ಇಲಿಗಳ ಕಚ್ಚುವಿಕೆಯಷ್ಟೇ ಅಪಾಯಕರವಲ್ಲ, ಅದರ ಪರಿಣಾಮಗಳು ಇನ್ನೂ ಗಂಭೀರವಾಗಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.ಇಲಿಗಳು ಆಹಾರ ಸಾಮಗ್ರಿಗಳನ್ನು ಕಲುಷಿತಗೊಳಿಸುತ್ತಿವೆ, ಗುಡಾರಗಳನ್ನು ಕಚ್ಚಿ ಹಾನಿಗೊಳಿಸುತ್ತಿವೆ ಮತ್ತು ಲೆಪ್ಟೋಸ್ಪೈರೋಸಿಸ್, ಹ್ಯಾಂಟಾವೈರಸ್ ಪಲ್ಮನರಿ ಸಿಂಡ್ರೋಮ್ ಹಾಗೂ ರಿಕೆಟ್‌ಷಿಯಲ್ ಸೋಂಕುಗಳಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತಿವೆ.
ಆದರೆ, ತಿಂಗಳಗಟ್ಟಲೆ ನಡೆದ ಸಂಘರ್ಷ ಮತ್ತು ಕೊರತೆಗಳಿಂದ ದುರ್ಬಲಗೊಂಡಿರುವ ಗಾಜಾದ ಆರೋಗ್ಯ ವ್ಯವಸ್ಥೆಗೆ ಈ ಸಂಕಷ್ಟವನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ.
“ಅಗತ್ಯ ವೈದ್ಯಕೀಯ ಉಪಕರಣಗಳು ಮತ್ತು ಪ್ರಮುಖ ಆಂಟಿಬಯಾಟಿಕ್ ಔಷಧಿಗಳಲ್ಲಿ 50 ಪ್ರತಿಶತದಷ್ಟು ಕೊರತೆ ಇದೆ,” ಎಂದು ವೈದ್ಯರು ವಿವರಿಸಿದರು. “ಸಾಮಾನ್ಯ ಕಚ್ಚುವಿಕೆಗಳಿಗೆ ಚಿಕಿತ್ಸೆ ನೀಡಲು ನಮಗೆ ಸಾಧ್ಯವಾಗುತ್ತದೆ. ಆದರೆ ಇಲಿಗಳ ಮೂಲಕ ಹರಡುವ ಸೋಂಕುಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ತುಂಬಾ ಕಷ್ಟವಾಗುತ್ತಿದೆ.”
ರೇಬೀಸ್ ವಿರುದ್ಧದ ಲಸಿಕೆಗಳು ಮತ್ತು ಸೀರಮ್ ಲಭ್ಯವಿಲ್ಲ ಎಂದು ಅವರು ತಿಳಿಸಿದರು. ಜೊತೆಗೆ, ಸೋಂಕು ರೋಗಗಳನ್ನು ದೃಢೀಕರಿಸಲು ಅಗತ್ಯವಿರುವ ಸಾಧನಗಳು ಮತ್ತು ರಾಸಾಯನಿಕಗಳ ಕೊರತೆಯಿಂದ ಪ್ರಯೋಗಾಲಯಗಳು ಸಂಕಷ್ಟ ಅನುಭವಿಸುತ್ತಿವೆ.
“ವೈದ್ಯರು ತಮ್ಮ ವೈದ್ಯಕೀಯ ಪರಿಶೀಲನೆ ಮತ್ತು ಅನುಭವದ ಆಧಾರದ ಮೇಲೆಯೇ ನಿರ್ಧಾರ ಕೈಗೊಳ್ಳಬೇಕಾಗಿದೆ,” ಎಂದು ಅವರು ಹೇಳಿದರು. “ಪಿಸಿಆರ್ ಪರೀಕ್ಷಾ ಸಾಧನಗಳು ಗಾಜಾ ಪ್ರದೇಶದಲ್ಲಿ ಲಭ್ಯವಿಲ್ಲ.”
ಮೂಲಸೌಕರ್ಯಗಳ ನಾಶ ಮತ್ತು ಸಾರ್ವಜನಿಕ ಸೇವೆಗಳ ಕೊರತೆ
ಹೆಚ್ಚುತ್ತಿರುವ ಇಲಿಗಳ ಕಾಟವು ಮೂಲಸೌಕರ್ಯಗಳ ಧ್ವಂಸ ಮತ್ತು ಮೂಲಭೂತ ಸಾರ್ವಜನಿಕ ಸೇವೆಗಳ ಕೊರತೆಯೊಂದಿಗೆ ನೇರವಾಗಿ ಸಂಬಂಧಿಸಿದೆ ಎಂದು ವೈದ್ಯರು ಒತ್ತಿಹೇಳಿದರು.ಅವಶೇಷಗಳನ್ನು ತೆರವುಗೊಳಿಸುವುದು, ಒಳಚರಂಡಿ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸುವುದು, ಕಸದ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಶುದ್ಧ ಕುಡಿಯುವ ನೀರನ್ನು ಒದಗಿಸುವುದಕ್ಕಾಗಿ ತುರ್ತು ಅಂತರರಾಷ್ಟ್ರೀಯ ಕ್ರಮ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.
“ಇಲಿಗಳು ಕಚ್ಚಬಹುದು ಎಂಬ ಭಯದಿಂದ ಕುಟುಂಬಗಳು ಮತ್ತು ಮಕ್ಕಳು ರಾತ್ರಿ ನಿದ್ರೆ ಮಾಡಲು ಸಹ ಹೆದರುತ್ತಿದ್ದಾರೆ,” ಎಂದು ಅವರು ಹೇಳಿದರು.
ದೊಡ್ಡ ಮಟ್ಟದ ಯುದ್ಧ ಕಡಿಮೆಯಾದರೂ, ಗಾಜಾದ ನಾಗರಿಕರು ಇನ್ನೂ ಭೀಕರ ಪರಿಸ್ಥಿತಿಗಳಲ್ಲೇ ಸಿಲುಕಿಕೊಂಡಿದ್ದಾರೆ ಎಂದು ಮಾನವೀಯ ಸಂಸ್ಥೆಗಳು ಮರುಮರು ಎಚ್ಚರಿಕೆ ನೀಡಿವೆ. ವಿಶಾಲ ಪ್ರದೇಶಗಳು ಇನ್ನೂ ಅವಶೇಷಗಳಾಗಿಯೇ ಉಳಿದಿವೆ. ಆರೋಗ್ಯ ಸೇವೆಗಳ ಪ್ರವೇಶ ತೀವ್ರವಾಗಿ ಸೀಮಿತವಾಗಿದೆ. ಔಷಧಿ, ಇಂಧನ ಮತ್ತು ಸ್ವಚ್ಛತಾ ಸಾಮಗ್ರಿಗಳ ಕೊರತೆ ನಾಗರಿಕರನ್ನು ನಿರಂತರ ಅಪಾಯದೊಳಗೆ ತಳ್ಳುತ್ತಿದೆ.
ಚೇತರಿಕೆ ಮತ್ತು ಭವಿಷ್ಯದ ಭರವಸೆ
ಗಾಜಾದ ಪುನರುತ್ಥಾನಕ್ಕೆ ಕೇವಲ ತುರ್ತು ನೆರವು ಮಾತ್ರ ಸಾಕಾಗುವುದಿಲ್ಲ ಎಂದು ಆ ವೈದ್ಯರು ಹೇಳಿದ್ದಾರೆ.“ಎಲ್ಲಕ್ಕಿಂತ ಮುಖ್ಯವಾಗಿ, ಕಟ್ಟುನಿಟ್ಟಿನ ಕದನ ವಿರಾಮ ಮತ್ತು ಶಾಂತಿ ಸ್ಥಾಪನೆಯಾಗಲಿ ಎಂಬುದೇ ನನ್ನ ಭರವಸೆ,” ಎಂದು ಅವರು ಹೇಳಿದರು.
ಪರಿಸರ ಸಂರಕ್ಷಣೆ, ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳ ಪುನರ್‌ನಿರ್ಮಾಣ, ಆರೋಗ್ಯ ಕಾರ್ಯಕರ್ತರ ಮೇಲೆ ಹೂಡಿಕೆ ಮತ್ತು ಶಿಕ್ಷಣಕ್ಕೆ ಪುನಃ ಅವಕಾಶ ಕಲ್ಪಿಸುವ ದೀರ್ಘಕಾಲಿಕ ಮರುನಿರ್ಮಾಣ ಅಗತ್ಯವಿದೆ ಎಂದು ಅವರು ಮನವಿ ಮಾಡಿದರು.
“ಇವುಗಳಲ್ಲಿ ಯಾವುದೂ ಆಯ್ಕೆಯ ವಿಷಯವಲ್ಲ,ಇವು ಕಾರ್ಯನಿರ್ವಹಿಸುವ ಆರೋಗ್ಯ ವ್ಯವಸ್ಥೆಯ ಅಡಿಪಾಯಗಳಾಗಿವೆ. ಇವುಗಳಿಲ್ಲದೆ ತಡೆಯಬಹುದಾದ ಸಾವುಗಳು ಮುಂದುವರಿಯುತ್ತವೆ.” ಎಲ್ಲಾ ವಿನಾಶದ ನಡುವೆಯೂ, ಗಾಜಾದ ಯುವಜನತೆ ಮತ್ತು ಮಕ್ಕಳ ಕುರಿತು ಮಾತನಾಡುತ್ತಾ ಅವರು ಆಶಾಭರವಿರುವ ಮನವಿಯೊಂದಿಗೆ ತಮ್ಮ ಮಾತು ಮುಗಿಸಿದರು.
“ಅವರೇ ಭವಿಷ್ಯ,ಮತ್ತು ಅವರಿಗೆ ಒಂದು ಭವಿಷ್ಯ ಸಿಗಲೇಬೇಕು.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).