ಹುಡುಕಿ

ಇತರ ತರಬೇತುದಾರರೊಂದಿಗೆ ಡಾ. ಸ್ಟೆಫಾನೋ ಕಾಂಟೆ ಇತರ ತರಬೇತುದಾರರೊಂದಿಗೆ ಡಾ. ಸ್ಟೆಫಾನೋ ಕಾಂಟೆ 

ಟಾಂಜಾನಿಯಾ: ಕೈಟ್‌ಸರ್ಫಿಂಗ್ ಮೂಲಕ ಶಾಂತಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿರುವ ಝಾಂಜಿಬಾರ್ ಕಪ್

ಝಾಂಜಿಬಾರ್ ಕಪ್‌ನ ಆರನೇ ಆವೃತ್ತಿಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ, ಯುವ ಕ್ರೀಡೆ, ಪ್ರವಾಸೋದ್ಯಮ, ಶಾಂತಿ ಮತ್ತು ಪೂರ್ವ ಆಫ್ರಿಕಾದ ಅಂತರರಾಷ್ಟ್ರೀಯ ಸಹೋದರತ್ವವನ್ನು ಉತ್ತೇಜಿಸುವ ಉದ್ದೇಶದಿಂದ ಟಾಂಜಾನಿಯಾದಲ್ಲಿ ತಾವು ಆರಂಭಿಸಿದ ಈ ಸ್ಪರ್ಧೆಯ ಕುರಿತು ಇಟಲಿಯ ಮಕ್ಕಳ ವೈದ್ಯ ಸ್ಟೆಫಾನೋ ಕಾಂಟೆ ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

ಲೇಖಕರು: ಆಂಜೆಲ್ಲಾ ರ್ವೆಜೌಲಾ ಮತ್ತು ಸಹೋದರಿ ಕ್ರಿಸ್ಟಿನ್ ಮಾಸಿವೊ, CPS

ಇಟಲಿಯ ಮಕ್ಕಳ ವೈದ್ಯರಾದ ಡಾ. ಸ್ಟೆಫಾನೋ ಕಾಂಟೆ, ಝಾಂಜಿಬಾರ್‌ನಲ್ಲಿ ಪ್ರತಿವರ್ಷ ನಡೆಯುವ ಅಂತರರಾಷ್ಟ್ರೀಯ ಕೈಟ್‌ಸರ್ಫಿಂಗ್ ಸ್ಪರ್ಧೆಯಾದ ಝಾಂಜಿಬಾರ್ ಕಪ್‌ನ ಪಯಣ ಮತ್ತು ಅದರ ಹೆಚ್ಚುತ್ತಿರುವ ಯಶಸ್ಸಿನ ಬಗ್ಗೆ ಹಂಚಿಕೊಂಡಿದ್ದಾರೆ.

ಕ್ರೀಡೆಯ ಮೂಲಕ ಶಾಂತಿ ಮತ್ತು ಸಹೋದರತ್ವವನ್ನು ಉತ್ತೇಜಿಸುತ್ತಿರುವ ಈ ವೈದ್ಯರು, ಈ ಸ್ಪರ್ಧೆಯು ಪೂರ್ವ ಆಫ್ರಿಕಾದಾದ್ಯಂತ ಪ್ರವಾಸೋದ್ಯಮ, ಯುವ ಕ್ರೀಡೆ ಮತ್ತು ಅಂತರರಾಷ್ಟ್ರೀಯ ಐಕ್ಯತೆಯನ್ನು ಹೇಗೆ ಉತ್ತೇಜಿಸುತ್ತದೆ ಎಂಬುದನ್ನು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ವಿವರಿಸಿದರು.

2026ರ ಆಗಸ್ಟ್ 23ರಂದು ನಡೆಯಲಿರುವ ಸ್ಪರ್ಧೆಯ ಆರನೇ ಆವೃತ್ತಿಗೆ ಈಗ ಸಿದ್ಧತೆಗಳು ನಡೆಯುತ್ತಿವೆ.

ಡಾ. ಸ್ಟೆಫಾನೋ ಕಾಂಟೆ, ಹಲವು ವರ್ಷಗಳ ಕಾಲ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದಿದ್ದಾರೆ.. ಜೊತೆಗೆ, ತಮ್ಮ ವೈದ್ಯಕೀಯ ಜೀವನದ ಒಂದು ಭಾಗವನ್ನು ಝಾಂಜಿಬಾರ್‌ನ ನೂರಾರು ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ದೊರಕುವಂತೆ ಸಹಾಯ ಮಾಡುವ ಕಾರ್ಯಕ್ಕೆ ಸಮರ್ಪಿಸಿದ್ದರು.

ವೈದ್ಯಕೀಯ ಸೇವೆಯಿಂದ ಕ್ರೀಡಾ ಅಭಿವೃದ್ಧಿಯತ್ತ

ತಮ್ಮ ಮಾನವೀಯ ಸೇವೆಯ ಅನುಭವವೇ ನಂತರ ಡಾ. ಕಾಂಟೆ ಅವರಿಗೆ ಝಾಂಜಿಬಾರ್ ಕಪ್ ಸ್ಥಾಪಿಸಲು ಪ್ರೇರಣೆಯಾಯಿತು. ಈ ಅಂತರರಾಷ್ಟ್ರೀಯ ಕೈಟ್‌ಸರ್ಫಿಂಗ್ ಸ್ಪರ್ಧೆಯ ಉದ್ದೇಶ, ಕ್ರೀಡೆಯ ಮೂಲಕ ಯುವಜನರನ್ನು ಸಬಲಗೊಳಿಸುವುದು ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದಾಗಿದೆ.

ಡಾ. ಕಾಂಟೆ ಅವರ ಪ್ರಕಾರ, ಈ ಸ್ಪರ್ಧೆಯನ್ನು ಮೂರು ವರ್ಷಗಳ ಹಿಂದೆ ಝಾಂಜಿಬಾರ್ ಸರ್ಕಾರದ ಸಹಭಾಗಿತ್ವದಲ್ಲಿ ಆರಂಭಿಸಲಾಯಿತು. ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಸವಾಲುಗಳ ನಡುವೆಯೂ, ಈಗಾಗಲೇ ಐದು ಯಶಸ್ವಿ ಆವೃತ್ತಿಗಳನ್ನು ಪೂರ್ಣಗೊಳಿಸಿದೆ.

“ಕೈಟ್‌ಸರ್ಫಿಂಗ್ ಇಂದು ಜಗತ್ತಿನಾದ್ಯಂತ ಯುವಜನರಲ್ಲಿ ಅತ್ಯಂತ ಜನಪ್ರಿಯವಾಗುತ್ತಿರುವ ಕ್ರೀಡೆಗಳಲ್ಲಿ ಒಂದಾಗಿದೆ,” ಎಂದು ಅವರು ಹೇಳಿದರು. “ಈ ಕ್ರೀಡೆಯಲ್ಲಿ ಝಾಂಜಿಬಾರ್ ಮತ್ತು ಸಾಮಾನ್ಯವಾಗಿ ಪೂರ್ವ ಆಫ್ರಿಕಾ ಬೆಳೆಯಲು ಸಹಾಯ ಮಾಡುವುದರ ಜೊತೆಗೆ, ಅಂತರರಾಷ್ಟ್ರೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವುದೂ ನಮ್ಮ ಗುರಿಯಾಗಿದೆ.”

ಶಾಂತಿಯ ಸಂದೇಶ ಸಾರುವ ಕ್ರೀಡಾ ಸ್ಪರ್ಧೆ

ಕೇವಲ ಸ್ಪರ್ಧೆಯಷ್ಟೇ ಅಲ್ಲದೆ, ಝಾಂಜಿಬಾರ್ ಕಪ್‌ಗೆ ಬಲವಾದ ಮಾನವೀಯ ಮತ್ತು ಸಾಮಾಜಿಕ ಧ್ಯೇಯವೂ ಇದೆ ಎಂದು ಡಾ. ಕಾಂಟೆ ಒತ್ತಿಹೇಳಿದರು. ಜಗತ್ತಿನ ಅನೇಕ ಭಾಗಗಳು ಸಂಘರ್ಷ ಮತ್ತು ಅಸ್ಥಿರತೆಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಈ ಸ್ಪರ್ಧೆಯು ಶಾಂತಿ, ಸಹೋದರತ್ವ ಮತ್ತು ಐಕ್ಯತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ಅವರು ವಿವರಿಸಿದರು.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ನೀಡಿದ ಶಾಂತಿಯ ಕರೆಯನ್ನು ಪ್ರತಿಧ್ವನಿಸುತ್ತಾ, ಕ್ರೀಡೆಗಳು ಸಂಸ್ಕೃತಿಗಳು ಮತ್ತು ರಾಷ್ಟ್ರಗಳ ನಡುವಿನ ಸೇತುವೆಯಾಗಬಹುದು ಎಂದು ಡಾ. ಕಾಂಟೆ ಹೇಳಿದರು.

“ಜನರು ಯುದ್ಧವಿಲ್ಲದೆ ಸಹೋದರರು ಮತ್ತು ಸಹೋದರಿಯರಂತೆ ಒಟ್ಟಾಗಿ ಬದುಕಬಹುದು ಎಂಬ ಸಂದೇಶವನ್ನು ನಾವು ಸಾರಲು ಬಯಸುತ್ತೇವೆ, ಯಾರಿಗೆ ಅವಕಾಶವಿದೆಯೋ ಅವರು ಈ ಶಾಂತಿಯ ಸಂದೇಶವನ್ನು ಹರಡುವಲ್ಲಿ ಕೈಜೋಡಿಸಬೇಕು.”

ಫುಟ್‌ಬಾಲ್ ಹೊರತಾಗಿ ಯುವಜನರಿಗೆ ಪರ್ಯಾಯ ಕ್ರೀಡಾ ಅವಕಾಶಗಳನ್ನು ಒದಗಿಸುವ ಮಹತ್ವವನ್ನೂ ಡಾ. ಕಾಂತೆ ಒತ್ತಿಹೇಳಿದರು. ಕೈಟ್‌ಸರ್ಫಿಂಗ್ ಮೂಲಕ ಝಾಂಜಿಬಾರ್‌ಗೆ ಅಂತರರಾಷ್ಟ್ರೀಯ ಗಮನ ಸೆಳೆಯುವ ಸಾಧ್ಯತೆ ಇರುವುದರ ಜೊತೆಗೆ, ಸ್ಥಳೀಯ ಯುವಕರು ಜಾಗತಿಕ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಇದು ಪ್ರೇರಣೆಯಾಗುತ್ತದೆ ಎಂದು ಅವರು ಹೇಳಿದರು.

ಆರನೇ ಝಾಂಜಿಬಾರ್ ಕಪ್‌ಗೆ ಸಿದ್ಧತೆಗಳು ಮುಂದುವರಿಕೆ

2026ರ ಫೆಬ್ರವರಿ 9ರಂದು ನಡೆದ ಐದನೇ ಆವೃತ್ತಿಯನ್ನು ಸ್ಮರಿಸಿಕೊಂಡ ಡಾ. ಕಾಂಟೆ, ಗಾಳಿಯ ವೇಗ ಕಡಿಮೆಯಿದ್ದರೂ ಸ್ಪರ್ಧೆ ಯಶಸ್ವಿಯಾಯಿತು ಎಂದು ಹೇಳಿದರು. “ಈ ಸ್ಪರ್ಧೆಯಲ್ಲಿ ಎರಡು ಪ್ರಮುಖ ವಿಭಾಗಗಳಿದ್ದವು — ಕಡಲತೀರದ ಸುತ್ತ ನಡೆದ ರೆಗಟ್ಟಾ ಸ್ಪರ್ಧೆ ಮತ್ತು ಜಿಗಿತಗಳು ಹಾಗೂ ತಾಂತ್ರಿಕ ಪ್ರದರ್ಶನಗಳನ್ನು ಒಳಗೊಂಡ ಫ್ರೀಸ್ಟೈಲ್ ಸ್ಪರ್ಧೆ,” ಎಂದು ಅವರು ವಿವರಿಸಿದರು.

ಈ ಸ್ಪರ್ಧೆಯಲ್ಲಿ ಆರು ದೇಶಗಳಿಂದ ಬಂದ 42 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತರರಾಷ್ಟ್ರೀಯ ತೀರ್ಪುಗಾರರ ಮಂಡಳಿ ಮತ್ತು 15 ಪ್ರಾಯೋಜಕ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದವು. ನೇರ ದೂರದರ್ಶನ ಪ್ರಸಾರ ಒದಗಿಸಿದ ಅಝಾಮ್ ಸ್ಪೋರ್ಟ್ಸ್ HD ಸಂಸ್ಥೆಯ ಕೊಡುಗೆಯನ್ನು ಡಾ. ಕಾಂಟೆ ಪ್ರಶಂಸಿಸಿದರು. ಇದರಿಂದ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಯ ಜನಪ್ರಿಯತೆ ಮತ್ತಷ್ಟು ವಿಸ್ತರಿಸಿತು ಎಂದು ಅವರು ಹೇಳಿದರು.

ಇದಲ್ಲದೆ, ಝಾಂಜಿಬಾರ್ ಮತ್ತು ಟಾಂಜಾನಿಯಾ ಸರ್ಕಾರಗಳ ನಿರಂತರ ಬೆಂಬಲಕ್ಕಾಗಿ ಅವರು ಕೃತಜ್ಞತೆ ವ್ಯಕ್ತಪಡಿಸಿದರು. ವಿಶೇಷವಾಗಿ, ವಿದೇಶಾಂಗ ಮತ್ತು ಪೂರ್ವ ಆಫ್ರಿಕಾ ಸಹಕಾರ ಸಚಿವರಾದ ರಾಯಭಾರಿ ಮಹ್ಮೂದ್ ಥಾಬಿತ್ ಕಾಂಬೊ ಹಾಗೂ ಉತ್ತರ ಉಂಗುಜಾ ಪ್ರಾದೇಶಿಕ ಆಯುಕ್ತ ಮತ್ತು ಶಾಶ್ವತ ಕಾರ್ಯದರ್ಶಿ ಮಾತರ್ ಜಹೋರ್ ಮಸ್ಸೌದ್ ಅವರ ಬೆಂಬಲವನ್ನು ಅವರು ಸ್ಮರಿಸಿದರು.

ಝಾಂಜಿಬಾರ್ ಕಪ್‌ನ ಆರನೇ ಆವೃತ್ತಿಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ, ಡಾ. ಕಾಂಟೆ ವಿಶ್ವದಾದ್ಯಂತದ ಕ್ರೀಡಾಪಟುಗಳು, ಪ್ರಾಯೋಜಕರು ಮತ್ತು ಬೆಂಬಲಿಗರಿಗೆ ಆಹ್ವಾನ ನೀಡಿದರು. “ಜಾಗತಿಕ ಕ್ರೀಡಾ ಪ್ರವಾಸೋದ್ಯಮದಲ್ಲಿ ಝಾಂಜಿಬಾರ್‌ನ ಬೆಳೆಯುತ್ತಿರುವ ಸ್ಥಾನವನ್ನು ತೋರಿಸುವ ಅದ್ಭುತ ಅಂತರರಾಷ್ಟ್ರೀಯ ಸ್ಪರ್ಧೆಯನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು” ಎಂದು ಆಹ್ವಾನಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

15 ಮೇ 2026, 17:57