ಪವಿತ್ರಾತ್ಮರ ಹಬ್ಬದಂದು ಪೋಪ್: ಅಂತರಂಗದ ಸಂಕೋಲೆಗಳನ್ನು ಛಿದ್ರಗೊಳಿಸಿ, ಪವಿತ್ರಾತ್ಮರು ನಮ್ಮನ್ನು ರೂಪಾಂತರಗೊಳಿಸುತ್ತಾರೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಇಂದು ಪಂಚಶತ್ತಮ ಹಬ್ಬ. ಪೋಪ್ ಹದಿನಾಲ್ಕನೇ ಲಿಯೋ ಅವರು ಹಬ್ಬದ ಬಲಿಪೂಜೆಯನ್ನು ಅರ್ಪಿಸುತ್ತಾ, ತಮ್ಮ ಪ್ರಬೋಧನೆಯಲ್ಲಿ ಹೇಗೆ ಪವಿತ್ರಾತ್ಮರು ಪ್ರೇಷಿತರ ಬದುಕಿನಲ್ಲಿ ಮಹತ್ತರ ಕಾರ್ಯಗಳನ್ನು ಮಾಡಿದರು ಎಂಬ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಪವಿತ್ರಾತ್ಮರು ನಮ್ಮ ಮೇಲೆಯೂ ಸಹ ಇಳಿದು ಬಂದು ನಮ್ಮ ಅಂತರಂಗದ ಭಯದ ಸಂಕೋಲೆಗಳನ್ನು ಹಾಗೂ ನಮ್ಮ ಹೃದಯಗಳ ಕಠಿಣತೆಯನ್ನು ಛಿದ್ರಗೊಳಿಸುತ್ತಾರೆ ಎಂದು ಪೋಪ್ ಹೇಳಿದ್ದಾರೆ.
"ಅಂದು ಉಪ್ಪರಿಗೆಯ ಕೊಠಡಿಯಲ್ಲಿ ಆದ ಘಟನೆ ಇಂದು ನಮ್ಮ ಮಧ್ಯೆಯೂ ಸಹ ನಡೆಯುತ್ತದೆ. ಪ್ರೇಷಿತರ ಮೇಲೆ ಇಳಿದು ಬಂದಂತೆ ಪವಿತ್ರಾತ್ಮರು ನಮ್ಮ ಮೇಲೆಯೂ ಸಹ ಇಳಿದು ಬರುತ್ತಾರೆ. ನಮ್ಮನ್ನು ಅಲುಗಾಡಿಸುವ ಪ್ರಬಲ ಗಾಳಿಯಂತೆ, ನಮ್ಮನ್ನು ಎಚ್ಚರಿಸುವ ದೊಡ್ಡ ಸದ್ದಿನಂತೆ ಹಾಗೂ ಬೆಳಕನ್ನು ನೀಡುವ ಬೆಂಕಿಯಂತೆ ಅವರು ನಮ್ಮ ಮೇಲೆಯೂ ಸಹ ಇಳಿದು ಬರಲಿದ್ದಾರೆ" ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಹೇಳಿದರು.
ಭಾನುವಾರ ಬೆಳಿಗ್ಗೆ ಪವಿತ್ರಾತ್ಮರ ಹಬ್ಬದಂದು ಬಲಿಪೂಜೆಯನ್ನರ್ಪಿಸುತ್ತಾ, ಪೋಪ್ ಅವರು ಈ ಮಾತುಗಳನ್ನು ಹೇಳಿದರು. ಇದೇ ವೇಳೆ ಇದು ಧರ್ಮಸಭೆಯ ಚಳುವಳಿಗಳ, ಸಂಸ್ಥೆಗಳ ಹಾಗೂ ಸಮುದಾಯಗಳ ಜ್ಯೂಬಿಲಿ ಬಲಿಪೂಜೆಯೂ ಸಹ ಆಗಿತ್ತು.
"ಯೇಸು ಕ್ರಿಸ್ತರು ಮರಣ ಹೊಂದಿದ ನಂತರ ಅವರು ಭಯದಿಂದ ಮುಚ್ಚಿಟ್ಟುಕೊಂಡಿದ್ದರು. ಆದರೆ, ಪವಿತ್ರಾತ್ಮರು ಅವರ ಮೇಲೆ ಇಳಿದು ಬಂದ ನಂತರ ಅವರು ಜಗತ್ತನ್ನು ನೋಡುವ ದೃಷ್ಟಿ ಬದಲಾಯಿತು. ಪುನರುತ್ಥಾನರಾದ ಪ್ರಭುವಿನ ಅನುಭವದ ಘಟನೆಗಳನ್ನು ಅರ್ಥೈಸಿಕೊಂಡು, ಬೋಧಿಸಲು ಶಕ್ತರಾದರು.
ಮುಂದುವರೆದು ಮಾತನಾಡಿದ ಅವರು ಪವಿತ್ರಾತ್ಮರು ಗಡಿಗಳನ್ನು ತೆಗೆಯುತ್ತಾರೆ ಎಂದು ಹೇಳಿದರು ಹಾಗೂ ಮೊದಲು ನಮ್ಮ ಹೃದಯದಲ್ಲಿನ ಗಡಿ ಅಥವಾ ಸರಹದ್ದನ್ನು ಅವರು ತೆಗೆದು ಹಾಕುತ್ತಾರೆ ಎಂದು ಪೋಪ್ ಹೇಳಿದರು. ಪವಿತ್ರಾತ್ಮರು ಒಮ್ಮೆ ನಮ್ಮೊಳಗೆ ಬಂದರೆ ಎಲ್ಲವನ್ನೂ ನವೀಕರಿಸುತ್ತಾ, ಬದುಕನ್ನು ಹೊಸ ರೀತಿಯಲ್ಲಿ ನೋಡುವುದನ್ನು ಅವರು ನಮಗೆ ಕಲಿಸಿಕೊಡುತ್ತಾರ ಎಂದು ಪೋಪ್ ಹದಿನಾಲ್ಕನೇ ಲಿಯೋ ಅವರು ಪವಿತ್ರಾತ್ಮರ ಹಬ್ಬದ ಬಲಿಪೂಜೆಯ ಪ್ರಬೋಧನೆಯಲ್ಲಿ ಹೇಳಿದರು.