ಬೋಸ್ಟನ್ ಸೆಲ್ಟಿಕ್ಸ್ ತಂಡವನ್ನು ದೈವಸೇವಾ ಆತ್ಮಸ್ಫೂರ್ತಿಯೊಂದಿಗೆ ಮುನ್ನಡೆಸುತ್ತಿರುವ ತರಬೇತುದಾರ
ಲೇಖಕರು: ಜಿಯಾಂಪೌಲೊ ಮತ್ತೆಯಿ
ಬೋಸ್ಟನ್ ಸೆಲ್ಟಿಕ್ಸ್ ತಂಡಕ್ಕೆ ತರಬೇತಿ ನೀಡುವುದೇ ಜೋಸೆಫ್ ಮಜುಲ್ಲಾ ಅವರ ಏಕೈಕ ಕರೆಯಲ್ಲ. ಅವರು ಶಾಶ್ವತ ಉಪದೇಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 1988ರಲ್ಲಿ ರೋಡ್ ಐಲ್ಯಾಂಡ್‌ನ ಜಾನ್ಸ್ಟನ್‌ನಲ್ಲಿ ಜನಿಸಿದ ಮಜುಲ್ಲಾ ಅವರಿಗೆ ಇಟಾಲಿಯನ್ ಮೂಲವೂ ಇದೆ. ಅವರ ತಂದೆ ಇಟಲಿಯ ಇಟ್ರಿಯಿಂದ ಬಂದವರಾಗಿದ್ದು, ತಾಯಿ ಆಫ್ರಿಕನ್-ಅಮೆರಿಕನ್ ಮೂಲದವರು. ವೆಸ್ಟ್ ವರ್ಜೀನಿಯಾ ಮೌಂಟೇನಿಯರ್ಸ್ ಪರವಾಗಿ ಕಾಲೇಜು ಬಾಸ್ಕೆಟ್‌ಬಾಲ್ ಆಡಿದ ನಂತರ, ಮಜುಲ್ಲಾ 2023ರಲ್ಲಿ ಪೂರ್ಣಕಾಲಿಕವಾಗಿ ಬೋಸ್ಟನ್ ಸೆಲ್ಟಿಕ್ಸ್ ತಂಡದ ತರಬೇತುದಾರರಾದರು. ಒಂದು ವರ್ಷದ ಬಳಿಕ, 2024ರಲ್ಲಿ ತಂಡವು NBA ಪ್ರಶಸ್ತಿಯನ್ನು ಗೆದ್ದಿತು. ಆದರೆ ಈ ವರ್ಷ, ಫಿಲಡೆಲ್ಫಿಯಾ 76ರ್ಸ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ ಸೆಲ್ಟಿಕ್ಸ್ ತಂಡದ ಪಯಣ ಅಂತ್ಯಗೊಂಡಿತು. 2014ರಲ್ಲಿ ಅವರು ತಮ್ಮ ಪತ್ನಿ ಕಾಮೈ ಅವರನ್ನು ವಿವಾಹವಾದರು. ಅವರಿಗೆ ಇಮ್ಮಾನುಯೇಲ್ ಎಂಬ ಮಗನಿದ್ದು, ಮೈಕೆಲ್ ಎಂಬ ದತ್ತು ಮಗನೂ ಇದ್ದಾನೆ.
ಕುಟುಂಬವೇ ಎಲ್ಲದರ ಕೇಂದ್ರವಾಗಿದೆ ಎಂದು ಈ ತರಬೇತುದಾರರು ಒತ್ತಿಹೇಳುತ್ತಾರೆ. ಈ ಸಂದರ್ಭದಲ್ಲಿ ಅವರು ಯೆಹೋಶುವ ಪುಸ್ತಕದ ವಚನವನ್ನು ಉಲ್ಲೇಖಿಸುತ್ತಾರೆ: “ನಾನು ಮತ್ತು ನನ್ನ ಮನೆಯವರು ಮಾತ್ರ ಸರ್ವೇಶ್ವರನಿಗೇ ಸೇವೆ ಸಲ್ಲಿಸುತ್ತೇವೆ”(ಯೆಹೋಶುವ 24:15).
ಬಾಲ್ಯದಿಂದ ತರಬೇತುದಾರನಾಗುವ ತನಕ
ನಂಬಿಕೆ ಯಾವಾಗಲೂ ಈ ತರಬೇತುದಾರರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶೇಷವಾಗಿ, ಕಥೋಲಿಕ ನಂಬಿಕೆ ದೈನಂದಿನ ಜೀವನದ ಭಾಗವಾಗಿದ್ದ ವಾತಾವರಣದಲ್ಲಿ ಬೆಳೆದಿದ್ದಕ್ಕಾಗಿ ತಾವು ಭಾಗ್ಯವಂತರು ಎಂದು ಅವರು ಹೇಳಿಕೊಳ್ಳುತ್ತಾರೆ.
ಅವರ ಮನೆ ದೇವಾಲಯದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿತ್ತು. ಬಾಲ್ಯದಿಂದಲೇ ಅವರು ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸುತ್ತಿದ್ದರು ಮತ್ತು ಶಿಶುವಿಹಾರದಿಂದ ಪ್ರೌಢಶಾಲೆಯವರೆಗೆ ಕಥೋಲಿಕ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದರು.
ಆದಾಗ್ಯೂ, “ಯಾರೂ ಪರಿಪೂರ್ಣರಲ್ಲ” ಎಂದು ಮಜುಲ್ಲಾ ಒತ್ತಿಹೇಳುತ್ತಾರೆ. ಜೀವನದಲ್ಲಿ ತಾವು ತಪ್ಪುಗಳನ್ನು ಮಾಡಿದ್ದೇವೆ, ಆದರೆ ತಮ್ಮ ನಂಬಿಕೆಯೇ ತಮ್ಮನ್ನು ಪುನಃ ಕಟ್ಟಿಕೊಳ್ಳಲು ಸಹಾಯ ಮಾಡಿದೆ ಎಂದು ಅವರು ಹೇಳುತ್ತಾರೆ.
ತಮ್ಮ ಆಟಗಾರರೊಂದಿಗೆ ಮಾತನಾಡುವಾಗಲೂ ಅಥವಾ ತೀವ್ರ ಸ್ಪರ್ಧಾತ್ಮಕ ಮಾಧ್ಯಮಗಳ ಮುಂದೆ ಮಾತನಾಡುವಾಗಲೂ, ಮಜುಲ್ಲಾ ಆಗಾಗ್ಗೆ ಬೈಬಲ್ ಉಲ್ಲೇಖಗಳನ್ನು ಬಳಸುತ್ತಾರೆ. ಅದು ತಾವು ಯಾರು ಎಂಬುದರ ಒಂದು ಭಾಗವಾಗಿದೆ ಎಂದು ಈ ತರಬೇತುದಾರರು ವಿವರಿಸುತ್ತಾರೆ.
ಅಷ್ಟರ ಮಟ್ಟಿಗೆ, ಅವರು ತಮ್ಮನ್ನು ಕೇವಲ ಬಾಸ್ಕೆಟ್‌ಬಾಲ್ ತರಬೇತುದಾರ ಎಂದು ಕರೆಯುವುದಿಲ್ಲ. ಬದಲಾಗಿ, ಕ್ರೀಡೆಯ ಅನುಭವದ ಮೂಲಕ ದೇವರ ಸೇವೆಯಲ್ಲಿ ತೊಡಗಿರುವ ಒಬ್ಬ ಕ್ರೈಸ್ತನು ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.
ಇದಲ್ಲದೆ, ಈ ಕೆಲಸವು ಕೇವಲ ಸಾಧನೆ ಅಥವಾ ಪರಿಪೂರ್ಣತೆಯ ಬಗ್ಗೆ ಮಾತ್ರವಲ್ಲ ಎಂದು ಮಜುಲ್ಲಾ ಹೇಳುತ್ತಾರೆ. ಇದು ದೇವರ ಕೃಪೆಯ ಕುರಿತಾಗಿದೆ — ಮತ್ತು ಆ ಕೃಪೆ ಈಗಾಗಲೇ ನಮಗೆ ನೀಡಲ್ಪಟ್ಟಿದೆ ಎಂದು ಅವರು ಒತ್ತಿಹೇಳುತ್ತಾರೆ.
ಸ್ನೇಹಿತರ ಬೆಂಬಲ
ನಂಬಿಕೆ ಮತ್ತು ಕ್ರೀಡೆಯ ಈ ವಿಶಿಷ್ಟ ಪಯಣದಲ್ಲಿ, ತರಬೇತುದಾರ ಮಜುಲ್ಲಾ ಅವರು ರೋಡ್ ಐಲ್ಯಾಂಡ್‌ನ ನರಾಗಾನ್ಸೆಟ್‌ನ ಸಂತ ಥೋಮಸ್ ಮೋರ್ ದೇವಾಲಯದ ಗುರುಗಳಾದ ವಂ. ಗುರು ಮಾರ್ಸೆಲ್ ಟೈಯೋನ್ ಅವರೊಂದಿಗಿನ ತಮ್ಮ ಸ್ನೇಹವನ್ನು ವಿಶೇಷವಾಗಿ ಉಲ್ಲೇಖಿಸುತ್ತಾರೆ. ಇಬ್ಬರೂ ಒಟ್ಟಿಗೆ ಶಾಲೆಯಲ್ಲಿ ಓದಿದ್ದರು. ಪ್ರೌಢಶಾಲೆ, ಕಾಲೇಜು, ಕ್ರೀಡಾ ಜೀವನ ಮತ್ತು ವಿವಾಹ — ತಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ವಂ. ಗುರು ಟೈಯೋನ್ ತಮ್ಮೊಂದಿಗೆ ಇದ್ದರು ಎಂದು ಅವರು ಹೇಳುತ್ತಾರೆ. ಈ ಇಬ್ಬರು ಸ್ನೇಹಿತರೂ ಇಂದಿಗೂ ನಂಬಿಕೆಯ ಪಯಣದಲ್ಲಿ ಜೊತೆಯಾಗಿ ಸಾಗುತ್ತಿರುವುದು ದೇವರ ಕೃಪೆಯಾಗಿದೆ ಎಂದು ಸೆಲ್ಟಿಕ್ಸ್ ತಂಡದ ತರಬೇತುದಾರರು ಹೇಳುತ್ತಾರೆ.
ಜೀವನದಲ್ಲಿ, ವಿಶೇಷವಾಗಿ ಕ್ರೀಡಾ ಕ್ಷೇತ್ರದಲ್ಲಿ, ನಂಬಿಕೆ ಎಷ್ಟು ಮುಖ್ಯ ಮತ್ತು ಅವಶ್ಯಕ ಎಂಬುದನ್ನು ತಾವು ಕಲಿತಿದ್ದೇವೆ ಎಂದು ಮಜುಲ್ಲಾ ವಿವರಿಸುತ್ತಾರೆ. ಯಾರಾದರೂ ಅದನ್ನು ಮರೆತಾಗ, ಅವರು ಸುಳ್ಳುಗಳ ಹಿಂದೆ ಓಡಲು ಆರಂಭಿಸುತ್ತಾರೆ ಎಂದು ಅವರು ಹೇಳುತ್ತಾರೆ. ಆಗ ತಮ್ಮ ಗುರುತು ಬಾಸ್ಕೆಟ್‌ಬಾಲ್‌ನಲ್ಲಿ ಇದೆ ಎಂದು ನಂಬುವುದು ಸುಲಭವಾಗುತ್ತದೆ; ಆದರೆ ನಿಜವಾಗಿ, ಜೀವ ನೀಡಲು ಮರಣಹೊಂದಿದ ಯೇಸುವಿನಲ್ಲಿಯೇ ನಮ್ಮ ಗುರುತು ಇದೆ ಎಂದು ಅವರು ಒತ್ತಿಹೇಳುತ್ತಾರೆ. ಅಂದರೆ, NBA ಜೀವನವು ಕೇವಲ ಹಣ ಮತ್ತು ಯಶಸ್ಸಿನ ಬಗ್ಗೆ ಮಾತ್ರವಲ್ಲ. ಜಯ ಮತ್ತು ಸೋಲುಗಳು ನಮ್ಮನ್ನು ವ್ಯಕ್ತಿಗಳಾಗಿ ನಿರ್ಧರಿಸುವುದಿಲ್ಲ ಎಂದು ಮಜುಲ್ಲಾ ನೆನಪಿಸುತ್ತಾರೆ.
ಜಪಸರದಿಂದ ಪ್ರೇರಿತವಾದ ಸೆಲ್ಟಿಕ್ಸ್ ತಂಡ
ಸೆಲ್ಟಿಕ್ಸ್ ತಂಡದ ತರಬೇತುದಾರರು ಪ್ಲೇಆಫ್ ಪಂದ್ಯಗಳ ತೀವ್ರ ವೇಳೆಯಲ್ಲಿಯೂ, ಮನೆಯಿಂದ ದೂರವಿದ್ದಾಗಲೂ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸುತ್ತಾರೆ ಎಂಬುದು ಯಾರಿಗೂ ರಹಸ್ಯವಲ್ಲ.ತಾವು ಪ್ರಾರ್ಥಿಸುತ್ತೇವೆ; ಪಂದ್ಯವನ್ನು ಗೆಲ್ಲಲು ಅಥವಾ ಮೂಢನಂಬಿಕೆಯಿಂದಲ್ಲ.ಜಪಸರ ಪ್ರಾರ್ಥನೆಯಲ್ಲಿ ಅವರಿಗೆ ವಿಶೇಷವಾದ ಆಂತರಿಕ ಸಂತೋಷ ದೊರೆಯುತ್ತದೆ ಎಂದು ಅವರು ಹಂಚಿಕೊಳ್ಳುತ್ತಾರೆ.
ಹಳೆಯ ಬೋಸ್ಟನ್ ಸೆಲ್ಟಿಕ್ಸ್ ಆಟದ ಮೈದಾನದ ಮರದಿಂದ ತಯಾರಿಸಲಾದ ಜಪಮಾಲೆಯೊಂದು ತಮ್ಮ ಬಳಿ ಇದೆ ಎಂದು ಅವರು ವಿವರಿಸುತ್ತಾರೆ.ಜಪಸರ ಪ್ರಾರ್ಥಿಸುವ ಅಭ್ಯಾಸವು ಬಾಲ್ಯದಲ್ಲಿಯೇ ಶಾಲೆಯಲ್ಲಿ ಆರಂಭವಾಯಿತು. ಸಂತ ಮೇರಿ ಶಾಲೆಯಲ್ಲಿ “ಜೀವಂತ ಜಪಮಾಲೆ” ಎಂಬ ಆಚರಣೆ ಇತ್ತು. ಅಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಜಪಮಾಲೆಯ ಒಂದು ರಹಸ್ಯವನ್ನು ಪ್ರತಿನಿಧಿಸುತ್ತಿದ್ದರು. ತಮ್ಮ ಮಕ್ಕಳೂ ಈಗ ಈ ಸಂಪ್ರದಾಯವನ್ನು ಮುಂದುವರಿಸುತ್ತಿದ್ದಾರೆ ಎಂದು ಮಜುಲ್ಲಾ ಹೇಳುತ್ತಾರೆ. ತಮಗೆ ದೊರೆತ ಅದೇ ಆತ್ಮಿಕ ಅನುಗ್ರಹಗಳು ಅವರಿಗೂ ದೊರೆಯಲಿ ಎಂದು ಅವರು ಆಶಿಸುತ್ತಾರೆ.
ತಮ್ಮ ನಂಬಿಕೆಯನ್ನು ಬದುಕುವುದೇ ಎಲ್ಲಕ್ಕಿಂತ ಮೊದಲಾಗಿದೆ ಎಂದು ಅವರು ಹೇಳುತ್ತಾರೆ. ದೇವರು ಒಬ್ಬ ವ್ಯಕ್ತಿಯನ್ನು ನಮ್ಮ ಜೀವನದಲ್ಲಿ ನಿರ್ದಿಷ್ಟ ಸಮಯಕ್ಕಾಗಿ ಇಡುತ್ತಾನೆ — ಒಂದು ದಿನವಾಗಿರಬಹುದು, ಒಂದು ವರ್ಷವಾಗಿರಬಹುದು ಅಥವಾ ಐದು ವರ್ಷಗಳಾಗಿರಬಹುದು. ಆ ಸಮಯದಲ್ಲಿ ಆ ವ್ಯಕ್ತಿಗೆ ದೇವರ ಸಾಕ್ಷಿಯಾಗಲು ನಾವು ಹೇಗೆ ಸಾಧ್ಯ ಎಂಬುದೇ ಮುಖ್ಯ ಪ್ರಶ್ನೆ ಎಂದು ಅವರು ಹೇಳುತ್ತಾರೆ.
ಅಂತಿಮವಾಗಿ, ತಮ್ಮ ಕನಸಿನ ಕೆಲಸವನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಾಡುವ ಅವಕಾಶ ನೀಡಿದ ದೇವರಿಗೆ ತಾವು ಋಣಿಯಾಗಿದ್ದೇವೆ ಎಂದು ತರಬೇತುದಾರ ಮಜುಲ್ಲಾ ವಿವರಿಸುತ್ತಾರೆ. ಅದರ ಜೊತೆಗೆ, “ನಾನು ಹೇಗೆ ಸಂಪೂರ್ಣವಾಗಿ ಬದುಕಬೇಕು? ಹೇಗೆ ಕೃತಜ್ಞತೆಯಿಂದ ಮತ್ತು ಜಾಗರೂಕರಾಗಿ ಉಳಿಯಬೇಕು?” ಎಂದು ತಾವೇ ತಮ್ಮನ್ನು ಪ್ರಶ್ನಿಸಿಕೊಳ್ಳುತ್ತಾರೆ. ಅದರ ಉತ್ತರವಾಗಿ, ಕುಟುಂಬ, ನಂಬಿಕೆ ಮತ್ತು ಬೋಸ್ಟನ್ ಸೆಲ್ಟಿಕ್ಸ್ ತಂಡದೊಂದಿಗೆ ಬಾಸ್ಕೆಟ್‌ಬಾಲ್ ಎಂಬ ತಮ್ಮ ಎಲ್ಲಾ ಆಸಕ್ತಿಗಳನ್ನು ಒಂದಾಗಿ ಜೋಡಿಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ.
ಹೀಗೆ ಮಾಡುವುದರಿಂದ, ದೇವರು ತಮ್ಮ ಮೇಲೆ ವಹಿಸಿರುವ ಹೊಣೆಗಾರಿಕೆ, ವರ ಮತ್ತು ಧ್ಯೇಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಅವರು ವಿವರಿಸುತ್ತಾರೆ. ಇನ್ನೂ ಹತ್ತು ವರ್ಷಗಳ ಬಳಿಕ, ಲೋಕದ ವಿಷಯಗಳಿಗೆ ಎಲ್ಲವನ್ನೂ ಅರ್ಪಿಸಿ, ಶುಭಸಂದೇಶದಲ್ಲಿರುವ ಶ್ರೀಮಂತ ಯುವಕನಂತೆ “ಭೌತಿಕ ಸಂಪತ್ತನ್ನು” ಬಿಟ್ಟುಕೊಡಲು ಸಿದ್ಧನಾಗದ ವ್ಯಕ್ತಿಯಾಗಿ ತಾನು ಉಳಿದುಬಿಡುವ ಭಯವೇ ತನ್ನ ಅತಿದೊಡ್ಡ ಭಯವಾಗಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).