2026 ಜಾಗತಿಕ ಶಾಂತಿ ಸೂಚ್ಯಂಕ: ಯುದ್ಧದಲ್ಲಿ ಅಲ್ಲ, ಶಾಂತಿಯಲ್ಲಿ ಹೂಡಿಕೆ ಅವಶ್ಯ
ಲೇಖಕರು: ಕೀಲ್ ಗಸ್ಸಿ
ಕಳೆದ ಹನ್ನೆರಡು ವರ್ಷಗಳಿಂದ ವಿಶ್ವದಲ್ಲಿ ಶಾಂತಿಯ ಸ್ಥಿತಿ ಹದಗೆಡುತ್ತಲೇ ಬಂದಿದೆ. ಹೆಚ್ಚಿನ ರಾಷ್ಟ್ರಗಳು ಬಾಹ್ಯ ಸಂಘರ್ಷಗಳಲ್ಲಿ ತೊಡಗಿಕೊಂಡಿವೆ; 2018ರಿಂದ 2025ರ ನಡುವೆ ಡ್ರೋನ್ ದಾಳಿಗಳ ಸಂಖ್ಯೆ 11,500 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾಗಿದೆ; ಹಾಗೂ ದೇಶೀಯ ಸಂಘರ್ಷಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ 2007ರ ಬಳಿಕ ಆರು ಪಟ್ಟು ಹೆಚ್ಚಾಗಿದೆ.
ಈ ಮಾಹಿತಿ ಲಭ್ಯವಾಗಲು ಕಾರಣ ಜಾಗತಿಕ ಶಾಂತಿ ಸೂಚ್ಯಂಕವಾಗಿದೆ. ಜನರು, ಸರ್ಕಾರಗಳು ಮತ್ತು ರಾಷ್ಟ್ರಗಳು ಶಾಂತಿಗಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಾದ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಕಿಲ್ಲೇಲಿಯಾ ಈ ಸೂಚ್ಯಂಕವನ್ನು ರೂಪಿಸಿದರು.
“ಇದು ಏಕೆ ಮುಖ್ಯ ಎಂದು ಕೆಲವರು ಪ್ರಶ್ನಿಸುತ್ತಾರೆ. ಯಾವುದನ್ನಾದರೂ ಅಳೆಯಲು ಸಾಧ್ಯವಾಗದಿದ್ದರೆ, ಅದನ್ನು ನಿಜವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ?” ಎಂದು ಕಿಲ್ಲೇಲಿಯಾ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಹೇಳಿದರು.
ಹೇಗೆ ತಿಳಿಯುವುದು?
2007ರಲ್ಲಿ ಆರಂಭಗೊಂಡ ಜಾಗತಿಕ ಶಾಂತಿ ಸೂಚ್ಯಂಕವು ಜಗತ್ತಿನ ಶಾಂತಿಯ ಮಟ್ಟವನ್ನು ಅಳೆಯುವ ಅತ್ಯಂತ ಮಹತ್ವದ ಸಂಶೋಧನಾ ಸಾಧನಗಳಲ್ಲಿ ಒಂದಾಗಿದೆ. ಇದು ಮೂರು ಪ್ರಮುಖ ಅಂಶಗಳನ್ನು ಒಟ್ಟುಗೂಡಿಸಿ ಸೂಚ್ಯಂಕವನ್ನು ರೂಪಿಸುತ್ತದೆ—ಸೇನೀಕರಣ, ನಡೆಯುತ್ತಿರುವ ಸಂಘರ್ಷಗಳು ಹಾಗೂ ಆಂತರಿಕ ಸುರಕ್ಷತೆ ಮತ್ತು ಭದ್ರತೆ.
ಈ ಸೂಚ್ಯಂಕದ ಮೊದಲು, ಶಾಂತಿಯ ಮಟ್ಟದ ಆಧಾರದ ಮೇಲೆ ರಾಷ್ಟ್ರಗಳನ್ನು ಕ್ರಮಬದ್ಧವಾಗಿ ಪಟ್ಟಿ ಮಾಡುವ ಯಾವುದೇ ಸಮಗ್ರ ಮಾನದಂಡಿತ ವ್ಯವಸ್ಥೆ ಇರಲಿಲ್ಲ. “ಸರಿಯಾದ ಅಳತೆ ಇಲ್ಲದೆ, ನಿಮ್ಮ ಕ್ರಮಗಳು ಗುರಿ ಸಾಧನೆಗೆ ಸಹಾಯ ಮಾಡುತ್ತಿವೆಯೋ ಅಥವಾ ಅಡ್ಡಿಯಾಗುತ್ತಿವೆಯೋ ಎಂಬುದನ್ನು ಹೇಗೆ ತಿಳಿಯುವುದು? ತಿಳಿಯಲು ಸಾಧ್ಯವಿಲ್ಲ,” ಎಂದು ಕಿಲ್ಲೇಲಿಯಾ ಹೇಳಿದರು.
ಮಹತ್ತರವಾದುದರಲ್ಲಿ ಹೂಡಿಕೆ
ಜೂನ್ 22ರಂದು ರೋಮ್‌ನಲ್ಲಿ ನಡೆದ 2026ರ ಜಾಗತಿಕ ಶಾಂತಿ ಸೂಚ್ಯಂಕದ ಪ್ರಸ್ತುತಿಯನ್ನು ಆಯೋಜಿಸಿದ್ದ ಪವಿತ್ರ ಪೀಠದ ಆಸ್ಟ್ರೇಲಿಯಾದ ರಾಯಭಾರಿ ಕೀತ್ ಪಿಟ್, ಕಳೆದ 19 ವರ್ಷಗಳಿಂದ ಕಿಲ್ಲೇಲಿಯಾ ಈ ಕ್ಷೇತ್ರದಲ್ಲಿ ಮಾಡುತ್ತಿರುವ ಮಹತ್ವದ ಕಾರ್ಯವನ್ನು ಶ್ಲಾಘಿಸಿದರು.
ಈ ಅಂಕಿಅಂಶಗಳು ಜಗತ್ತಿನಾದ್ಯಂತ ಸಂಘರ್ಷಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಅಲ್ಲದೆ, ಯುದ್ಧಗಳು ಅಂತ್ಯಗೊಳ್ಳುವ ವಿಧಾನದಲ್ಲಿಯೂ ಮಹತ್ವದ ಬದಲಾವಣೆ ಕಂಡುಬಂದಿದೆ. 1970ರ ದಶಕದಲ್ಲಿ 23 ಪ್ರತಿಶತ ಯುದ್ಧಗಳು ಶಾಂತಿ ಒಪ್ಪಂದಗಳ ಮೂಲಕ ಕೊನೆಗೊಂಡಿದ್ದವು. ಆದರೆ 2010ರ ದಶಕದಲ್ಲಿ ಅದು ಕೇವಲ 4 ಪ್ರತಿಶತಕ್ಕೆ ಇಳಿದಿದೆ.
ಇದಕ್ಕೆ ಕಾರಣವೇನು? ಇಂದು ಇಷ್ಟೊಂದು ಸಂಘರ್ಷಗಳು ಏಕೆ ನಡೆಯುತ್ತಿವೆ? ಕಿಲ್ಲೇಲಿಯಾ ಅವರ ಪ್ರಕಾರ, ಅನೇಕ “ದೀರ್ಘಕಾಲದ ಸಣ್ಣ ಮಟ್ಟದ ಸಂಘರ್ಷಗಳು”, ಕೆಲವು ಸಂದರ್ಭಗಳಲ್ಲಿ ದೊಡ್ಡ ಯುದ್ಧಗಳಾಗಿ ಬೆಳೆಯುತ್ತವೆ. “ನಾವು ಸಂಘರ್ಷಗಳನ್ನು ನಿಲ್ಲಿಸಲು ಸಾಧ್ಯವಾಗದಿದ್ದರೆ, ಅವುಗಳ ಸಂಖ್ಯೆ ಸಹಜವಾಗಿಯೇ ಹೆಚ್ಚುತ್ತಾ ಹೋಗುತ್ತದೆ,” ಎಂದು ಅವರು ಹೇಳಿದರು.
ಹಿಂದಿನ ದಶಕಗಳಿಗಿಂತ ಇಂದು ಯುದ್ಧಗಳಲ್ಲಿ ಡ್ರೋನ್‌ಗಳು ಪ್ರಮುಖ ಅಸ್ತ್ರಗಳಾಗಿವೆ. ಅವು ಯುದ್ಧದ ಸ್ವರೂಪವನ್ನು ಜಗತ್ತು ಹೊಂದಿಕೊಳ್ಳುವುದಕ್ಕಿಂತಲೂ ವೇಗವಾಗಿ ಬದಲಾಯಿಸುತ್ತಿವೆ. ಈ ಹಿನ್ನಲೆಯಲ್ಲಿ, ಸರ್ಕಾರಗಳು “ಸಂಘರ್ಷಗಳು ತಮ್ಮ ಆರ್ಥಿಕತೆ, ನಾಗರಿಕರು ಮತ್ತು ಜಾಗತಿಕ ಮಟ್ಟದ ಮೇಲೆ ಬೀರುವ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಹೇಳಿದರು.
ಇದಲ್ಲದೆ, ಸೇನಾ ವೆಚ್ಚದ ಕೇವಲ 0.1 ರಿಂದ 1 ಪ್ರತಿಶತದಷ್ಟೇ ಶಾಂತಿ ನಿರ್ಮಾಣಕ್ಕೆ ಮೀಸಲಾಗುತ್ತದೆ ಎಂದು ಅವರು ಗಮನಸೆಳೆದರು. ಕೃತಕ ಬುದ್ಧಿಮತ್ತೆಯು ಗುರಿಯನ್ನು ಗುರುತಿಸಲು ಬೇಕಾಗುವ ಸಮಯವನ್ನು ಒಂದು ದಿನದಿಂದ ಕೆಲವೇ ಕ್ಷಣಗಳಿಗೆ ಇಳಿಸಿದೆ.
ಡ್ರೋನ್‌ಗಳ ನೈತಿಕ ಪ್ರಶ್ನೆ
ಡ್ರೋನ್‌ಗಳ ಸಮಸ್ಯೆಯು ಕೇವಲ ತಾಂತ್ರಿಕವಲ್ಲ; ಅದು ನೈತಿಕ ಪ್ರಶ್ನೆಯೂ ಆಗಿದೆ. ಮಾನವ ಮೇಲ್ವಿಚಾರಣೆಯಿಲ್ಲದೆ ಹತ್ಯೆ ನಡೆಸುವ ಸಾಮರ್ಥ್ಯವನ್ನು ಡ್ರೋನ್‌ಗಳು ಒದಗಿಸುತ್ತವೆ. ಈ ತಂತ್ರಜ್ಞಾನವು ಯುದ್ಧದಲ್ಲಿನ ಮಾನವೀಯ ಅಂಶವನ್ನು ತೆಗೆದುಹಾಕಿ, ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ಮತ್ತೊಬ್ಬರ ಜೀವವನ್ನು ಕಸಿದುಕೊಳ್ಳುವುದನ್ನು ಸುಲಭಗೊಳಿಸುತ್ತದೆ.
“ಮಾನವ ಹಸ್ತಕ್ಷೇಪವಿಲ್ಲದೆ, ಕೃತಕ ಬುದ್ಧಿಮತ್ತೆಯು ತಪ್ಪು ನಿರ್ಧಾರ ತೆಗೆದುಕೊಂಡಿದೆಯೇ ಅಥವಾ ಸುಳ್ಳು ಸೂಚನೆ ನೀಡಿದೆಯೇ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ,” ಎಂದು ಕಿಲ್ಲೇಲಿಯಾ ಎಚ್ಚರಿಸಿದರು. ಇದರಿಂದ ನಿರಪರಾಧ ಜನರು ಗುರಿಯಾಗಬಹುದು ಮತ್ತು ಅಮೂಲ್ಯ ಜೀವಗಳು ನಾಶವಾಗಬಹುದು.
ಸರ್ಕಾರಗಳು ಶಾಂತಿಯನ್ನು ನಿರ್ಮಿಸಲು ಹೊಸ ಮೈತ್ರಿಗಳನ್ನು ರೂಪಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ಅವರು ಹೇಳಿದರು. “ಯುದ್ಧದಲ್ಲಿ ಹೂಡಿಕೆ ಮಾಡಬಹುದು, ಆದರೆ ಅದರಿಂದ ಶಾಂತಿ ನಿರ್ಮಾಣವಾಗುವುದಿಲ್ಲ ಎಂಬ ಸತ್ಯವನ್ನು ಸರ್ಕಾರಗಳು ಅರಿತುಕೊಳ್ಳಬೇಕು,” ಎಂದು ಅವರು ತಿಳಿಸಿದರು.
ಶಾಂತಿಯಲ್ಲಿ ಹೂಡಿಕೆ ಮಾಡಿದಾಗ ಮಾತ್ರ ಶಾಂತಿ ಸಾಧಿಸಬಹುದು.
ಇದಕ್ಕಾಗಿ ಅವರು ಮೂರು ಸ್ಪಷ್ಟ ಮಾರ್ಗಗಳನ್ನು ಸೂಚಿಸಿದರು. ಮೊದಲನೆಯದು, ಹೆಚ್ಚು ರಾಜತಾಂತ್ರಿಕ ಸಂವಾದ. ಎರಡನೆಯದು, ಸ್ಥಳೀಯ ಸಂಘರ್ಷಗಳ ಸಂದರ್ಭದಲ್ಲಿ ಜನರ ಅಸಮಾಧಾನಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು. ಮೂರನೆಯದು, ಜನರ ಜೀವನೋಪಾಯವನ್ನು ಸುಧಾರಿಸುವುದು. “ಜನರು ತಮ್ಮ ಜೀವನೋಪಾಯ ಸುಧಾರಿಸುತ್ತಿರುವುದನ್ನು ನೋಡಿದರೆ, ಅವರು ಹೋರಾಡಲು ಅಥವಾ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುವ ಸಾಧ್ಯತೆ ಬಹಳ ಕಡಿಮೆ,” ಎಂದು ಕಿಲ್ಲೇಲಿಯಾ ಹೇಳಿದರು.
ನಿರೀಕ್ಷೆಯ ಕಿರಣ
ಆದರೆ ಈ ಅಂಕಿಅಂಶಗಳು ಭವಿಷ್ಯದ ಬಗ್ಗೆ ನಿರಾಶೆಯನ್ನು ಹುಟ್ಟಿಸಲು ಅಲ್ಲ. ಬದಲಾಗಿ, ಅವುಗಳಲ್ಲಿ ಭರವಸೆಯೂ ಅಡಗಿದೆ ಎಂದು ಕಿಲ್ಲೇಲಿಯಾ ಹೇಳಿದರು. “ಮಾನವಕುಲದ ಭರವಸೆ ಎಂದರೆ ನಾವು ಎಲ್ಲರೂ ಚಕ್ರಾಕಾರದ ಹಂತಗಳನ್ನು ದಾಟುತ್ತೇವೆ,” ಎಂದು ಅವರು ಹೇಳಿದರು. “ಹಿಂದೆ ತಾವು ಅಜೇಯರೆಂದು ಭಾವಿಸಿದ್ದ ಅನೇಕ ರಾಷ್ಟ್ರಗಳು ವಾಸ್ತವವನ್ನು ಅರಿತು ಎಚ್ಚೆತ್ತುಕೊಳ್ಳಲಿವೆ ಎಂಬ ಭರವಸೆ ನಮಗಿದೆ.”
ಇಂದಿನ ಜಗತ್ತಿಗೆ ಶಾಂತಿಯ ಸಂದೇಶವಾಹಕರು ಅಗತ್ಯವಿದ್ದಾರೆ ಎಂದು ಅವರು ಒತ್ತಿಹೇಳಿದರು. ಶಾಂತಿ, ಸಂವಾದ ಮತ್ತು ಹಿಂಸಾಚಾರದ ಅಂತ್ಯದ ಬಗ್ಗೆ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ನಿರಂತರವಾಗಿ ನೀಡುತ್ತಿರುವ ಕರೆಗಳು ಶಾಂತಿ ಸಾಧನೆಗೆ ಸ್ಪಷ್ಟವಾದ ಕೊಡುಗೆಯನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
“ಈ ಕ್ಷಣದಲ್ಲಿ ನಮಗೆ ಶಾಂತಿಯ ಪ್ರವಾದಿಗಳು ಬೇಕಾಗಿದ್ದಾರೆ. ದಲೈ ಲಾಮಾ, ಡೆಸ್ಮಂಡ್ ಟುಟು, ನೆಲ್ಸನ್ ಮಂಡೇಲಾ ಅವರಂತಹ ವ್ಯಕ್ತಿಗಳು ನಮ್ಮೊಂದಿಗಿಲ್ಲ. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಆ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬಹುದು ಎಂದು ನಾನು ನಂಬುತ್ತೇನೆ. ಆದ್ದರಿಂದ ಅವರು ನಿಜವಾದ ಶಾಂತಿಯ ಪ್ರವಾದಿಯಾಗಬೇಕೆಂದು ನಾನು ಸಂಪೂರ್ಣವಾಗಿ ಪ್ರೋತ್ಸಾಹಿಸುತ್ತೇನೆ,” ಎಂದು ಕಿಲ್ಲೇಲಿಯಾ ಹೇಳಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).