ವೆನೆಜುವೆಲಾದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ; 50 ಸಾವಿರ ಮಂದಿ ನಾಪತ್ತೆ ಎಂದು ವರದಿ
ವ್ಯಾಟಿಕನ್ ವರದಿ
ಕಳೆದ ವಾರ ಸಂಭವಿಸಿದ ಸತತ ಎರಡು ಭೀಕರ ಭೂಕಂಪಗಳ ಬಳಿಕ, ಸೋಮವಾರ ಮುಂಜಾನೆ ವೆನೆಜುವೆಲಾದಲ್ಲಿ ಪ್ರಬಲ ನಂತರದ ಭೂಕಂಪ ಸಂಭವಿಸಿತು. ಇದೇ ವೇಳೆ, ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ನಾಗರಿಕರು ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಬದುಕುಳಿದವರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದರು.
ವೆನೆಜುವೆಲಾದ ರಾಷ್ಟ್ರೀಯ ವಿಧಾನಸಭೆಯ ಅಧಿಕಾರಿಯೊಬ್ಬರು, ಈ ನಂತರದ ಭೂಕಂಪದಿಂದ ಹೆಚ್ಚುವರಿ ಹಾನಿಯಾಗಿರುವ ಕುರಿತು ತಕ್ಷಣದ ವರದಿಗಳು ಬಂದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಭೂಕಂಪದ ಕಂಪನದಿಂದ ಕರಾಕಾಸ್ ನಿವಾಸಿಗಳು ಭಯಭೀತರಾಗಿ ಕಿರುಚುತ್ತಾ ಮನೆಗಳಿಂದ ಹೊರಗೆ ಓಡಿಬಂದರು.
ಕಳೆದ ಬುಧವಾರ ಸಂಭವಿಸಿದ ಅವಳಿ ಭೂಕಂಪಗಳಿಂದ ಇದುವರೆಗೆ ಸುಮಾರು 1,500 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ದೇಶದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ಲಾ ಗ್ವೈರಾ ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
50 ಸಾವಿರ ಮಂದಿ ನಾಪತ್ತೆ
ಸುಮಾರು 50 ಸಾವಿರ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರತಿ ಗಂಟೆ ಕಳೆದಂತೆ ಅವಶೇಷಗಳಡಿ ಜೀವಂತವಾಗಿ ಸಿಲುಕಿರುವವರನ್ನು ಪತ್ತೆಹಚ್ಚುವ ಸಾಧ್ಯತೆ ಕ್ಷೀಣಿಸುತ್ತಿದೆ.
ಭಾನುವಾರದ ಏಂಜೆಲಸ್ ಸಂದೇಶದ ವೇಳೆ ಮಾತನಾಡಿದ ಜಗದ್ಗುರುಗಳಾದ 14ನೇ ಲಿಯೋ, ಭೂಕಂಪದಿಂದ ಸಂತ್ರಸ್ತರಾದ ಎಲ್ಲರೊಂದಿಗೆ ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿದರು. ಜೊತೆಗೆ, "ಉದಾರ ಮನೋಭಾವದಿಂದ ಶೋಧ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ" ಅವರು ಕೃತಜ್ಞತೆ ಸಲ್ಲಿಸಿದರು.
ನೈಸರ್ಗಿಕ ವಿಕೋಪದ ನಂತರದ ಮೊದಲ 48ರಿಂದ 72 ಗಂಟೆಗಳು ರಕ್ಷಣಾ ಕಾರ್ಯಾಚರಣೆಗೆ ಅತ್ಯಂತ ಮಹತ್ವದ್ದಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಅವಶೇಷಗಳಡಿ ಸಿಲುಕಿರುವವರಿಗೆ ಆಹಾರ ಮತ್ತು ನೀರು ದೊರಕಿದರೆ ಅವರು ಇನ್ನಷ್ಟು ಕಾಲ ಬದುಕುಳಿಯುವ ಸಾಧ್ಯತೆಯೂ ಇದೆ ಎಂದು ಅವರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಸರ್ಕಾರದ ಪ್ರತಿಕ್ರಿಯೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿರುವ ಅನೇಕ ವೆನೆಜುವೆಲಾ ನಾಗರಿಕರು, ನಾಗರಿಕರ ನೇತೃತ್ವದ ರಕ್ಷಣಾ ಕಾರ್ಯಗಳೇ ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಮಧ್ಯೆ, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ್, ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ವಿಶ್ವದ ವಿವಿಧ ರಾಷ್ಟ್ರಗಳಿಂದ 2,600ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ತರಬೇತಿ ಪಡೆದ ಶೋಧ ಶ್ವಾನಗಳು ಹಾಗೂ ಭಾರೀ ಯಂತ್ರೋಪಕರಣಗಳೊಂದಿಗೆ ವೆನೆಜುವೆಲಾಕ್ಕೆ ಆಗಮಿಸಿ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.
(ಮೂಲ: AP ಮತ್ತು ರಾಯಿಟರ್ಸ್)
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).