UNHCR: ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆದುಸಾ ಭೇಟಿ ಸಹಜವಾಬ್ದಾರಿಯ ಕರೆಯಾಗಿದೆ
ಲೇಖಕರು: ಅಲೆಸ್ಸಾಂದ್ರೊ ಗುವಾರಾಸ್ಕಿ ಮತ್ತು ಲಿಂಡಾ ಬೊರ್ಡೋನಿ
ಈ ಶನಿವಾರ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಮೆಡಿಟರೇನಿಯನ್ ಸಮುದ್ರದಲ್ಲಿರುವ ಲಾಂಪೆದುಸಾ ದ್ವೀಪಕ್ಕೆ ಭೇಟಿ ನೀಡಲು ಸಜ್ಜಾಗಿರುವ ಸಂದರ್ಭದಲ್ಲಿ, ವಿಶ್ವಸಂಸ್ಥೆಯ ನಿರಾಶ್ರಿತರ ಉನ್ನತ ಆಯುಕ್ತರ ಕಚೇರಿ (UNHCR) ಅವರ ಈ ಭೇಟಿಯು ಗಡಿಗಳ ರಕ್ಷಣೆಗೆ ಮಾತ್ರ ಆದ್ಯತೆ ನೀಡುತ್ತಿರುವ ಜಗತ್ತಿಗೆ, ಪ್ರತಿಯೊಬ್ಬ ಮಾನವನ ಘನತೆ ಮತ್ತು ರಕ್ಷಣೆಯ ಬಗ್ಗೆ ಒಗ್ಗಟ್ಟು, ಸಹಜವಾಬ್ದಾರಿ ಹಾಗೂ ಅಚಲ ಬದ್ಧತೆಯನ್ನು ನೆನಪಿಸುವ ಪ್ರಬಲ ಸಂದೇಶವಾಗಿದೆ ಎಂದು ಹೇಳಿದೆ.
ಇಟಲಿಯ ದಕ್ಷಿಣ ತುದಿಯಲ್ಲಿರುವ ಲಾಂಪೆದುಸಾ ದ್ವೀಪವು ಹಲವು ದಶಕಗಳಿಂದ ಉತ್ತರ ಆಫ್ರಿಕಾದಿಂದ ಯುರೋಪ್‌ಗೆ ಸಾಗುವ ವಲಸೆ ಮಾರ್ಗಗಳ ಕೇಂದ್ರಬಿಂದುವಾಗಿದೆ. ಯುದ್ಧ, ಕಿರುಕುಳ, ಬಡತನ ಮತ್ತು ಅಸ್ಥಿರತೆಯಿಂದ ಪಲಾಯನ ಮಾಡುವ ಅಸಂಖ್ಯಾತ ನಿರಾಶ್ರಿತರು ಮತ್ತು ವಲಸಿಗರಿಗೆ, ಅಪಾಯಭರಿತ ಸಮುದ್ರಯಾನದ ಬಳಿಕ ಇದು ಸುರಕ್ಷತೆಯ ಮೊದಲ ತಾಣವಾಗಿದೆ. ಆದರೆ ಇದೇ ದ್ವೀಪವು ತನ್ನ ಸುತ್ತಲಿನ ಸಮುದ್ರದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡ ದುಃಖದ ಸಾಕ್ಷಿಯೂ ಆಗಿದೆ.
ದುಃಖದ ಮತ್ತು ಭರವಸೆಯ ತಾಣ
UNHCRನ ಸಂವಹನಾಧಿಕಾರಿ ಫಿಲಿಪ್ಪೊ ಉಂಗಾರೊ ಅವರ ಪ್ರಕಾರ, ವಲಸೆಯ ಕುರಿತ ಜಾಗತಿಕ ಚರ್ಚೆಯಲ್ಲಿ ಈ ಸಂದರ್ಭದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿ ಅತ್ಯಂತ ಮಹತ್ವದ್ದಾಗಿದೆ.
“ಜುಲೈ 4ರಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಲಾಂಪೆದುಸಾಗೆ ಭೇಟಿ ನೀಡುತ್ತಿರುವುದನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಾದ UNHCR ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ,” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ತಿಳಿಸಿದರು. “ಲಾಂಪೆದುಸಾ ಮಧ್ಯ ಮೆಡಿಟರೇನಿಯನ್ ವಲಸೆ ಮಾರ್ಗಗಳ ಅತ್ಯಂತ ಪ್ರಬಲ ಸಂಕೇತವಾಗಿ ಉಳಿದಿದೆ. ಅದು ಆಗಮನದ ತಾಣ, ದುಃಖದ ತಾಣ ಮತ್ತು ಭರವಸೆಯ ತಾಣವಾಗಿದೆ.”
ಭೀಕರ ಸಮುದ್ರಯಾನವನ್ನು ದಾಟಿ ಸಾವಿರಾರು ನಿರಾಶ್ರಿತರು ಮತ್ತು ವಲಸಿಗರು ಈ ದ್ವೀಪದಲ್ಲಿ ಸುರಕ್ಷತೆಯನ್ನು ಕಂಡುಕೊಂಡಿದ್ದರೆ, ಮಹಿಳೆಯರು, ಮಕ್ಕಳು ಮತ್ತು ಪುರುಷರು ಸೇರಿದಂತೆ ಅನೇಕರು ಅದರ ತೀರವನ್ನು ತಲುಪುವ ಪ್ರಯತ್ನದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಂಗಾರೊ ಹೇಳಿದರು.
ಈ ಹಿನ್ನೆಲೆಯಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಉಪಸ್ಥಿತಿಯು ವಿಶೇಷ ಮಹತ್ವದ ಸಂದೇಶವನ್ನು ನೀಡುತ್ತದೆ. “ವಲಸೆಯ ಕುರಿತ ಜಾಗತಿಕ ರಾಜಕೀಯ ಚರ್ಚೆಯು ಜನರ ರಕ್ಷಣೆ ಮತ್ತು ವಲಸೆಯ ಸಹಜವಾಬ್ದಾರಿಯ ನಿರ್ವಹಣೆಗಿಂತ ಗಡಿಗಳ ರಕ್ಷಣೆ ಮತ್ತು ತಡೆಗಟ್ಟುವಿಕೆಯ ಸುತ್ತಲೇ ಸೀಮಿತವಾಗುತ್ತಿರುವ ಈ ಸಮಯದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಉಪಸ್ಥಿತಿಯು ಅತ್ಯಂತ ಸ್ಪಷ್ಟವಾದ ಸಂದೇಶವನ್ನು ಸಾರುತ್ತದೆ” ಎಂದು ಹೇಳಿದರು. ಈ ಭೇಟಿ, 2013ರ ಜುಲೈನಲ್ಲಿ ಜಗದ್ಗುರು ಫ್ರಾನ್ಸಿಸ್ ಅವರು ರೋಮ್‌ನ ಹೊರಗೆ ಕೈಗೊಂಡ ಮೊದಲ ಪಾಲನಾ ಭೇಟಿಯಾಗಿ ಲಾಂಪೆದುಸಾಗೆ ಆಗಮಿಸಿ, ವಲಸಿಗರು ಮತ್ತು ನಿರಾಶ್ರಿತರ ನೋವಿನ ಎದುರು ಜಗತ್ತು ತೋರಿಸುತ್ತಿರುವ “ಉದಾಸೀನತೆಯ ಜಾಗತೀಕರಣ”ವನ್ನು ಖಂಡಿಸಿದ್ದ ಐತಿಹಾಸಿಕ ಕ್ಷಣವನ್ನು ನೆನಪಿಸುತ್ತದೆ.
ರಾಜಕೀಯ ಬದ್ಧತೆಯ ನವೀಕರಣದ ಅಗತ್ಯ
ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಈ ಸವಾಲುಗಳು ಇನ್ನೂ ತುರ್ತು ಸ್ವರೂಪದ್ದಾಗಿದ್ದು, ರಾಜಕೀಯ ಬದ್ಧತೆಯ ನವೀಕರಣ ಅಗತ್ಯವಾಗಿದೆ. ವಲಸಿಗರು ಮತ್ತು ನಿರಾಶ್ರಿತರ ಘನತೆಯನ್ನು ಸಂಪೂರ್ಣವಾಗಿ ಗೌರವಿಸಲು ಯಾವ ಬದಲಾವಣೆಗಳು ಅಗತ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಲಸೆ ನಿರ್ವಹಣೆಯ ಪರಿಣಾಮಕಾರಿತ್ವ ಮತ್ತು ಅಪಾಯದಿಂದ ಪಲಾಯನ ಮಾಡುವವರ ನಿಜವಾದ ರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ಉಂಗಾರೊ ಹೇಳಿದರು.
“ಯುರೋಪಿಯನ್ ಒಕ್ಕೂಟವು ವಲಸೆ ಪ್ರವಾಹಗಳ ಪರಿಣಾಮಕಾರಿ ನಿರ್ವಹಣೆಯನ್ನು, ಯುದ್ಧ, ಕಿರುಕುಳ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಿಂದ ಪಲಾಯನ ಮಾಡುವವರ ನೈಜ ರಕ್ಷಣೆಯೊಂದಿಗೆ ಸಂಯೋಜಿಸಲು ಸಮರ್ಥವಾಗಬೇಕು.”
ಯುರೋಪಿಯನ್ ಒಕ್ಕೂಟದ ವಲಸೆ ಮತ್ತು ಆಶ್ರಯ ಒಪ್ಪಂದ
ಇತ್ತೀಚೆಗೆ ಅಂಗೀಕರಿಸಲಾದ ಯುರೋಪಿಯನ್ ಒಕ್ಕೂಟದ ವಲಸೆ ಮತ್ತು ಆಶ್ರಯ ಒಪ್ಪಂದವನ್ನು ಉಲ್ಲೇಖಿಸಿದ ಉಂಗಾರೊ, ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಮನ್ವಯಕ್ಕೆ ಅದು ಅವಕಾಶ ಕಲ್ಪಿಸಬಲ್ಲದು ಎಂದು ಹೇಳಿದರು.
“ಆಗಮನದ ನಿರ್ವಹಣೆ ಮತ್ತು ಅಂತರರಾಷ್ಟ್ರೀಯ ರಕ್ಷಣೆಯ ಅರ್ಜಿಗಳ ಪರಿಶೀಲನೆಯಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಆಧುನೀಕರಣವನ್ನು ತರಲು ಈ ಒಪ್ಪಂದವು ಸಾಮರ್ಥ್ಯ ಹೊಂದಿದೆ. ಆದರೆ ಅದರ ನೈಜ ಹಾಗೂ ಕಾರ್ಯರೂಪದ ಅನುಷ್ಠಾನವೇ ಪ್ರಮುಖ ಸವಾಲಾಗಿ ಉಳಿದಿದೆ.” ಕಾನೂನು ಚೌಕಟ್ಟುಗಳನ್ನು ಮೀರಿ, ಈ ಸಮಸ್ಯೆಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಅಂತರರಾಷ್ಟ್ರೀಯ ಒಗ್ಗಟ್ಟಿನ ಬದ್ಧತೆಯೇ ಅತ್ಯಗತ್ಯ ಎಂದು ಒತ್ತಿ ಹೇಳಿದರು.
“ವಿಶ್ವದ ಬಹುಪಾಲು ನಿರಾಶ್ರಿತರಿಗೆ ಆಶ್ರಯ ನೀಡುತ್ತಿರುವ ರಾಷ್ಟ್ರಗಳಿಗೆ ಹೆಚ್ಚಿನ ಬೆಂಬಲ ಒದಗಿಸುವ ಗತ್ಯವೂ ಇದೆ. ವಿಶ್ವದ ಸುಮಾರು ಶೇ.70ರಷ್ಟು ನಿರಾಶ್ರಿತರಿಗೆ ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳೇ ಆಶ್ರಯ ನೀಡುತ್ತಿವೆ. ಆದ್ದರಿಂದ, ವಲಸೆ ಪ್ರವಾಹಗಳ ನಿರ್ವಹಣೆಯಲ್ಲಿ ಹೆಚ್ಚಿನ ಸಹಜವಾಬ್ದಾರಿಯ ಹಂಚಿಕೆ ಅತ್ಯಗತ್ಯ” ಎಂದು ಅವರು ಸಮಾರೋಪಗೊಳಿಸಿದರು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).