ಹುಡುಕಿ

ಹೌ ಕಿಡ್ಸ್ ರೋಲ್ ಹೌ ಕಿಡ್ಸ್ ರೋಲ್ 

‘ಹೌ ಕಿಡ್ಸ್ ರೋಲ್’(How Kids Roll): ಗಾಜಾದ ಮಕ್ಕಳ ಶಾಂತಿಯ ಸಂದೇಶ

ರೋಮ್‌ನಲ್ಲಿ ನಡೆಯುತ್ತಿರುವ ಒಂದು ಪ್ರದರ್ಶನವು, ಛಾಯಾಚಿತ್ರಗಳು, ಕವಿತೆಗಳು ಮತ್ತು ವೀಡಿಯೊ ಸ್ಥಾಪನೆಗಳ ಆಯ್ಕೆಯ ಮೂಲಕ ಮಕ್ಕಳ ದೃಷ್ಟಿಕೋನದಲ್ಲಿ ಗಾಜಾ ಯುದ್ಧದ ಕಥೆಯನ್ನು ಬಿಂಬಿಸುತ್ತಿದೆ. ಇದು ಭಂಗುರತೆ, ನೆನಪು ಮತ್ತು ಭವಿಷ್ಯದ ಹಂಬಲದ ನಡುವೆ ಭೂತಕಾಲ ಹಾಗೂ ವರ್ತಮಾನವನ್ನು ಚಿಂತನೆಗೆ ಆಹ್ವಾನಿಸುವ ಒಂದು ಆಳವಾದ ಅನುಭವಯಾತ್ರೆಯಾಗಿದೆ.

ಲೇಖಕರು: ಮಾರ್ಟಿನಾ ಅಚ್ಚೆತೋಲಾ

ಬಾಲ್ಯವು ಸಹಜವಾಗಿ ಅರಳದೇ, ಕೇವಲ ಬದುಕುಳಿಯುವ ಹೋರಾಟವಾಗಿ ಮಾರ್ಪಡುವ ಕೆಲವು ಸ್ಥಳಗಳಿವೆ. ಗಾಜಾದಲ್ಲಿ, ಅವಶೇಷಗಳ ಮಧ್ಯೆ ಮತ್ತು ಸ್ಥಗಿತಗೊಂಡ ನಿರೀಕ್ಷೆಗಳ ನಡುವೆ, ಸಾಮಾನ್ಯ ಜೀವನ ಮತ್ತು ಆಘಾತಗಳ ನಡುವಿನ ತೂಗುಸ್ಥಿತಿಯಲ್ಲಿ ಮಕ್ಕಳು ಇನ್ನೂ ಸಾಧ್ಯವಿರುವ ಭವಿಷ್ಯವನ್ನು ಕಲ್ಪನೆಯಲ್ಲೇ ಇದ್ದಾರೆ.

ಈ ಒಳಗಿನ ಸಂಘರ್ಷವನ್ನು “ಹೌ ಕಿಡ್ಸ್ ರೋಲ್” ಎಂಬ ಪ್ರದರ್ಶನ ಅತ್ಯಂತ ಮನೋಜ್ಞವಾಗಿ ಚಿತ್ರಿಸುತ್ತದೆ. ಈ ಪ್ರದರ್ಶನವು 2026ರ ಮೇ 14ರಿಂದ ಜೂನ್ 28ರವರೆಗೆ ರೋಮ್‌ನ ಪಲಾಸೊ ಮೆರುಲಾನಾದಲ್ಲಿ ನಡೆಯುತ್ತಿದ್ದು, ಲೋರಿಸ್ ಲೈ ಮತ್ತು ಜೋಸೆಫ್ ಲೆಫೇವ್ರೆ ಅವರಿಂದ ಸಂಯೋಜಿಸಲ್ಪಟ್ಟಿದೆ. ಇದನ್ನು ಬಿ-ರೋಲ್ ಪ್ರೊಡಕ್ಷನ್ ಮತ್ತು ರಮೋನ್ ಪಿಕ್ಚರ್ಸ್ ನಿರ್ಮಿಸಿವೆ. ಇಲ್ಲಿ, ಗಾಜಾದ ಮಕ್ಕಳ ದೃಷ್ಟಿ ಸಾಕ್ಷಿಯೂ ನೆನಪೂ ಆಗುತ್ತದೆ; ಜೊತೆಗೆ ಕೇಳಿಸಿಕೊಳ್ಳಬೇಕಾದ ಒಂದು ಮನವಿಯೂ ಆಗುತ್ತದೆ.

ಸಂವಹನ ವಿಭಾಗದ ಮತ್ತು ಸಂಸ್ಕೃತಿ ಹಾಗೂ ಶಿಕ್ಷಣ ವಿಭಾಗದ ಬೆಂಬಲದೊಂದಿಗೆ, ವ್ಯಾಟಿಕನ್ ಸುದ್ದಿ ಸಂಸ್ಥೆ ಮತ್ತು ವ್ಯಾಟಿಕನ್ ರೇಡಿಯೊ ಮಾಧ್ಯಮ ಸಹಭಾಗಿಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಪ್ರದರ್ಶನವು ನಿರಂತರವಾಗಿ ದೈನಂದಿನ ಜೀವನವನ್ನು ಬದಲಾಯಿಸುತ್ತಿರುವ ಸಂಘರ್ಷದ ನಡುವೆ ಬೆಳೆದುಬರುತ್ತಿರುವ ಮಕ್ಕಳಿಗೆ ಗೌರವ ಮತ್ತು ಕಲ್ಪನೆಯ ಲೋಕವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ. ಆದರೆ, ಲೋರಿಸ್ ಲೈ ನೆನಪಿಸಿದಂತೆ, “ನಾವು ಗಾಜಾ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಇದರ ಸಂದೇಶವು ವಿಶ್ವವ್ಯಾಪಿಯಾಗಿದೆ. ಮಕ್ಕಳು ಎಲ್ಲೆಡೆಯೂ ಇದ್ದಾರೆ.”

ಸೇತುವೆಗಳನ್ನು ನಿರ್ಮಿಸುವ ಪ್ರಯತ್ನ

“ಪ್ರತಿಯೊಂದು ಯುದ್ಧವೂ ಮಕ್ಕಳ ವಿರುದ್ಧದ ಯುದ್ಧವೇ” — ಇದೇ ತತ್ವವು UNICEF ಮತ್ತು Save the Children (ಸೇವ್ ದ ಚಿಲ್ಡ್ರನ್) ಸಂಸ್ಥೆಗಳ ಬದ್ಧತೆಯನ್ನು ಮಾರ್ಗದರ್ಶಿಸುತ್ತಿದೆ. ಈ ಎರಡೂ ಸಂಸ್ಥೆಗಳು ಪ್ರದರ್ಶನದ ಆಯೋಜನೆಗೆ ಬೆಂಬಲ ನೀಡಿವೆ. ಈ ಸಂಸ್ಥೆಗಳ ಪ್ರಕಾರ, ಗಾಜಾದ ಮಕ್ಕಳ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವ ಸಾಧನವಾಗಿಯೂ, ಶಾಂತಿ, ಆಲಿಸುವ ಮನೋಭಾವ ಮತ್ತು ಮಾನವೀಯತೆಯ ವಿಶ್ವವ್ಯಾಪಿ ಸಂದೇಶವನ್ನು ಸಾರುವ ಮೂಲಕ ವಿಭಜನೆಗಳನ್ನು ಸೇರುವ ಸೇತುವೆಯಾಗಿಯೂ “ಹೌ ಕಿಡ್ಸ್ ರೋಲ್” ಕಾರ್ಯನಿರ್ವಹಿಸಬಹುದು ಎಂಬ ನಂಬಿಕೆಯಿಂದ ಅವರು ಈ ಪ್ರದರ್ಶನಕ್ಕೆ ಬೆಂಬಲ ನೀಡಿದ್ದಾರೆ. UNICEF ವಕ್ತಾರ ಆಂಡ್ರಿಯಾ ಯಾಕೊಮಿನಿ ಮತ್ತು Save the Children (ಸೇವ್ ದ ಚಿಲ್ಡ್ರನ್‌ನ ವಕ್ತಾರೆ )ಎಲೇನಾ ಜೆಂಟಿಲಿ ಹೇಳುವಂತೆ, ಮಕ್ಕಳು ಅನೇಕ ಬಾರಿ ತಾವೇ ಆಯ್ಕೆ ಮಾಡದ ಪರಿಸ್ಥಿತಿಗಳ ಬಲಿಯಾಗುತ್ತಾರೆ.

ಮಕ್ಕಳ ಕಣ್ಣಿನ ಮೂಲಕ

ಈ ಯೋಜನೆ, 2024ರಲ್ಲಿ ನಿರ್ಮಿತವಾದ ಹೌ ಕಿಡ್ಸ್ ರೋಲ್ ಚಲನಚಿತ್ರದ ಚಿತ್ರೀಕರಣದ ವೇಳೆ ಮೆಲಿಸ್ಸಾ ಮ್ಯಾಕ್ಲಾರೆನ್ ತೆಗೆದ ಛಾಯಾಚಿತ್ರಗಳಿಂದ ರೂಪುಗೊಂಡಿದೆ. ಲೋರಿಸ್ ಲೈ ನಿರ್ದೇಶಿಸಿರುವ ಈ ಚಿತ್ರವು ಎರಡನೇ ಇಂಟಿಫಾದಾ ಕಾಲದ ಗಾಜಾ ಪ್ರದೇಶವನ್ನು ಹಿನ್ನೆಲೆಯಾಗಿ ಹೊಂದಿದೆ.

ಅವರ ಛಾಯಾಚಿತ್ರಗಳು, ನೋವನ್ನು ಪ್ರದರ್ಶನವನ್ನಾಗಿಸದೇ, ಗಾಜಾದ ಮಕ್ಕಳ ದೈನಂದಿನ ಬದುಕನ್ನು ಚಿತ್ರಿಸುತ್ತವೆ. ಇಲ್ಲಿ ಯುದ್ಧದ ಭೀಕರತೆಯಿಗಿಂತಲೂ, ಭಂಗುರ ಪರಿಸ್ಥಿತಿಯೊಳಗೆ ಬದುಕು ತನ್ನ ಶಕ್ತಿಯನ್ನು ಹೇಗೆ ಉಳಿಸಿಕೊಂಡಿದೆ ಎಂಬುದು ಹೆಚ್ಚು ಸ್ಪಷ್ಟವಾಗುತ್ತದೆ.

ಅಸ್ಥಿರವಾದ ಸಾಮಾನ್ಯ ಜೀವನದ ಒಂದು ಚಿತ್ರಪಟವೇ ವೀಕ್ಷಕರ ಕಣ್ಣೆದುರು ತೆರೆಯುತ್ತದೆ. ಅದರೊಳಗೆ ಚಿತ್ರ ಮತ್ತು ಪ್ರದರ್ಶನ ಎರಡೂ ಹಂಚಿಕೊಳ್ಳುವ ಆಶೆಯ ಸಂದೇಶ ಅಡಗಿದೆ — ಭವಿಷ್ಯವೇ ನಿರಾಕರಿಸಲ್ಪಟ್ಟಂತಿದ್ದರೂ, ಮಕ್ಕಳು ಇನ್ನೂ ಭವಿಷ್ಯವನ್ನು ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ.

“ಆರಂಭದಿಂದಲೇ ನಾವು ಭಾವೋದ್ರಿಕ್ತ ಅಥವಾ ಕೇವಲ ಭಾವುಕತೆಯ ರೀತಿಯಲ್ಲಿ ವಿಷಯವನ್ನು ಹೇಳಲು ಬಯಸಲಿಲ್ಲ. ನಾವು ವಾಸ್ತವವನ್ನು ತೋರಿಸಲು ಬಯಸಿದ್ದೇವೆ,” ಎಂದು ನಿರ್ದೇಶಕರು ವ್ಯಾಟಿಕನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

“ಇದು ಮಕ್ಕಳ ಸತ್ಯ — ಅವರು ಪರಸ್ಪರ ಹೇಗೆ ಸಂಬಂಧ ಬೆಳೆಸುತ್ತಾರೆ, ಅವರ ಕನಸುಗಳು ಯಾವುವು, ಮತ್ತು ತಮfಗಿಂತ ಬಹಳ ದೊಡ್ಡ ವಾಸ್ತವವನ್ನು ಎದುರಿಸಬೇಕಾದ ಕಾರಣ ಅವರು ತಮ್ಮ ಭಾವನೆಗಳನ್ನು ಹೇಗೆ ಮೌನಗೊಳಿಸುತ್ತಾರೆ ಎಂಬುದು.” ಹೀಗೆ, ಬಾಲ್ಯವೇ ಇಂದಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಒಂದು ಕಿಟಕಿಯಾಗಿ ಪರಿಣಮಿಸುತ್ತದೆ.

ಮಾನವ ಗೌರವವೇ ಕೇಂದ್ರಬಿಂದು

ಈ ಪ್ರದರ್ಶನದ ವಿನ್ಯಾಸವು ಆಂತರಿಕ ಭಾವನಾತ್ಮಕ ಒತ್ತಡವನ್ನು ಇನ್ನಷ್ಟು ಗಾಢಗೊಳಿಸುತ್ತದೆ. ಪ್ರದರ್ಶನ ನಡೆಯುವ ಸ್ಥಳದ ಕೇಂದ್ರ ಸಭಾಂಗಣವನ್ನು ಅದು ಮೌನಭರಿತ ಮತ್ತು ಆಳವಾದ ಅನುಭವದ ವಾತಾವರಣವನ್ನಾಗಿ ರೂಪಾಂತರಿಸುತ್ತದೆ. ಆರು ಪ್ರಕಾಶ ಪೆಟ್ಟಿಗೆಗಳು ಒಂದು ದೃಶ್ಯಮಾರ್ಗದಂತೆ ರೂಪುಗೊಂಡಿದ್ದು, ಭೇಟಿಕಾರರನ್ನು ನಿಧಾನವಾಗಿ ಈ ಅನುಭವದೊಳಗೆ ಮುನ್ನಡೆಸುತ್ತವೆ. ವಿವಿಧ ಗಾತ್ರ ಮತ್ತು ರೂಪಗಳಲ್ಲಿ ಪ್ರದರ್ಶಿಸಲಾದ ಛಾಯಾಚಿತ್ರಗಳು ಕೆಲವೆಡೆ ತೀವ್ರ ಪರಿಣಾಮ ಮೂಡಿಸುತ್ತವೆ, ಮತ್ತೊಮ್ಮೆ ಆತ್ಮೀಯತೆಯ ಭಾವವನ್ನು ಉಂಟುಮಾಡುತ್ತವೆ. ಹೀಗೆ, ವೈಯಕ್ತಿಕ ಅನುಭವ ಮತ್ತು ಸಮೂಹದ ನೋವಿನ ನಡುವಿನ ನಿರಂತರ ಸಂವಾದವು ರೂಪುಗೊಳ್ಳುತ್ತದೆ. ಈ ಎಲ್ಲವೂ ಸೇರಿ, ಮಾನವ ಗೌರವವೇ ಸಾರ್ವಜನಿಕ ಗಮನದ ಕೇಂದ್ರವಾಗಿರುವಂತಹ ಒಂದು ವಾತಾವರಣವನ್ನು ನಿರ್ಮಿಸುತ್ತದೆ.

ಅನೇಕ ಧ್ವನಿಗಳ ಸಂಗಮ

ಛಾಯಾಚಿತ್ರಗಳ ಜೊತೆಗೆ, 2023ರ ಅಕ್ಟೋಬರ್ 7ರಿಂದ ಇಂದಿನವರೆಗೆ ಗಾಜಾದ ಮಕ್ಕಳಿಂದ ಬರೆಯಲ್ಪಟ್ಟ ಕವಿತೆಗಳೂ ಪ್ರದರ್ಶನದಲ್ಲಿವೆ. ಅವು ಈ ಕಥನಕ್ಕೆ ನೇರವಾದ, ಭಂಗುರವಾದ ಮತ್ತು ತಕ್ಷಣವೇ ಹೃದಯ ತಟ್ಟುವ ಧ್ವನಿಯನ್ನು ನೀಡುತ್ತವೆ.

ಈ ಪದಗಳು ಛಾಯಾಚಿತ್ರಗಳನ್ನು ವಿವರಿಸುವುದಿಲ್ಲ; ಬದಲಾಗಿ ಅವುಗಳನ್ನು ಜೊತೆಯಾಗಿ ಸಾಗುತ್ತಾ, ಅವುಗಳ ಅರ್ಥವನ್ನು ಇನ್ನಷ್ಟು ಗಾಢಗೊಳಿಸುತ್ತವೆ. ಹೀಗೆ, ನೆನಪು, ಭಯ ಮತ್ತು ಹಂಬಲಗಳಿಂದ ಕೂಡಿದ ಅನೇಕ ಧ್ವನಿಗಳ ಒಕ್ಕೂಟ ರೂಪುಗೊಳ್ಳುತ್ತದೆ.

ಇದರ ಜೊತೆಗೆ, ಚಿತ್ರದ ಸಹಯೋಗಿಯಾಗಿರುವ ಮಹ್ಮೂದ್ ಎಲ್ ಶಾವ್ವಾ ತೆಗೆದ ಛಾಯಾಚಿತ್ರಗಳೂ ಪ್ರದರ್ಶನದಲ್ಲಿವೆ. ಸಂಘರ್ಷ ಆರಂಭವಾದ ದಿನಗಳಿಂದ ಇಂದಿನವರೆಗೆ ಗಾಜಾದೊಳಗಿನ ಬದುಕಿನ ವಾಸ್ತವವನ್ನು ಅವು ಒಳಗಿನಿಂದಲೇ ದಾಖಲಿಸುತ್ತವೆ. ಇದರಿಂದ ಪ್ರದರ್ಶನದ ದೃಶ್ಯಕಥನಕ್ಕೆ ಮತ್ತಷ್ಟು ಆಳ ಮತ್ತು ಪದರಗಳು ಸೇರ್ಪಡೆಯಾಗುತ್ತವೆ.

ದೃಶ್ಯ-ಶ್ರಾವ್ಯ ಅಂಶವೂ ಈ ಪ್ರದರ್ಶನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರದ ಕನಸಿನಂಥ ಕೆಲವು ದೃಶ್ಯಗಳನ್ನು ನಾಲ್ಕು ಪರದೆಗಳ ಮೇಲೆ ಪ್ರದರ್ಶಿಸಲಾಗುತ್ತದೆ. ಅವು ಛಾಯಾಚಿತ್ರಗಳ ಪಯಣಕ್ಕೆ ವಿರಾಮವನ್ನೂ ಆಳವನ್ನೂ ನೀಡುತ್ತಾ, ಮಕ್ಕಳ ಭಯಗಳು, ಕಲ್ಪನೆಗಳು ಮತ್ತು ಆಸೆಗಳನ್ನು ಮೇಲ್ಮೈಗೆ ತರುತ್ತವೆ.

ಮೌರಿಜಿಯೊ ಕಾಸ್ಕೆಲ್ಲಾ ಸಂಯೋಜಿಸಿರುವ ಮೃದುವಾದರೂ ನಿರಂತರವಾಗಿರುವ ಧ್ವನಿವಾತಾವರಣವು ಭೇಟಿಕಾರರನ್ನು ಈ ಅನುಭವದೊಂದಿಗೆ ಸಾಗಿಸುತ್ತಾ, ಒಗ್ಗಟ್ಟಿನ ಸಂವೇದನಾತ್ಮಕ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತದೆ.

ಸಾಂಕೇತಿಕ ಅಭಿವ್ಯಕ್ತಿಯಾಗಿ ಕಲೆ

ಈ ಯೋಜನೆಯನ್ನು ಪೂರ್ಣಗೊಳಿಸುವಂತೆ, ಟೋಕಿಡೋಕಿ ಎಂಬ ಹೆಸರಿನಿಂದ ಪ್ರಸಿದ್ಧರಾಗಿರುವ ಸಿಮೋನೆ ಲೆಗ್ನೋ ಅವರ ಚಿತ್ರಕೃತಿಗಳೂ ಪ್ರದರ್ಶನದಲ್ಲಿವೆ. ಅವು ಚಿತ್ರದಿಂದ ಪ್ರೇರಿತವಾಗಿದ್ದು, ಕಲಾವಿದ ತಮ್ಮ ಕಲಾಕೃತಿಯನ್ನು ರಚಿಸುತ್ತಿರುವ ದೃಶ್ಯವಿರುವ ವೀಡಿಯೊ ಪ್ರದರ್ಶನದೊಂದಿಗೆ ಒಡನಾಡಿವೆ. ಅವರ ಕೊಡುಗೆ, ಹೆಚ್ಚು ಸಂಕೇತಾತ್ಮಕ ಮತ್ತು ಶೈಲೀಕರಿಸಿದ ದೃಶ್ಯಭಾಷೆಯನ್ನು ಪರಿಚಯಿಸುತ್ತದೆ. ಅದು ಪ್ರದರ್ಶನದ ಪಯಣವನ್ನು ವ್ಯತ್ಯಯಗೊಳಿಸುವುದಿಲ್ಲ; ಬದಲಾಗಿ ಅದರ ಭಾವನಾತ್ಮಕ ಸ್ಪಂದನೆಯನ್ನು ಇನ್ನಷ್ಟು ಗಾಢಗೊಳಿಸುತ್ತದೆ.

ಆಲಿಸುವ ಸ್ಥಳ

ಇದು ಕೇವಲ ಛಾಯಾಚಿತ್ರಗಳ ಪ್ರದರ್ಶನವಲ್ಲ. ಬ್ರೆಶ್ಟ್ ಹೇಳುವ ಅರ್ಥದಲ್ಲಿ, ಇದು ಗಮನ ಮತ್ತು ಆಲಿಸುವ ಮನೋಭಾವವನ್ನು ಜಾಗೃತಗೊಳಿಸಲು ರೂಪುಗೊಂಡ ಒಂದು ಆಳವಾದ ಅನುಭವದ ವಾತಾವರಣವಾಗಿದೆ.

“ವಾಸ್ತವವನ್ನು ನಿಮ್ಮ ಕಣ್ಣೆದುರು ಇಟ್ಟಾಗ ಅದರಿಂದ ದೂರ ಉಳಿಯುವುದು ಬಹಳ ಕಷ್ಟ,” ಎಂದು ಲೋರಿಸ್ ಲೈ ವಿವರಿಸುತ್ತಾರೆ. “ವಿಶೇಷವಾಗಿ, ಆ ವಾಸ್ತವ ಒಂದು ಮಗುವಿನ ಕಣ್ಣಿನಲ್ಲಿ ಕಾಣಿಸಿದಾಗ. ಆ ಕಣ್ಣುಗಳು ನಿಮ್ಮನ್ನು ನೋಡುವುದರ ಮೂಲಕವೇ, ತಮಗೆ ಒಳಗೆ ಏನೆಲ್ಲವಿದೆಯೋ ಅದನ್ನೆಲ್ಲ — ತಾವೇ ಅರಿಯದೆ — ತಿಳಿಸುತ್ತವೆ. ಆಗ ನೀವು ಆಯ್ಕೆಯೇ ಇಲ್ಲದ ಮಕ್ಕಳಾದ ಜೀವಂತ ವ್ಯಕ್ತಿಗಳ ಎದುರು ನಿಂತಿರುತ್ತೀರಿ.”

ಹೌ ಕಿಡ್ಸ್ ರೋಲ್ ಕೇವಲ ಒಂದು ಪರಿಸ್ಥಿತಿಯನ್ನು ಚಿತ್ರಿಸುವುದಲ್ಲ; ಆ ಪರಿಸ್ಥಿತಿಯನ್ನು ನಾವು ಹೇಗೆ ನೋಡುತ್ತೇವೆ ಎಂಬ ಪ್ರಶ್ನೆಯನ್ನೇ ಎತ್ತುತ್ತದೆ — ಮತ್ತು ಅದನ್ನು ಬಾಲ್ಯದ ದೃಷ್ಟಿಕೋನದ ಮೂಲಕ ಮಾಡುತ್ತದೆ. ಪ್ರದರ್ಶನದಿಂದ ಹೊರಬರುವ ತನಕ ಭೇಟಿಕಾರರನ್ನು ಒಂದು ಪ್ರಶ್ನೆ ಹಿಂಬಾಲಿಸುತ್ತಲೇ ಇರುತ್ತದೆ:

“ಭವಿಷ್ಯವೇ ನಿರಂತರವಾಗಿ ಪ್ರಶ್ನೆಗೆ ಒಳಗಾಗುತ್ತಿರುವಾಗ, ಬೆಳೆಯುವುದೆಂದರೆ ನಿಜವಾಗಿ ಏನು?”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

14 ಮೇ 2026, 20:20