ಅಫ್ಘಾನಿಸ್ತಾನ: ಅಪೌಷ್ಟಿಕತೆಯ ಅಪಾಯದಲ್ಲಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 37 ಲಕ್ಷ ಮಕ್ಕಳು
ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ
UNICEFನ ಹೊಸ ವರದಿಯು, ಅಫ್ಘಾನಿಸ್ತಾನದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 37 ಲಕ್ಷ ಮಕ್ಕಳು ಅಪೌಷ್ಟಿಕತೆಯ ಹೆಚ್ಚಿದ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಎಚ್ಚರಿಸಿದೆ. ಆಹಾರ ಅಭದ್ರತೆ ಮತ್ತು ಕಳಪೆ ಪೌಷ್ಟಿಕಾಂಶವು ದೇಶದ ಅತ್ಯಂತ ಕಿರಿಯ ಹಾಗೂ ದುರ್ಬಲ ಮಕ್ಕಳ ಜೀವಕ್ಕೆ ನಿರಂತರವಾಗಿ ಬೆದರಿಕೆಯಾಗುತ್ತಿದೆ.
ಸೋಮವಾರ ಪ್ರಕಟವಾದ "ಟೂ ಲಿಟಲ್, ಟೂ ಲೇಟ್: ಅಫ್ಘಾನಿಸ್ತಾನದ ಚಿಕ್ಕ ಮಕ್ಕಳನ್ನು ಎದುರಿಸುತ್ತಿರುವ ಆಹಾರ ಬಿಕ್ಕಟ್ಟು" ಎಂಬ ವರದಿಯು, ದೇಶಾದ್ಯಂತ ಮಕ್ಕಳ ಪೌಷ್ಟಿಕಾಂಶದಲ್ಲಿ ಆತಂಕಕಾರಿ ಕುಸಿತವನ್ನು ಎತ್ತಿಹಿಡಿದಿದ್ದು, ವಾರ್ಷಿಕ ಗರಿಷ್ಠ ಅಪೌಷ್ಟಿಕತೆಯ ಋತು ತೀವ್ರಗೊಳ್ಳುವ ಮೊದಲು ತಡೆಗಟ್ಟುವ ಕ್ರಮಗಳಲ್ಲಿ ತುರ್ತು ಹೂಡಿಕೆ ಮಾಡುವಂತೆ ಕರೆ ನೀಡಿದೆ.
ದಶಕಗಳ ಸಂಘರ್ಷ, ಆರ್ಥಿಕ ಕುಸಿತ ಮತ್ತು ಪುನರಾವರ್ತಿತ ಹವಾಮಾನ ಆಘಾತಗಳ ಬಳಿಕ ಅಫ್ಘಾನಿಸ್ತಾನವು ವಿಶ್ವದ ಅತ್ಯಂತ ಗಂಭೀರ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದನ್ನು ಎದುರಿಸುತ್ತಿದೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ, ಅಂತರರಾಷ್ಟ್ರೀಯ ಹಣಕಾಸು ನೆರವಿನಲ್ಲಿ ತೀವ್ರ ಕುಸಿತ, ವ್ಯಾಪಕ ಬಡತನ ಹಾಗೂ ಈಗಾಗಲೇ ದುರ್ಬಲವಾಗಿರುವ ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ದೇಶ ಅನುಭವಿಸುತ್ತಿದೆ. ಮಹಿಳೆಯರು ಮತ್ತು ಬಾಲಕಿಯರು ಶಿಕ್ಷಣ, ಉದ್ಯೋಗ ಮತ್ತು ಸಾರ್ವಜನಿಕ ಜೀವನದ ಮೇಲೆ ವ್ಯಾಪಕ ನಿರ್ಬಂಧಗಳನ್ನು ಎದುರಿಸುತ್ತಿದ್ದು, ಇದು ದೇಶದಾದ್ಯಂತ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಮಕ್ಕಳ ಅಪೌಷ್ಟಿಕತೆಯ ವಿಶ್ಲೇಷಣೆ
ಮೊದಲ ಬಾರಿಗೆ, UNICEF ಅಫ್ಘಾನಿಸ್ತಾನದ ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಒಂದೇ ಗುಂಪಿನ ಮಕ್ಕಳಲ್ಲಿ ಮನೆಯ ಆಹಾರ ಮತ್ತು ಪೌಷ್ಟಿಕಾಂಶ ಅಭದ್ರತೆಯ ಜೊತೆಗೆ ಮಕ್ಕಳ ಅಪೌಷ್ಟಿಕತೆಯನ್ನು ಮೌಲ್ಯಮಾಪನ ಮಾಡಿದೆ. ಈ ವಿಶ್ಲೇಷಣೆಯು ಆಹಾರದ ವೈವಿಧ್ಯತೆಯಲ್ಲಿ ಕಡಿತ, ಊಟವನ್ನು ಬಿಟ್ಟುಬಿಡುವುದು, ಮಕ್ಕಳಿಗೆ ಅಗತ್ಯಕ್ಕಿಂತ ಕಡಿಮೆ ಆಹಾರ ನೀಡುವುದು ಹಾಗೂ ಹಸಿವಿನಿಂದ ಬಳಲುವುದು ಮುಂತಾದ ಆರಂಭಿಕ ಎಚ್ಚರಿಕೆ ಸಂಕೇತಗಳನ್ನು ಗುರುತಿಸಿದೆ. ಇವು ಸಾಮಾನ್ಯವಾಗಿ ತೀವ್ರ ಅಪೌಷ್ಟಿಕತೆಗೆ ಮುಂಚೆಯೇ ಕಾಣಿಸಿಕೊಳ್ಳುತ್ತವೆ.
ಜುಲೈನಿಂದ ಸೆಪ್ಟೆಂಬರ್‌ವರೆಗೆ ತೀವ್ರ ಅಪೌಷ್ಟಿಕತೆ ಸಾಮಾನ್ಯವಾಗಿ ಗರಿಷ್ಠ ಮಟ್ಟ ತಲುಪುವ ಅವಧಿಗೆ ಅಫ್ಘಾನಿಸ್ತಾನ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಈ ವರದಿ ಪ್ರಕಟವಾಗಿದೆ. ಆದರೆ ದೇಶದ ಪೌಷ್ಟಿಕಾಂಶ ಕ್ಲಸ್ಟರ್ನ ಇತ್ತೀಚಿನ ಅಂಕಿಅಂಶಗಳು, 2025ಕ್ಕೆ ಹೋಲಿಸಿದರೆ ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ 26 ಪ್ರಾಂತ್ಯಗಳಲ್ಲಿ ತೀವ್ರ ಅಪೌಷ್ಟಿಕತೆ ಹೆಚ್ಚಾಗಿರುವುದನ್ನು ತೋರಿಸುತ್ತಿದ್ದು, ಬಿಕ್ಕಟ್ಟು ನಿರೀಕ್ಷೆಗಿಂತ ಮೊದಲೇ ಉಲ್ಬಣಗೊಳ್ಳುತ್ತಿದೆ.
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅತ್ಯಂತ ಹೆಚ್ಚಿನ ಹೊರೆ ಹೊರುತ್ತಿದ್ದಾರೆ. ದೇಶಾದ್ಯಂತ ಕಂಡುಬರುವ ತೀವ್ರ ಅಪೌಷ್ಟಿಕತೆಯ ಶೇ.83 ಹಾಗೂ ಮಧ್ಯಮ ಮಟ್ಟದ ಅಪೌಷ್ಟಿಕತೆಯ ಶೇ.77 ಪ್ರಕರಣಗಳು ಇದೇ ವಯೋಮಾನದ ಮಕ್ಕಳಲ್ಲಿ ಕಂಡುಬರುತ್ತಿವೆ.
"ಗರಿಷ್ಠ ಅಪೌಷ್ಟಿಕತೆಯ ಋತು ಆರಂಭವಾಗುವ ಮುನ್ನವೇ ಅಫ್ಘಾನಿಸ್ತಾನದ ಚಿಕ್ಕ ಮಕ್ಕಳು ಅಪೌಷ್ಟಿಕತೆಯತ್ತ ಜಾರುತ್ತಿದ್ದಾರೆ," ಎಂದು ಅಫ್ಘಾನಿಸ್ತಾನದಲ್ಲಿನ UNICEF ಪ್ರತಿನಿಧಿ ಡಾ. ತಾಜುದ್ದೀನ್ ಓಯೆವಾಲೆ ಹೇಳಿದರು. "ಈ ಹೊಸ ಸಂಶೋಧನಾ ಫಲಿತಾಂಶಗಳು ಮಕ್ಕಳು ತೀವ್ರ ಅಪೌಷ್ಟಿಕತೆಗೆ ತಲುಪುವ ಮೊದಲು ಕ್ರಮ ಕೈಗೊಳ್ಳುವ ಅವಕಾಶವನ್ನು ನಮಗೆ ನೀಡುತ್ತವೆ. ಕುಟುಂಬಗಳು ಊಟವನ್ನು ಬಿಟ್ಟುಬಿಡಲು ಅಥವಾ ಪೌಷ್ಟಿಕ ಆಹಾರವನ್ನು ಕಡಿಮೆ ಮಾಡಲು ಆರಂಭಿಸಿದಾಗ, ಅದು ಕೇವಲ ಕಷ್ಟದ ಸಂಕೇತವಲ್ಲ; ಮಗುವು ಶೀಘ್ರದಲ್ಲೇ ತೀವ್ರ ಅಪೌಷ್ಟಿಕತೆಗೆ ಒಳಗಾಗಬಹುದು ಎಂಬ ಮುನ್ಸೂಚನೆಯಾಗಿದೆ."
ಜೀವಗಳನ್ನು ಉಳಿಸಲು ಚಿಕಿತ್ಸೆ ಅತ್ಯಗತ್ಯವಾಗಿದ್ದರೂ, ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರ ಆಹಾರದ ಗುಣಮಟ್ಟವನ್ನು ಸುಧಾರಿಸುವ ಮೂಲಕ ತಡೆಗಟ್ಟುವ ಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಅಗತ್ಯವಿದೆ ಎಂದು ಡಾ. ಓಯೆವಾಲೆ ಒತ್ತಿ ಹೇಳಿದರು.
ಹಲವು ಕಾರಣಗಳಿಂದ ಉಂಟಾಗಿರುವ ಬಿಕ್ಕಟ್ಟು
UNICEF ಪ್ರಕಾರ, ಮಕ್ಕಳ ಪೌಷ್ಟಿಕಾಂಶ ಹದಗೆಡಲು ಕೇವಲ ಆಹಾರ ಅಭದ್ರತೆಯೇ ಕಾರಣವಲ್ಲ; ಸಾಂಕ್ರಾಮಿಕ ರೋಗಗಳ ಹರಡುವಿಕೆ, ಕಡಿಮೆ ಲಸಿಕಾ ವ್ಯಾಪ್ತಿ, ಅಸಮರ್ಪಕ ನೀರು, ನೈರ್ಮಲ್ಯ ಮತ್ತು ಸ್ವಚ್ಛತಾ ಸೇವೆಗಳು ಹಾಗೂ ಹಣಕಾಸು ಮತ್ತು ಅಗತ್ಯ ಸಾಮಗ್ರಿಗಳ ಕೊರತೆಯೂ ಕಾರಣವಾಗಿದೆ.
ಈ ಎಲ್ಲಾ ಅಂಶಗಳು ಸೇರಿ ಮಕ್ಕಳನ್ನು ತೀವ್ರ ಅಪೌಷ್ಟಿಕತೆಗೆ ಹೆಚ್ಚು ತುತ್ತಾಗುವಂತೆ ಮಾಡುತ್ತಿದ್ದು, ಪೌಷ್ಟಿಕಾಂಶ, ಆರೋಗ್ಯ ಸೇವೆ, ನೀರು ಮತ್ತು ನೈರ್ಮಲ್ಯ, ಶಿಕ್ಷಣ ಹಾಗೂ ಸಾಮಾಜಿಕ ರಕ್ಷಣಾ ಸೇವೆಗಳನ್ನು ಒಗ್ಗೂಡಿಸುವ ಸಮನ್ವಿತ ಪ್ರತಿಕ್ರಿಯೆಯ ಅಗತ್ಯವನ್ನು ಒತ್ತಿಹೇಳುತ್ತವೆ.
ತೀವ್ರ ಅಪೌಷ್ಟಿಕತೆಯು ಮಗುವಿನ ಎತ್ತರಕ್ಕೆ ಹೋಲಿಸಿದರೆ ಅಪಾಯಕಾರಿಯಾಗಿ ದೇಹದ ತೂಕ ಕಡಿಮೆಯಾಗುವ ಗಂಭೀರ ಮತ್ತು ಜೀವಕ್ಕೆ ಅಪಾಯ ಉಂಟುಮಾಡುವ ಸ್ಥಿತಿಯಾಗಿದೆ. ಇದು ಇತ್ತೀಚಿನ ಆಹಾರ ಕೊರತೆ, ಅನಾರೋಗ್ಯ ಅಥವಾ ಎರಡೂ ಕಾರಣಗಳಿಂದ ಉಂಟಾಗಬಹುದು. ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಇದು ಅತ್ಯಂತ ವೇಗವಾಗಿ ಮಾರಣಾಂತಿಕವಾಗಬಹುದು. ತೀವ್ರ ಆಹಾರ ಅಭದ್ರತೆಯನ್ನು ಅನುಭವಿಸುತ್ತಿರುವ ಕುಟುಂಬಗಳ ಮಕ್ಕಳಲ್ಲಿ, ಋತುವಿನ ಗರಿಷ್ಠ ಅವಧಿಯಲ್ಲಿ ತೀವ್ರ ಅಪೌಷ್ಟಿಕತೆ ಕಾಣಿಸಿಕೊಳ್ಳುವ ಸಾಧ್ಯತೆ ಆರು ಪಟ್ಟು ಹೆಚ್ಚಾಗಿದೆ ಎಂಬುದನ್ನೂ ವರದಿ ತಿಳಿಸಿದೆ.
ತುರ್ತು ಕ್ರಮಕ್ಕೆ ಕರೆ
ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಮುನ್ನ ತಡೆಗಟ್ಟುವ ಪೌಷ್ಟಿಕಾಂಶ ಸೇವೆಗಳನ್ನು ಬಲಪಡಿಸಲು, ದಾನಿಗಳು ಮತ್ತು ಪಾಲುದಾರರು ತಕ್ಷಣ ಹಾಗೂ ಅಗತ್ಯಕ್ಕೆ ತಕ್ಕಂತೆ ಬಳಸಬಹುದಾದ ಹಣಕಾಸು ನೆರವನ್ನು ಒದಗಿಸುವಂತೆ UNICEF ಕರೆ ನೀಡಿದೆ.
ಆರು ತಿಂಗಳಿಂದ 23 ತಿಂಗಳೊಳಗಿನ ಮಕ್ಕಳಿಗೆ ಆದ್ಯತೆ ನೀಡುವ "ಫಸ್ಟ್ ಫುಡ್ಸ್" ಉಪಕ್ರಮದಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ, ಜೊತೆಗೆ ತಡೆಗಟ್ಟುವ ಪೌಷ್ಟಿಕಾಂಶ ಕಾರ್ಯಕ್ರಮಗಳನ್ನು ವಿಸ್ತರಿಸುವಂತೆ ಹಾಗೂ ಮಕ್ಕಳ ಪೌಷ್ಟಿಕ ಅಗತ್ಯಗಳನ್ನು ಬೆಂಬಲಿಸುವ ಅಗತ್ಯ ಸೇವೆಗಳನ್ನು ಇನ್ನಷ್ಟು ಸಮನ್ವಯಗೊಳಿಸುವಂತೆ ಸಂಸ್ಥೆ ಮನವಿ ಮಾಡಿದೆ.
ವಾರ್ಷಿಕ ಗರಿಷ್ಠ ಅಪೌಷ್ಟಿಕತೆಯ ಋತು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಜೀವಕ್ಕೆ ಅಪಾಯಕಾರಿಯಾದ ಅಪೌಷ್ಟಿಕತೆಯನ್ನು ತಡೆಗಟ್ಟುವ ಅವಕಾಶ ಅತ್ಯಂತ ವೇಗವಾಗಿ ಕೈತಪ್ಪುತ್ತಿದೆ ಎಂದು UNICEF ಎಚ್ಚರಿಸಿದೆ.
"ಎಚ್ಚರಿಕೆಯ ಸಂಕೇತಗಳು ಮೊದಲೇ ಕಾಣಿಸಿಕೊಳ್ಳುತ್ತಿವೆ,ಆದ್ದರಿಂದ ಪ್ರತಿಕ್ರಿಯೆಯೂ ಮೊದಲೇ ಬರಬೇಕು.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).