ತ್ರಿಕಾಲ ಪ್ರಾರ್ಥನೆ: ನಿಮ್ಮ ಜೀವನದ ನಿಧಿಯನ್ನು ಪ್ರೀತಿ, ಕರುಣೆಯಲ್ಲಿ ಹೂಡಿಕೆ ಮಾಡಿರಿ
ವರದಿ: ವ್ಯಾಟಿಕನ್ ನ್ಯೂಸ್
ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಭೌತಿಕ ವಸ್ತುಗಳು ಮಾತ್ರವಲ್ಲ, ಸಮಯ, ಸಹಾನುಭೂತಿ ಹಾಗೂ ಕರುಣೆಯನ್ನು ಹಂಚಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಇಂದಿನ ಸಂತ ಲೂಕರ ಶುಭಸಂದೇಶದ ಕುರಿತು ಪೋಪ್ ಲಿಯೋ ಚಿಂತನೆಯನ್ನು ವ್ಯಕ್ತಪಡಿಸುತ್ತಾ ಈ ಮಾತುಗಳನ್ನು ಹೇಳಿದ್ದಾರೆ.
"ಇದು ಕೇವಲ ಭೌತಿಕ ಸಂಪತ್ತನ್ನು ಹಂಚಿಕೊಳ್ಳುವುದರ ಬಗ್ಗೆ ಅಲ್ಲ, ಬದಲಾಗಿ ನಮ್ಮ ಸಾಮರ್ಥ್ಯಗಳು, ನಮ್ಮ ಸಮಯ, ನಮ್ಮ ವಾತ್ಸಲ್ಯ, ನಮ್ಮ ಉಪಸ್ಥಿತಿ, ನಮ್ಮ ಸಹಾನುಭೂತಿಯನ್ನು ಕಾರ್ಯರೂಪಕ್ಕೆ ತರುವುದರ ಬಗ್ಗೆ" ಎಂದು ಅವರು ಹೇಳಿದರು. ಪ್ರತಿಯೊಬ್ಬ ವ್ಯಕ್ತಿಯು "ದೇವರ ಯೋಜನೆಯಲ್ಲಿ ಒಂದು ಅನನ್ಯ, ಅಮೂಲ್ಯವಾದ ಒಳ್ಳೆಯ, ಜೀವಂತ ಬಂಡವಾಳವನ್ನು ಬೆಳೆಸಬೇಕು ಮತ್ತು ಹೂಡಿಕೆ ಮಾಡಬೇಕು, "ಇಲ್ಲದಿದ್ದರೆ ಅದು ಒಣಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ." ಎಂದು ಪೋಪ್ ಹೇಳಿದ್ದಾರೆ.
"ಕಂಚನ್ನು ಬೆಳ್ಳಿಗೆ ಹಾಗೂ ಬೆಳ್ಳಿಯನ್ನು ಚಿನ್ನಕ್ಕೆ ಬದಲಾಯಿಸಲು ಜನಕ್ಕೆ ಇಷ್ಟವಾಗಬಹುದು; ಆದರೆ ನಾವು ಪ್ರೀತಿಯಲ್ಲಿ ನೀಡಿದ್ದು, ಹೆಚ್ಚಿನದ್ದನ್ನು ಸಾಧಿಸುತ್ತದೆ: ಅದೇ ನಿತ್ಯಜೀವ. ಇದು ಎಲ್ಲವನ್ನೂ ಬದಲಿಸುತ್ತದೆ ಏಕೆಂದರೆ ಕೊಡುವವನೂ ಸಹ ಬದಲಾಗುತ್ತಾನೆ" ಎಂಬ ಸಂತ ಅಗಸ್ಟೀನರ ಮಾತುಗಳನ್ನು ಪೋಪ್ ಲಿಯೋ ಇಲ್ಲಿ ನೆನಪಿಸಿಕೊಂಡರು.
ಅಂತಿಮವಾಗಿ ಪೋಪ್ ಲಿಯೋ ಅವರು ಎಲ್ಲರನ್ನು "ಉದಯಕಾಲದ ನಕ್ಷತ್ರವಾದ" ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗೆ ಅರ್ಪಿಸಿದರು.